ಬಾಲಿವುಡ್ ಸಾಗರಕ್ಕೆ ಧುಮ್ಮಿಕ್ಕಿ ಒಂದಿಷ್ಟು ಯಶಸ್ಸು, ಹೆಸರು, ಜನಪ್ರಿಯತೆಯನ್ನು ಪಡೆದುಕೊಂಡಿರುವ ನಿರ್ದೇಶಕ, ನಟ ಸುದೀಪ್ ಈಗ ಅಧಿಕೃತವಾಗಿ ತೆಲುಗು ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಅದೂ ಎರಡೆರಡು ಚಿತ್ರಗಳ ಮೂಲಕ!
ಹೌದು, ಖಚಿತವಾಗಿರುವ ಮಾಹಿತಿಗಳ ಪ್ರಕಾರ 'ಮಗಧೀರ' ಚಿತ್ರದ ಸೂಪರ್ ನಿರ್ದೇಶಕ ಎಸ್.ಎಸ್. ರಾಜಮೌಳಿಯವರ ಚಿತ್ರದಲ್ಲಿ ಸುದೀಪ್ ಖಳನಾಗಿ ನಟಿಸುತ್ತಿದ್ದಾರೆ. ಮತ್ತೊಂದು ಚಿತ್ರ ಖಚಿತವಾಗಿಲ್ಲ, ಆದರೆ ಜಗಪತಿ ಬಾಬು ನಾಯಕರಾಗಿರುವ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಆಹ್ವಾನ ಬಂದಿರುವುದು ನಿಜ ಎಂದು ವರದಿಗಳು ಹೇಳಿವೆ.
ರಾಜಮೌಳಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಪಕ್ಕಾ ವಿಲ್ಲನ್ ಪಾತ್ರ ಸುದೀಪ್‌ರದ್ದು. ಇದನ್ನು ಸ್ವತಃ ನಿರ್ದೇಶಕರೇ ಹೇಳಿದ್ದಾರೆ. ಈ ಚಿತ್ರದ ಹೆಸರು 'ಈಗ'.
ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ರಣ್' ಚಿತ್ರದಲ್ಲಿನ ಸುದೀಪ್ ನಟನಾ ಶೈಲಿ ನನಗೆ ತುಂಬಾ ಇಷ್ಟವಾಗಿದೆ. ಅವರು ನನ್ನ 'ಈಗ' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕೊನೆಗೂ 'ಈಗ' ಚಿತ್ರ ಮುನ್ನಡೆಯುತ್ತಿದೆ. ನಿಜಕ್ಕೂ ಸಂತಸವಾಗಿದೆ ಎಂದು ಟ್ವಿಟ್ಟರಿನಲ್ಲಿ ರಾಜಮೌಳಿ ಹೇಳಿದ್ದಾರೆ.
ಈ ಚಿತ್ರದಲ್ಲಿ ನಾಯಕ-ನಾಯಕಿ ಯಾರು ಎಂಬುದು ಇನ್ನೂ ಅಂತಿಮಗೊಂಡಿಲ್ಲ. ನಿರ್ಮಾಣ ಕಾರ್ಯಕ್ಕೆ ವಾಲ್ಟ್-ಡಿಸ್ನಿಯನ್ನು ಸೇರಿಸಿಕೊಳ್ಳುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಇದು ಕಂಪ್ಯೂಟರ್ ಆನಿಮೇಷನ್ ಮತ್ತು ಪಕ್ಕಾ ಆಕ್ಷನ್ ಮಿಲಿತ ಚಿತ್ರ ಎಂಬುದಷ್ಟೇ ಸದ್ಯಕ್ಕೆ ಬಹಿರಂಗವಾಗಿರುವ ಮಾಹಿತಿ.
ಬಹುನಿರೀಕ್ಷಿತ ಚಿತ್ರದ ನಾಯಕನ ಆಯ್ಕೆಯ ಕುರಿತು ಈಗಾಗಲೇ ತರಹೇವಾರಿ ಸುದ್ದಿಗಳು ಹರಿದಾಡುತ್ತಿವೆ. ಕೆಲವರ ಪ್ರಕಾರ 'ಅಷ್ಟ ಚಮ್ಮಾ' ಚಿತ್ರದ ನಾಯಕ ನಾಣಿಯನ್ನು 'ಈಗ'ಕ್ಕೆ ಆಯ್ಕೆ ಮಾಡಲಾಗಿದೆ. ಕೆಲವರ ಪ್ರಕಾರ ಪ್ರಭಾಸ್ ನಾಯಕ. ಕೆಲವು ವರದಿಗಳ ಪ್ರಕಾರ ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಹೈದರಾಬಾದ್‌ಗೆ ಹೋಗಿರುವ ಸುದೀಪ್ ತನ್ನ ಪಾಲಿನ ಚಿತ್ರೀಕರಣವನ್ನು ಮುಗಿಸಿದ್ದಾರೆ. ಅಂತೂ ಯಾವುದೂ ಖಚಿತವಾಗಿಲ್ಲ.
ಆದರೆ ಆಫರ್ ಬಂದಿರುವುದು ಹೌದು, ತಾನು ಒಪ್ಪಿಕೊಂಡಿದ್ದೇನೆ ಎಂಬುದನ್ನು ಸುದೀಪ್ ಕೂಡ ಖಚಿತಪಡಿಸಿದ್ದಾರೆ.
ರಾಜಮೌಳಿಯವರ 'ಈಗ' ಚಿತ್ರದಲ್ಲಿ ನಾನು ನಟಿಸುತ್ತಿರುವುದು ಹೌದು. ಇದು ಪೂರ್ಣ ಪ್ರಮಾಣದ ಪಾತ್ರ, ಅತಿಥಿ ಪಾತ್ರವಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಇಂತಹ ಪಾತ್ರವನ್ನು ನೀಡಿದ ರಾಜಮೌಳಿಗೆ ನಾನು ಕೃತಜ್ಞ. ಚಿತ್ರದ ಯಶಸ್ಸಿಗೆ ನಾನು ಶ್ರಮಿಸುತ್ತೇನೆ ಎಂದು ಸುದೀಪ್ ತನ್ನ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ನಡುವೆ ಮತ್ತೊಂದು ತೆಲುಗು ಚಿತ್ರಕ್ಕೆ ಸುದೀಪ್ ಆಹ್ವಾನ ಪಡೆದುಕೊಂಡಿದ್ದಾರೆ. ಜಗಪತಿ ಬಾಬು ನಾಯಕರಾಗಿರುವ ಈ ಚಿತ್ರದ ನಿರ್ದೇಶಕರು ಯಾರೆಂಬುದು ಬಹಿರಂಗವಾಗಿಲ್ಲ. ಆದರೆ ಸುದೀಪ್‌ಗೆ ಹೇಳಿರುವುದು ಅತಿಥಿ ಪಾತ್ರಕ್ಕೆ ಎಂಬುದು ಮಾತ್ರ ಸ್ಪಷ್ಟ.
ಇದಕ್ಕೆ ಸುದೀಪ್ ಯಾವ ಪ್ರತಿಕ್ರಿಯೆ ನೀಡಿದ್ದಾರೆಂಬುದು ತಿಳಿದು ಬಂದಿಲ್ಲ.