ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೆಂಡುಲ್ಕರ್ ನಿವೃತ್ತಿ, ಸಿಪ್ಪಿಯಿಂದ ಶೋಲೇ ರಿಮೇಕ್!
ಏಪ್ರಿಲ್ ಫೂಲ್ ದಿನವಾದ ಏಪ್ರಿಲ್ 1ರಂದು ಪರಸ್ಪರರನ್ನು ಫೂಲ್ ಎಂದು ಕರೆಸಿಕೊಳ್ಳುವ ಆಟ ಜನಸಾಮಾನ್ಯರ ನಡುವೆ ಜನಜನಿತ. ಮಾಧ್ಯಮಗಳು ಕೂಡ ಇದರಲ್ಲಿ ಹಿಂದೇಟು ಹಾಕುವುದಿಲ್ಲ. ಇಂದು ಪ್ರಕಟವಾದ ಸ್ಕೂಪ್ ವರದಿಗಳಲ್ಲಿ ತೆಂಡುಲ್ಕರ್ ನಿವೃತ್ತಿ, ಶೋಲೇ ಮರು ನಿರ್ಮಾಣ, ರಾಷ್ಟ್ರೀಯ ಕ್ರೀಡೆ ಸ್ಥಾನದಿಂದ ಹಾಕಿಗೆ ಖೋ... ಇತ್ಯಾದಿ ಪ್ರಮುಖವಾದವು

ಈ ಬಾರಿ ಏ.1ರಂದು ಬಹುಚರ್ಚಿತವಾಗಿರುವ ಏಪ್ರಿಲ್ ಫೂಲ್ ಸ್ಕೂಪ್ ವರದಿಗಳೆಂದರೆ, ಖ್ಯಾತ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ನಿವೃತ್ತಿ ಘೋಷಿಸುತ್ತಾರೆ, ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ವಿರುದ್ಧ ಬಂಡಾಯದಿಂದಾಗಿ ಪದವಿ ತ್ಯಾಗ ಮಾಡಬೇಕಾಯಿತು ಹಾಗೂ ಭಾರತ ರಾಷ್ಟ್ರೀಯ ಕ್ರೀಡೆಯಾಗಿ ಹಾಕಿಯನ್ನು ಕಿತ್ತೊಗೆದು, ಕ್ರಿಕೆಟನ್ನು ಕುಳ್ಳಿರಿಸಲಾಗಿದೆ ಎಂಬುದೇ ಮುಂತಾದವು!

ಮರಾಠಿ ಪತ್ರಿಕೆ ಲೋಕಸತ್ತಾದ ವರದಿ ಪ್ರಕಾರ, ಕಾಂಗ್ರೆಸ್ ಹೈಕಮಾಂಡಿನ ಆಶೀರ್ವಾದ ಬಲ ಹೊಂದಿರುವ ನಾರಾಯಣ ರಾಣೆಯ 'ಬಂಡಾಯ'ದಿಂದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರು ಪದವಿ ಕಳೆದುಕೊಂಡಿದ್ದಾರೆ.

ವಿಶೇಷವೆಂದರೆ, ದೇಶಮುಖ್ ಪದವಿ ಉಳಿಸಿಕೊಳ್ಳುವ ಬಗ್ಗೆ ಈಗಾಗಲೇ ಹಲವು ಬಾರಿ ಸಂದೇಹದ ವರದಿಗಳು ಪ್ರಕಟವಾಗಿದ್ದವು. ಅವರು ಮುಂದಿನ ಅಕ್ಟೋಬರ್ ತಿಂಗಳವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿದರೆ ನಾಲ್ಕು ವರ್ಷ ಪೂರೈಸುತ್ತಾರೆ.

ತೆಂಡುಲ್ಕರ್ ಅವರು ತೆರೆಮರೆಗೆ ಸರಿಯುವ ಸುದ್ದಿ ಪ್ರಕಟವಾಗಿರುವುದು ಸಕಾಳ್ ಎಂಬ ಮರಾಠಿ ಪತ್ರಿಕೆಯಲ್ಲಿ. ಇದರ ಜೊತೆಗೆ, ಶಾರೂಖ್ ಖಾನ್ ಅವರು ಮರಾಠಿ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಪ್ರಕಟವಾಗಿದೆ.

ಅಂತೆಯೇ, ಎಂಎಸ್ಎನ್‌ನ ಇಂಗ್ಲಿಷ್ ಸೈಟಿನಲ್ಲಿಯೂ ತೆಂಡುಲ್ಕರ್ ಅವರು ಗಾಯಾಳುವಾಗಿರುವುದು, ತಮ್ಮ ತವರುನಾಡಿನಲ್ಲಿ ನಡೆಯುವ ಟೆಸ್ಟ್ ಪಂದ್ಯದಲ್ಲಿ ವಿದಾಯ ಹಾಡಲಿದ್ದಾರೆ ಎಂದು ವರದಿ ಮಾಡಲಾಗಿದೆ.

ಸಕಾಳ್ ಮತ್ತೊಂದು ಸುದ್ದಿಯ ಪ್ರಕಾರ, ಬಾಲಿವುಡ್ ಬ್ಲಾಕ್‌ಬಸ್ಟರ್ 'ಶೋಲೇ' ಚಿತ್ರದ ರೀಮೇಕ್‌ನಲ್ಲಿ ರಾಂ ಗೋಪಾಲ್ ವರ್ಮಾ ಅವರು ವಿಫಲರಾದ ಹಿನ್ನೆಲೆಯಲ್ಲಿ, ತಾವೇ ಸ್ವತಃ ಅದರ ರೀಮೇಕ್ ಮಾಡುವುದಾಗಿ ಮೂಲ ನಿರ್ದೇಶಕ ರಮೇಶ್ ಸಿಪ್ಪಿ ಘೋಷಿಸಿರುವುದಾಗಿ ತಿಳಿಸಲಾಗಿದೆ.

ನಾಸಿರುದ್ದೀನ್ ಶಾ ಅವರು ಗಬ್ಬರ್ ಸಿಂಗ್ ಪಾತ್ರವನ್ನೂ, ಶಾರೂಖ್ ಮತ್ತು ಅಮೀರ್ ಖಾನ್ ಅವರು ಜೈ ಮತ್ತು ವೀರೂ ಪಾತ್ರಗಳನ್ನು ಹಾಗೂ ಕತ್ರಿನಾ ಕೈಫ್ ಬಸಂತಿ ಪಾತ್ರ, ಪರೇಶ್ ರಾವಲ್ 'ಸಾಂಬಾ' ಪಾತ್ರ ನಿರ್ವಹಿಸುವುದಾಗಿ ಬಿಂಬಿಸಲಾಗಿದೆ.

ಇತ್ತ, ಕನ್ನಡ ಪ್ರಭ ಪತ್ರಿಕೆಯೂ, ಭಾರತದ ರಾಷ್ಟ್ರೀಯ ಕ್ರೀಡೆಯಾಗಿ 'ಹಾಕಿ'ಗೆ ಖೋ ನೀಡಿ, ಅದರ ಸ್ಥಾನದಲ್ಲಿ ಕ್ರಿಕೆಟನ್ನು ಮಾನ್ಯ ಮಾಡಿದೆ ಎಂದೂ ಇಂದಿನ ಸಂಚಿಕೆಯಲ್ಲಿ ವರದಿ ಮಾಡಿದೆ.

ಪತ್ರಿಕೆಗಳು ಸುದ್ದಿಯ ಕೊನೆಗೆ ಇದು ಏಪ್ರಿಲ್ ಫೂಲ್ ಸುದ್ದಿ ಅಂತ ಸೇರಿಸುವುದನ್ನು ಮಾತ್ರ ಬಿಡಲಿಲ್ಲ. ಇದಕ್ಕೆ ಕಾರಣವೂ ಇದೆ. ಈ ಹಿಂದೆ ಇಂಥ ಅದೆಷ್ಟೋ ಲೀಡ್ ಸುದ್ದಿಗಳು ಪ್ರಕಟವಾಗಿ ಓದುಗರು ಗೊಂದಲಕ್ಕೀಡಾಗಿದ್ದು, ಬಳಿಕ ಪತ್ರಿಕಾ ಕಚೇರಿಗಳಿಗೆ ಫೋನುಗಳ ಮೇಲೆ ಫೋನು ಹಚ್ಚಿ ಕೂಗಾಡಿದ ಘಟನೆಗಳೆಲ್ಲವೂ ಇವೆ. ಇದರಿಂದಾಗಿ ಮಾಧ್ಯಮಗಳು ವಿಶ್ವಾಸಾರ್ಹತೆ ಕಳೆದುಕೊಳ್ಳಲಿವೆ ಎಂಬುದು ಎಲ್ಲರೂ ಒಪ್ಪುವ ವಿಚಾರ.
ಮತ್ತಷ್ಟು
'ಹೊಗೆ'ಯ ಬೆಂಕಿಗೆ ಕರುಣಾನಿಧಿಯಿಂದ ತುಪ್ಪ
ಕೊಂಚಕಾಲ ದೂರ ಇರಿ: ದಲ್ಲಾಳಿಗಳ ಸಲಹೆ
ರಾಜ್ಯ ರಾಜಕೀಯದಲ್ಲಿ 'ತ್ರಿಶಂಕು ಸ್ಥಿತಿ'
ದುರ್ಬಲವಾಗುತ್ತಿರುವ ಶೇರು ವ್ಯವಹಾರ
ತೆರಿಗೆ ಉಳಿತಾಯಕ್ಕೆ ಬಂಡವಾಳ ಹೂಡಿಕೆಯೇ ಪರಿಹಾರ
ಚುನಾವಣೆಯಲ್ಲಿ ಬಜೆಟ್ ಪರಿಣಾಮ