ಜೋಕಾಲಿ ಚಿತ್ರ ಈ ವಾರ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಗೌರಿ ಶಂಕರ್ ಹಾಗೂ ಉದಯತಾರಾ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಣಜಿ ನಾಗರಾಜ್ ನಿರ್ಮಾಣದ ಹೊಣೆ ಚಿತ್ರಕ್ಕೆ ಸಿಕ್ಕಿದೆ.
ಹೆಸರೇ ಹೇಳುವಂತೆ ಇದೊಂದು ಪ್ರೇಮದ ಕಥಾ ಹಂದರ ಒಳಗೊಂಡ ಚಿತ್ರ. ಆದರೆ ಇದರಲ್ಲಿ ಆಕ್ಷನ್‌ಗೂ ಸಾಕಷ್ಟು ಪ್ರಾಧಾನ್ಯ ನೀಡಲಾಗಿದೆ. ಗೌರಿ ಶಂಕರ್‌ಗೆ ಇದು ಚೊಚ್ಚಲ ಚಿತ್ರ. ಇದರಲ್ಲಿ ಅತಿ ಹೆಚ್ಚು ರಿಯಲ್ ಫೈಟ್ ದೃಶ್ಯಗಳಲ್ಲಿ ಇವರು ಪಾಲ್ಗೊಂಡಿದ್ದಾರೆ.
ಶಿವಣ್ಣನ 75ನೇ ಚಿತ್ರ ಶ್ರೀರಾಂನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಹುಡುಗ ಈ ಚಿತ್ರದ ನಾಯಕ. ಸ್ಟಂಟ್‌ಗಳೆಲ್ಲಾ ಅತ್ಯಂತ ನೈಜವಾಗಿ ಮೂಡಿಬಂದಿದೆ. ಕೃತಕ ಸನ್ನಿವೇಶ ಇಲ್ಲ. ನಗರದ ಉದ್ಯಾನವೊಂದರಲ್ಲಿ ನೈಜ ಹೊಡೆದಾಟದ ಸನ್ನಿವೇಶದ ತಾಲೀಮನ್ನೂ ನಡೆಸಿ ನಂತರ ಶೂಟಿಂಗ್ ಮಾಡಲಾಗಿದೆ.
ಚಿತ್ರವನ್ನು ಎಂ.ಎಸ್. ರಮೇಶ್ ನಿರ್ದೇಶಿಸಿದ್ದಾರೆ. ಒಂದೂವರೆ ವರ್ಷದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಫೈಟ್ ಅಭ್ಯಾಸ ಮಾಡಿರುವ ಗೌರಿ ಶಂಕರ್ ಅವರನ್ನು ಸರ್ವ ರೀತಿಯಲ್ಲೂ ಚಿತ್ರಕ್ಕೆ ಸಿದ್ಧಪಡಿಸಿ ತರುವ ಕಾರ್ಯವನ್ನು ಅಣಜಿ ಮಾಡಿದ್ದಾರೆ. ಗೌರಿ ಶಂಕರ್ ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವರು. ಶ್ರದ್ದೆಯಿಟ್ಟು ದೇಹವನ್ನು ದಂಡಿಸಿದ್ದಾರೆ. ಹಗ್ಗ ಹಾಸಿಗೆ ಇಲ್ಲದೇ ನೆಲದ ಮೇಲೆ ಸ್ಟಂಟ್ ಮಾಡಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಾಹಕ. ಎಸ್.ಎ. ರಾಜ್‌ಕುಮಾರ್ ಸಂಗೀತ ನಿರ್ದೇಶಕರಾಗಿದ್ದಾರೆ. ಒಟ್ಟಾರೆ ಹೊಸಬರ ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಮಣೆ ಹಾಕುತ್ತಾನೋ ಕಾದು ನೋಡಬೇಕು.