ಸುದೀಪ್, ಐಂದ್ರಿತಾ ರೇ, ಅಂಬರೀಷ್ ಮುಂತಾದ ದಿಗ್ಗಜರನ್ನು ಹೊಂದಿರುವ 'ವೀರ ಪರಂಪರೆ' ಈ ವಾರ ಬಿಡುಗಡೆಯಾಗುತ್ತಿದೆ. ಇದು ಸತ್ಯಕತೆ ಅಲ್ಲ, ಕೇವಲ ಕಲ್ಪನೆಗೆ ಮೂಡಿದ ಒಂದು ಸಿಂಪಲ್ ಚಿತ್ರ. ಖಂಡಿತಾ ರಿಮೇಕ್ ಮಾಡಿಲ್ಲ, ಪ್ಲೀಸ್ ನಂಬಿ ಎಂದು ಹತ್ತು ಹಲವು ರಿಮೇಕುಗಳನ್ನು ಸುತ್ತಿರುವ ನಿರ್ದೇಶಕ ಎಸ್. ನಾರಾಯಣ್ ಅಲವತ್ತುಕೊಳ್ಳುತ್ತಿದ್ದಾರೆ.
ಎರಡು ಅದ್ಬುತ ತಾರೆಯನ್ನು ಒಟ್ಟಿಗೆ ನೀಡಿದರೆ ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಲು ಮಾಡಿದ ಸಿನಿಮಾ ಇದು. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಇರುವ ಫಾರ್ಮುಲಾಗೆ ಒಂದಿಷ್ಟು ಮಸಾಲೆ ಸೇರಿಸಿ ಮಾಡಿದ್ದೇನೆ. ಜನರ ಗಮನಕ್ಕೆ ಇದೊಂದು ಪ್ರಾಯೋಗಿಕ ರೀತಿಯಲ್ಲಿ ತರುತ್ತಿದ್ದೇನೆ ಎಂದಿದ್ದಾರೆ.
ಇಷ್ಟು ದಿನ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತೊಡಗಿದ್ದ ವಿಜಯಲಕ್ಷ್ಮಿ ಸಿಂಗ್ ಮತ್ತೆ ಬಣ್ಣ ಹಚ್ಚಿದ್ದಾರೆ. ಅವರು ಅಂಬರೀಶ್‌ಗೆ ಅಲ್ಲಲ್ಲ ವರದೇಗೌಡರಿಗೆ ಪತ್ನಿಯಾಗಿ ನಟಿಸಿದ್ದಾರೆ.
ಮಾತು ಮುಂದುವರಿಸುವ ನಾರಾಯಣ್, ಅಂಬರೀಶ್ ಹಾಗೂ ಸುದೀಪ್ ಕನ್ನಡದ ಒಂದು ಒಳ್ಳೆ ಕಾಂಬಿನೇಷನ್. ಎರಡು ತಲೆಮಾರಿನ ಅನುಭವ ಚಿತ್ರದಲ್ಲಿ ಅಡಕವಾಗಿದೆ. ಯಾವುದೇ ಯಶಸ್ವಿ ಚಿತ್ರ ಅಂತ ನಾನು ಇದುವರೆಗೂ ಮಾಡಿಲ್ಲ. ಇದು ಯಶಸ್ವಿ ಆಗುತ್ತೆ ಅಂತ ಎಲ್ಲೂ ಗಮನ ಇಟ್ಟು ಮಾಡಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಮಾಡಿದ ಚಿತ್ರಗಳು ಯಶಸ್ವಿಯಾಗಿವೆ. ಶ್ರದ್ದೆ ಇದಕ್ಕೆ ಕಾರಣ. ಈ ಚಿತ್ರದಲ್ಲೂ ಅದನ್ನು ಪಾಲಿಸಿದ್ದೇನೆ. ಏನಾಗುವುದೋ ದೇವರೇ ಬಲ್ಲ ಅನ್ನುತ್ತಾರೆ.