ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಕನ್ನಡ ಚಿತ್ರರಂಗದ 'ಯಜಮಾನ' ವಿಷ್ಣುಗೂ ಇಂದು ಹುಟ್ಟುಹಬ್ಬ! (Vishnuvardhan | Bharathi | Nagarahavu | Bellary Naga | Aptharakshaka)
ಕನ್ನಡ ಚಿತ್ರರಂಗ ಸಂಪತ್ತು ಈ ಸಂಪತ್ ಕುಮಾರ! ಹೀಗೆ ಹೇಳಿದರೆ ಖಂಡಿತ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಯಾವ ಸಂಪತ್ ಕುಮಾರ ಎಂದು ಮೇಲೆ ಕೆಳಗೆ ನೋಡಿಯಾರು. ಹೌದು. ಈ ಸಂಪತ್ ಕುಮಾರ್ ಬೇರಾರು ಅಲ್ಲ. ಡಾ.ವಿಷ್ಣುವರ್ಧನ್. ವಿಷ್ಣುವರ್ಧನ್ ಅವರ ನಿಜವಾದ ಹೆಸರು ಸಂಪತ್ ಕುಮಾರ್ ಎಂದಾದರೂ ವಿಷ್ಣು ಅವರು ಸಿನಿಮಾ ರಂಗದಲ್ಲಿ ವರ್ಧಿಸಿದ್ದು ವಿಷ್ಣುವರ್ಧನ ಎಂಬ ಹೆಸರಿಂದಾಗಿಯೇ. ಹಾಗಾಗಿ ಸಂಪತ್ ಕುಮಾರ್ ಹೆಸರು ಮೂಲೆ ಸೇರಿದ್ದಾಗಿದೆ.
ವಿಷ್ಣು ಅವರಿಗೆ ಈಗ ಸರಿಯಾಗಿ 59ರ ಹರೆಯ. 1950ರ ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಜನಿಸಿದ ವಿಷ್ಣುವರ್ಧನ್ ಕನ್ನಡ ಚಿತ್ರರಂಗದಲ್ಲಿ ಎಂದಿಗೂ ಹಿಂತಿರುಗಿ ನೋಡಿದವರಲ್ಲ. ಮೂರುವರೆ ದಶಕಗಳಿಂದ ನಟನಾ ವೃತ್ತಿಯಲ್ಲಿರುವ ಡಾ.ವಿಷ್ಣುವರ್ಧನ್ ಈವರೆಗೆ ಸುಮಾರು 200 ಚಿತ್ರಗಳಲ್ಲಿ (ಆಪ್ತರಕ್ಷಕ ವಿಷ್ಣು ಅವರ 200ನೇ ಚಿತ್ರ) ಬಗೆಬಗೆಯ ಪಾತ್ರಗಳನ್ನು ನಿಭಾಯಿಸಿದ್ದಾರೆ.
PR
ವಿಷ್ಣು ಅಭಿನಯದ ನಾಗರಹಾವು, ಹೊಂಬಿಸಿಲು, ಸಾಹಸ ಸಿಂಹ, ಬಂಧನ, ನಾಗರಹೊಳೆ, ಮುತ್ತಿನ ಹಾರ, ನಿಷ್ಕರ್ಷ, ಯಜಮಾನ, ಭೂತಯ್ಯನ ಮಗ ಅಯ್ಯ, ಆಪ್ತಮಿತ್ರ ಚಿತ್ರಗಳು ಇಂದಿಗೂ ಜನಪ್ರಿಯ. ಈ ಚಿತ್ರಗಳಷ್ಟೇ ಅಲ್ಲದೆ ಹಲವು ಚಿತ್ರಗಳಲ್ಲಿ ಯಶಸ್ಸಿನ ಹೊಳೆಯನ್ನೇ ಹರಿಸಿದ ವಿಷ್ಣುವರ್ಧನ್ ತಮ್ಮದೇ ಆದ ಸ್ಟಾರ್ ವ್ಯಾಲ್ಯೂ, ಇಮೇಜ್ನು ಹೊಂದಿದವರು. ಹೆಂಡತಿಯ್ನು ನಿಷ್ಕಲ್ಮಷವಾಗಿ ಪ್ರೀತಿಸುವ ಗಂಡ, ಸಾಹಸಿ, ಪ್ರಾಮಾಣಿಕ ಕೆಲಸಗಾರ, ಸಹಾಯಕ್ಕೆ ದೌಡಾಯಿಸುವ ಹೃದಯ ಶ್ರೀಮಂತಿಕೆಯ ಪಾತ್ರಗಳಲ್ಲೇ ಹೆಚ್ಚು ನಟಿಸಿರುವ ವಿಷ್ಣು ಅವರಿಗೆ ಮಹಿಳಾ ಅಭಿಮಾನಿಗಳೇ ಜಾಸ್ತಿ. ವಿಷ್ಣು ಅವರ ಬಹಳಷ್ಟು ಸಿನಿಮಾಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕ್ಲಾಸಿಕ್ ಸಿನಿಮಾಗಳಾಗಿ ಇಂದಿಗೂ ಸ್ಥಾನ ಪಡೆದಿವೆ.
ವಂಶವೃಕ್ಷ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣು ನಾಗರ ಹಾವು, ಗಂಧದ ಗುಡಿ (ಡಾ.ರಾಜ್ ಜತೆಗೆ ನಟಿಸಿದ ಏಕೈಕ ಚಿತ್ರ), ದೇವರ ಗುಡಿ, ಪ್ರೊ.ಹುಚ್ಚೂರಯ್ಯ, ಸಿಂಗಾಪುರದ್ಲಲಿ ರಾಜಾ ಕುಳ್ಳ, ಪ್ರೇಮ ಲೋಕ, ಕಿಲಾಡಿ ಜೋಡಿ, ಗಂಧರ್ವ ಗಿರಿ, ಗಲಾಟೆ ಸಂಸಾರ, ಕಳ್ಳ ಕುಳ್ಳ, ಮದುವೆ ಮಾಡು ತಮಾಷೆ ನೋಡು, ಮಕ್ಕಳ ಸೈನ್ಯ, ಕಿಟ್ಟು ಪುಟ್ಟು, ಕೃಷ್ಣ ರುಕ್ಮಿಣಿ,ಕೃಷ್ಣ ನೀ ಬೇಗನೆ ಬಾರೋ, ಅವಳ ಹೆಜ್ಜೆ, ಹೊಂಬಿಸಿಲು, ಬಂಧನ, ಮಲಯ ಮಾರುತ, ಸುಪ್ರಭಾತ, ಮುತ್ತಿನಹಾರ, ರಾಯರು ಬಂದರು ಮಾವನ ಮನೆಗೆ, ಹಾಲುಂಡ ತವರು, ಲಾಲಿ, ಸಾಹಸ ಸಿಂಹ, ಸೂರ್ಯವಂಶ, ಯಜಮಾನ, ಗುರುಶಿಷ್ಯರು, ರುದ್ರನಾಗ, ಸತ್ಯಂ ಶಿವಂ ಸುಂದರಂ, ಕಳಿಂಗ, ವೀರಾಧಿವೀರ, ಜಯಸಿಂಹ, ಕೋಟಿಗೊಬ್ಬ, ನೀ ಬರೆದ ಕಾದಂಬರಿ, ಯಾರೆ ನೀನು ಚೆಲುವೆ, ಕಿಲಾಡಿಗಲು, ಆಪ್ತಮಿತ್ರ, ನಿಷ್ಕರ್ಷ, ಸಿಂಹಾದ್ರಿಯ ಸಿಂಹ, ವಿಷ್ಮುಸೇನಾ, ಏಕದಂತ, ಮಾತಾಡ್ ಮಾತಾಡ್ ಮಲ್ಲಿಗೆ, ಈ ಬಂಧನ, ಹಬ್ಬ, ಮತ್ತೆ ಹಾಡಿತು ಕೋಗಿಲೆ... ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
MOKSHA
ವಿಷ್ಣುವರ್ಧನ್ ಅವರು ಡಾ.ರಾಜ್ ಜತೆಗೆ ಅಭಿನಯಿಸಿದ ಏಕೈಕ ಚಿತ್ರವೆಂದರೆ ಗಂಧದ ಗುಡಿ. ಆದರೆ ಆ ಚಿತ್ರ ಶೂಟಿಂಗ್ ವೇಳೆ ವಿಷ್ಣುವರ್ಧನ್ ವಿವಾದಕ್ಕೊಳಗಾದರು. ಇದರಿಂದಾಗಿ ಮುಂದೆಂದೂ ಅವರು ರಾಜ್ ಜತೆಗೆ ಅಭಿನಯಿಸಲು ಸಾಧ್ಯವಾಗಲಿಲ್ಲ. ಈ ವಿವಾದದ ನಂತರ ವಿಷ್ಮು ಅವರಿಗೆ ಬಂದ ಬೆದರಿಕೆ ಕರೆಗಳು ಅದೆಷ್ಟೋ. ವಿಷ್ಣು ಶೂಟಿಂಗ್‌ಗೆ ಹೋದರೆ ಸಾಕು ಮನೆಗೆ ಬೆದರಿಕೆ ಕರೆಗಳು ಬರುತ್ತಿದ್ದವು ಎನ್ನಲಾಗಿದೆ.
ವಿಷ್ಣು ಹಾಗೂ ದ್ವಾರಕೀಶ್ ಜೋಡಿ ಖ್ಯಾತ ಜೋಡಿ. ಕೆಲವೇ ವರ್ಷದ ಹಿಂದಿನ ಆಪ್ತಮಿತ್ರದವರಗೆ ವಿಷ್ಣು, ದ್ವಾರಕೀಶ್ ಜತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಆಪ್ತಮಿತ್ರದಲ್ಲಿ 'ನನ್ನಿಂದ ನಿನ್ನ... ನಿನ್ನಿಂದ ನನ್ನ... ದೂರ ಮಾಡಲು ಎಂದೂ ಆಗಲ್ಲ' ಎದು ಡ್ಯುಯೆಟ್ ಹಾಡಿದ ಈ ಜೋಡಿ ಅಂದಿಗೇ ಕೊನೆ. ಮತ್ತೆ ಎಂದೂ ಒಂದಾಗಲಿಲ್ಲ. ಚಿತ್ರರಂಗದಲ್ಲಿ ವಿಷ್ಣು ಅವರ ಪರಮಾಪ್ತ ಗೆಳೆಯ ಅಂಬರೀಷ್. ಅಂಬಿ ಹಾಗೂ ವಿಷ್ಣು ಜೋಡಿಯೂ ಅಷ್ಟೇ ಪ್ರಸಿದ್ಧ.
ವಿಷ್ಣು ಅವರ ಪಾಲಿಗೆ ದಕ್ಕ ಪ್ರಶಸ್ತಿ ಪುರಸ್ಕಾರಗಳಿಗೂ ಲೆಕ್ಕವೇ ಇಲ್ಲ. 2005ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಏಳು ದಕ್ಷಿಣ ಭಾರತೀಯ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ, ಅತ್ಯುತ್ತಮ ನಟನಾಗಿ ಏಳು ರಾಜ್ಯ ಪ್ರಶಸ್ತಿ, ಡಾ.ರಾಜ್ ಪ್ರಶಸ್ತಿ ಹೀಗೆ ಪ್ರಶಸ್ತಿಗಳ ಸುರಿಮಳೆಯೇ ಆಗಿವೆ.
ಸದ್ಯದಲ್ಲಿ ಹೊರಬರಲಿರುವ ವಿಷ್ಣು ಅಭಿನಯದ ಆಪ್ತರಕ್ಷಕ ಹಾಗೂ ಬಳ್ಳಾರಿ ನಾಗ ಚಿತ್ರಗಳು ವಿಷ್ಣು ಅಭಿಮಾನಿಗಳ ನಿದ್ದೆಗೆಡಿಸಿವೆ. ಖ್ಯಾತ ಕನ್ನಡ ನಟಿ ಭಾರತಿ ಅವರನ್ನು ಪ್ರೇಮಿಸಿ ಮದುವೆಯಾಗಿ ಸುಖಸಂಸಾರ ನಡೆಸುತ್ತಿರುವ ಕನ್ನಡದ 'ಆಪ್ತಮಿತ್ರ' ವಿಷ್ಣುವರ್ಧನರಿಗೆ ಹುಟ್ಟುಹಬ್ಬದ ಶುಭಾಶಯಗಳು.