'ಮಗಧೀರ'ದ ಮೂಲಕ ಭಾರೀ ಸುದ್ದಿ ಮಾಡಿದ ಎಸ್.ಎಸ್. ರಾಜಮೌಳಿಯವರ ಹೊಸ ಚಿತ್ರ 'ಈಗ'ಕ್ಕೆ ಚಾಲನೆ ದೊರೆತಿದೆ. ನಟನೆಗೆ ಗುಡ್‌ಬೈ ಹೇಳುತ್ತೇನೆ ಎಂದು ಹೇಳುತ್ತಿರುವ ಹೊರತಾಗಿಯೂ, ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಈ ಚಿತ್ರದೊಂದಿಗೆ ತೆಲುಗು ಚಿತ್ರರಂಗಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ.
ಸುದೀಪ್ 'ಈಗ' (ಈಗ ಎಂದರೆ ತೆಲುಗಿನಲ್ಲಿ ನೊಣ ಎಂದರ್ಥ) ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿಲ್ಲ. ಅವರದ್ದು ಖಳನಾಯಕನ ಪಾತ್ರ. ಆದರೆ ಮಹತ್ವದ್ದು. ಇದರಲ್ಲಿ 'ಅಸ್ತ ಚೆಮ್ಮಾ' ಖ್ಯಾತಿಯ ನಾಣಿ ನಾಯಕ. ಸೆನ್ಸೇಷನಲ್ ಸಮಂತಾ ಋತು ಪ್ರಭು ಹೀರೋಯಿನ್.
ಡಿಸೆಂಬರ್ 7ರ ಮಂಗಳವಾರದಂದು ಹೈದರಾಬಾದಿನ ರಾಮನಾಯ್ಡು ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತವನ್ನು ಮಾಡಲಾಗಿದೆ. ವೆಂಕಟೇಶ್, ಜೂನಿಯರ್ ಎನ್‌ಟಿಆರ್, ರವಿತೇಜಾ, ರಾಮಚರಣ್ ಮುಂತಾದ ತಾರೆಗಳು ಚಿತ್ರತಂಡವನ್ನು ಹಾರೈಸಿ ಹೋಗಿದ್ದಾರೆ.
ರಣ್, ಫೂಂಕ್ ಮುಂತಾದ ಹಿಂದಿ ಚಿತ್ರಗಳಲ್ಲಿನ ನಟನೆಯನ್ನು ನೋಡಿ ಮೆಚ್ಚಿದ್ದ ರಾಜಮೌಳಿ, ಸುದೀಪ್ ಅವರನ್ನು ಸಂಪರ್ಕಿಸಿದ್ದರು. ಕಥೆ ಕೇಳಿ ರೋಮಾಂಚನಗೊಂಡಿದ್ದ ಕಿಚ್ಚ ಒಪ್ಪಿದ್ದರು.
ಈ ಬಗ್ಗೆ ಮುಹೂರ್ತ ಸಂದರ್ಭದಲ್ಲಿ ಮಾತನಾಡುತ್ತಾ, ನಾನು ರಾಜಮೌಳಿಯವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ; ಅವೆಲ್ಲವನ್ನೂ ಇಷ್ಟಪಟ್ಟಿದ್ದೇನೆ. ಈ ಚಿತ್ರದಲ್ಲಿ ನಾನೂ ಒಂದು ಭಾಗವಾಗುತ್ತಿರುವುದು ಸಂತಸ ತಂದಿದೆ. ಸಿನಿಮಾ ಜಗತ್ತಿನಲ್ಲೇ ಇದೊಂದು ಭಿನ್ನ ಯತ್ನವಾಗುವ ಬಗ್ಗೆ ಯಾವುದೇ ಸಂಶಯವಿಲ್ಲ ಎಂದಿದ್ದಾರೆ.
ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಕಥೆ ಆರಂಭದಲ್ಲಿ ಮಾಮೂಲಿಯಂತೆ ಕಂಡು ಬಂದರೂ, ಗ್ರಾಫಿಕ್ ತಂತ್ರಜ್ಞಾನದಿಂದಾಗಿ ಭಿನ್ನವಾಗಿರಲಿದೆ. ಚಿತ್ರದ ತುಂಬಾ ಗ್ರಾಫಿಕ್ ಚಮತ್ಕಾರವನ್ನು ನೋಡಬಹುದಾಗಿದೆ ಎಂದು ರಾಜಮೌಳಿ ಹೇಳಿಕೊಂಡಿದ್ದಾರೆ.
ನಾಯಕ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿರುತ್ತಾನೆ. ಆದರೆ ಆತನನ್ನು ವಿಲನ್ ಕೊಂದು ಹಾಕುತ್ತಾನೆ. ಮರುಜನ್ಮ ಪಡೆಯುವ ನಾಯಕ ನೊಣವಾಗಿ ಹುಟ್ಟುತ್ತಾನೆ. ಈ ನೊಣ ಮಾತನಾಡುವುದಿಲ್ಲ, ಆದರೆ ಸೇಡು ತೀರಿಸಿಕೊಳ್ಳಲು ಬೇಕಾಗಿರುವ ತಾಕತ್ತು, ಶಕ್ತಿ ಅದಕ್ಕಿರುತ್ತದೆ. ಇದೇ ಚಿತ್ರದ ತಿರುಳು. ಸಾಕಷ್ಟು ಆಕ್ಷನ್ ಚಿತ್ರದಲ್ಲಿರುತ್ತದೆ.