ಮುಖ್ಯ ಪುಟ »
ಮನರಂಜನೆ »
ಯಕ್ಷಗಾನ »
ಲೇಖನ »
ಸಹೋದರ ಕೂಟ (Yakshagana | Kuriya Vittala Shastri | Yakshagana Article in Kannada | Kannada Website)
ಹಲವು ಕೂಟಗಳಲ್ಲಿ ಸೂತ್ರಧಾರರ ಹಿಂದೆ (ಚಕ್ರತಾಳ ಹಿಡಿದು!) ಕುಳಿತು ಮನೆ ಮಾಳಿಗೆಯ ‘ಸಹೋದರ ಕೂಟ’ಗಳನ್ನು ನಡೆಸಿ ನೋಡಿ ಅನುಭವ ಪಡೆದೆನೆಂದೇ ನನಗನಿಸಿದಾಗ, ನನ್ನ ಅನುಭವವನ್ನು ಪ್ರಯೋಗಿಸಿ ನೋಡಬೇಕೆಂಬ ಆಸೆಯೂ ಆಗುತ್ತಿತ್ತು.ಆಸೆ ತೀರಿಸಿಕೊಳ್ಳಲು ಅವಕಾಶಗಳನ್ನು ನಾನೇ ಹುಡುಕಿಕೊಳ್ಳುತ್ತಿದ್ದೆ.ಮನೆಯಲ್ಲಿ ನನ್ನ ತಮ್ಮನನ್ನು ಹುಡುಗರ ಕೂಟಕ್ಕೆ ಎಳೆದುಕೊಳ್ಳಲು ಶ್ರಮವೇನೂ ಇರಲಿಲ್ಲ. ನಮ್ಮ ಬಯಲಿನ ಇತರ ಕೆಲವು ಮಂದಿ ಸಂಗಡಿಗರನ್ನೂ ಒಟ್ಟುಗೂಡಿಸಿ ನಾವು ನಮ್ಮದೇ ಆದ “ತಾಳಮದ್ದಳೆ”ಗಳನ್ನು ನಡೆಸುತ್ತಿದ್ದೆವು.ಅಂದಿನ ಕೂಟಗಳಲ್ಲಿ ರಾಕ್ಷಸ ಪಾತ್ರಗಳ ಅರ್ಥ ಹೇಳುತ್ತಿದ್ದ ನನಗಿಂತ ಹಿರಿಯ- ಆದರೂ ಸಂಗಡಿಗನ ಸಾಲಿನಲ್ಲೇ ಇದ್ದ- ಒಬ್ಬರು ಗೆಳೆಯರು ಇಂದಿಗೂ ಅದೇ ರೀತಿಯ ಉತ್ಸಾಹವನ್ನು ಯಕ್ಷಗಾನದ ಬಗ್ಗೆ ತೋರಿದ್ದಾರೆ; ತೋರುತ್ತಲಿದ್ದಾರೆ (ಕುರಿಯ ಗುತ್ತು ಮಂಞಣ್ಣ ಶೆಟ್ಟಿ ಎಂದು ಅವರ ಹೆಸರು).ಕೂಟಗಳಲ್ಲಿ ಹೆಚ್ಚಾಗಿ ನನ್ನ ತಮ್ಮನೇ ಭಾಗವತನಾಗಿರುತ್ತಿದ್ದ. ಅವನ ಸ್ವರ ಸಂಗೀತಯೋಗ್ಯವಾಗಿದ್ದರೂ, ಕೆಲವೊಮ್ಮೆ ನನ್ನ ನಿರ್ದೇಶನಾಧಿಕಾರವನ್ನು ತೋರಿಸುವ ಹುಮ್ಮಸ್ಸಿನಿಂದ ನಾನೇ ಭಾಗವತನಾಗಿ ಅವನು ಅರ್ಥಧಾರಿಯಾಗುವಂತೆ ಮಾಡಿದ್ದಿದೆ.ಕೆಲವು ದಿನಗಳಲ್ಲಿ ನಮ್ಮ ಕೂಟಗಳಿಗೆ ಸಾಕಷ್ಟು ಜನರು ಸಿಗುತ್ತಿದ್ದರು. ಜನ ಕಡಿಮೆಯಾದರೆ ನಾವು ನಾವೇ ಪಾತ್ರಗಳನ್ನು “ಹರಿಹಂಚು” ಮಾಡಿಕೊಳ್ಳಲೂ ಸಿದ್ಧರೇ.ಎಷ್ಟೋ ಬಾರಿ ನಮ್ಮ ಕೂಟಗಳೆಲ್ಲದರಲ್ಲೂ ಪ್ರೇಕ್ಷಕ ಸ್ಥಾನದಲ್ಲೇ ಭಾಗವಹಿಸಲು ಮುಂದಾಗುತ್ತಿದ್ದ ನನ್ನ ಇಬ್ಬರು ತಂಗಿಯರನ್ನೂ ಅರ್ಥಧಾರಿಗಳಾಗಿರೆಂದು ಒತ್ತಾಯಿಸುವ ಪ್ರಮೇಯ ಬರುತ್ತಿತ್ತು.ನನ್ನ ತಂಗಿಯರಲ್ಲಿ ಹಿರಿಯವಳು ನನ್ನ ಒತ್ತಾಯಕ್ಕೆ ಕಟ್ಟು ಬಿದ್ದು ಓದಲು ತಿಳಿಯದಿದ್ದರೂ ಹಲವಾರು ಬಾರಿ ಪ್ರಸಂಗಗಳ ಪದ್ಯಗಳನ್ನು ಓದಿ ಹೇಳಲು ಪ್ರಯತ್ನಿಸಿ ಸಹಕರಿಸಿದ್ದಳು.ಆದರೆ, ಹಾಗೆ ಓದಲು ಅವಳನ್ನು ಕೇಳಿಕೊಂಡಾಗಲೆಲ್ಲಾ ‘ಯಕ್ಷಗಾನದಲ್ಲಿ ಯಾವ ತೆರದಲ್ಲಾದರೂ ಸ್ತ್ರೀಯರು ಭಾಗವಹಿಸುವ ಕ್ರಮವಿಲ್ಲವಲ್ಲ! ನಾನೊಂದು ಅಪಚಾರವನ್ನು ಎಸಗುತ್ತಿರುವೆನೆ?’ ಎಂದು ಮನಸ್ಸು ಕುಟುಕಿ, ಕೂಟವನ್ನೇ ಸಂಕ್ಷಿಪ್ತಗೊಳಿಸಿ ಮುಗಿಸಿದ್ದೂ ಇದೆ.ಕೇಳಿ ಕೇಳಿ ಬಾಯಿಪಾಠವಾಗಿದ್ದ ಪದಗಳು, ತಿಳಿದುಕೊಂಡಿದ್ದ ಅರ್ಥ, ಇವುಗಳಿಂದಾಗಿ ನಮ್ಮ ಕೂಟ ತನ್ನಿಂದ ತಾನೇ ಒಂದು ಮಟ್ಟವನ್ನು ಮುಟ್ಟಿತ್ತು.
ಇದನ್ನು ಸಹ ಶೋಧಿಸು: ಯಕ್ಷಗಾನ, ಕುರಿಯ ವಿಠಲ ಶಾಸ್ತ್ರಿ, ಆತ್ಮಕಥನ, ಬಣ್ಣದ ಬದುಕು, ಪದ್ಯಾಣ ಗೋಪಾಲಕೃಷ್ಣ, ಪಗೋ, ಕನ್ನಡ ಯಕ್ಷಗಾನ, ಕನ್ನಡ ವೆಬ್ ಸೈಟ್, ಕನ್ನಡ ಲೇಖನ, ಕರ್ನಾಟಕ ಕಲೆ, ಕನ್ನಡ ಲೇಖನಗಳು, ಯಕ್ಷಗಾನ ಲೇಖನ