"ನನ್ನಿಂದಾದಷ್ಟು ಸಮಯ... ಈ ಜೀವನ ನನ್ನನ್ನು ಕುಣಿಸಿದಷ್ಟು ದಿನವೂ ಕುಣಿಯುತ್ತೇನೆ.... ಕುಣಿಯುತ್ತಲಿರುತ್ತೇನೆ..." ಎಂದು ತೀರ್ಮಾನಿಸಿ ಯಕ್ಷಗಾನ ಕಲೆಗಾಗಿ ಅವಿರತವಾಗಿ ದುಡಿದು 1972ರ ನವೆಂಬರ್ 18ರಂದು ಬಣ್ಣ ಕಳಚಿ ಯಕ್ಷಗಾನಾಭಿಮಾನಿಗಳನ್ನು ತಬ್ಬಲಿಯನ್ನಾಗಿ ಮಾಡಿ ಯಕ್ಷಮಾತೆಯ ಪಾದವನ್ನು ಸೇರಿದವರು ಕುರಿಯ ವಿಠಲ ಶಾಸ್ತ್ರಿ. ತೆಂಕು ತಿಟ್ಟು ಯಕ್ಷಗಾನ ಲೋಕ ಕಂಡ ಮೇರು ಹೆಸರು ಕುರಿಯ ಅವರದು. ಯಕ್ಷಗಾನದ ಸಾಂಪ್ರದಾಯಿಕ ರೂಪದಿಂದ, ಆಧುನಿಕ ರೂಪದವರೆಗೂ ಪ್ರತಿಯೊಂದು ಹಂತದ ಏರಿಳಿತಗಳನ್ನೂ ಅವರು ಕಂಡಿದ್ದಾರೆ. ಅದೆಷ್ಟೋ ಶ್ರೇಷ್ಠ ಪ್ರತಿಭೆಗಳನ್ನು ಯಕ್ಷಗಾನ ರಂಗಕ್ಕೆ ಪರಿಚಯಿಸಿದ್ದಾರೆ.
ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ ಒಬ್ಬ ಪ್ರಬುದ್ಧ ಕಲಾವಿದರಾಗಿದ್ದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು ಜನಿಸಿದ್ದು 1912ರ ಸೆಪ್ಟೆಂಬರ್ 08ರಂದು. ತಮ್ಮ ವಯಸ್ಸಿನ ನೂರನೇ ಸಂವತ್ಸರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ. ಗೋ.) ಅವರು ನಿರೂಪಣೆಗೈದಿರುವ ಕುರಿಯ ವಿಠಲ ಶಾಸ್ತ್ರಿಯವರ ಆತ್ಮ ಕಥನ "ಬಣ್ಣದ ಬದುಕು" ವೆಬ್‌ದುನಿಯಾ ಓದುಗರಿಗಾಗಿ ಇಲ್ಲಿ ನೀಡಲಾಗುತ್ತಿದೆ. ಇದು ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಪ್ರಕಟವಾಗಲಿದೆ.
'ಬಣ್ಣದ ಬದುಕು' ಸರಣಿಗೆ ಸಹಕಾರ ನೀಡಿದ ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ ಮತ್ತು ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟ್ (ರಿ) ಮತ್ತು ಈ ಸರಣಿಗಾಗಿ ಕ್ಯಾರಿಕೇಚರ್ ರಚಿಸಿಕೊಟ್ಟ ಖ್ಯಾತ ವ್ಯಂಗ್ಯಚಿತ್ರಕಾರ ಹರಿಣಿ ಹಾಗೂ ಲೇಖನ ಪ್ರಕಟಣೆಗೆ ಸಹಕರಿಸಿದ ಪ.ಗೋ. ಅವರ ಪುತ್ರರಾದ ಪದ್ಯಾಣ ರಾಮಚಂದ್ರ ಅವರಿಗೆ ಕೃತಜ್ಞತೆಗಳು.
ಕನ್ನಡ ಕರಾವಳಿಯ ಅನನ್ಯ ಕಲೆ ಯಕ್ಷಗಾನ ಪ್ರೇಮಿಗಳಿಗೆ ಇದು ಇಷ್ಟವಾಗಬಹುದು ಮತ್ತು ಯಕ್ಷಗಾನದ ಬಗೆಗೆ ಅರಿತುಕೊಳ್ಳಲು ಇಚ್ಛಿಸುವವರಿಗೂ ಇದು ದಾರಿದೀಪವಾದೀತು ಎಂಬುದು ನಮ್ಮ ಆಶಯ. - ಸಂಪಾದಕ
[ಆತ್ಮಕಥನದ ಮೊದಲ ಅಧ್ಯಾಯ "ತಲೆಗೆ ಬಿದ್ದ ತಾಳ" ಮುಂದಿನ ಪುಟ ನೋಡಿ ]