ಲೇಖನ
ಮುಖ್ಯ ಪುಟ » ಮನರಂಜನೆ » ಯಕ್ಷಗಾನ » ಲೇಖನ » ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 2: ಮಗು ಅರ್ಥ ಹೇಳುತ್ತಾನೆ ! (Yakshagana | Kuriya Vittala Shastri | Biography | Bannada Baduku | Yakshagana Article in Kannada | Kannada Website)
ಹಿಂದಿನದು|ಮುಂದಿನದು
[ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಪ್ರಕಟವಾಗುತ್ತಿದೆ. ಇದು ಭಾಗ -2. - ಸಂ ]
WD
ತೀರ್ಥರೂಪರ ಕವಿತೆಗಳಲ್ಲಿ 'ಕುಕ್ಕುಟಾಪುರ'ವೆನಿಸಿ ಮೆರೆದ ಕೋಳ್ಯೂರು ನಮ್ಮ ಬಯಲಿನಂತಹ ಹತ್ತಾರು ಬಯಲುಗಳಿಗೆ ದೈವ ಕೇಂದ್ರ. ಅಲ್ಲಿನ 'ಮಂಡಲಪೂಜೆ' ಎಂದರೆ ಸುತ್ತಿನ ಹತ್ತು ಗ್ರಾಮಗಳಲ್ಲೂ ಪ್ರಸಿದ್ಧವಾಗಿತ್ತು. ಕೆಲವರು ಆಸಕ್ತರಿಂದಾಗಿ ಜಾತ್ರೆಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ (ಆ ಹೆಸರಿನಿಂದಲ್ಲವಾದರೂ) ಅಲ್ಲಿ ನಡೆಯುವುದಿತ್ತು. ನಮ್ಮತ್ತ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ಪುರಾಣವಾಚನ, ಹರಿಕಥೆ, ತಾಳಮದ್ದಳೆಗಳಿಗೆ ಮಾತ್ರ ಮುಕ್ತಾಯಗೊಳ್ಳುತ್ತಿದ್ದವು. ಆಗಿನ ಕಾಲದಲ್ಲಿ ಹತ್ತು ಸಮಸ್ತರು ಭಾಗವಹಿಸಿದ ಚಟುವಟಿಕೆಗಳೆಲ್ಲ ಅಲ್ಲೇ ನಡೆಯಬೇಕು.

ಚಟುವಟಿಕೆಯ ಕಾರ್ಯಕ್ರಮಗಳು ಏನಿದ್ದರೂ, ತಂದೆಯವರು ಪ್ರಮುಖ ಕಾರ್ಯಕರ್ತರಲ್ಲೊಬ್ಬರಾಗಿರುವಾಗ, ನಮಗೆ ಸುದ್ದಿ ಸಿಗದಿರುತ್ತದೆಯೆ? ನನ್ನ ಜೊತೆಯವರೊಂದಿಗೆ ನಾನೂ ಅಲ್ಲಿ ಹಾಜರಾಗುತ್ತಿದ್ದೆ. ಮನೆಯಿಂದ ಕೋಳ್ಯೂರಿಗೆ ಇರುವ ನಾಲ್ಕು ಮೈಲು ದೂರವೇನು ಮಹಾ? ಬಯಲಿನ ತುದಿಗೆ ಬಂದು, ಇನ್ನೊಂದು ಬಯಲು ಕಳೆದ ಮೇಲೆ, ಹೊಳೆಯನ್ನು ದಾಟಿ, ಒಂದು ಗುಡ್ಡವನ್ನು ಏರಿ, ನಡುವೆ ಇದ್ದ ತಟ್ಟಿನಲ್ಲಿ ಅಷ್ಟು ದೂರ ನಡೆದು ಗುಡ್ಡ ಇಳಿದರೆ ಆಯಿತು. ಕೋಳ್ಯೂರ ದೇವಸ್ಥಾನ ಕಾಣಿಸುತ್ತದೆ.

ಅಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರ ಒಂದು ಕೂಟ ನಡೆಯಲಿತ್ತು. ಬರಲಿರುವವರ ಹೆಸರುಗಳನ್ನು ಕೇಳಿದ ತರುವಾಯ ಎಂತಹ ರಸದೌತಣ ನಮಗಾಗಬಹುದು ಎಂದು ನಾನೂ ಯೋಚಿಸಿದ್ದೆ.

ಹಾಡುಗಾರಿಕೆ ಶ್ರೀ ಬಲಿಪ ನಾರಾಯಣ ಭಾಗವತರು (ಅವರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ). ಅವರಿಗೆ ಸರಿಸಮರಾದ ಶ್ರೀ ಕೆಮ್ಮಣ್ಣು ನಾರ್ಣಪ್ಪಯ್ಯನವರ ಮೃದಂಗ-ಚೆಂಡೆಗಳು. ಅರ್ಥದಾರಿಗಳೂ ಅವರಂತೆ ಪ್ರಸಿದ್ಧರೇ. ಶ್ರೀ ಬಳ್ಳಮಜಲು ರಂಗಪ್ಪಯ್ಯ, ಕವಿ ಶ್ರೀಬಡಕಮೈಲು ಪರಮೇಶ್ವರಯ್ಯ, ಶ್ರೀ ಹೊಸಹಿತ್ಲು ಗಣಪತಿ ಭಟ್ಟರು, ಶ್ರೀ ಕುಂಜಾರು ರಾಮಕೃಷ್ಣಯ್ಯ, ದಿ. ಮಂಕುಡೆ ಬಳ್ಳುಕ್ರಾಯರು. ಇವರ ಅರ್ಥಗಳನ್ನು ಕೇಳಲೆಂದು ಸಾರಿಗೆ ಸಂಪರ್ಕ ಅಷ್ಟು ಸುಲಭವಲ್ಲದ ಆ ಕಾಲದಲ್ಲೂ ಎಷ್ಟೋ ದೂರದಿಂದ ಜನರು ಬರುತ್ತಿದ್ದರು.

ಕೂಟದ ದಿನ ಬಂದಿತು. ಪ್ರಸಂಗ: ನಂದಳಿಕೆ ಲಕ್ಷ್ಮೀ ನಾರ್ಣಪ್ಪಯ್ಯ ಅವರು (ಮಹಾಕವಿ ಮುದ್ದಣ್ಣ) ರಚಿಸಿದ "ಕುಮಾರ ವಿಜಯ". ಭಾಗವಹಿಸುವವರ ಹೆಸರು ಮತ್ತು ಅವರ ಪಾತ್ರಗಳ ವಿವರಗಳನ್ನು ಸಾರಲಾಯಿತು. ಸಣ್ಣಪುಟ್ಟ ಪಾತ್ರಗಳು ಸ್ಥಳೀಯ ಕಲಾಸಕ್ತರಿಗೇ ದೊರೆಯುವುದು ರೂಢಿ.

ಸಂತೋಷ - ಅಳುಕು
WD
ಭಾನುಗೋಪನ ತಾಯಿ ಪದ್ಮಕೋಮಲೆಯ ಪಾತ್ರ ನನಗೆ ಎಂದಾಗ, ಸಂತೋಷವೂ ಆಯಿತು; ಜೊತೆಯಲ್ಲೇ ಅಳುಕೂ ಮೂಡಿತು. ಕುಟುಂಬದವರಲ್ಲಿ ಹಿರಿಯರೆಲ್ಲ ನನ್ನನ್ನು 'ಮಗು' ಎಂಬ ಅಡ್ಡ ಹೆಸರಿನಿಂದ ಸಂಬೋಧಿಸುವುದು ರೂಢಿ. 'ಮಗು ಅರ್ಥ ಹೇಳುತ್ತಾನೆ ಅಂತೆ' ಎಂಬ ಮಾತು ಸುತ್ತಲಿನ ಬೈಲುಗಳಿಗೆ ಹಬ್ಬಿತ್ತು.ಆದುದರಿಂದಲೇ ಅಂದು ಸ್ಥಳೀಯ ಕಲಾವಿದರಲ್ಲಿ ನಾನೂ ಒಬ್ಬನೆಂದು ಪರಿಗಣಿಸಲ್ಪಟ್ಟೆ. ಸರಿ, ಭಾಗವಹಿಸಲು ನನಗೂ ಅವಕಾಶ ಸಿಕ್ಕಿತೆಂಬುದಕ್ಕೆ ಸಂತೋಷ.

ಆದರೆ 15 ವರ್ಷ ಪ್ರಾಯದ 'ಮಗು' ನಾನು. ಹಳೆಯ ಹುಲಿಗಳೆನಿಸಿದವರ- ಜಿಲ್ಲೆಯಾದ್ಯಂತ ಹೆಸರು ಪಡೆದವರ- ಎದುರು ಮಾತನಾಡುವುದೆಂದರೆ? ಏನಾದರೂ ಹೆಚ್ಚು ಕಡಿಮೆಯಾದರೆ? ಅದಕ್ಕಾಗಿ ಅಳುಕು.

ತಾಳಮದ್ದಳೆ ಪ್ರಾರಂಭವಾಗಿ ನನ್ನ ಪಾತ್ರದ ಪದ್ಯ ಬರುವವರೆಗೂ ನಾನು ಮೈಯೆಲ್ಲ ಕಿವಿಯಾಗಿ ಕುಳಿತಿದ್ದೆ. ಸಾಸಿವೆ ಬಿದ್ದರೂ ಸದ್ದು ಕೇಳುವಂತಹ ವಾತಾವರಣವನ್ನು ಶ್ರಾವಕರು ನಿರ್ಮಿಸಿದ್ದರು. ತುಂಬಿದ ಸಭೆಯಲ್ಲಿ ಕಲಾವಿದರ ಹೊರತು ಇತರ ಯಾರ ಧ್ವನಿಯೂ ಇರಲಿಲ್ಲ. ಪದ್ಮ ಕೋಮಲೆಯ ಮೊದಲನೇ ಪದ್ಯವನ್ನು ಭಾಗವತರು ಹಾಡತೊಡಗಿದೊಡನೆ, ನನ್ನ ಮೈ ಬೆವರತೊಡಗಿತು.ಏನೇನೋ ಎಣಿಸಿಕೊಂಡು ಮೈ ನಡುಕ ಬರಿಸಿಕೊಂಡೆ. ನನ್ನನ್ನೇ ಗಮನಿಸುತ್ತಿದ್ದು, ನನ್ನ ಕಡೆ ನೋಡಿದ ಭಾಗವತರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು.
ಹಿಂದಿನದು|ಮುಂದಿನದು
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯಕ್ಷಗಾನ, ಕುರಿಯ ವಿಠಲ ಶಾಸ್ತ್ರಿ, ಆತ್ಮಕಥನ, ಬಣ್ಣದ ಬದುಕು, ಪದ್ಯಾಣ ಗೋಪಾಲಕೃಷ್ಣ, ಪಗೋ, ಕನ್ನಡ ಯಕ್ಷಗಾನ, ಕನ್ನಡ ವೆಬ್ ಸೈಟ್, ಕನ್ನಡ ಲೇಖನ, ಕರ್ನಾಟಕ ಕಲೆ, ಕನ್ನಡ ಲೇಖನಗಳು, ಯಕ್ಷಗಾನ ಲೇಖನ