ಎರಡು ವರ್ಷಗಳ ಹರ ಸಾಹಸದ ನಂತರ ಕೊನೆಗೂ ಜಮಾನಾ ಚಿತ್ರ ಬಿಡುಗಡೆ ಆಗುತ್ತಿದೆ. ಹೊಸಬರ ಚಿತ್ರ ತೆರೆಯ ಮೇಲೆ ಬರುವುದು ಬಹಳ ಕಷ್ಟ ಎನ್ನುವುದಕ್ಕೆ ಇದು ಸೂಕ್ತ ಉದಾಹರಣೆ ಆಗಿದೆ. ಚಿತ್ರಮಂದಿರ ಸಿಗದೇ ಡಬ್ಬದಲ್ಲೇ ಉಳಿದಿದ್ದ ಈ ಚಿತ್ರಕ್ಕೆ ಎರಡು ವರ್ಷ ನಂತರ ಮುಕ್ತಿ ಸಿಗುತ್ತಿದೆ.
ಕಾರಣಾಂತರಗಳಿಂದ ಚಿತ್ರದ ನಿರ್ದೇಶಕ ಲಕ್ಕಿ ಶಂಕರ್‌ಗೆ ಈ ಚಿತ್ರ ಬಿಡುಗಡೆ ಮಾಡಲು ಆಗಿರಲಿಲ್ಲ. ಹೆಸರಿನ ಜತೆ ಲಕ್ಕು ಇದ್ದರೂ ಅದು ಕೈಕೊಟ್ಟಿತ್ತು. ಎರಡು ವರ್ಷ ನಂತರ ಬಿಡುಗಡೆ ಆಗುತ್ತಿರುವ ಚಿತ್ರ ಗೆದ್ದರೆ ಲಕ್ಕು ಕುದುರುತ್ತದೆ. ಇಲ್ಲವಾದರೆ ಮತ್ತೊಮ್ಮೆ ತೀರ್ಥದಂತೆ ಹಳಸಿದೆ ಎಂದು ಜನ ಧಿಕ್ಕರಿಸುತ್ತಾರೆ. ಭವಿಷ್ಯದ ಚಿಂತೆಯಲ್ಲಿ ಹೊಸ ಹುಡುಗರು ಹಾಗೂ ಲಕ್ಕಿ ಶಂಕರ್ ಇದ್ದಾರೆ. ಚಿತ್ರ ಇದೇ ಶುಕ್ರವಾರ ಬಿಡುಗಡೆ ಆಗಲಿದ್ದು ಇವರೆಲ್ಲರ ಭವಿಷ್ಯ ನಿರ್ಧರಿಸಲಿದೆ.
'ಹುಟ್ಟಿದಾಗ ಓಪನ್, ಸತ್ತಾಗ ಎಂಡ್. ಇದರ ನಡುವೆ ನಡೆಯುವ ಬದುಕಿನ ಕಥೆಯೇ ಜಮಾನಾ' ಇದು ಒಂದು ಸಾಲಲ್ಲಿ ಹೇಳಿ ಬಿಡಬಹುದಾದ ಚಿತ್ರದ ಕಥೆ. ಏನು ಎತ್ತ ಎನ್ನುವುದನ್ನು ತೆರೆಯ ಮೇಲೆ ನೋಡಬೇಕಿದೆ.
ಸಮಾಜದ ಕೆಲ ಕೊಳಕುಗಳನ್ನು ಹೇಗೆ ತಿದ್ದಿಕೊಳ್ಳಬೇಕು ಅನ್ನುವುದನ್ನು ಈ ಚಿತ್ರ ತೋರಿಸುವ ಕಾರ್ಯ ಮಾಡಲಿದೆ. ನಿತೀಶ್ ಜೆ.ಪಿ. ಚಿತ್ರದ ನಾಯಕ. ಈತ ಕರಾಟೆ ಪಟು ಆಗಿದ್ದು, ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ. ಇನ್ನೊಂದು ವಿಶೇಷ ಅಂದರೆ ಈ ಚಿತ್ರದಲ್ಲಿ ಜಾಕಿ ಶ್ರಾಫ್ ಕೂಡಾ ನಟಿಸಿದ್ದಾರೆ. ಮೈಸೂರು, ಮಂಡ್ಯದಲ್ಲಿ ಚಿತ್ರೀಕರಣ ನಡೆದಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಇರುವ ಈ ಚಿತ್ರ ಬಿಡುಗಡೆ ನಂತರ ಏನಾಗುವುದೋ ಕಾದು ನೋಡಬೇಕು. ಆಗಷ್ಟೇ ಲಕ್ಕಿ ಶಂಕರ್‌ಗೆ ನಿಜಕ್ಕೂ ಲಕ್ ಇದೆಯೇ ಎಂದು ತೀರ್ಮಾನವಾಗುತ್ತದೆ.