ಈ ವಾರ ಲಿಫ್ಟ್ ಕೊಡ್ಲಾ ಚಿತ್ರ ತೆರೆಗೆ ಬರುತ್ತಿದೆ. ಜಗ್ಗೇಶ್ ಅವರು ನಟಿಸಿರುವ ಈ ಚಿತ್ರ ಸಮಾಜದ ನಾನಾ ಘಟನೆಗಳನ್ನು ತೆರೆಯ ಮೇಲೆ ತೋರಿಸುವ ಯತ್ನ ಮಾಡಿದೆಯಂತೆ.
ಒಬ್ಬ ಹಾಸ್ಯ ನಟನಾಗಿ ಗಂಭೀರ ಸಲಹೆ ಕೊಡುವ ನಾಯಕನಾಗಿ ಜಗ್ಗೇಶ್ ನಟಿಸಿದ್ದಾರೆ. ಜೀವನದಲ್ಲಿ ಹತಾಶರಾದವರು, ಆಸಕ್ತಿ ಕಳೆದುಕೊಂಡವರು, ನಷ್ಟಕ್ಕೊಳಗಾದವರು ಮತ್ತಿತರರು ಆತ್ಮಹತ್ಯೆಗೆ ಮುಂದಾಗುತ್ತಾರೆ. ಇದು ತಪ್ಪು, ಅದನ್ನು ಎದುರಿಸಿ ಬದುಕುವುದು ಮುಖ್ಯ. ಬದುಕು ದೇವರು ಕೊಟ್ಟ ಅತ್ಯುತ್ತಮ ಸಂಪತ್ತು. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು ಎನ್ನುವುದನ್ನು ಜಗ್ಗೇಶ್ ಈ ಚಿತ್ರದ ಮೂಲಕ ತೋರಿದ್ದಾರೆ.
ನಾನಾ ಹಂತಗಳಲ್ಲಿ ಚಿತ್ರ ಮುಂದುವರಿಯುತ್ತದೆ. ಒಬ್ಬೊಬ್ಬರ ಸಮಸ್ಯೆಯನ್ನೇ ನಿವಾರಿಸುತ್ತಾ ಸಾಗುವ ಜಗ್ಗೇಶ್ ರಿಯಲ್ ಹೀರೋ ರೀತಿ ಮೆರೆಯುತ್ತಾರೆ. ಒಟ್ಟಾರೆ ಹಾಸ್ಯದ ಜತೆ ಅತ್ಯುತ್ತಮ ಸಂದೇಶ ನೀಡುವ ಕಾರ್ಯವನ್ನು ಈ ಚಿತ್ರ ಮಾಡಲಿದೆ.
ನೊಂದ ನಿರ್ಮಾಪಕನ ಪಾತ್ರದಲ್ಲಿ ಕೋಮಲ್ ನಟಿಸಿದ್ದಾರೆ. ಚಿತ್ರವೊಂದನ್ನು ನಿರ್ಮಿಸಿ ಅದು ನೆಲಕಚ್ಚಿದ್ದರಿಂದ ಆದ ನಷ್ಟ ಸಹಿಸಲಾಗದೇ ಆತ್ಮಹತ್ಯೆಗೆ ಮುಂದಾದ ಸಂದರ್ಭದಲ್ಲಿ ಅಲ್ಲಿ ಭೇಟಿಯಾಗುವ ಜಗ್ಗೇಶ್ ಅವನನ್ನು ಹೇಗೆ ಕಾಪಾಡುತ್ತಾರೆ ಎನ್ನುವುದನ್ನು ಅತ್ಯುತ್ತಮವಾಗಿ ಚಿತ್ರಿಸಲಾಗಿದೆ. ಪ್ರತಿ ಹಂತದಲ್ಲೂ ಚಿತ್ರ ನಗಿಸುತ್ತಾ, ಗಂಭೀರ ಸಂದೇಶ ನೀಡುತ್ತಾ ಹೋಗುತ್ತದೆ. ಇದರಿಂದಲೇ ಸಾಮಾನ್ಯ ಹಾಸ್ಯ ಚಿತ್ರಕ್ಕಿಂತ ಇದು ಭಿನ್ನವಾಗಿ ಮೂಡಿ ಬಂದಿದೆ ಎನ್ನುತ್ತಾರೆ ನಿರ್ಮಾಪಕ ಶಂಕರ್ ರೆಡ್ಡಿ. ಅರ್ಚನಾ ಗುಪ್ತಾ ಎಂಬ ನಟಿ ಚಿತ್ರದ ನಾಯಕಿ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಬಹು ನೀರೀಕ್ಷೆಯ ಈ ಚಿತ್ರ ಪ್ರೇಕ್ಷಕರನ್ನು ಮೆಚ್ಚಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.