ಅಣಜಿಯ 'ಸುಗ್ರೀವ': 18 ತಾಸಿನಲ್ಲಿ ಮುಗಿದ ದಾಖಲೆಯ ಚಿತ್ರೀಕರಣ
MOKSHA
ಇದು ಕನ್ನಡ ಚಿತ್ರರಂಗದಲ್ಲಿ ಒಂದು ಅಪೂರ್ವ ದಾಖಲೆಯೇ ಸರಿ. ಹೆಚ್ಚು ಕಮ್ಮಿ ಒಂದು ಮದುವೆಯ ವಿಡಿಯೋ ಚಿತ್ರೀಕರಣ ಮುಗಿಸುವಷ್ಟು ಹೊತ್ತಿಗೆ ಒಂದು ಚಿತ್ರದ ಚಿತ್ರೀಕರಣವೇ ಮುಗಿಸಲಾಗಿದೆ. ಇದಕ್ಕೆ ಅಣಜಿ ನಾಗರಾಜ್ ನಿರ್ಮಾಣದ ಶಿವರಾಜ್ ಕುಮಾರ್, ಯಜ್ಞಾ ಶೆಟ್ಟಿ ಅಭಿನಯದ 'ಸುಗ್ರೀವ' ಚಿತ್ರ ಸಾಕ್ಷಿಯಾಯಿತು.
ಹೌದು, ಅಂದುಕೊಂಡಂತೆ ಭಾರೀ ಸುದ್ದಿ ಮಾಡಿದ್ದ 'ಸುಗ್ರೀವ' ಚಿತ್ರದ ಚಿತ್ರೀಕರಣವನ್ನು 18 ತಾಸುಗಳಲ್ಲಿ ಪೂರ್ಣಗೊಳಿಸಲಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗುವುದಿಲ್ಲ. ಆದ್ದರಿಂದ ಭಾರತ ಗಿನ್ನಿಸ್ ಎಂದು ಖ್ಯಾತಿ ಪಡೆದಿರುವ ಲಿಮ್ಕಾ ದಾಖಲೆಗೆ ಅರ್ಜಿ ಸಲ್ಲಿಸಲು ಚಿತ್ರತಂಡ ನಿರ್ಧರಿಸಿದೆ.
MOKSHA
ಇದು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಯ ಆವರಣದ ಸುತ್ತ ವಿಶೇಷವಾಗಿ ನಿರ್ಮಿಸಲಾಗಿದ್ದ ಸೆಟ್‌ಗಳಲ್ಲಿ ನಡೆಯಿತು. ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಚಿತ್ರೀಕರಣ ರಾತ್ರಿ 12ರ ಹೊತ್ತಿಗೆ ಮುಗಿಯಿತು. ಈ ಮೂಲಕ ಭಾರತೀಯ ಸಿನಿಮಾ ರಂಗದ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಚಿತ್ರೀಕರಣಗೊಂಡ ಚಿತ್ರ ಎಂಬ ಹೆಗ್ಗಳಿಕೆಯಲ್ಲಿ ಸುಗ್ರೀವ ಭಾಗಿಯಾಯಿತು.
ಮುಖ್ಯ ನಿರ್ದೇಶಕ ಪ್ರಶಾಂತ್ ನೇತೃತ್ವದಲ್ಲಿ ಇನ್ನೂ 9 ನಿರ್ದೇಶಕರು, 10 ಮೇಕಪ್ ಮ್ಯಾನ್‌ಗಳು, 10 ಕಾಸ್ಟ್ಯೂಮ್ ಡಿಸೈನರ್‌ಗಳು, 30 ಸಹ ನಿರ್ದೇಶಕರು, ಆರು ಸ್ಟಿಲ್ ಫೋಟೋಗ್ರಾಫರ್‌ಗಳು, 10 ಪ್ರೊಡಕ್ಷನ್ ಮ್ಯಾನೇಜರ್‌ಗಳು, 40 ಕ್ಯಾಮರಾ ಸಹಾಯಕರು, 60 ಪ್ರೊಡಕ್ಷನ್ ಸಹಾಯಕರು, 120 ಲೈಟ್ ಸಹಾಯಕರು, 20 ಕಲಾ ಸಹಾಯಕರು, 30 ಸೆಟ್ ಸಹಾಯಕರು, ಒಬ್ಬ ಸ್ಟಂಟ್ ಮಾಸ್ಟರ್, 8 ಫೈಟರ್‌ಗಳು, ಒಬ್ಬ ಡ್ಯಾನ್ಸ್ ಮಾಸ್ಟರ್‌ಗಳನ್ನು ಬಳಸಲಾಗಿದೆ. ಇಡೀ ಶೂಟಿಂಗ್‌ಗೆ ಒಂದು ಸಾವಿರ ಜ್ಯೂನಿಯರ್ ಕಲಾವಿದರು ದುಡಿಯುವ ಮೂಲಕ ಸುಗ್ರೀವ ಚಿತ್ರೀಕರಣ ಮುಗಿಯಿತು.
MOKSHA
ಚಿತ್ರದಲ್ಲಿರುವ 66 ದೃಶ್ಯಗಳ ಪೈಕಿ 44 ದೃಶ್ಯಗಳಲ್ಲಿ ಶಿವರಾಜ್‌ಕುಮಾರ್ ಅವರ ಪಾತ್ರ ಇತ್ತು. ಹಾಗಾಗಿ ಶಿವಣ್ಣ ತರಾತುರಿಯಲ್ಲಿ ಶೂಟಿಂಗ್ ಸಂದರ್ಭ ಒಂದು ತಂಡದಿಂದ ಇನ್ನೊಂದು ತಂಡಕ್ಕೆ ಓಡುವುದು, ಮಾರ್ಗ ಮಧ್ಯದಲ್ಲೇ ಮೇಕಪ್ ಮಾಡಿಕೊಳ್ಳುವುದು, ಕಾಸ್ಟ್ಯೂಮ್ ಬದಲಾಯಿಸಿಕೊಳ್ಳುವುದು ಎಲ್ಲವೂ ಗಡಿಬಿಡಿಯಲ್ಲೇ ಸಾಗಿತ್ತು.
ನಟಿಸಿದ ಮೇಲೆ ಮಾತನಾಡಿದ ಶಿವಣ್ಣ, ಇದೊಂದು ಅದ್ಬುತ ಅನುಭವ. ಎಷ್ಟೋ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಈ ಚಿತ್ರದ ಬಗ್ಗೆ ವಿಪರೀತ ಟೆನ್‌ಶನ್ ಇತ್ತು. ಒಂದು ನಿಮಿಷ ಸಹ ಪೋಲಾಗಬಾರದು ನೋಡಿ ಎಂದು ಮುಗುಳ್ನಗುತ್ತಾ ಹೇಳಿದರು ನಟ ಶಿವರಾಜ್ ಕುಮಾರ್.