ನಟ ದರ್ಶನ್ ಕುಟುಂಬದಲ್ಲಿ ಕಲಹ ಏರ್ಪಡಲು ನಟಿ ನಿಖಿತಾ ಅವರೇ ಕಾರಣ ಎಂದು ಅವರಿಗೆ 3 ವರ್ಷ ನಿರ್ಬಂಧ ಹೇರಿರುವ ನಿರ್ಮಾಪಕರ ಸಂಘದ ಕ್ರಮದ ವಿರುದ್ಧ ಎಲ್ಲೆಡೆ ಅಪಸ್ವರ ಕೇಳಿಬಂದಿರುವುದರ ಜತೆಗೆ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಬೀದಿಗಿಳಿದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಹಿರಿಯ ನಟಿ ತಾರಾ ಕೂಡ ನಿಖಿತಾ ನಿಷೇಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ದರ್ಶನ್ ನಡವಳಿಕೆ ಗಾಬರಿ, ಅಸಹ್ಯ ಹುಟ್ಟಿಸಿದೆ. ಅಷ್ಟು ಒಳ್ಳೆಯ ಹುಡುಗ ಅದೇಕೆ ಹಾಗೆಲ್ಲಾ ನಡೆದುಕೊಂಡಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರು ಒಂದಾಗಿದ್ದಾರೆ. ಕಾನೂನು ಕಟ್ಟಳೆಗಳ ವಿಚಾರಣೆ ಬಾಕಿಯಿದ್ದು ಸಾಂಸಾರಿಕವಾಗಿ ಪತಿ ಪತ್ನಿ ರಾಜಿಯಾಗಿದ್ದಾರೆ. ಆಸ್ಪತ್ರೆಗೂ ಹೋಗಿ ಪರಸ್ಪರ ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡಿದ್ದಾರೆ. ಅವರು ಒಂದಾದ ಮೇಲೆ ನಟಿ ನಿಖಿತಾ ಅವರ ಮೇಲೆ ಮೂರು ವರ್ಷ ನಿರ್ಬಂಧ ಹೇರುವಂತದೇನಿತ್ತು ಎಂದು ಪ್ರಶ್ನಿಸಿದ್ದಾರೆ ನಿರ್ಮಾಪಕ ಸಂದೇಶ್ ನಾಗರಾಜ್.
ಎಲ್ಲರೂ ಕಲಾವಿದರಾಗಿದ್ದು ಹಿರಿಯ ಕಲಾವಿದರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ನಿರ್ಮಾಪಕರ ಸಂಘದ ಹೆಸರಿನಲ್ಲಿ ಈ ರೀತಿ ತೀರ್ಮಾನ ಕೈಗೊಳ್ಳುವುದು ಯಾವ ನ್ಯಾಯ. ಕಲಾವಿದರ ಸಂಘದ ಅಧ್ಯಕ್ಷರಾಗಿ ಅಂಬರೀಷ್ ಅವರೂ ಇದ್ದಾರೆ, ಅವರನ್ನೂ ಒಂದು ಮಾತು ಕೇಳಿ ಒಮ್ಮತದ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಿಷೇಧ ಹೇರಿರುವ ನಿರ್ಮಾಪಕರು ಏನಂತಾರೆ (ಮುಂದಿನ ಪುಟದಲ್ಲಿ)