ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ದಿಕ್ಕುತಪ್ಪಿದ ಸರಕಾರ, ಕೇಳೋರಿಲ್ಲದಂತಾದನೇ ಮತದಾರ? (Price Rise in UPA | Petrol Price | Aam Admi | Congress | Manmohan | UPA2)
ಒಂದು ನಿರ್ದಿಷ್ಟ ಗುರಿ, ಸೂಕ್ತ ಯೋಜನೆಯೇ ಇಲ್ಲದೆ ಸರಕಾರವನ್ನು ಚಲಾಯಿಸಿದರೆ, ಜನ ಸಾಮಾನ್ಯರ ಪಾಡು ಬೀದಿನಾಯಿ ಪಾಡಾಗುತ್ತದೆ ಎಂಬುದಕ್ಕೆ ಅತ್ಯಂತ ಸ್ಪಷ್ಟವಾದ ಉದಾಹರಣೆ ನಮ್ಮ ಕಣ್ಣೆದುರಿಗಿದೆ. ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದರೆ, ಇದು 'ಸಮ್ಮಿಶ್ರ ರಾಜಕಾರಣದ ಫಲ' ಎಂದು ಬಾಯಿಗೆ ಬಂದಂತೆ ಹೇಳುವ, 'ಬೆಲೆ ಏರಿಕೆ ನಿಯಂತ್ರಿಸಬೇಕಾಗಿರುವುದು ರಾಜ್ಯಗಳು' ಎಂಬ ಹೇಳಿಕೆ ನೀಡುವ, 'ಬೆಲೆ ಏರಿಕೆಗೆ ಹಣದುಬ್ಬರವೇ ಕಾರಣ' ಎಂಬ ಜನರಿಗೆ ಅರ್ಥವಾಗದ ಶಬ್ಧದ ಮೇಲೆ ಗೂಬೆ ಕೂರಿಸುವ, 'ಬೆಲೆ ಏರಿಕೆ ನಿಯಂತ್ರಣಕ್ಕೆ ನಮ್ಮಲ್ಲಿ ಮ್ಯಾಜಿಕ್ ಮಂತ್ರ ಇಲ್ಲ' ಎನ್ನುವವರಿಂದ ನಾವಿಂದು ಆಳಿಸಿಕೊಳ್ಳುತ್ತಿದ್ದೇವೆ. ಇದೀಗ ಬೆಲೆ ಏರಿಕೆಯಿಂದ ತತ್ತರಿಸುವ ಜನರ ತಲೆಗೆ ಮತ್ತೊಂದು ಮೊಳೆ ಜಡಿಯಲಾಗಿದೆ. ಜನರ ಆಕ್ರೋಶದ ಬೆಂಕಿಗೆ ಪೆಟ್ರೋಲನ್ನೇ ಸುರಿಯಲು ಹೊರಟಿದೆ ಸರಕಾರ.
ಓಟು ಬಂದಾಗ ಮಾತ್ರವೇ ಆಮ್ ಆದ್ಮಿ ಎಂದು ಕರೆಸಿಕೊಳ್ಳುವ, ಬಡಪಾಯಿ ಮತದಾರರು ಈಗ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದರೂ, ಒಂದಿನಿತೂ ತಲೆ ಕೆಡಿಸಿಕೊಳ್ಳದೆ ತನ್ನಿಚ್ಛೆಯಂತೆ ಸರಕಾರ ಚಲಾಯಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಬಹುಶಃ ಎಲ್ಲದರ ಮೇಲೆ ನಿಯಂತ್ರಣ ಕಳೆದುಕೊಂಡಿದೆಯೇ? ನಿಜಕ್ಕೂ ಪ್ರಜೆಗಳನ್ನು ರಕ್ಷಿಸುವ ನಾಯಕತ್ವ ಅದರಲ್ಲಿದೆಯೇ ಎಂಬ ಸಂದೇಹ ಹುಟ್ಟಿಕೊಳ್ಳಲಾರಂಭಿಸಿದ್ದು ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ.
ದಿಕ್ಕು ತಪ್ಪಿಸುವ ರಾಜಕೀಯ... 1.76 ಲಕ್ಷ ಕೋಟಿ ರೂಪಾಯಿಯ 2ಜಿ ಹಗರಣ, ಮತ್ತೆ ಮೇಲೆದ್ದು ನಿಂತ ಬೋಫೋರ್ಸ್ ಹಗರಣ ಮುಂತಾದವುಗಳ ಬಿಸಿಯಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಹಾಗೂ ಈಗಾಗಲೇ ಯಾವುದರ ಮೇಲೆ ಪ್ರತಿಭಟಿಸಬೇಕು, ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸಲಾಗದೆ ದಿಕ್ಕಾಪಾಲಾಗಿರುವ ಪ್ರತಿಪಕ್ಷಗಳನ್ನು ಮತ್ತಷ್ಟು ಗೊಂದಲದಲ್ಲಿ ಕೆಡಹುವ ತಂತ್ರಗಳಲ್ಲಿ ಈ ಪೆಟ್ರೋಲ್ ಏರಿಕೆಯೂ ಒಂದು ಎನ್ನದೇ ವಿಧಿಯಿಲ್ಲ.
ಕೋಟ್ಯಂತರ ರೂಪಾಯಿ ಮೊತ್ತದ ಆಹಾರ ಧಾನ್ಯಗಳು ದೇಶದ ವಿವಿಧೆಡೆ ಗೋದಾಮುಗಳಲ್ಲಿ ಕೊಳೆಯುತ್ತಿದ್ದರೂ, ಜನರ ಕೈಗೆ ತಲುಪದೆ, ವ್ಯಾಪಾರಿಗಳು ಬೆಲೆ ಏರುವಂತೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿರುವುದೇ ಈ ಯುಪಿಎ ಸರಕಾರದ ಆಡಳಿತ ವೈಖರಿ. ಅಂದರೆ ಬೆಲೆ ಏರಿಕೆಯೂ ಕೂಡ ಅದರ ನಿಯಂತ್ರಣ ಮೀರಿ ಹೋಗಿದೆ ಎಂಬಂತಾಗಿದೆ. ಬಹುಶಃ ಸರಕಾರಕ್ಕೆ ಜನ ಸಾಮಾನ್ಯರ ಕಾಳಜಿಗಿಂತಲೂ ಉಳ್ಳವರ, ಅಕ್ರಮ ದಾಸ್ತಾನುದಾರರ ಕಾಳಜಿಯೇ ಅಧಿಕವಾಗಿರುವಂತೆ ತೋರುವುದಕ್ಕೂ ಈ ನಮ್ಮ ಪ್ರಧಾನ ಮಂತ್ರಿಗಳ ಸ್ಥಿತಪ್ರಜ್ಞ ಮನಸ್ಥಿತಿ ಕಾರಣವಾಗುತ್ತಿದೆ.
ತೋರಿಕೆಯ ಕ್ರಮಗಳೇ? ಅಕ್ರಮವಾಗಿ ದಾಸ್ತಾನು ಮಾಡಿಲ್ಲದ ಒಂದಿಷ್ಟು ಈರುಳ್ಳಿ ವ್ಯಾಪಾರಿಗಳ ಮಂಡಿಗಳ ಮೇಲೆ ಸಿಬಿಐ ಮೂಲಕ ತೋರಿಕೆಯ ದಾಳಿ ನಡೆಸಿ 'ಅಲ್ಲೇನೂ ಇಲ್ಲ' ಎನ್ನುತ್ತಾ, 'ಈ ಯುಪಿಎ ಸರಕಾರ ಕೆಲಸ ಮಾಡುತ್ತಿದೆಯಲ್ಲಾ' ಎಂದು ಜನರು ತೃಪ್ತಿಪಟ್ಟುಕೊಳ್ಳುವಂತೆ ಮಾಡಿರುವ ಪ್ರಯತ್ನವೂ ವಿಫಲವಾಗಿದೆ. ಆದರೆ ಕೆಲವು ತರಕಾರಿಗಳ ಬೆಲೆಯಂತೂ ಶೇ.50ರಿಂದ ಶೇ.200ರಷ್ಟು ಹೆಚ್ಚಾಗಿರುವುದೇನೂ ಸುಳ್ಳಲ್ಲ. ಇದು ದೃಷ್ಟಿ ದೋಷವುಳ್ಳವರಿಗೂ ಅರಿವಾಗುವ ಸತ್ಯ. ಆದರೆ ನಮ್ಮ ಮಹಾನ್ ಆರ್ಥಿಕ ತಜ್ಞ ಎಂಬ ಹೆಗ್ಗಳಿಕೆಯ ಪ್ರಧಾನಿ ಮನಮೋಹನ್ ಸಿಂಗ್, ಗ್ರೇಟೆಸ್ಟ್ ವಿತ್ತ ಸಚಿವ ಎಂಬ ಹಣೆ ಪಟ್ಟಿಯ ಪ್ರಣಬ್ ಮುಖರ್ಜಿ, ಮತ್ತು ಆಗೀಗ್ಗೆ ಜನಪ್ರಿಯ ಬಜೆಟ್ ಮಂಡಿಸಿ ಗಮನ ಸೆಳೆದಿದ್ದ ಆರ್ಥಿಕ ತಜ್ಞರೂ ಆಗಿರುವ ಪಿ.ಚಿದಂಬರಂ ಉಳ್ಳ ಈ ಸರಕಾರಕ್ಕೆ ಮಾತ್ರ ಇದು ಅರ್ಥವಾಗದೇ ಇರುವುದು ಸೋಜಿಗ!
ಜನರು ಅಷ್ಟೇನೂ ಮೂರ್ಖರಲ್ಲ. ಕಳೆದ ಎರಡು ತಿಂಗಳಿನಿಂದ, ಜನ ಸಾಮಾನ್ಯರು ಬದುಕಲಿಕ್ಕಾಗಿ ತಿನ್ನುವ ಉಣ್ಣುವ ಆಹಾರ ಪದಾರ್ಥಗಳ ಬೆಲೆ ಏರುತ್ತಿದ್ದರೂ, ಹಗರಣಗಳ ಕೆಸರು ಒರೆಸಿಕೊಳ್ಳುವತ್ತಲೇ ಗಮನ ಕೇಂದ್ರೀಕರಿಸಿಕೊಂಡಿರುವ ಯುಪಿಎ ಸರಕಾರದ ಪ್ರಧಾನಿಯ ಮುಖವನ್ನೊಮ್ಮೆ ನೋಡಿ. ಅವರ ಕೈಯಲ್ಲಿ ಯಾವುದೂ ಇದ್ದಂತಿಲ್ಲ. ಪ್ರಧಾನವಾಗಿ ಈರುಳ್ಳಿ, ಸಕ್ಕರೆ, ಗೋಧಿ, ಅಕ್ಕಿ ಮುಂತಾದವುಗಳ ಬೆಲೆ ಏರಿಕೆ ಕುರಿತಾಗಿ ವರದಿ ಒಪ್ಪಿಸುವಂತೆ ಮೊನ್ನೆ ಮೊನ್ನೆ ಕೃಷಿ ಸಚಿವ ಶರದ್ ಪವಾರ್‌ಗೆ ಒಂದಿಷ್ಟು ಚುಚ್ಚಿದ್ದ ಪ್ರಧಾನಿ ಆಮೇಲೆ, ವಿಫಲವಾದ 'ಉನ್ನತ ಮಟ್ಟದ ಸಭೆ' ಕರೆದು ಯಥಾಸ್ಥಿತಿಗೆ ಮರಳಿ ಸುಮ್ಮನಾಗಿದ್ದಾರೆ.
ಎರಡುವರೆ ವರ್ಷದಿಂದಲೂ ಸುಮ್ಮನಾಗುಳಿದ ಕೇಂದ್ರ... ಸರಕಾರದ ಕೈಯಲ್ಲಿ ಯಾವುದೂ ಇಲ್ಲ ಎಂಬಂತಹಾ ಪರಿಸ್ಥಿತಿ ಉದ್ಭವವಾಗಿದೆಯಾದರೂ, ಅಧಿಕಾರ ಇದ್ದರೂ ಮೂಕ ಪ್ರೇಕ್ಷಕವಾಗಿರಬೇಕಾದ ಪರಿಸ್ಥಿತಿ ಅದರದು. ಇಲ್ಲವಾದಲ್ಲಿ, ಹಿಂದಿನ ಯುಪಿಎ ಸರಕಾರದ ಅವಧಿಯಿಂದಲೇ ಬೆಲೆ ಏರಿಕೆ ನಿಧಾನವಾಗಿ ಜನರನ್ನು ಆವರಿಸಿಕೊಂಡಿತ್ತು. ಆದರೂ, ಮರಳಿ ಅಧಿಕಾರಕ್ಕೆ ಬಂದದ್ದೇ ತಡ, ಸರಕಾರದಲ್ಲಿರುವವರೆಲ್ಲರೂ ತಮ್ಮ ತಮ್ಮ ಜೇಬು ಭರ್ತಿ ಮಾಡಿಕೊಳ್ಳುವತ್ತ ಮನ ಮಾಡಿದರೇ ಹೊರತು, ಜನರಿಗೇನಾದರೂ ಮಾಡಬೇಕು ಎಂಬ ಮನಸ್ಥಿತಿ ತೋರಲಿಲ್ಲ. ಬೆಲೆ ಏರಿಕೆ ಬಿಸಿ ತೀವ್ರವಾದಾಗ, ಅದು ರಾಜ್ಯ ಸರಕಾರಗಳ ಕೆಲಸ ಎನ್ನುತ್ತಾ ಕೈತೊಳೆದುಕೊಳ್ಳಲು ನೋಡಿತು. ಬಿಸಿ ಇನ್ನಷ್ಟು ಏರಿದಾಗ, 'ಉನ್ನತ ಮಟ್ಟದ ಸಭೆ' ಕರೆದು ಸುಮ್ಮನಾಗಲು ತಂತ್ರ ಹೂಡಿತು. ಆ ಸಭೆಯಲ್ಲಿ ಏನು ನಡೆಯಿತೆಂಬುದನ್ನು ಜನರೆದುರು ಮುಂದಿಡಲೇ ಇಲ್ಲ.
ಕಳೆದ ಜೂನ್ ತಿಂಗಳಲ್ಲಿ ಪೆಟ್ರೋಲ್ ಬೆಲೆ ನಿಗದಿಯ ಅಧಿಕಾರವನ್ನು ತೈಲ ವಿತರಣಾ ಕಂಪನಿಗಳಿಗೇ ಬಿಟ್ಟುಕೊಟ್ಟು ಕೈತೊಳೆದುಕೊಂಡಿತ್ತು. ಅಂದಿನಿಂದ ಈ ಕಂಪನಿಗಳು ಆಗಾಗ್ಗೆ ಬೆಲೆ ಏರಿಸುತ್ತಲೇ ಬಂದಿವೆ. ಕಳೆದ ಒಂದು ವರ್ಷದಲ್ಲಿ ಇದು ಆರನೇ ಬಾರಿ ಏರಿಕೆಯಾಗುತ್ತಿದೆ ಪೆಟ್ರೋಲ್. ಒಂದೇ ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ.
ವರ್ಷದಲ್ಲಿ ಆರು ಬಾರಿ
ಒಂದು ವರ್ಷದಲ್ಲಿ ಪೆಟ್ರೋಲ್ ಬೆಲೆ ಆರು ಬಾರಿ ಏರಿಸಲಾಗಿದ್ದು, 1 ಲೀಟರಿಗೆ ಕಳೆದ ವರ್ಷಕ್ಕಿಂತ ನಾವು 13 ರೂ. ಹೆಚ್ಚು ನೀಡಬೇಕಾಗಿದೆ.
ಫೆ.26, 2010 - 2.67 ರೂ.
ಏ.1, 2010 - 50 ಪೈಸೆ
ಜೂ. 25, 2010 - 3.79 ರೂ.
ಸೆ.20, 2010 - 29 ಪೈಸೆ
ಡಿ.15, 2010 - 2.96 ರೂ.
ಜ.15, 2011 - 2.74 ರೂ.
ಇದು ನ್ಯಾಯವೇ?
ಅಂತಾರಾಷ್ಟ್ರೀಯ ಮಟ್ಟದಲ್ಲಿ 1 ಬ್ಯಾರೆಲ್‌ಗೆ ಸರಾಸರಿ 4.48 ಡಾಲರ್ ಹೆಚ್ಚಾಗಿದ್ದು, ಇದೀಗ ಭಾರತವು ಬ್ಯಾರೆಲ್ ಒಂದಕ್ಕೆ 92.31 ಡಾಲರ್ ನೀಡಬೇಕಾಗುತ್ತದೆ ಎನ್ನುತ್ತಾರೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮುಖ್ಯಸ್ಥ ಬಿ.ಎಂ.ಬನ್ಸಾಲ್. ಒಂದು ಬ್ಯಾರೆಲ್‌ನಲ್ಲಿ 117.35 ಲೀಟರ್ ಪೆಟ್ರೋಲ್ ಬರುತ್ತದೆ. ಹಾಗಿದ್ದರೆ. ಡಾಲರ್ ಮೌಲ್ಯ 45.35ರ ಆಧಾರದಲ್ಲಿ ನೋಡುವುದಾದರೆ, 4186.26 ರೂ. ಅಂದರೆ ಲೀಟರಿಗೆ 35.67 ರೂ. ಬೆಲೆ ಇದೆಯೆಂದಾಯಿತು. ಆದರೆ ನಾವೇಕೆ ಇಲ್ಲಿ 64 ರೂಪಾಯಿ ಕೊಡಬೇಕಾಗುತ್ತದೆ? ತೆರಿಗೆ, ಸುಂಕ, ಕರ ಇತ್ಯಾದಿ ಏನೇನೋ ಹೇಳಿ ವಸೂಲು ಮಾಡುವ ಸರಕಾರ, ಇದರ ಬಗ್ಗೆ ಗಮನ ಹರಿಸುತ್ತಿಲ್ಲವೇಕೆ? ಈ ಹಗರಣಗಳ ಹಣವನ್ನು ಒಂದಿಷ್ಟು ಇತ್ತ ಕಡೆ ತಿರುಗಿಸುತ್ತಿಲ್ಲವೇಕೆ?
ಒಂದು ಹೊತ್ತಿನ ತುತ್ತಿನ ಚೀಲಕ್ಕೆ ಪರದಾಡುತ್ತಿರುವ ಜನ ಸಾಮಾನ್ಯರ ಸಮಾಧಿ ಮೇಲೆ ನಮ್ಮನ್ನಾಳುವವರು ಹೊಟ್ಟೆ ತುಂಬಾ ಕುಳಿತು ಉಣ್ಣುತ್ತಿದ್ದಾರೆ, ಹೀಗಾಗಿಯೇ ಜನ ಸಾಮಾನ್ಯರ ಪರಿಸ್ಥಿತಿ ಅವರಿಗೆ ನಾಟುತ್ತಿಲ್ಲ ಎಂದು ಹೇಳದೇ ವಿಧಿಯಿಲ್ಲ. ಪ್ರತಿಪಕ್ಷಗಳಿಗೂ ದೇಶದ ಖಜಾನೆ ಲೂಟಿಯಾಗುತ್ತಿರುವ ಹಗರಣಗಳ ವಿರುದ್ಧ ಧ್ವನಿಯೆತ್ತುವ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ತಂತ್ರ ಯುಪಿಎಗೆ ಚೆನ್ನಾಗಿ ಕರಗತವಾಗಿದೆ. ಹಗರಣಗಳ ಬಗ್ಗೆ ಧ್ವನಿಯೆತ್ತಿದರೆ, ಪೆಟ್ರೋಲ್ ಬೆಲೆ ಏರಿಸಿದರಾಯಿತು. ಆಗ ಹಿಂದಿನದು ಮರೆತು ಹೊಸದರ ಬಗ್ಗೆ ಕೂಗಾಟ ಆರಂಭವಾಗುತ್ತದೆ. ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಿದರೆ, ಹಿಂದೂ ಭಯೋತ್ಪಾದನೆಗೆ ಸಂಬಂಧಿಸಿ ಯಾರನ್ನಾದರೂ ಬಂಧಿಸಿದರಾಯಿತು ಅಥವಾ ಸಿಬಿಐನಿಂದ ಚಾರ್ಜ್ ಶೀಟ್ ಸಲ್ಲಿಕೆಯೋ, ವರದಿ ಸೋರಿಕೆಯೋ ಮಾಡಿದರಾಯಿತು. ಅಲ್ಲಿಗೆ ಬೆಲೆ ಏರಿಕೆಯ ಹೋರಾಟ ಅಂತ್ಯವಾಗಿ, ಹಿಂದೂ ಭಯೋತ್ಪಾದನೆ ಎಂಬ ವಿಷಯದಲ್ಲಿ ಹೋರಾಟ ಶುರುವಾಗುತ್ತದೆ.
ಪ್ರತಿಪಕ್ಷಗಳಿಗೂ ಪ್ರತಿಭಟನೆಗೆ ಪುರುಸೊತ್ತೇ ಇಲ್ಲ... ಒಟ್ಟಿನಲ್ಲಿ ಪ್ರತಿಪಕ್ಷಗಳ ಯಾವುದೇ ಹೋರಾಟಕ್ಕೂ ತಾತ್ವಿಕ ಅಂತ್ಯ ದೊರಕಿಸಲು ಸರಕಾರ ಬಿಡುತ್ತಿಲ್ಲ. ಒಂದಲ್ಲ ಒಂದು ಭೂತವನ್ನು ಅದರ ಮುಂದಿಟ್ಟು, ಇದರ ಬಗ್ಗೆ ಪ್ರತಿಭಟನೆ ಮಾಡಿ ಎನ್ನುತ್ತಾ ದಿಕ್ಕುತಪ್ಪಿಸುವ ಕೆಲಸವಾಗುತ್ತಿರುವಂತಿದೆ. ಇದು ಚಾಣಾಕ್ಷ ರಾಜಕಾರಣವೇ ಆಗಿದ್ದರೂ, ಜನ ಸಾಮಾನ್ಯರ ದುರ್ವಿಧಿ.
ಹಾಗಿದ್ದರೆ, ನಮ್ಮನ್ನು ರಕ್ಷಿಸುವವರು ಯಾರೂ ಇಲ್ಲದೇ ಹೋದಾಗ ಮಾಡುವುದಾದರೂ ಏನು? ಜನರೇ ಧ್ವನಿಯೆತ್ತಲೆಂದು ಕೆಲಸ/ಉದ್ಯೋಗಕ್ಕೆ ರಜೆ ಹಾಕಿ ಹೋದರೆ, ಅಂದಿನ ತುತ್ತಿಗೇ ತತ್ವಾರ ಬಂದೀತು ಎಂಬಂತಹಾ ಪರಿಸ್ಥಿತಿ ಇದೆ. ಅಷ್ಟು ದೊಡ್ಡ ಸಂಘಟಿತವಾಗಿರುವ ವಿರೋಧ ಪಕ್ಷಗಳ ಧ್ವನಿಯೇ ಕೆಲಸ ಮಾಡುತ್ತಿಲ್ಲವೆಂದಾದಾಗ, ಬಡಪಾಯಿಗಳ ಧ್ವನಿಯಾದರೂ ಸರಕಾರಕ್ಕೆ ಕೇಳಿಸೀತೇ?
ತೈಲ ವಿತರಣಾ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ಗಳಿಗೆ ನಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಪೆಟ್ರೋಲ್ ಬೆಲೆ ಏರಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದರೆ, ಸರಕಾರವು ಇದುವರೆಗೆ ಮಾಡಿರುವ ಬೋಫೋರ್ಸ್, 2ಜಿ, ಕಾಮನ್ವೆಲ್ತ್ ಗೇಮ್ಸ್ ಹಗರಣಗಳ ಹಣವನ್ನೆಲ್ಲಾ ಸುರಿದಾದರೂ ಈ ಬೆಲೆ ಏರಿಕೆಯ ಬಿಸಿಯಿಂದ ಜನರನ್ನಾದರೂ ತಪ್ಪಿಸಬಹುದಿತ್ತಲ್ಲವೇ? ಎಂಬುದು ನಮ್ಮನ್ನು, ನಿಮ್ಮನ್ನು ಕಾಡುತ್ತಿರುವ ಪ್ರಶ್ನೆ.
ಮಹಾ ಚುನಾವಣೆಗಳೇನೂ ಹತ್ತಿರದಲ್ಲಿಲ್ಲ. ಹೀಗಾಗಿ ಇನ್ನೊಂದೆರಡು ವರ್ಷ ಸುಮ್ಮನಿದ್ದು, ಚುನಾವಣೆಗಳು ಬಂದ ಬಳಿಕ ಎಚ್ಚೆತ್ತುಕೊಂಡು, ಜನರ ಕಣ್ಣಿಗೆ ಮಣ್ಣೆರಚಿದರಾಯಿತು. ಯಾಕೆಂದರೆ ಭಾರತೀಯರಿಗೆ ದುಃಖವನ್ನು, ವೇದನೆಯನ್ನು, ಆಕ್ರೋಶವನ್ನು ಬೇಗನೆ ಮರೆತುಬಿಡುವ, ಕೈಚೆಲ್ಲಿ ಕುಳಿತುಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆ. ಏನಿದ್ದರೂ ತತ್‌ಕ್ಷಣದ ಸ್ಪಂದನೆ. ಚುನಾವಣೆ ಸಂದರ್ಭದಲ್ಲಿ ದೊರೆಯುವ ಲಾಭಕ್ಕೇ ಸಂತೃಪ್ತವಾಗಿ, 'ಓಹ್, ಈ ಸರಕಾರ ಎಷ್ಟು ಒಳ್ಳೆ ಆಡಳಿತ ನೀಡುತ್ತಿದೆ' ಎಂದುಕೊಂಡು, ಮತ್ತೆ ಅದೇ ಸರಕಾರಕ್ಕೆ ಓಟು ಕೊಡುತ್ತೇವೆ.
ಸ್ಪಷ್ಟ ಗುರಿ ಇಲ್ಲದ ಆರ್ಥಿಕ ನೀತಿ ರೂಪಿಸಲು, ನಾವು ಕಟ್ಟಿದ ತೆರಿಗೆ ಹಣದಿಂದಲೇ ಬದುಕು ಸಾಗಿಸುತ್ತಿರುವ, ಈ 'ಜನ ನಾಯಕರು' ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಿಕೊಳ್ಳುತ್ತಿರುವವರು ವಿಫಲರಾಗಿರುವುದಕ್ಕೆ ಜನ ಸಾಮಾನ್ಯರೇ ಯಾವತ್ತಿಗೂ ಬಲಿಪಶುವಾಗುತ್ತಿರುವುದು ವ್ಯವಸ್ಥೆಯ ದುರಂತ.
ಒಟ್ಟಾರೆಯಾಗಿ, ಆಮ್ ಆದ್ಮೀಗೆ ರೋಟೀ ಕಪಡಾ ಮಕಾನ್ (ಜನ ಸಾಮಾನ್ಯರಿಗೆ ರೊಟ್ಟಿ, ಬಟ್ಟೆ, ಮನೆ) ಎಂಬುದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಅನಿಸುತ್ತಿದೆಯೇ? ಈ ರೀತಿಯಾಗಿ, 'ಉನ್ನತ ಮಟ್ಟದ' ಸಭೆ ಕರೆಯುವ, ರಾಜ್ಯ ಸರಕಾರಗಳ ಮೇಲೆ ಗೂಬೆ ಕೂರಿಸುವ, ನಮ್ಮ ಮಂತ್ರಿ ಮಹೋದಯರು ಮಿತವ್ಯಯ ಮಾಡುತ್ತಾರೆ ಎಂದು ಜನರಿಗೆ ನಾಮ ಹಾಕುವ, ಹಣದುಬ್ಬರ ದರವೇ ಇದಕ್ಕೆಲ್ಲಾ ಕಾರಣ ಎಂಬ ಸಾಮಾನ್ಯರಿಗೆ ಅರ್ಥವಾಗದ್ದನ್ನು ತೋರಿಸಿ ಕೈತೊಳೆದುಕೊಳ್ಳುವ, ಬೆಲೆ ಇಳಿಸುವ ಮ್ಯಾಜಿಕ್ ಮಾಡಲಾಗುತ್ತಯೇ ಎಂದು ನಮ್ಮನ್ನೇ ಕೇಳುವ ತೋರಿಕೆಯ ಕ್ರಮಗಳ ಹೊರತಾಗಿ, ಒಬ್ಬ ಬಡಪಾಯಿ ಪ್ರಜೆಯನ್ನು ಬೆಲೆ ಏರಿಕೆಯ ಬಿಸಿಯಿಂದ ರಕ್ಷಿಸುವುದಕ್ಕಾಗಿ ಯುಪಿಎ ಸರಕಾರ ನಿಜಕ್ಕೂ ಏನು ಮಾಡುತ್ತಿದೆ? ತಿಳಿದವರು ಒಂದಿಷ್ಟು ಹೇಳುವಿರಾ? 2 ವರ್ಷದ ಹಿಂದಿನ ಲೇಖನದಲ್ಲಿ ಇಲ್ಲಿ ವ್ಯಕ್ತವಾದ ಜನ ಸಾಮಾನ್ಯನ ಬದುಕು-ಬವಣೆಗೂ ಇಂದಿಗೂ ಏನು ವ್ಯತ್ಯಾಸವಿದೆ? ಬದುಕು ಇನ್ನಷ್ಟು ಹೀನಾಯವಾಗಿಲ್ಲವೇ? ಏನಂತೀರಿ?