[ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ]
[ಕಳೆದ ವಾರದಿಂದ ಮುಂದುವರಿದುದು]
WD
1931ರ ಆರ್ಥಿಕ ಮುಗ್ಗಟ್ಟಿನ ದಿನಗಳ ನೆನಪಿರುವವರು ಬಹಳ ಮಂದಿ. ನಮ್ಮ ನಾಟಕ ಮಂಡಳಿಯಿಂದಾಗಿ ನನಗೂ ಆ ದಿನಗಳ ನೆನಪು ಉಳಿದಿದೆ; ಅಂದಿನ ಮತ್ತು ಇಂದಿನ ಪರಿಸ್ಥಿತಿಗಳ ವ್ಯತ್ಯಾಸವನ್ನು ಜ್ಞಾಪಿಸಿಕೊಳ್ಳುವ ಹಾಗಾಗಿದೆ.
ಆಗ ಊರಿಂದೂರಿಗೆ ಸಾಮಾನು ಸಾಗಿಸುವ ಲಾರಿಗಳ ಸೌಕರ್ಯವಿರಲಿಲ್ಲ. ಸಾಗಾಟಕ್ಕೆ ಸಿಗುತ್ತಿದ್ದುದು ಎತ್ತಿನ ಗಾಡಿಗಳು ಮಾತ್ರ.
ದಶಾವತಾರದ ಮೇಳಗಳಲ್ಲಿ ಇರುತ್ತಿದ್ದ ಸಾಮಾನುಗಳನ್ನು ಸಾಗಿಸಲು ಬಹಳ ಕಷ್ಟವಾಗುತ್ತಿರಲಿಲ್ಲ. ಪರದೆ ಇತ್ಯಾದಿಗಳ ತೊಡಕು ಇಲ್ಲದ ಕಾರಣ, ಕೆಲವು ಪೆಟ್ಟಿಗೆಗಳನ್ನು ತಲೆ ಹೊರೆಯಲ್ಲಿ ಸಾಗಿಸಲು ಸಾಧ್ಯವಾಗುತ್ತಿತ್ತು. ಸಂಚಾರಕ್ಕೆ ರಸ್ತೆಯ ಅನುಕೂಲವಿದ್ದರೆ ಒಂದು ಗಾಡಿಯನ್ನು ಬಾಡಿಗೆಗೆ ಹಿಡಿದರೆ ಸಾಕಾಗುತ್ತಿತ್ತು. ಊರು ಸೇರಿದ ತರುವಾಯ ಡೇರೆಯ ವ್ಯವಸ್ಥೆಯೂ ಬೇಕಾಗುತ್ತಿರಲಿಲ್ಲ. ಹೆಚ್ಚಾಗಿ ಬಯಲಾಟಗಳೇ ಅಂದು ನಡೆಯುತ್ತಿದ್ದುವು.
ಆದರೆ ಯಕ್ಷಗಾನ ನಾಟಕ ಕಂಪೆನಿಯ ಹೊಣೆ ಹೊತ್ತ ನಮ್ಮ ಪರಿಸ್ಥಿತಿ ಅದಕ್ಕೆ ತೀರಾ ವ್ಯತಿರಿಕ್ತವಾಗಿತ್ತು.
ದೃಶ್ಯಾವಳಿಗಳಿಗಾಗಿ ಪರದೆಗಳು, 'ಪಕ್ಕದ ರೆಕ್ಕೆ'ಗಳು, ಆಸನ- ಪೀಠೋಪಕರಣಗಳು, ಕಿರೀಟ-ಆಯುಧ, ಅಲಂಕಾರಗಳು ಇವೆಲ್ಲವುಗಳ ಜೊತೆಗೆ ಸಾಕಷ್ಟು ಫರ್ನಿಚರ್‌ಗಳನ್ನು ಸಾಗಿಸಲು ಎಂಟು ಹತ್ತು ಗಾಡಿಗಳನ್ನು ಅನುವು ಮಾಡಿಕೊಳ್ಳಬೇಕಾಗುತ್ತಿತ್ತು. ಎಷ್ಟೇ ಜನಪ್ರಿಯತೆ ಗಳಿಸಿದರೂ, ಕೆಲವು ದಿನಗಳ ತರುವಾಯ ಊರು ಬದಲಾಯಿಸಲೇಬೇಕಾಗುವುದಷ್ಟೇ.
ಊರಿಂದೂರಿಗೆ ಬಟ್ಟೆಯ ಡೇರೆಗೆ ಬೇಕಾದ ಅನುಕೂಲ ನಮಗೆ ಇರಲಿಲ್ಲ. ಆದುದರಿಂದ ಪ್ರತಿಯೊಂದು ಊರಿನಲ್ಲೂ ''ಥಿಯೇಟರ್'' ಕಟ್ಟಿಸಬೇಕಾಗುತ್ತಿತ್ತು. ಸರಾಸರಿ ಒಂದು ಸಾವಿರ ರೂ. ಅದಕ್ಕಾಗಿ ವೆಚ್ಚವಾಗುತ್ತಿತ್ತು.
ಊರಿನ ಯಾವುದಾದರೂ ಶಾಲೆಯ ಬಯಲನ್ನೋ, ಬೇರೆ ವಿಶಾಲ ಸ್ಥಳವನ್ನೋ ಹಿಡಿದು ಥಿಯೇಟರ್ ವ್ಯವಸ್ಥೆ ಮಾಡುವಾಗ ನೋಡುವವರಿಗೆ ಅನುಕೂಲವಾಗಲೆಂದು, ಪ್ರೇಕ್ಷಕರು ಕುಳಿತಿರುವ ಸ್ಥಳವನ್ನು ಇಳಿಜಾರಾಗಿ ಅಗೆದು ಸಮತಟ್ಟುಗೊಳಿಸಬೇಕಾಗುತ್ತಿತ್ತು. (ಊರು ಬಿಡುವಾಗ ಅದನ್ನು ಮಚ್ಚಿಸಿ ಮೊದಲಿನಂತೆ ಮಾಡಿಕೊಡಲೂ ಬೇಕಿತ್ತು).
ನಾಟಕದ ಸಾಮಾನುಗಳನ್ನು ಸಾಗಿಸುವ ದಾರಿಯಲ್ಲಿ ಹೊಳೆಗಳು ಸಿಕ್ಕಿದವೆಂದರೆ ದೇವರೇ ಗತಿ ಎನಿಸುತ್ತಿತ್ತು. ಸೇತುವೆಗಳಿಲ್ಲದಿದ್ದ ಹೊಳೆಗಳಿಂದಾಗಿ, ಆಚೆಯ ದಡದಿಂದ ಬೇರೆಯೇ ಗಾಡಿಗಳನ್ನು ಹುಡುಕಿ ತರಬೇಕಾಗುತ್ತಿತ್ತು.
ಗಾಡಿ-ದೋಣಿ ಇತ್ಯಾದಿಗಳಲ್ಲಿ ತುಂಬಿಸಿ ಖಾಲಿ ಮಾಡಿ, ತಿರುಗಿ ತುಂಬಿಸುವ ಗೊಂದಲದಲ್ಲಿ ನಾಜೂಕಾದ ವಸ್ತುಗಳೆಷ್ಟೋ ಪುಡಿಪುಡಿಯಾಗಿ ಅವುಗಳನ್ನು ತಿರುಗಿ ತಯಾರಿಸಿಕೊಳ್ಳಬೇಕಾಗುತ್ತಿತ್ತು.
ಎಷ್ಟೋ ಊರುಗಳಲ್ಲಿ ದೊರೆತ ಹಣ ನಾಟಕ ಶಾಲೆಯನ್ನು ಕಟ್ಟಿದ ವೆಚ್ಚವನ್ನೂ ಪೂರೈಸದೆ ಇದ್ದುದೂ ಇದೆ.
ಪ್ರದರ್ಶನಗಳನ್ನು ಮೆಚ್ಚುವವರಿದ್ದ ಕಡೆಗಳಲ್ಲೇ ದೊರೆತ ಚಿನ್ನದ ಪದಕ ಇತ್ಯಾದಿಗಳು, ಕ್ಯಾಂಪ್ ಮುಗಿದಾಗ ಒತ್ತೆ ಇಡಲ್ಪಟ್ಟುದೂ ಇದೆ.
ಆದರೆ, ಆಗಿನ ಮೇಳಗಳಲ್ಲಿ ವೀಳ್ಯ ಪಡೆದೇ ಆಟ ಆಡುವ ರೂಢಿ ಇದ್ದ ಕಾರಣ, ಊರ ಪ್ರಮುಖರು ಆಟ ಬೇಡವೆಂದರೆ ಎಲ್ಲರಿಗೂ ಏಕಾದಶಿಯಾಗುತ್ತಿತ್ತು. ನಮ್ಮ ಸಂಸ್ಥೆಯ 'ನಾಟಕ'ಗಳು ಪ್ರವೇಶ ಧನವಿರಿಸಿ ಆಡುತ್ತಿದ್ದ ಕಾರಣ- ಕಲೆಕ್ಷನ್ ಇಲ್ಲವಾದರೂ- ತಂದೆಯವರ ಹಠದಿಂದಾಗಿ ಸಂಸ್ಥೆಯವರಿಗೆ ತೊಂದರೆ ತಂದೊಡ್ಡುತ್ತಿರಲಿಲ್ಲ.
ಯಾರ ಮರ್ಜಿಗೂ ಬೀಳದೆ ಐದಾರು ವರ್ಷ ತಿರುಗಾಟ ನಡೆಸಿ, ಯಕ್ಷಗಾನ ಕಲಾವಿದರೂ ಸ್ವತಂತ್ರರಾಗಿ ಬಾಳಬಹುದು ಎಂಬ ಆತ್ಮವಿಶ್ವಾಸವನ್ನು ಮೂಡಿಸಿದವರು ನನ್ನ ತೀರ್ಥರೂಪರೆಂದು ಧೈರ್ಯವಾಗಿ ಹೇಳಬಲ್ಲೆ.
ಕೆಲವೆಡೆಗಳಲ್ಲಿ ಕಟ್ಟಿಸಿದ ಥಿಯೇಟರಿನ ಖರ್ಚು ಹುಟ್ಟದೆ ಇದ್ದರೂ, ಇನ್ನೂ ಕೆಲವೆಡೆ ಜನರ ಪ್ರೋತ್ಸಾಹ ಅಪರಿಮಿತವಾದುದೂ ಇದೆ.
ದಕ್ಷಿಣ ಕನ್ನಡದಲ್ಲಿ ಹೆಸರಾಂತ ಊರುಗಳಲ್ಲೆಲ್ಲ ನಾವು ಪ್ರದರ್ಶನಗಳನ್ನಿತ್ತೆವು. ಸುಬ್ರಹ್ಮಣ್ಯ, ಸುಳ್ಯಗಳಂತಹ (ಆಗಿನ ) ಮೂಲೆಯ ಊರುಗಳಿಗೂ ಹೋದೆವು.
ಯಕ್ಷಗಾನದ ಬಗ್ಗೆ ತಿರಸ್ಕಾರ ತೋರುತ್ತಿದ್ದ ಕೆಲವರ ಎದುರೂ ಆಡಿದೆವು. ಶ್ರೀ ಗರೂಡ ಸದಾಶಿವರಾಯರು, ಶ್ರೀ ನಂಜುಂಡಯ್ಯನವರು ಮೊದಲಾದ ಪ್ರಸಿದ್ಧ ನಾಟಕಕಾರ ನಟರನ್ನೂ ಆಕಸ್ಮಿಕವಾಗಿ ಸ್ವಾಗತಿಸುವ ಸಂದರ್ಭ ಒದಗಿದಾಗ, ಮೆಚ್ಚಿಸಿದೆವು.
ಕಡೇ ನಾಟಕ ಏರು- ತಗ್ಗುಗಳಿಂದ ಕೆಲವು ವರ್ಷಗಳಾದರೂ ನಮ್ಮ ಸಂಘವು ನಡೆಯಬಹುದಿತ್ತೋ ಏನೋ! 1936ರ ಹೊತ್ತಿಗೆ ಪರಿಸ್ಥಿತಿ ಮತ್ತೂ ಶೋಚನೀಯವಾಯಿತು.
WD
ತಂದೆಯವರ ಆತ್ಮೀಯರಾಗಿದ್ದ, ನಮ್ಮ ಸಂಸ್ಥೆಯ ಪ್ರಸಿದ್ಧ ನಟರಾಗಿದ್ದ ಶ್ರೀ ಬಿ. ರಂಗಪ್ಪಯ್ಯನವರು ಅನಾರೋಗ್ಯ ನಿಮಿತ್ತ ಹಾಸಿಗೆ ಹಿಡಿದರು. ಇನ್ನೊಬ್ಬ ನಟ ಶ್ರೀ ಕುಂಜಾರು ರಾಮಕೃಷ್ಣಯ್ಯ(ಗುಂಡ್ರಾಯ)ರು ಅದೇ ಕಾರಣದಿಂದ ಸಂಸ್ಥೆಯನ್ನು ತೊರೆದರು. ಅವರಿಬ್ಬರ 'ಬದಲಿ' ನಟರನ್ನು ತರುವ ಕೆಲಸ ನಮಗಾಗದುದಾಯಿತು. (ಯಕ್ಷಗಾನ 'ನಾಟಕ'ಕ್ಕೇ ಆದ ಕಾರಣ ಆ ಸಮಸ್ಯೆ). ದಿನ ನಿತ್ಯ ಹತ್ತಿಪ್ಪತ್ತು ಜನರ ವೆಚ್ಚ, ಅವರ ವೇತನ ಮುಂತಾದುವನ್ನು ನಿಭಾಯಿಸುವುದು ಅಸಾಧ್ಯವೆನಿಸಿತು.
ಗತ್ಯಂತರವಿಲ್ಲದೆ, 1937ರ ಹೊತ್ತಿಗೆ ಮಂಡಳಿಯನ್ನು ಮುಚ್ಚಲೇಬೇಕು ಎಂದಾಯಿತು.
ಶ್ರೀ ಶಂಕರನಾರಾಯಣ ಪ್ರಸಾದಿತ ಯಕ್ಷಗಾನ ನಾಟಕ ಸಭಾ, ಕೋಳ್ಯೂರು- ಮಂಗಳೂರಿನಲ್ಲಿ ''ದೇವರಾಣೆಗೂ ಕಡೇ ನಾಟಕ''ವನ್ನು ಆಡಿ ಮಂಗಳ ಹಾಡಿತು.
ಕೊನೆಯ ನಾಟಕದ ನಂತರ ಮನೆಗೆ ಬಂದು, ಮಂಡಳಿಯ (ಇಲ್ಲದ) ಲಾಭ ಮತ್ತು (ಇರುವ) ನಷ್ಟದ ಲೆಕ್ಕ ತೆಗೆದವು.
ಒಂದೇ ಕುಟುಂಬದವರಾದ ನಾವು ಐದಾರು ಮಂದಿ ವೇತನವಿಲ್ಲದೆ ದುಡಿದಂತೆಯೇ ಲೆಕ್ಕ ಹಿಡಿದಿದ್ದೆವು. ಆದರೂ ಲೆಕ್ಕದ ಬಾಯಿಗೆ ಕೊನೆ ಇರಲಿಲ್ಲ.
ಬರುವುದೇನೂ ಇಲ್ಲದೆ, ಹೋಗುವುದನ್ನೇ ಲೆಕ್ಕ ಹಾಕುತ್ತಾ ಹೋದಾಗ ಕೆಲವು ಸಾವಿರಗಳ ಬಾಕಿ ಕಾಣಿಸಿತು. ಆದಾಯ ತರುವ ಬದಲಿಗೆ, ಯಕ್ಷಗಾನಕ್ಕಾಗಿ ಎಲ್ಲವನ್ನೂ ಕಳೆದುಕೊಂಡವನೆಂಬ ಬಿರುದು ತಂದೆಯವರಿಗೆ ಬರುವಂತೆ ಆಯಿತು.
ಮನೆಯದಾಗಿದ್ದ ಆಸ್ತಿಯನ್ನು 12000 ರೂಪಾಯಿಗಳಿಗೆ ಅಡವಿಟ್ಟು, ಯಕ್ಷಗಾನ ನಾಟಕ ಮಂಡಳಿಯ ವ್ಯವಹಾರದಿಂದ ತಂದೆಯವರು ಕೈ ತೊಳೆದುಕೊಂಡರು.
ಆದರೆ, ಮರುವಾರವೇ ಯಕ್ಷಗಾನ ಕೂಟದ ಆಹ್ವಾನವೊಂದು ಬಂದಾಗ, ಮೊದಲಿನ ಉತ್ಸಾಹದಿಂದಲೇ ಹೋಗಿ ತಾಳಮದ್ದಳೆಯಲ್ಲಿ ಭಾಗವಹಿಸಿದರು.
ನಾನೂ ಆ ಅಭ್ಯಾಸಕ್ಕೆ ಹೊರತಾಗಿರಲಿಲ್ಲ. ಪ್ರಾಯಶಃ ವ್ಯವಹಾರದ ಬಿಸಿ ನನ್ನನ್ನು ನೇರವಾಗಿ ಮುಟ್ಟದೆ ಇದ್ದುದೂ ಅದಕ್ಕೆ ಕಾರಣವಾಗಿರಬಹುದು.
ಈ ನಡುವೆ ಅಂದರೆ 1933ರಲ್ಲಿ ನಾನು ಮನೆಯಲ್ಲಿ ಉಳಿಯಲು ವೇಳೆ ಇಲ್ಲದವನಾಗಿದ್ದರೂ ಗೃಹಸ್ಥನಾಗಿದ್ದುದರಿಂದ, ಮಂಡಳಿಯ ಮುಗಿತಾಯದ ನಂತರದ ಕೆಲ ದಿನಗಳನ್ನು ಮನೆಯಲ್ಲೇ ಕಳೆಯುವ ಅವಕಾಶವೂ ಸಿಕ್ಕಿತು.
ಯಕ್ಷಗಾನ ನಾಟಕದ ಕಹಿ ನೆನಪುಗಳನ್ನೇ ಮೆಲುಕು ಹಾಕುವ ಬದಲು, ಸವಿ ನೆನಪುಗಳನ್ನೂ ನೆನೆಯುವ ಅಭ್ಯಾಸವನ್ನು ಮೈಗೂಡಿಸಿಕೊಂಡೆ.
ರಸ ಪೋಷಣೆಗೆ ಕುಣಿತವಿಲ್ಲದ ಯಕ್ಷಗಾನ ನಾಟಕದಲ್ಲಿ, ರಸಪೋಷಣೆಗಾದರೂ ಅಲ್ಪಸ್ವಲ್ಪ ಕುಣಿತವಿದ್ದರೆ ಒಳ್ಳೆಯದಿತ್ತು ಎಂದು ವಿಮರ್ಶಕರು ಕೆಲವೊಮ್ಮೆ ಹೇಳಿದ್ದ ನುಡಿಗಳು ನನ್ನ ಕಿವಿಗೂ ಬಿದ್ದಿದ್ದುವು.
ಆದರೆ, ತಂದೆಯವರ ಮಟ್ಟಿಗೆ ಕುಣಿತದ ಅಗತ್ಯ- ಯಾವ ಸಂದರ್ಭದಲ್ಲೂ ಕಂಡು ಬಂದಿರಲಿಲ್ಲ. ಯಕ್ಷಗಾನದಲ್ಲಿನ ಕಂಸನ ಪಾತ್ರವನ್ನು ನಿರ್ವಹಿಸುವ ಯಾವನೇ ವೇಷಧಾರಿ, ಅವರ 'ನಾಟಕ'ದ ಕಂಸನ ಎದುರು ನಿಲ್ಲಲು ಶಕ್ತನಾಗಿರಲಿಲ್ಲವೆಂದು ಧೈರ್ಯವಾಗಿ ಇಂದಿಗೂ ಹೇಳಬಲ್ಲೆ.
ಅದೇ ರೀತಿ, ಅವರ ಇತರ ರಾಕ್ಷಸ ಪಾತ್ರಗಳೂ ಪರಿಪೂರ್ಣವಾಗಿರುತ್ತಿದ್ದುವು.
ಆದರೆ, ನನ್ನ ಮಟ್ಟಿಗೆ ಆ ಪರಿಪೂರ್ಣತೆ ಸಾಧಿಸಿರಲಿಲ್ಲವೆಂದೇ ಮನಸ್ಸಿಗೆ ಅನಿಸಿತ್ತು.
''ಬಾಲಲೀಲೆ- ಬಿಲ್ಲಹಬ್ಬ'' ದ ಕೃಷ್ಣನಾಗಿ ಬಂದಿದ್ದಾಗ, ರಾಸಕ್ರೀಡೆಯ ದೃಶ್ಯದಲ್ಲಿ ಮಾತ್ರವೇ ಪ್ರಯತ್ನಪೂರ್ವಕ ಕುಣಿದುಬಿಡುತ್ತಿದ್ದೆ. ಅದು ಅನುಭವಕ್ಕಾಗಿ ಕಲಿತ ಒಂದು ಪಾಠವಾಗಿತ್ತು ಅಷ್ಟೆ. ಉಳಿದೆಲ್ಲ ದೃಶ್ಯಗಳಲ್ಲೂ ಹಿಮ್ಮೇಳದ ವಿವಿಧ ಧ್ವನಿಗಳನ್ನು ಚಿತ್ರಿಸಲಾಗುವುದಿಲ್ಲವಲ್ಲ! ಎಂಬ ಸಂಕಟವಾಗಿತ್ತು.
ಹಾಡುಗಾರಿಕೆಯೇ ಇಲ್ಲದಿದ್ದರೆ ಆ ಮಾತು ಬೇರೆ. ಬರಿಯ ನಾಟಕವಾದರೆ, ಸಂಭಾಷಣೆಯ ಸಮಯದಲ್ಲಿ ಅಲ್ಲದೆ ಬೇರೆ ಕಡೆಗಳಲ್ಲಿ ಭಾವಪ್ರದರ್ಶನದ ಅಗತ್ಯವಿರುವುದಿಲ್ಲ. ಪದದ ಹೊತ್ತಿನಲ್ಲಿ ಅರ್ಥ ಅಭಿನಯ ನೀಡುವ ಕೃಷ್ಣನಿಗೂ, ಸಂಭಾಷಣೆಯ ಪಾಠವನ್ನೊಪ್ಪಿಸುವ ಕೃಷ್ಣನಿಗೂ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ನಮ್ಮೂರಿನಿಂದ ಸ್ವಲ್ಪ ದೂರದಲ್ಲಿನ ಅಡ್ಯನಡ್ಕದಲ್ಲಿ ''ಚವತಿಯ ಚಂದ್ರ'' (ಸಂಗೀತ) ನಾಟಕದ ಕೃಷ್ಣನಾಗಿ ಪಾತ್ರವಹಿಸಿ ಕಂಡುಕೊಂಡಿದ್ದೆ.
ಇಂತಹ ಅನುಭವಗಳಿಂದ, ಮನೆಯಲ್ಲಿ ಕುಳಿತಿರುವಾಗ ಮಾಡುತ್ತಿದ್ದ ಯೋಚನೆಗಳಿಂದ, ''ಯಕ್ಷಗಾನದಲ್ಲೂ ಕುಣಿಯದೆ ಇರುವ ಆ ಪೀತಾಂಬರಧಾರಿ ಎಂತಹವನು?'' ಎಂಬ ಭಾವನೆಯೇ ನನ್ನಲ್ಲಿ ಬೆಳೆದು ನಿಂತಿತು.
ಸೌಮ್ಯ ಪಾತ್ರಗಳ ಬಗ್ಗೆ ಆ ಬಗೆಯ ಯೋಚನೆಯಾದರೆ, ರೌದ್ರರಸವಿರುವ ಪಾತ್ರಗಳಲ್ಲೂ ಅದೇ ಕೊರತೆ ನನಗೆ ಕಂಡುಬರುತ್ತಿತ್ತು.
ಕೈಲಾಸದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಶುರಾಮ, ಜಮದಗ್ನಿಯ ಕರೆ ಕೇಳಿದಾಗ ರಂಗಪ್ರವೇಶ ಮಾಡುವ ಸಂದರ್ಭ. ಚೆಂಡೆಯ ನಾದ ಮುಗಿಲು ಮುಟ್ಟುವಂತಿರುತ್ತದೆ. ಅನಂತರದ ಪದ್ಯಗಳಾದರೂ ವೀರರಸ ಉಕ್ಕೇರುವಂತೆ ಮಾಡುತ್ತವೆ.
ಕಾರ್ತವೀರ್ಯಾಜುನ ಕಾಳಗ ಪ್ರಸಂಗದಲ್ಲಿ, ಕಟ್ಟಿ ನಿಲ್ಲಿಸಲಾಗಿದ್ದ ಬೆಳ್ಳಿ ಬೆಟ್ಟಗಳಿಂದ ಕೆಳಗೆ(ಧರೆಗೆ) ಧುಮುಕಿದ್ದೆ. ಚೆಂಡೆಯ ಬಡಿತಕ್ಕೆ ಬಾಹುಗಳು ಸ್ಫುರಿಸಿದ್ದುವು. ಆದರೆ ಕಾಲು?
ಅದು, ಕಾಸರಗೋಡಿನ ಒಂದು ನಾಟಕ ಪ್ರದರ್ಶನದಲ್ಲಿ ನನಗೆ ಆದ ಅನುಭವ.
ಅಂತಹುದೇ ಹಲವು ಅನುಭವಗಳನ್ನು ಅಳೆದು- ತೂಗುವ ಕೆಲಸ ನನ್ನದಾಯಿತು.
ಬಯಕೆಯ ಬಳ್ಳಿ
ಒಟ್ಟಿನಲ್ಲಿ, ನೃತ್ಯ-ನನಗೆ ಬೇಕೇಬೇಕು ಎಂದಾಯಿತು. ಬಯಕೆಯೇನೋ ಬೇರು ಬಿಟ್ಟಿತು. ಪಡೆಯುವ ಬಗೆ?
ಯಾರ ಮೂಲಕವಾದರೂ ತರಿಸಿಕೊಳ್ಳುತ್ತಿದ್ದ ಕೆಲವು ಪತ್ರಿಕೆಗಳ ವಿಶೇಷಾಂಕಗಳು ಮನೆಯಲ್ಲಿ ಇರುತ್ತಿದ್ದುವು. ಒಂದು ವಿಶೇಷಾಂಕದಲ್ಲಿ ಶ್ರೀ ಶಿವರಾಮ ಕಾರಂತರ ''ಸೋಮಿ ಸೌಭಾಗ್ಯ'' ಎಂಬ ಕವನದಲ್ಲಿ ''ಸೋಮೀ ಸೋಮೀ! ಕುಣಿಯೋಣ ಚೆನ್ನಿ!'' ಎಂಬ ಚರಣವನ್ನು ನನಗೆ ಬೇಕಾದಂತೆ ಹಾಡಿಸಿ ಕುಣಿಯಲೂ ಒಂದು ದಿನ ಪ್ರಯತ್ನಿಸಿದ್ದೆ.
ಆಗ ಪುತ್ತೂರಿನಲ್ಲಿ ಶ್ರೀ ಶಿವರಾಮ ಕಾರಂತರ ಹತ್ತು ಹಲವು ಅಭ್ಯಾಸ- ಪ್ರಯೋಗಗಳು ನಡೆಯುತ್ತಿದ್ದುವು.
ಒಂದು ದಿನ, ಪುತ್ತೂರಿನಲ್ಲಿ ವಕೀಲ ವೃತ್ತಿಯಲ್ಲಿದ್ದ ನನ್ನ ಕುಟುಂಬಸ್ಥರಾದ ಶ್ರೀ ಸಿ, ಎಸ್. ಶಾಸ್ತ್ರೀಯವರು ನನಗೆ ಕರೆ ಕಳುಹಿದರು. ಆಹ್ವಾನದ ಕಾರಣ ತಿಳಿದಿರದೆ, ಕುತೂಹಲದ ಒಂದು ಮೂಟೆಯನ್ನೇ ಹೊತ್ತುಕೊಂಡು ಪುತ್ತೂರು ತಲುಪಿದೆ ಎಂದರೂ ಹೆಚ್ಚಲ್ಲ.