ಇಂದಿಗೆ ಸುಮಾರು ಐದು ದಶಕಗಳ ಹಿಂದೆ... ನಾನಾಗ ಎಂಟರ ತುಂಟಗಾಲಿನಲ್ಲಿದ್ದ ಹುಡುಗ. ಆಟದ (ಯಕ್ಷಗಾನ ಬಯಲಾಟಕ್ಕೆ ಹಾಗೆನ್ನುತ್ತಾರೆ.) ಮೋಜು ನಮ್ಮ ಹಳ್ಳಿಯಲ್ಲಿ ಎಲ್ಲರಿಗೂ ಇದ್ದಿತು (ಈಗಲೂ ಇದೆಯೆನ್ನಿ)-
ದಕ್ಷಿಣ ಕನ್ನಡದ ಹಳ್ಳಿಗಳೆಂದರೆ, ಹತ್ತು ಮನೆಗಳ ಸುತ್ತೂರುಗಳಾಗಿರುವುದಿಲ್ಲ. ಒಂದು ಮನೆಯಿಂದ ಇನ್ನೊಂದು ಮನೆಗೆ ಕೂಗಳತೆಯ ದೂರವೇ ಇರುತ್ತದೆ. ಅಂತಹ ಹತ್ತು ಮನೆಗಳಿರುವ ಸುಮಾರು ಚದರ ಮೈಲಿಗಳ ವಿಸ್ತಾರದ ಪ್ರದೇಶಕ್ಕೆ ಒಂದು ಹಳ್ಳಿಯ ಹೆಸರು ಇರುತ್ತದೆ. ಪ್ರತಿ ಮನೆಯ ತಾಣಕ್ಕೂ ಒಂದು ಒಳ ಹೆಸರಿರುತ್ತದೆ.
ನಮ್ಮ ಮನೆ ಇರುವ ಸ್ಥಳಕ್ಕೆ ಕುರಿಯ ಎನ್ನುತ್ತಾರೆ. ಅಲ್ಲಿಂದ ಸುಮಾರು ಒಂದು ಮೈಲು ದೂರದ ಕುರುಡಪದವಿನಲ್ಲಿ ಮೂರು ದಿನಗಳ (ಅಂದರೆ ರಾತ್ರಿಗಳ) ಬಯಲಾಟದ ಕಾರ್ಯಕ್ರಮವಿದ್ದಿತು.
ಒಂದು ದಿನದ “ಆಟ”ವಾದರೂ ನಮಗೆ ಸಂತಸದ ಸುಗ್ಗಿ. ಮೂರು ದಿನಗಳೆಂದರೆ ಕೇಳಬೇಕೆ?
ರಾತ್ರೆಯೆಲ್ಲಾ ರಂಗಸ್ಥಳದ ಬಳಿ- ಹಗಲೆಲ್ಲಾ (ಊಟದ ಹೊತ್ತಿನ ಹೊರತು) ಮನೆ ಚಾಪೆಯ ಮೇಲೆ- ನಾನು ಕಳೆದಿದ್ದೆ. ಮೊದಲ ರಾತ್ರಿ- “ಪಟ್ಟಾಭಿಷೇಕ”, ಮರುರಾತ್ರಿ “ಪ್ರಹ್ಲಾದ ಚರಿತ್ರೆ”, ಮೂರನೆಯ ದಿನ “ಕಾರ್ತವೀರ್ಯಾರ್ಜುನ ಕಾಳಗ.” ಮೂರೂ ಪ್ರಸಂಗಗಳ ಹೆಸರು ನೆನಪಿನಲ್ಲಿ ಉಳಿದಿದೆ. ಆದರೆ, ನೋಡಿದ ಆಟಗಳಲ್ಲಿ “ಪಟ್ಟಾಭಿಷೇಕ” ಮಾತ್ರವೇ ಅಚ್ಚಳಿಯದೆ ಉಳಿದುದು. ಅದರಲ್ಲೂ ಒಂದು ಪಾತ್ರ, ಇಂದಿಗೂ ಕಣ್ಣೆದುರು ಕಟ್ಟಿದಂತಿದೆ.
“ಸಣ್ಣವಳಾದ ಸೀತೆ ಮತ್ತು ವೃದ್ಧಾಪ್ಯದಲ್ಲಿರುವ ಪಿತ ದಶರಥ ಚಕ್ರವರ್ತಿ... ಇವರಿಬ್ಬರಿಗೂ ನಾನಿಲ್ಲದಿರುವಾಗ ನಮ್ಮ ವಿಯೋಗದ ದುಃಖವು ಬಾರದಂತೆ-ತಾಪ ತಗಲದಂತೆ ನೋಡಿಕೊಳ್ಳುವ ಹೊಣೆ ನಿಮ್ಮದಮ್ಮಾ!” ಎಂದು ಶ್ರೀರಾಮಚಂದ್ರನು ತಾಯಿ ಕೌಸಲ್ಯೆಯೊಡನೆ ಹೇಳುವ ಮಾತು-
ಕೌಸಲ್ಯೆ ಅವನನ್ನು ಬೀಳ್ಕೊಡುವ ದೃಶ್ಯ.... ರಾಮನ ಪಾತ್ರಕ್ಕಿಂತಲೂ, ವನವಾಸಕ್ಕೆ ಮಗನನ್ನು ಕಳುಹಿಸಿಕೊಡುವ ಕೌಸಲ್ಯಾದೇವಿಯ ಪಾತ್ರಚಿತ್ರಣ ನನ್ನನ್ನು ಸೆರೆ ಹಿಡಿದಿತ್ತು. ಕೌಸಲ್ಯೆ “ಅಭಿನಯ”ವನ್ನು ಕಂಡು, ಕೆಲವು ಹನಿ ಕಣ್ಣೀರು ಸುರಿಸಿದ್ದೆನೆಂದು ಹೇಳಲು ನಾಚಿಕೆ ಏನೂ ಆಗುವುದಿಲ್ಲ. ಆ “ವೇಷ”ವನ್ನು ಹಾಕಿದ್ದವರು ಶ್ರೀ ಕುಂಬಳೆ ರಾಮಚಂದ್ರರೆಂದು ನೆನಪು (ಅವರು ಈಗ ಇಲ್ಲ).
ಆಗಿನ ಕಾಲಕ್ಕೂ ಮೊದಲು, ಅಂದಿನ ಬಯಲಾಟ ನಡೆಸಿದ್ದ ಕೂಡ್ಲು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂದರೆ ಪ್ರಸಿದ್ಧವಾಗಿತ್ತು. ಕೂಡ್ಲು “ಮೇಳ”ದ (ಅದು ಕೆಲವರ ಬಾಯಲ್ಲಿ ಕೂಡೇಲು ಮೇಳವೂ ಆಗಿತ್ತು) ಆಟ ಇದೆ ಎಂದರೆ ಹತ್ತಾರು ಮೈಲು ದೂರದಿಂದ ರಾತ್ರೆಯ ಹೊತ್ತಿನಲ್ಲಿ ಗುಡ್ಡಗಳಲ್ಲೆಲ್ಲಾ ತೆಂಗಿನ ಗರಿಗಳ “ಸೂಟೆ”ಗಳ ಸಾಲನ್ನು ಕಾಣಬಹುದಾಗಿತ್ತು.