ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಏನು ಮಾಡಬೇಕೆಂದೇ ತೋಚದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಿಂದ, ಬಡಪಾಯಿ ಪ್ರಜೆಗಳಿಗೆ ದೊರೆಯುತ್ತಿರುವ ಬೆಲೆ ಏರಿಕೆಯ ಶಾಕ್‌ಗಳ ಸರಣಿಗೆ ಹೊಸ ಸೇರ್ಪಡೆ ಎಲ್‌ಪಿಜಿ ಬೆಲೆ.
ಒಂದೇ ತಿಂಗಳಲ್ಲಿ ಎರಡು ಬಾರಿ ಪೆಟ್ರೋಲ್ ಬೆಲೆ ಏರಿಸಿದ ಬಳಿಕ, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನೂ ಏರಿಸಲಾಗುವ ಕುರಿತು ಸುಳಿವು ದೊರೆತಿದ್ದು, ಅಕ್ಕಿ-ಬೇಳೆ, ತರಕಾರಿಗಳ ಬೆಲೆ ಏರಿಕೆಯಿಂದ ತುತ್ತಿನ ಚೀಲಕ್ಕೆ ಪರದಾಡುತ್ತಿರುವ ಜನ ಸಾಮಾನ್ಯರೀಗ ಅದನ್ನು ಬೇಯಿಸಲೂ ಪರದಾಡಬೇಕಾಗುವ ಪರಿಸ್ಥಿತಿಗೆ ತಲುಪಲಿದ್ದಾರೆ.
ಈ ವಾರಾಂತ್ಯದಲ್ಲಿ ಉನ್ನತಾಧಿಕಾರ ಸಚಿವರ ಗುಂಪು ಸಭೆ ಸೇರಲಿದ್ದು, ಡೀಸೆಲ್ ಬೆಲೆಯನ್ನು ಲೀಟರಿಗೆ 1ರಿಂದ 1.50 ರೂ.ವರೆಗೆ ಏರಿಸುವ ಕುರಿತು ಶಿಫಾರಸು ಮಾಡಬಹುದಾಗಿದ್ದು, ಎಲ್‌ಪಿಜಿ ಬೆಲೆಯನ್ನೂ ಏರಿಸಲು ಶಿಫಾರಸು ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷದ ಜೂನ್ ತಿಂಗಳಿಂದೀಚೆಗೆ ಡೀಸೆಲ್, ಸೀಮೆ ಎಣ್ಣೆ ಮತ್ತು ಅಡುಗೆ ಅನಿಲದ ದರವನ್ನು ಏರಿಸಿರಲಿಲ್ಲ. ಡೀಸೆಲ್ ಲೀಟರೊಂದಕ್ಕೆ 7.65 ರೂ., ಸೀಮೆಣ್ಣೆ ಲೀಟರಿಗೆ 19.60 ರೂಪಾಯಿ ಮತ್ತು ಅಡುಗೆ ಅನಿಲ ಸಿಲಿಂಡರೊಂದಕ್ಕೆ ತಲಾ 366.28 ರೂಪಾಯಿಯಷ್ಟು ನಷ್ಟವಾಗುತ್ತಿದೆ ಎಂದು ತೈಲ ವಿತರಣಾ ಕಂಪನಿಗಳು ಬೆಲೆ ಏರಿಕೆ ಕೋರಿ ಸರಕಾರಕ್ಕೆ ಮನವಿ ಮಾಡುತ್ತಲೇ ಇವೆ. ಆದರೆ ಇಷ್ಟೊಂದು ನಷ್ಟದಲ್ಲಿ ಈ ಕಂಪನಿಗಳು ಹೇಗೆ ನಡೆಯುತ್ತಿವೆ ಎಂಬುದೇ ಯಾರಿಗೂ ಅರ್ಥವಾಗದ ಸಂಗತಿ!
ಆದರೂ, ಕಚ್ಚಾ ತೈಲದ ಮೇಲಿರುವ ಶೇ.5 ಆಮದು ಸುಂಕವನ್ನು ರದ್ದುಗೊಳಿಸುವಂತೆ, ಡೀಸೆಲ್ ಆಮದು ಸುಂಕವನ್ನು ಶೇ.7.5ರಿಂದ ಶೇ.2.5ಕ್ಕೆ ಇಳಿಸುವಂತೆಯೂ ತೈಲ ವಿತರಣಾ ಕಂಪನಿಗಳು ಸರಕಾರವನ್ನು ಒತ್ತಾಯಿಸಿವೆ.
ನಷ್ಟ ನಷ್ಟ ಅಂತ ಹೇಳುತ್ತಲೇ ಈ ಕಂಪನಿಗಳು ಜನರನ್ನು ದೋಚುತ್ತಿವೆಯೇ ಎಂಬುದು ನಾಗರಿಕರನ್ನು ಈಗಲೂ ಕಾಡುತ್ತಿರುವ ಪ್ರಶ್ನೆ.
ಒಟ್ಟಿನಲ್ಲಿ ಡೀಸೆಲ್ ಬೆಲೆ ಏರಿಸಿದರೆ ಮತ್ತೆ ಕೇಳಲೇಬೇಕಾಗಿಲ್ಲ ಜನ ಸಾಮಾನ್ಯರ ಪಾಡು. ಸ್ವಯಂಚಾಲಿತವಾಗಿ ಪ್ರಯಾಣ ದರ ಏರುತ್ತದೆ, ಸರಕು ಸಾಗಾಟ ದರವೂ ಏರುವುದರಿಂದ, ಎಲ್ಲ ಸರಕುಗಳ ದರವೂ ಏರುತ್ತದೆ. ಅದೊಂದು ಬೆಲೆ ಏರಿಕೆಯ ಮಾಲೆ ಪಟಾಕಿಗೆ ಬೆಂಕಿಕಡ್ಡಿ ಹೊತ್ತಿಸಿದಂತಾಗುತ್ತದೆ ಅಷ್ಟೆ.