ಲೇಖನ
ಮುಖ್ಯ ಪುಟ » ಮನರಂಜನೆ » ಯಕ್ಷಗಾನ » ಲೇಖನ » ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 4- ಐದು ವರ್ಷಗಳಲ್ಲಿ ಆಸ್ತಿ ಅಡವು... (Yakshagana | Kuriya Vittala Shastri | Biography | Bannada Baduku | Yakshagana Article)
ಹಿಂದಿನದು|ಮುಂದಿನದು
ನೃತ್ಯ ಕರ್ನಾಟಕ
ಅಲ್ಲಿಗೆ ಹೋದಾಗ, ನಾನೂ ಶ್ರೀ ಕಾರಂತರ ಬಳಗವನ್ನು ಸೇರಿಕೊಳ್ಳಬಹುದು ಎಂದು ಶ್ರೀ ಶಾಸ್ತ್ರಿಯವರಿಂದ ತಿಳಿದುಬಂತು.

ಕಾರಂತರು, ಹಿನ್ನಲೆಯ ಹಾಡುಗಳಿಗೆ ತನ್ನದೇ ಆದ ವಿಶಿಷ್ಟ ನೃತ್ಯವೊಂದನ್ನು ಹೊಂದಿಸಿಕೊಳ್ಳುವ ಪ್ರಯೋಗ ಮಾಡುತ್ತಲಿದ್ದರು. ಆದರೆ, ಅವರ ಮನೋಧರ್ಮಕ್ಕೆ ತಕ್ಕಂತೆ ಕುಣಿಯುವವರು ಸಿಗದೆ ಪೇಚಾಟವಾಗುತ್ತಿತ್ತಂತೆ.

ನಮ್ಮ ಯಕ್ಷಗಾನ ನಾಟಕಗಳಲ್ಲಿ ನನ್ನ ಕೆಲವು ನಿಮಿಷದ ಕುಣಿತದ ತುಣುಕುಗಳನ್ನು ಕಂಡಿದ್ದ ಶ್ರೀ ಶಾಸ್ತ್ರಿಯವರು, ನಾನು ಶ್ರೀ ಕಾರಂತರ ನಿರ್ದೇಶನಕ್ಕೆ ತಕ್ಕಂತೆ ಕುಣಿಯಬಲ್ಲೆ ಎಂದು ತಿಳಿದರೋ ಏನೋ, ನನ್ನನ್ನು ಕರೆದೊಯ್ದು ಕಾರಂತರಿಗೆ ಪರಿಚಯ ಮಾಡಿಸಿದರು.

ನೃತ್ಯದ ಪ್ರಸ್ತಾಪ ನನ್ನನ್ನು ಆಕರ್ಷಿಸಿತ್ತು. ಅಂತೆಯೇ, ಕಾರಂತರು ಕಲಿಸಹೊರಟ ನೃತ್ಯವೂ ನನಗೆ ಬೇಡವಾಗಿರಲಿಲ್ಲ. ಒಂದೆರಡು ಸಣ್ಣ ಕಾರ್ಯಕ್ರಮಗಳಲ್ಲಿ ನನ್ನ ಸ್ವಂತ ಭಾವನೆಗಳನ್ನೂ ಪ್ರದರ್ಶಿಸಲು ಅವರು ನನಗೆ ಅವಕಾಶವಿತ್ತರು.

ಅಭ್ಯಾಸ ಸಾಗತೊಡಗಿತು.

WD
ಪುತ್ತೂರಿನ ದಸರಾ ಕಾರ್ಯಕ್ರಮದಲ್ಲಿ ಪ್ರಥಮ ಪ್ರದರ್ಶನ ನಡೆಯಿತು. ನೃತ್ಯ ಪದ್ಧತಿ ಹೊಸದಾಗಿದ್ದು ನೋಡಿದ ಜನರೂ ಮೆಚ್ಚಿದರು.

ಕಾರ್ಯಕ್ರಮ ಮುಗಿದ ತರುವಾಯ, ಕಾರಂತರು ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ''ನೃತ್ಯ ಕರ್ನಾಟಕ'' ಎಂಬ ಹೆಸರಿನಿಂದ ಪ್ರವಾಸ ಹೊರಡಲಿರುವುದಾಗಿ ತಿಳಿಯಿತು. ಮನೆಯಲ್ಲೇ ಕುಳಿತಿದ್ದು ಮೈಗೆ ಬೇರು ಬರಿಸಿಕೊಳ್ಳುವ ಪರಿಸ್ಥಿತಿಯಲ್ಲಿದ್ದ ನಾನು ಅಂತಹದೊಂದು ಅವಕಾಶದಿಂದ ಸಂತೋಷಗೊಂಡೆ.

''ನೃತ್ಯ ಕರ್ನಾಟಕ''ದ ಜೊತೆಯಾಗಿ ಪ್ರವಾಸ ಹೊರಡುವ ಬಗೆಗೆ ನನ್ನ ಮನೆಯಿಂದ ಯಾವ ವಿರೋಧವೂ ತೋರಲಿಲ್ಲ. ಮನೆಯವಳಿಂದಲೂ ವಿರೋಧವಿರಲಿಲ್ಲ.

ಸಹಕಾರ
ಕಲಾವಿದನಾದವನಿಗಷ್ಟೇ ಏಕೆ, ಕಲಾವಿದನಾಗ ಬಯಸುವವನಿಗೂ ಮನೆಯೊಳಗೆ ಮನದ ನೆಮ್ಮದಿ ಭಂಗವಾಗಬಾರದು. ಮನೆಯ ಇತರರಿಗಿಂತಲೂ ಹೆಚ್ಚು ಕೈ ಹಿಡಿದವಳ ಸಹಾನುಭೂತಿ ಇರಬೇಕು. ಇಲ್ಲದಿದ್ದರೆ ಚಿತ್ತೈಕಾಗ್ರತೆ ಅಸಾಧ್ಯ ಎಂದೇ ಲೆಕ್ಕ. ಅನುಕಂಪದ ಅಭಾವವಿದ್ದರೆ ಅದು ಸದಾ ಬದುಕಿರುವ ಕಿರುಕುಳವಾಗಿಯೇ ಪರಿಣಮಿಸುತ್ತದೆ.

ಅಂತಹ ಅನುಭವ ನನಗೆ ದೊರೆತುದಾದರೂ ಕಲಾಸೇವೆಯ ಜೀವನದಲ್ಲಿ ಮುಕ್ಕಾಲು ಭಾಗ ಕಳೆದ ತರುವಾಯವೇ. ನನ್ನ ಹುಚ್ಚು ಹವ್ಯಾಸಗಳಿಗೆ ಆರಂಭದಲ್ಲಿ ಯಾರೂ ಅಡ್ಡಿ ಬರಲಿಲ್ಲ. ಯಕ್ಷಗಾನ ಮಂಡಳಿ ನಡೆಯುತ್ತಿದ್ದಾಗಲೇ ಮದುವೆ ಆಗಿದ್ದ ನಾನು, ಬಂದಾಗಿನಿಂದಲೇ ವರ್ಷದಲ್ಲಿ ಆರು ತಿಂಗಳು ಆಗಲಿರುವ ಅನುಭವವನ್ನು ನನ್ನಾಕೆಗೆ ಕೊಡತೊಡಗಿದ್ದೆ. ಆದರೆ ಅದಕ್ಕೆ ಯಾವ ರೀತಿಯಲ್ಲಾದರೂ ಗೊಣಗುಟ್ಟುವ ಗೋಜಿಗೆ ಅವಳು ಹೋಗದೆ, ನನ್ನ ರುಚಿಯೇ ಅವಳ ಅಭಿರುಚಿಯೆಂದು ಬಗೆದಳು. ನಾನು ಇಂದು ''ಕಲಾವಿದನಾಗಿದ್ದೆ'' ಎಂದು ಹೇಳಿಕೊಳ್ಳುವುದಿದ್ದರೆ, ಆ ಹೆಮ್ಮೆಯ ಅರ್ಧಪಾಲು ಅವಳಿಗೂ ಇದೆ.

ಮೊದಲ ನಾಲ್ಕು ವರ್ಷಗಳಲ್ಲಿ ಆಗುತ್ತಿದ್ದ ಅಗಲಿಕೆಯ ನೋವನ್ನು ಮರೆತು ಹಾಯಾಗಿರಬಹುದು ಎಂದು ಅವಳು ಭಾವಿಸಿಕೊಂಡಿದ್ದಾಗಲೇ ನೃತ್ಯ ಕರ್ನಾಟಕದ ಪ್ರವಾಸದ ಪ್ರಸ್ತಾವವಾಯಿತು.

''ಅದೆಷ್ಟು ತಿಂಗಳ ಕಾರ್ಯಕ್ರಮ?'' ಎಂದು ಕೂಡಾ ವಿಚಾರಿಸದೆ, ಕೇಳಿದೊಡನೆ ನನ್ನವಳ ಒಪ್ಪಿಗೆ ದೊರೆಯಿತು. ಕಾರಂತರ ಜೊತೆಗೂಡಿ ಹೋಗುವವನಾದ ಕಾರಣ, ತಂದೆಯವರೂ ''ಹೂಂ'' ಎಂದರು.

ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಮುಂಬಯಿಗಳಿಗೆ ನಾವು ಹೋಗಿ ಬಂದೆವು.

ಪ್ರದರ್ಶನಗಳು ಎಲ್ಲ ಕಡೆಗಳಲ್ಲೂ ಯಶಸ್ವಿಯಾಗಿಯೇ ನಡೆದುದಾಗಿ ಅಭಿಪ್ರಾಯವಿದ್ದಿತು.

ಕಿನ್ನರ ನೃತ್ಯ
ಅವರು (ಕಾರಂತರು) ಕಲ್ಪಿಸಿದ್ದ ನೃತ್ಯ ಪದ್ಧತಿಗೆ ''ಕಿನ್ನರ ನೃತ್ಯ''ವೆಂದು ಕರೆಯಲಾಗುತ್ತಿತ್ತು. ಯಕ್ಷಗಾನದ ಹಾಡುಗಾರಿಕೆಯನ್ನು ಅದಕ್ಕೂ ಅಳವಡಿಸಲಾಗುತ್ತಿತ್ತು. ಪ್ರಸಂಗಗಳ ಕೆಲವು ಕಥಾಭಾಗಗಳನ್ನು ಆಯ್ದಕೊಂಡು, ಅಭಿನಯ ನೃತ್ಯಗಳೊಂದಿಗೆ ಪ್ರದರ್ಶಿಸಲಾಗುತ್ತಿತ್ತು.

ಅದಲ್ಲದೆ (ಸಾಮಾನ್ಯ ಅದೇ ಪದ್ಧತಿಯಲ್ಲಿ) ಇತರ ಕೆಲವು ಚಿಕ್ಕಪುಟ್ಟ ನೃತ್ಯಗಳನ್ನೂ ಪ್ರದರ್ಶಿಸುವ ಕಾರ್ಯಕ್ರಮ ಇರುತ್ತಿತ್ತು. ''ಹಾವು- ಹಾವಾಡಿಗ'' ಇತ್ಯಾದಿ ನೃತ್ಯಗಳೆಲ್ಲ ನನ್ನ ಪಾಲಿಗೆ ಬರುತ್ತಿದ್ದುವು.

''ಕಿರಾತಾರ್ಜುನೀಯ'', ''ಚಿತ್ರಾಂಗದಾ'' ಎಂಬಿತ್ಯಾದಿ ಕಥಾಭಾಗಗಳಲ್ಲಿ ಶ್ರೀಮಾನ್ ಕಾರಂತರು, ಶ್ರೀಮತಿ ಕಾರಂತರು ಮತ್ತು ನಾನು ಭಾಗವಹಿಸುತ್ತಿದ್ದೆವು.

ನನ್ನ ಪಾತ್ರಗಳನ್ನು ಸಮರ್ಪಕವಾಗಿ ಯಶಸ್ವಿಯಾಗಿಯೇ ನಿರ್ವಹಿಸಿದೆನೆಂಬ ಮೆಚ್ಚುಗೆಯ ಮಾತನ್ನು ಕಾರಂತರಿಂದ ಅಂದು ಕೇಳಿದೆ. ನಮ್ಮ ಪ್ರವಾಸ ಮುಗಿದು ಊರಿಗೆ ಹಿಂತೆರಳಿದಾಗಲೂ ಅವರು ಆ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಏನನ್ನೂ ಹೇಳಲಿಲ್ಲ. ಬರಿಯ ಕಣ್ಸವರುವ ಸಮಾಧಾನಕ್ಕಾಗಿ ಅವರು ಹಾಗೆ ಹೇಳಿರಲಾರರು ಎಂದೇ ಕಾರಂತರ ನಿರ್ದಾಕ್ಷಿಣ್ಯ ವಿಮರ್ಶೆಯ ಬಿಸಿಯನ್ನು ತಿಳಿದ ನಾನು ಇಂದಿಗೂ ಅಭಿಪ್ರಾಯವಿರಿಸಿಕೊಂಡಿದ್ದೇನೆ.

ಅವರೊಂದಿಗೆ ಕುಣಿಯುತ್ತಿದ್ದಾಗ, ಎಷ್ಟೋ ಬಾರಿ ಮಾತಿಲ್ಲದ ಅದು ''ಮೂಕ ನೃತ್ಯ'' ಎನಿಸಿತ್ತು.

ಯಕ್ಷಗಾನದಲ್ಲಾದರೆ ಅರ್ಥ ವಿವರಣೆ ಇದೆ. ಪಾತ್ರಧಾರಿಯ ಅಭಿನಯದಲ್ಲೂ ತಿಳಿಯಲಾಗದ, ಭಾಗವತರ ಹಾಡನ್ನೂ ಸರಿಯಾಗಿ ಕೇಳಿರದ ಪ್ರೇಕ್ಷಕನು, ಅರ್ಥ ಹೇಳಿದಾಗ ಸನ್ನಿವೇಶವನ್ನೂ ಪಾತ್ರಧಾರಿಯ ಭಾವನೆಗಳನ್ನೂ ಅರಿತುಕೊಳ್ಳುತ್ತಾನೆ. ಕಿನ್ನರ ನೃತ್ಯದಲ್ಲಿ ಆ ಅವಕಾಶವಿರಲಿಲ್ಲ.

ನಿಯಮಬದ್ಧ ಮುದ್ರೆಗಳೂ ಇರಲಿಲ್ಲ. ಕಾರಂತರ ಮನೋಧರ್ಮಕ್ಕೆ ಅನುಸಾರ, ಸಮಯ ಸ್ಫೂರ್ತಿಗೆ ಹೊಂದಿಕೊಂಡು ಮುದ್ರೆಗಳೂ ಬದಲಾಗುತ್ತಿದ್ದವು. ಕೆಲವು ಬಾರಿ ಪದಗತಿಯೂ ಬದಲಾಗಬೇಕಾಗುತ್ತಿತ್ತು. ಆ ಕ್ಷಣದ ಸ್ಫೂರ್ತಿಯಲ್ಲಿ ಅವರು ಕುಣಿಯುತ್ತಿದ್ದರು; ಸರಿ. ಆದರೆ, ನನಗೆ, ನಿಮಿಷಕ್ಕೆ ನಾಲ್ಕು ಬಾರಿ ಜಾಡು ಬದಲಿದರೂ ಆಗಬಹುದೆಂಬ ಮಾತು ಸರಿ ಕಾಣುತ್ತಿರಲಿಲ್ಲ.

ಬರಿಯ ಮುದ್ರೆಗಳನ್ನೇ ಅವಲಂಬಿಸಿಕೊಂಡು ಪ್ರೇಕ್ಷಕರು ನೃತ್ಯವನ್ನೂ ಕಥಾಭಾಗವನ್ನೂ ಅರಿತುಕೊಳ್ಳುವರೆಂಬ ಧೈರ್ಯ ನನಗಿರಲಿಲ್ಲ. ಆದರೂ ನಾವಿತ್ತ ಪ್ರದರ್ಶನಗಳ ಕಾರ್ಯಕ್ರಮಗಳು ಯಶಸ್ವಿಯಾಗಿದ್ದರೆ ಅದು ಕಾರಂತರ ವೈಯಕ್ತಿಕ ಆಕರ್ಷಣೆಯಿಂದಲೇ ಆಗಿರಬೇಕು. ಅವರ ಮಿಂಚಿನ ಬುದ್ಧಿ ಉಳಿದವರಲ್ಲೂ ಪ್ರತಿಬಿಂಬಿಸಿದುದರಿಂದಲೇ ಇರಬೇಕು ಎಂದೇ ನಾನು ನಂಬಿದ್ದೇನೆ.

ಕಹಿ- ಸಿಹಿ
ಅವೆಲ್ಲ ಕಾರಣಗಳಿಂದಾಗಿ, ಪ್ರವಾಸ ಮುಗಿಸಿ ಒಂದು ಬಾರಿಗೆ ಮನೆ ಸೇರಿದೆ ಎಂದಾದ ತರುವಾಯ, ಕಿನ್ನರ ನೃತ್ಯದ ವ್ಯವಸಾಯ ಮಾಡುವ ಅಪೇಕ್ಷೆಯನ್ನು- ಒಂದು ಬಾರಿ ಮೂಡಿತ್ತಾದರೂ- ಮರೆತೆ. ಕಾರಂತರೂ ಅನಂತರ ತಮ್ಮ ಪ್ರಯೋಗವನ್ನು ಮುಂದುವರಿಸಲಿಲ್ಲ.

WD
ಯಕ್ಷನಂತೆ ಕಿನ್ನರನೂ ಕಾಣಿಸಿಕೊಳ್ಳಲಿಲ್ಲ. ಒಮ್ಮೆ ಮಾತ್ರ ಮೂಡಿ ಮರೆಯಾದ.

ಬಂದ ಮೇಲೆ ತಿರುಗಿ ಮೊದಲಿನಂತಾದೆ. ನಾಲ್ಕು ಊರುಗಳಲ್ಲಿ ಹೋಗಿ ಕುಣಿದು ಬಂದ ಒಂದು ನೆನಪನ್ನು ಮಾತ್ರವೇ ಉಳಿಸಿಕೊಂಡು ಉಳಿದೆ. [ಮುಂದಿನ ವಾರಕ್ಕೆ]

ನಿರೂಪಣೆ: ಮಂಗಳೂರಿನ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)
ಕ್ಯಾರಿಕೇಚರ್ ಸಹಕಾರ: ಹರಿಣಿ
ಹಿಂದಿನದು|ಮುಂದಿನದು
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯಕ್ಷಗಾನ, ಕುರಿಯ ವಿಠಲ ಶಾಸ್ತ್ರಿ, ಆತ್ಮಕಥನ, ಬಣ್ಣದ ಬದುಕು, ಪದ್ಯಾಣ ಗೋಪಾಲಕೃಷ್ಣ, ಪಗೋ, ಕನ್ನಡ ಯಕ್ಷಗಾನ, ಕನ್ನಡ ವೆಬ್ ಸೈಟ್, ಕನ್ನಡ ಲೇಖನ, ಕರ್ನಾಟಕ ಕಲೆ, ಕನ್ನಡ ಲೇಖನಗಳು, ಯಕ್ಷಗಾನ ಲೇಖನ