ಮತ್ತೆ ದಿಗಂತ್ ಜತೆ 'ಲೈಫು ಇಷ್ಟೇನೆ' ಎನ್ನುತ್ತಿರುವ ಭಟ್ಟರು
MOKSHA
ಯೋಗರಾಜ್ ಭಟ್ಟರು 'ಗಳು'ಗಳನ್ನು ಕೈ ಬಿಡುವ ಯಾವುದೇ ಮುನ್ಸೂಚನೆಗಳು ಕಾಣುತ್ತಿಲ್ಲ. ಅದರಿಂದಲೇ ದಿಗಂತ್ ಮೂಲಕ 'ಪಂಚರಂಗಿ'ಯಲ್ಲಿ ಪ್ರೇಕ್ಷಕರನ್ನು ಹೈರಾಣಾಗಿಸಿದ ಭಟ್ಟರು ಈಗ ದೂದ್‌ಪೇಡವನ್ನು ತನ್ನ ಶಿಷ್ಯ ಪವನ್ ಕುಮಾರ್ ಕೈಗೆ ನೀಡಿದ್ದಾರೆ.
ಬಹುಶಃ ಪೂರ್ತಿ ಅರ್ಥವಾಗಿರಲಿಕ್ಕಿಲ್ಲ. ಕೇಳಿ- 'ಮನಸಾರೆ' ಮತ್ತು 'ಪಂಚರಂಗಿ' ಚಿತ್ರಗಳಿಗೆ ಭಟ್ಟರ ಜತೆ ಚಿತ್ರಕಥೆ ಬರೆದಿದ್ದ ಪವನ್ ಕುಮಾರ್ ಎಂಬ ಯುವ ಪ್ರತಿಭಾವಂತ ಹುಡುಗನ ನಿರ್ದೇಶನದಲ್ಲಿ 'ಲೈಫು ಇಷ್ಟೇನೆ' ಎಂಬ ಚಿತ್ರ ಮೂಡಿ ಬರಲಿದ್ದು, ಇದರಲ್ಲಿ ದಿಗಂತ್ ನಾಯಕನಾಗಿ ನಟಿಸಲಿದ್ದಾರೆ. ಇದಿಷ್ಟು ಸುದ್ದಿ.
ಇಲ್ಲಿ ಅಚ್ಚರಿಯ ವಿಚಾರವೆಂದರೆ ಸ್ವತಃ ಯೋಗರಾಜ್ ಭಟ್ 'ಲೈಫು ಇಷ್ಟೇನೆ' ಚಿತ್ರಕ್ಕೆ ಹಣ ಹೂಡುತ್ತಿರುವುದು. ಹೌದು, ಜಾಕ್ ಮಂಜುರವರ 'ಕೆಕೆ ಫಿಲ್ಮ್ಸ್' ನಿರ್ಮಾಣ ಸಂಸ್ಥೆಯೊಂದಿಗೆ 'ಯೋಗರಾಜ್ ಮೂವೀಸ್' ಸಂಸ್ಥೆಯು ಜತೆಗೂಡಿ ಚಿತ್ರ ನಿರ್ಮಾಣವಾಗುತ್ತಿದೆ.
ನಾಯಕಿಗೆ ಭಾರೀ ಹುಡುಕಾಟ ನಡೆಯುತ್ತಿದೆ. ಹೊಸಬರು, ಭಟ್ಟರ ಕಣ್ಣಿಗೆ ಹಿತವಾಗುವವರು ಸಿಗದೇ ಇದ್ದರೆ ಆ ಪಟ್ಟ ರಾಧಿಕಾ ಪಂಡಿತ್‌ಗೆ ಗ್ಯಾರಂಟಿ. ಬಹುಶಃ 'ಪಂಚರಂಗಿ' ಮಾಂತ್ರಿಕ ಮನೋಮೂರ್ತಿಯವರೇ ಸಂಗೀತ ನಿರ್ದೇಶಕರಾಗಿರುತ್ತಾರೆ. ಮಾಮೂಲಿ ಸಾಹಿತಿ ಜಯಂತ್ ಕಾಯ್ಕಿಣಿ ಹೇಗೂ ಜತೆಗಿರುತ್ತಾರೆ.
ಧನುರ್ಮಾಸ ಆರಂಭವಾಗುವ ಡಿಸೆಂಬರ್ 16ಕ್ಕೂ ಮೊದಲು ಚಿತ್ರ ಸೆಟ್ಟೇರಲಿದೆ ಎಂದು ಸುದ್ದಿಯನ್ನು ಜಾಕ್ ಮಂಜು ಖಚಿತಪಡಿಸಿದ್ದಾರೆ. ಪವನ್ ಕುಮಾರ್ ಬರೆದಿರುವ ಸ್ಕ್ರಿಪ್ಟ್ ಅಂತೂ ಮಂಜು ಅವರನ್ನು ನೆಲದಿಂದ ನಾಲ್ಕಡಿ ಮೇಲೆತ್ತಿದೆಯಂತೆ.
ಇಷ್ಟೆಲ್ಲದರ ಹೊರತೂ 'ಪಂಚರಂಗಿ' ಚಿತ್ರದ ಗಂಧ-ಗಾಳಿ ಈ ಚಿತ್ರದಲ್ಲಿರುವುದಿಲ್ಲ ಎಂದು ಪವನ್ ಮತ್ತು ಯೋಗರಾಜ್ ಭಟ್ ಭರವಸೆ ನೀಡಿದ್ದಾರೆ.