ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುಡು ಬೇಸಿಗೆ: ಜನಸಾಮಾನ್ಯನಿಗೆ ಹಣದುಬ್ಬರದ ಬೇಗೆ
ಅವಿನಾಶ್ ಬಿ.
ದೆಹಲಿಯಲ್ಲಿ ಜನಸಾಮಾನ್ಯರಿಂದ ಪ್ರತಿಭಟನೆಯ ಧ್ವನಿ
PTI
ಛೆ, ಇದೆಂಥಾ ವಿಚಿತ್ರ! ಕಳೆದ ತಿಂಗಳು ದುಡಿದ ಹಣವೆಲ್ಲಾ ಎಲ್ಲಿ ಹೋಯಿತು? ಇಷ್ಟು ಬೇಗ ಅದೇಕೆ ಖಾಲಿಯಾಯಿತು ಅಂತ ಯೋಚಿಸ್ತಾ ಇದ್ದೀರಾ? ಹೌದು, ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಅದುವೇ ಇನ್‌ಫ್ಲೇಶನ್ - ಹಣದುಬ್ಬರ. ಮಾರ್ಚ್ 29ಕ್ಕೆ ಮುಕ್ತಾಯವಾದ ವಾರದ ಮಾಹಿತಿಯ ಪ್ರಕಾರ, ಹಣದುಬ್ಬರವೆಂಬುದು 2004ರ ನವೆಂಬರ್ ತಿಂಗಳ 8ರ ಬಳಿಕ ಅತ್ಯಧಿಕ - ಶೇ.7.41 ದಾಖಲಾಗಿದೆ. ಇದೇ ಕಾರಣಕ್ಕೆ ಸಂಸತ್ತಿನಲ್ಲೀಗ ಗಲಾಟೆಯೋ ಗಲಾಟೆ. ಕೇಂದ್ರದ ಯುಪಿಎ ಸರಕಾರ ಬಾಲ ಸುಟ್ಟ ಬೆಕ್ಕಿನಂತೆ ತತ್ತರಿಸಿ ಹೋಗಿದೆ. ಪ್ರತಿಪಕ್ಷಗಳಿರಲಿ, ಮಿತ್ರ ಪಕ್ಷಗಳೇ ಕೂಗಾಡತೊಡಗಿವೆ. ಅಲ್ಲಲ್ಲಿ ಪ್ರತಿಭಟನೆಯ ಧ್ವನಿ ಕೇಳಿಬರತೊಡಗಿದೆ.

ಹಿಂದಿನ ವಾರ ಈ ಹಣದುಬ್ಬರ ಪ್ರಮಾಣ ಶೇ.7 ಇತ್ತು. ತರಾತುರಿಯಲ್ಲಿ ಭೀತಿಗೆ ಬಿದ್ದಿರುವ ಕೇಂದ್ರದ ಯುಪಿಎ ಎಂಬ ಸಮ್ಮಿಶ್ರ ಸರಕಾರ, ಇದೀಗ ದೇಶದ ಜನರ ಹಿತವಿರಲಿ, ಕನಿಷ್ಠ ಪಕ್ಷ ಸರಕಾರದ ಹಿತ ಕಾಯುವುದಕ್ಕೋಸ್ಕರವಾಗಿಯಾದರೂ ಕ್ರಮ ಕೈಗೊಳ್ಳಲಾರಂಭಿಸಿದೆ. ಕಚ್ಚಾ ಅಡುಗೆ ಎಣ್ಣೆಯ ಆಮದು ಸುಂಕ ರದ್ದುಪಡಿಸಿರುವ ಅದು, ಬಾಸ್ಮತಿಯೇತರ ಅಕ್ಕಿ ಹಾಗೂ ಸಂಬಾರ ಪದಾರ್ಥಗಳ ರಫ್ತು ನಿಷೇಧಿಸಿದೆ. ಉಕ್ಕು ಉತ್ಪಾದಕರನ್ನು ಬೆಲೆ ತಗ್ಗಿಸುವಂತೆ ಕೋರಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಏಪ್ರಿಲ್ 29ರಂದು ಹಣಕಾಸು ಪೂರೈಕೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಘೋಷಿಸುವ ನಿರೀಕ್ಷೆ ಇದೆ.

ಸರಕಾರ ಇಂದೇನು ಮಾಡಿದೆ?
  ಹಣದುಬ್ಬರ ನಿಯಂತ್ರಣಕ್ಕೆ ಕೇಂದ್ರವು ಸಿಮೆಂಟ್ ರಫ್ತು ನಿಷೇಧ, ಬಾಸ್ಮತಿಯೇತರ ಅಕ್ಕಿ, ಅಡುಗೆಎಣ್ಣೆ ಮತ್ತು ಸಾಂಬಾರ ಪದಾರ್ಥಗಳ ರಫ್ತು ನಿಷೇಧ ವಿಧಿಸಿದೆ. 200 ಶತಕೋಟಿ ಡಾಲರ್ ರಫ್ತು ಗುರಿ ತಲುಪುವುದಕ್ಕಾಗಿ ಸಿಮೆಂಟು ಮತ್ತು ಪ್ರಾಥಮಿಕ ಉಕ್ಕು ಐಟಂಗಳ ರಫ್ತಿಗೆ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು.      
ಹಣದುಬ್ಬರದಿಂದಾಗಿ ಕಬ್ಬಿಣ ಮತ್ತು ಉಕ್ಕಿನ ಬೆಲೆ ಶೇ.5.6ರಷ್ಟು ಏರಿಕೆ ಕಂಡಿದೆ. ಸಿಮೆಂಟ್ ಬೆಲೆ, ತರಕಾರಿ ಬೆಲೆಯೂ ಶೇ.4.1 ಏರಿಕೆಯಾಗಿದ್ದು, ಜನಸಾಮಾನ್ಯರಿಗೂ ಬೆಲೆ ಏರಿಕೆ ಬಿಸಿ ತಟ್ಟತೊಡಗಿದೆ. ಹಣದುಬ್ಬರ ಏರಿಕೆಯಲ್ಲಿ ಈ ಮೂರು ವಸ್ತುಗಳ ಪಾಲು ಅತ್ಯಧಿಕ.

ಹಣದುಬ್ಬರ ನಿಯಂತ್ರಣಕ್ಕಾಗಿ ಸರಕಾರವು, ಅಕ್ಕಿ, ಆಹಾರ ಪದಾರ್ಥಗಳು, ಉಕ್ಕು ರಫ್ತಿಗೆ ನಿಷೇಧ ಹೇರಿದೆ. ಅಕ್ಕಿ, ಸಿಮೆಂಟ್ ಮತ್ತು ಇತರ ಉಕ್ಕಿನ ಐಟಂಗಳ ರಫ್ತಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹವನ್ನೂ ಸರಕಾರ ಹಿಂತೆಗೆದುಕೊಳ್ಳುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವ ಕಮಲನಾಥ್ ಈಗಾಗಲೇ ಹೇಳಿದ್ದಾರೆ.

ತಜ್ಞರ ಪ್ರಕಾರ, ಮುಂಬರುವ ವಾರಗಳಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಲಿದ್ದು, ಆರ್‌ಬಿಐ ತನ್ನ ಹಣಕಾಸು ನೀತಿಯಲ್ಲಿ ಬಡ್ಡಿದರ ಹೆಚ್ಚಳ ಮಾಡಿ ಘೋಷಣೆ ಹೊರಡಿಸುವ ಸಾಧ್ಯತೆಗಳಿವೆ. ಆದರೂ ಒಂದಷ್ಟು ಸಮಾಧಾನಕಾರ ವಿಷಯವೆಂದರೆ, ಫೆಬ್ರವರಿಯಲ್ಲಿ ಕೈಗಾರಿಕಾ ಬೆಳವಣಿಗೆ ದರವು ಶೇ.8.6ಕ್ಕೆ ಏರಿರುವುದು. ಜನವರಿ ತಿಂಗಳಲ್ಲಿ ಇದು ಶೇ.5.6ರಷ್ಟಿತ್ತು. ಬೆಲೆ ಏರಿಕೆಯ ಬಿಸಿ ಏರುತ್ತಿರುವುದರೊಂದಿಗೆ ಸರಕಾರವೂ ಅತ್ತಿತ್ತ ಕಡೆಯಿಂದ ಬಿಸಿ ಎದುರಿಸುತ್ತಿದೆ. ಯಾಕೆಂದರೆ ಯುಪಿಎಯ ಅಂಗ ಪಕ್ಷಗಳೂ ಬಿಸಿಯೇರಿ ಕಾದು ಕೆಂಪಗಾಗುತ್ತಿವೆ.

ಹೀಗಂತ, ಹಣದುಬ್ಬರದ ಬಿಸಿ ಎದುರಿಸುತ್ತಿರುವುದು ಭಾರತ ಮಾತ್ರವೇ ಅಲ್ಲ, ಚೀನಾದಲ್ಲೂ ಬೆಲೆಗಳು 11 ವರ್ಷಗಳಲ್ಲೇ ಅತ್ಯಧಿಕ ಮಟ್ಟ ತಲುಪಿದೆ. ಭಾರತದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಶೇ.3.07 ಇದ್ದ ಹಣದುಬ್ಬರ, ಜನವರಿ ವೇಳೆಗೆ ಶೇ.4.7ಕ್ಕೆ ತಲುಪಿದಾಗಲೇ ಹಾಹಾಕಾರ ಆರಂಭವಾಗಿತ್ತು. ಫೆಬ್ರವರಿಯಲ್ಲಿ ಶೇ.5.02 ಇತ್ತು. ಆದರೀಗ ಏಳೂವರೆ ಶೇಕಡಾ ತಲುಪಿಬಿಟ್ಟಿದೆ!

ಏನಿದು ಹಣದುಬ್ಬರ?: ಜನಸಾಮಾನ್ಯರಿಗೆ ಅರ್ಥವಾಗದ ಈ ಹಣದುಬ್ಬರ ಎಂದರೇನು?

ಲಭ್ಯವಿರುವ ಸರಕು ಮತ್ತು ಸೇವೆಗಳ ಅನುಪಾತವನ್ನೂ ಮೀರಿ, ಲಭ್ಯ ಕರೆನ್ಸಿ ಮತ್ತು ಸಾಲದಲ್ಲಾಗುವ ಹೆಚ್ಚಳದಿಂದಾಗಿ, ಗ್ರಾಹಕ ವಸ್ತುಗಳ ನಿರಂತರ ಬೆಲೆ ಏರಿಕೆ ಅಥವಾ ಹಣದ ಖರೀದಿ ಮೌಲ್ಯದ ನಿರಂತರ ಕುಸಿತವೇ 'ಹಣದುಬ್ಬರ'. ಚುಟುಕಾಗಿ ಹೇಳುವುದಿದ್ದರೆ, ಉತ್ಪಾದಿಸಬಹುದಾದ ಸರಕು ಅಥವಾ ಸೇವೆಗಳಿಗಿಂತ ಅವುಗಳ ಬೇಡಿಕೆ ಹೆಚ್ಚಾಗಿರುವುದು. ಇನ್ನೂ ಅರ್ಥವಾಗಲಿಲ್ಲವೇ? ಸಿಂಪಲ್ಲಾಗಿ: ಸರಕು, ಸೇವೆಗಳ ಬೆಲೆ ಏರುವುದು ಮತ್ತು ಜನತೆಯ ಖರೀದಿ ಸಾಮರ್ಥ್ಯ ಕುಸಿಯುವುದು.

ಹಣದುಬ್ಬರ ಏರಿದಂತೆಲ್ಲಾ ಪ್ರತಿಯೊಂದು ರೂಪಾಯಿಯ ಮೇಲೂ ಅದು ಪ್ರಭಾವ ಬೀರುತ್ತದೆ. ಉದಾಹರಣೆಗೆ, ಹಣದುಬ್ಬರ ದರವು ಶೇ.2 ಇದೆಯೆಂದಿಟ್ಟುಕೊಳ್ಳಿ. ಆಗ ಒಂದು ರೂಪಾಯಿಯ ಒಂದು ಚಾಕೊಲೇಟ್ ಬೆಲೆಯು 1.02 ರೂಪಾಯಿ ಆಗುತ್ತದೆ. ಒಟ್ಟಾರೆ ಇದು ವಾರ್ಷಿಕ ಬೆಲೆ ಏರಿಕೆಯ ದರವನ್ನು ಸೂಚಿಸುತ್ತದೆ.

ಬಹುತೇಕ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳು ಹಣದುಬ್ಬರ ದರವನ್ನು ಶೇ.2ರಿಂದ 3ರ ಆಸುಪಾಸಿನಲ್ಲಿ ಕಾಯ್ದುಕೊಳ್ಳಲು ಶ್ರಮಿಸುತ್ತಿವೆ.

ಸರಕಾರ ಇಂದೇನು ಮಾಡಿದೆ?:
ಹಣದುಬ್ಬರವೆಂಬುದು ಜಾಗತಿಕ ಪೀಡೆಯಾಗಿದೆ ಎಂದಿರುವ ಕೇಂದ್ರ ಸರಕಾರ, ಅದರ ನಿಯಂತ್ರಣಕ್ಕೆ ತನ್ನ ಬಳಿ ಮ್ಯಾಜಿಕ್ ಪಟ್ಟಿಯೇನೂ ಇಲ್ಲ ಅಂತ ಹೇಳಿದೆಯಾದರೂ, ಸಿಮೆಂಟ್ ರಫ್ತು ನಿಷೇಧ, ಬಾಸ್ಮತಿಯೇತರ ಅಕ್ಕಿ, ಅಡುಗೆಎಣ್ಣೆ ಮತ್ತು ಸಾಂಬಾರ ಪದಾರ್ಥಗಳ ರಫ್ತು ನಿಷೇಧ ವಿಧಿಸಲಾಗಿದೆ. 200 ಶತಕೋಟಿ ಡಾಲರ್ ರಫ್ತು ಗುರಿ ತಲುಪುವುದಕ್ಕಾಗಿ ಸಿಮೆಂಟು ಮತ್ತು ಪ್ರಾಥಮಿಕ ಉಕ್ಕು ಐಟಂಗಳ ರಫ್ತಿಗೆ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅವುಗಳನ್ನು ಹಿಂತೆಗೆದುಕೊಳ್ಳಲಾಗಿದೆ.
ಮತ್ತಷ್ಟು
ಪಶ್ಚಿಮಘಟ್ಟದ ಜನರ ತೂಗುವ ಸೇತುವೆ
ಬಸು ,ಸುರ್ಜಿತ್ ನಿರ್ಗಮನ: ಹಿರಿಯರ ಯುಗಾಂತ್ಯ
ತೆಂಡುಲ್ಕರ್ ನಿವೃತ್ತಿ, ಸಿಪ್ಪಿಯಿಂದ ಶೋಲೇ ರಿಮೇಕ್!
'ಹೊಗೆ'ಯ ಬೆಂಕಿಗೆ ಕರುಣಾನಿಧಿಯಿಂದ ತುಪ್ಪ
ಕೊಂಚಕಾಲ ದೂರ ಇರಿ: ದಲ್ಲಾಳಿಗಳ ಸಲಹೆ
ರಾಜ್ಯ ರಾಜಕೀಯದಲ್ಲಿ 'ತ್ರಿಶಂಕು ಸ್ಥಿತಿ'