ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಲ್ಲಿ ಶೃಂಗಾರ ಕಾವ್ಯ ಖ್ಯಾತಿಯ ನಟ ರಘುವೀರ್ ಮತ್ತು ವೇಶ್ಯೆಯರೆಂದು ಹೇಳಲಾಗುತ್ತಿರುವ ಇಬ್ಬರು ತರುಣಿಯರ ಸಹಿತ ಐದು ಮಂದಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗುರುವಾರ ಬೆಳಿಗ್ಗೆ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಅಭಿಷೇಕ್ ಲಾಡ್ಜ್‌ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ, ಅನೈತಿಕ ವ್ಯವಹಾರದಲ್ಲಿ ತೊಡಗಿದ್ದ ವಿಷಯ ಬೆಳಕಿಗೆ ಬಂದಿತ್ತು ಎನ್ನಲಾಗಿದ್ದು, ಬಂಧಿತರಾಗಿರುವ ರಘುವೀರ್, ಅನಾರೋಗ್ಯದ ನೆಪವೊಡ್ಡಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಂಧನದ ಸಂದರ್ಭದಲ್ಲಿ ಅವರು ತೀರಾ ಹೆಚ್ಚು ಮದ್ಯ ಸೇವಿಸಿ, ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಬಂಧಿತರಲ್ಲಿ ರಘುವೀರ್ ಸ್ನೇಹಿತ ಶಂಕರ್ ಹಾಗೂ ಕಾರು ಚಾಲಕ ರಾಮಮೂರ್ತಿ ಎಂಬವರು ಸೇರಿದ್ದು, ಇಬ್ಬರು ತರುಣಿಯರನ್ನು ಪೂರ್ಣಿಮಾ ಮತ್ತು ಗೀತಪ್ರಿಯಾ ಎಂದು ಹೆಸರಿಸಲಾಗಿದೆ.
ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ ಮುಂತಾದ ಸಂಗೀತಮಯ ಚಿತ್ರಗಳಲ್ಲಿ ಹೆಸರು ಮಾಡಿದ್ದ ರಘುವೀರ್, ಇತ್ತೀಚೆಗೆ ಉಯ್ಯಾಲೆ ಎಂಬ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶೃಂಗಾರ ಕಾವ್ಯ ನಾಯಕಿ ಸಿಂಧು ಜತೆ ಪ್ರೇಮ ವಿವಾಹವಾಗಿ, ವಿಚ್ಛೇದನಗೊಂಡಿದ್ದ ರಘುವೀರ್, ಬಳಿಕ ತಮ್ಮ ಅಕ್ಕನ ಮಗಳು ಗೌರಿಯನ್ನು ವಿವಾಹವಾಗಿ, ಚಿತ್ರರಂಗದಿಂದ ದೂರವಾಗಿದ್ದರು. ಅವರಿಗೊಂದು ಮಗುವೂ ಇದೆ. ಇತ್ತೀಚೆಗಷ್ಟೇ ಅವರು ಮರಳಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು.
ಸ್ನೇಹಿತರದೇ ಷಡ್ಯಂತ್ರ... ಈ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಘುವೀರ್, ತನ್ನ ವಿರುದ್ಧ ಸ್ನೇಹಿತರೇ ಈ ಬಗೆಗೆ ಷಡ್ಯಂತ್ರ ನಡೆಸಿ, ಪ್ರಕರಣದಲ್ಲಿ ಸಿಲುಕಿಸಿದ್ದು, ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.