ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 18 ಗಂಟೆಗಳಲ್ಲಿ ಕನ್ನಡ ಚಿತ್ರ ನಿರ್ಮಾಣದ ದಾಖಲೆ! (Sugreeva | Kannada film | Shivaraj Kumar | Yajna Shetty | Anaji Nagaraj)
ಸುದ್ದಿ/ಗಾಸಿಪ್
Feedback Print Bookmark and Share
 
Shivaraj Kumar
MOKSHA
ಥ್ರಿಲ್ಲರ್ ಕಥೆಯೊಂದನ್ನು ಇಟ್ಟುಕೊಂಡು, ಸೂಪರ‌ಸ್ಟಾರ್‌ಗಳನ್ನು ಸಂಭಾಳಿಸಿಕೊಂಡು 'ಇದು ಸಾಧ್ಯ' ಎಂಬ ಚಲನಚಿತ್ರವನ್ನು ಕೇವಲ 48 ಗಂಟೆಗಳಲ್ಲಿ ನಿರ್ದೇಶಕ ದಿನೇಶ್‌ಬಾಬು ರೂಪಿಸಿಕೊಟ್ಟಿದ್ದರು. ಆಮೇಲೆ ತಾವೇನು ಕಮ್ಮಿ ಇಲ್ಲ ಎನ್ನುವಂತೆ ರಿಚರ್ಡ್ ಕ್ಯಾಸ್ಟಲಿನೋ ಎಂಬ ಖ್ಯಾತ ನಿರ್ದೇಶಕರೂ ಸಹ ಸೆಪ್ಟೆಂಬರ್ 8 ಎಂಬ ಚಿತ್ರವನ್ನು ಕೇವಲ 24 ಗಂಟೆಗಳಲ್ಲಿ ರೂಪಿಸಿ ಕನ್ನಡ ಜನರ ಮುಂದಿಟ್ಟಿದ್ದರು. ಈಗ ಇವೆಲ್ಲಾ ಇತಿಹಾಸ.

ಸದ್ಯ ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಮಾತನಾಡೋಣ. ವಿಭಿನ್ನ ಶೈಲಿಯ ನಿರ್ಮಾಪಕ ಎಂದೇ ಹೆಸರಾಗಿರುವ ಅಣಜಿ ನಾಗರಾಜ್ ಇದೀಗ ಇಂಥಾದ್ದೊಂದು ಹೊಸ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ. ಕುತೂಹಲದ ಸಂಗತಿ ಏನಂದ್ರೆ, ಈ ಚಿತ್ರವು ಕೇವಲ 18 ಗಂಟೆಗಳಲ್ಲಿ ನಿರ್ಮಾಣಗೊಂಡು ಕನ್ನಡ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಲಿದೆ.

ಈ ಚಿತ್ರಕ್ಕೆ ಸುಗ್ರೀವ ಎಂದು ಹೆಸರಿಡಲಾಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಾಯಕರಾಗಿ ನಟಿಸಲಿದ್ದಾರಂತೆ. ಎದ್ದೇಳು ಮಂಜುನಾಥ ಮತ್ತು ಒಂದು ಪ್ರೀತಿಯ ಕಥೆ ಚಿತ್ರಗಳ ಖ್ಯಾತಿಯ ಯಜ್ಞಾ ಶೆಟ್ಟಿ ಈ ಚಿತ್ರದ ನಾಯಕಿ. 'ಮೂರು ಹಾಡು- ಮೂರು ಫೈಟುಗಳು' ಎಂಬ ವಿಶಿಷ್ಟ ಫಾರ್ಮುಲಾ ಹೊಂದಿದೆ ಈ ಚಿತ್ರ.

ಅಕ್ಟೋಬರ್ 11ಕ್ಕೆ ಒಂದೇ ದಿನ ಶೂಟಿಂಗ್: ಇದೇ ಅಕ್ಟೋಬರ್ 11ರಂದು ಇದು 18 ಗಂಟೆಗಳಲ್ಲಿ ಶೂಟಿಂಗ್ ಮುಗಿಸುವ ಮೂಲಕ ಇತಿಹಾಸವಾಗಲಿದೆ. ಈ ಮೊದಲು ರಿಚರ್ಡ್ ಕ್ಯಾಸ್ಟಲಿನೋ ಸೆಪ್ಟೆಂಬರ್ 8 ಎಂಬ ಚಿತ್ರವನ್ನು 24 ಗಂಟೆಗಳಲ್ಲಿ ನಿರ್ದೇಶಿಸಿದ್ದರು. ಆದರೆ ಈ ಚಿತ್ರದಲ್ಲಿ 24 ಗಂಟೆಯೊಳಗೆ ಬೇರೆ ಬೇರೆ ಕಲಾವಿದರನ್ನು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆಯಾಗಿ ಶೂಟಿಂಗ್ ಮುಗಿಸಿ ಒಂದೇ ಚಿತ್ರ ಮಾಡಿದ್ದರು. ಆದರೆ ಅಣಜಿ ನಾಗರಾಜ್ ಅವರ ಸುಗ್ರೀವ ಒಂದೇ ಪ್ರದೇಶದಲ್ಲಿ ಬೃಹತ್ ಸೆಟ್‍ನಲ್ಲಿ ಚಿತ್ರಕಥೆಗೆ ಅನುಗುಣವಾಗಿ ಎಂಟು ಗುಂಪುಗಳಲ್ಲಿ ಶೂಟಿಂಗ್ ನಡೆಯಲಿದೆ.

Yajna Shetty
MOKSHA
ಚಿತ್ರದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಅಣಜಿ ನಾಗರಾಜ್, ಎರಡನೇ ಭಾನುವಾರ ಭಾರತೀಯ ಚಿತ್ರಂಗಕ್ಕೆ ರಜೆಯಾದರೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಿಶೇಷ ಅನುಮತಿಯೊಂದಿಗೆ ಅಕ್ಟೋಬರ್ 11ರ ಎರಡನೇ ಭಾನುವಾರ ಚಿತ್ರ ನಿರ್ದೇಶಿಸಲಿದ್ದೇವೆ. ಕನ್ನಡದಲ್ಲೊಂದು ಇಂತಹ ದಾಖಲೆ ಬರೆಯುವ ಚಿತ್ರ ನಿರ್ಮಾಣಕ್ಕೆ ವಾಣಿಜ್ಯ ಮಂಡಳಿ ಸಹಕರಿಸಿ ಅನುಮತಿ ನೀಡಿದ್ದು ತುಂಬ ಸಂತೋಷ ತಂದಿದೆ ಎಂದರು.

ಅಣಜಿ ನಾಗರಾಜ್ ಸುಮಾರು 20ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಸಿನೆಮಾಟೋಗ್ರಾಫರ್ ಆಗಿ ದುಡಿದಿದ್ದಾರೆ. ಅಲ್ಲದೆ, ಶಾಸ್ತ್ರಿ, ಸ್ನೇಹಾನಾ ಪ್ರೀತೀನಾ, ಜಾಜಿ ಮಲ್ಲಿಗೆಯಂತಹ ಹಲವು ಚಿತ್ರಗಳ ನಿರ್ಮಾಪಕರೂ ಆಗಿದ್ದ ಅನುಭವ ಇವರ ಬೆನ್ನಿಗಿದೆ. ಈ ಚಿತ್ರದಲ್ಲೂ ಎಂಟು ತಂಡಗಳಲ್ಲಿ ಒಂದು ತಂಡದ ಕ್ಯಾಮರಾ ನಿರ್ವಹಣೆಯನ್ನು ಸ್ವತಃ ಇವರೇ ಮಾಡಲಿದ್ದಾರೆ ಕೂಡಾ.

ಚಿತ್ರದ ಶೂಟಿಂಗ್ ಬೆಳಿಗ್ಗೆ ಆರು ಗಂಟೆಗೆ ಆರಂಭವಾಗಲಿದೆ. ಮಧ್ಯರಾತ್ರಿ 12 ಗಂಟೆಗೆ ನಿಲ್ಲಲಿದೆ. ಚಿತ್ರಕ್ಕೆ ಬೇಕಾಗುವ ಎಲ್ಲ ಕಲಾವಿದರನ್ನೂ ಚಿತ್ರದ ಶೂಟಿಂಗ್ ಆರಂಭಕ್ಕೂ ಮೂರ್ನಾಲ್ಕು ಗಂಟೆಗಳ ಮೊದಲೇ ಕರೆತರಲಾಗುತ್ತದೆ. ಮಲಯಾಳಂ ಚಿತ್ರರಂಗದ ಖ್ಯಾ ನಿರ್ದೇಶಕ ಪ್ರಶಾಂತ್ ಈ ಸುಗ್ರೀವ ಚಿತ್ರಕ್ಕೆ ಪ್ರಮುಖ ನಿರ್ದೇಶಕ. ಪ್ರಶಾಂತ್ ಅವರಡಿಯಲ್ಲಿ ಇನ್ನೂ ಒಂಭತ್ತು ನಿರ್ದೇಶಕರು ಕೆಲಸ ಮಾಡಲಿದ್ದಾರೆ. ಓಂ ಪ್ರಕಾಶ್ ರಾವ್, ಪ್ರಮೋದ್ ಚಕ್ರವರ್ತಿರಂತಹ ನಿರ್ದೇಶಕರೂ ಈ ತಂಡದಲ್ಲಿದ್ದಾರೆ. ಚಿತ್ರದ ಕಥೆ ಅಣಜಿ ಫಿಲಂಸ್ ತಂಡದ್ದಾದರೆ, ಚಿತ್ರಕಥೆಯನ್ನು ಪ್ರಮೋದ್ ಚಕ್ರವರ್ತಿ ಬರೆದಿದ್ದಾರೆ. ಸಂಭಾಷಣೆಯನ್ನು ರಾಮ್ ನಾರಾಯಣ್ ಬರೆದಿದ್ದು, ಅವರು ಚಿತ್ರಕ್ಕೆ ಒಂದು ಹಾಡನ್ನೂ ಬರೆದಿದ್ದಾರೆ. ಸಂಗೀತ ಗುರುಕಿರಣ್ ನೀಡುತ್ತಿದ್ದಾರೆ.

ಮೈಸೂರು ರಸ್ತೆಯಲ್ಲಿ ಬೃಹತ್ ಸೆಟ್: ಚಿತ್ರಕ್ಕಾಗಿ ಈಗಾಗಲೇ ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಯ ಬಳಿ ಭಾರೀ ಸೆಟ್ ನಿರ್ಮಾಣ ಮಾಡಲಾಗಿದೆ. ಈ ಸೆಟ್‌ನ ವಿನ್ಯಾಸವನ್ನು ಖ್ಯಾತ ಕಲಾ ನಿರ್ದೇಶಕ ಇಸ್ಮಾಯಿಲ್ ಮಾಡಿದ್ದಾರೆ. ಎಂಟು ಪ್ರತ್ಯೇಕ ತಂಡಗಳನ್ನು ಮಾಡಿ ಒಂದೇ ಸ್ಥಳದಲ್ಲಿ ಚಿತ್ರ ಕಥೆಗೆ ಅನುಗುಣವಾಗಿ ಎಂಟು ವಿನ್ಯಾಸಗಳ ಸೆಟ್ ಹಾಕಲಾಗಿದೆ.

ಚಿತ್ರದ ಮುಖ್ಯ ನಿರ್ದೇಶಕ ಪ್ರಶಾಂತ್‌ಗೆ ಇದೇನು ಹೊಸ ಅನುಭವವಲ್ಲ. ಈಗಾಗಲೇ ಅವರಿಗೆ ಇಂಥದ್ದೇ 18 ಗಂಟೆಯಲ್ಲಿ ಚಿತ್ರ ನಿರ್ದೇಶಿಸಿದ ಅನುಭವವಿದೆ. ಮಲಯಾಳಂನಲ್ಲಿ ಮೋಹನ್ ಲಾಲ್ ತಾರಾಗಣದ ಭಗವಾನ್ ಚಿತ್ರವನ್ನು 18 ಗಂಟೆಯಲ್ಲಿ ನಿರ್ದೇಶಿಸಿದ ಅನುಭವವಿರುವ ಕಾರಣ ಪ್ರಶಾಂತ್ ಅವರಿಗೆ ಯಾವುದೇ ದುಗುಡ ಇಲ್ಲ.

ಚಿತ್ರವನ್ನು 18 ಗಂಟೆಯಲ್ಲಿ ಚಿತ್ರೀಕರಿಸಬೇಕು ಎಂದಾಕ್ಷಣ ಗುಣಮಟ್ಟದೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎನ್ನುವ ಅಣಜಿ ನಾಗರಾಜ್, ಚಿತ್ರದ ಗುಣಮಟ್ಟ ಉತ್ತಮವಾಗಿರಲು ಈಗಾಗಲೇ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಇದು ಬೇರೆ ಯಾವುದೇ ಇತರ ಕಮರ್ಷಿಯಲ್ ಚಿತ್ರಗಳಿಗಿಂತ ಕಳಪೆಯಾಗಿರುವುದಿಲ್ಲ. ಅವೆಲ್ಲವುಗಳಿಗೆ ಪೈಪೋಟಿ ನೀಡುವಂತೆ ಗುಣಮಟ್ಟದಿಂದ, ಕಥೆಯಿಂದ ಹಾಗೂ ತಾಂತ್ರಿಕತೆಯಿಂದ ಗಮನ ಸೆಳೆಯಲಿದೆ ಎಂದರು.

ಶೂಟಿಂಗ್‌ಗೆ ಭಾರೀ ತಯಾರಿ: ಚಿತ್ರದ ಶೂಟಿಂಗ್‌ಗಾಗಿ ವಿಶೇಷ ಕ್ಯಾಮರಾಗಳನ್ನೂ ತರಿಸಲಾಗಿದೆ. ಎರಡು ಜಿಮ್ಮಿ ಜಿಪ್, ಮೂರು ಸ್ಟೆಡಿ ಕ್ಯಾಮರಾ, ಒಂದು ಮ್ಯಾನೋ ಕ್ರೇನ್, 12 ಹೊಸ ಏರಿ-3 ಕ್ಯಾಮರಾಗಳು ಬಂದು ಕೂತಿವೆ. 12 ಏರಿ-3 ಕ್ಯಾಮರಾ ಪೈಕಿ ಒಂದಂತೂ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಪ್ರತಿ ಸೆಂಕೆಂಡ್‌ಗೆ 500 ಫ್ರೇಮುಗಳನ್ನು ತೆಗೆಯಬಲ್ಲ ಸಾಮರ್ಥ್ಯ ಹೊಂದಿದೆ.

10 ಮೇಕಪ್ ಮ್ಯಾನ್‌ಗಳು, 10 ಕಾಸ್ಟ್ಯೂಮ್ ಡಿಸೈನರ್‌ಗಳು, 30 ಸಹ ನಿರ್ದೇಶಕರು, ಆರು ಸ್ಟಿಲ್ ಫೋಟೋಗ್ರಾಫರ್‌ಗಳು, 10 ಪ್ರೊಡಕ್ಷನ್ ಮ್ಯಾನೇಜರ್‌ಗಳು, 40 ಕ್ಯಾಮರಾ ಸಹಾಯಕರು, 60 ಪ್ರೊಡಕ್ಷನ್ ಸಹಾಯಕರು, 120 ಲೈಟ್ ಸಹಾಯಕರು, 20 ಕಲಾ ಸಹಾಯಕರು, 30 ಸೆಟ್ ಸಹಾಯಕರು, ಒಬ್ಬ ಸ್ಟಂಟ್ ಮಾಸ್ಟರ್, 8 ಫೈಟರ್‌ಗಳು, ಒಬ್ಬ ಡ್ಯಾನ್ಸ್ ಮಾಸ್ಟರ್‌ಗಳನ್ನು ಬಳಸಿ ಮೂರು ಫೈಟ್ ಹಾಗೂ ಮೂರು ಹಾಡುಗಳ ಚಿತ್ರೀಕರಣ ನಡೆಸಲಾಗುತ್ತದೆ. ಚಿತ್ರದ ಇಡೀ ಶೂಟಿಂಗ್‌ಗೆ ಒಂದು ಸಾವಿರ ಜ್ಯೂನಿಯರ್ ಕಲಾವಿದರು ದುಡಿಯಲಿದ್ದಾರೆ.

ಕನ್ನಡದಲ್ಲಿ 'ವಾಲಿ' ಬಂದಿದ್ದಾಗಿದೆ. ಈಗ 'ಸುಗ್ರೀವ'ನ ಸರದಿ. ಆದರೆ ಈ ಸುಗ್ರೀವ ಅಂತಿಂಥವನಲ್ಲ ಎಂದು ಕನ್ನಡ ಚಿತ್ರರಂಗಕ್ಕೆ ಮೊದಲೇ ಗೊತ್ತಾಗಿದೆ. ವಿಶೇಷ, ವಿಶಿಷ್ಟ, ವಿನೂತನ ಪ್ರಯತ್ನದ ಮೂಲಕ ಹೊರಬರುವ ಸುಗ್ರೀವನನ್ನು ಜನರು ಹೇಗೆ ಸ್ವಾಗತಿಸುತ್ತಾರೋ ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಣಜಿ ನಾಗರಾಜ್, ಸುಗ್ರೀವ, ಶಿವರಾಜ್ ಕುಮಾರ್, ಯಜ್ಞಾ ಶೆಟ್ಟಿ