ರಾಜ್ಯ ರಾಜಕೀಯದಲ್ಲಿ 'ತ್ರಿಶಂಕು ಸ್ಥಿತಿ'
|
|
|
|
|
|
|
|
|
|
|
ನಾಗೇಂದ್ರ ತ್ರಾಸಿ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವುದು ಖಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಬಿರುಸಿನ ಚಟುವಟಿಕೆ ನಡೆಯತೊಡಗಿದೆ.
ಎಲ್ಲವೂ ಸರಿಯಾಗಿದೆ ಎಂಬಷ್ಟರಲ್ಲಿಯೇ ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ರಾಜ್ಯರಾಜಕಾರಣದ ಪಡಸಾಲೆಗೆ ಎಳೆದುತಂದಿದೆ. ಕೃಷ್ಣ ಅವರು ರಾಜ್ಯ ರಾಜಕೀಯಕ್ಕೆ ಆಗಮಿಸುತ್ತಾರೆ ಎಂಬ ಸುದ್ದಿ ಹಬ್ಬುತ್ತಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಸಮಾಧಾನ ವ್ಯಕ್ತಪಡಿಸಿದ್ದರು. ಡಿ.ಕೆ.ಶಿವಕುಮಾರ್ ಗುಂಪಿಗೆ ಕೃಷ್ಣರ ಆಗಮನ ಮಹತ್ವದ್ದೆನಿಸಿದ್ದರೂ, ಕಾಂಗ್ರೆಸ್‌ನ ಬಹುತೇಕ ಮುಖಂಡರಿಗೆ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದೆ. ಅದರ ಪರಿಣಾಮ ಎಂಬಂತೆ ಮೈಸೂರಿನಲ್ಲಿ ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ರಾಜ್ಯದ ಉದ್ದಗಲಕ್ಕೂ ಜನಜಾಗೃತಿ ಮೂಡಿಸಲು ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಎಸ್.ಎಂ.ಕೃಷ್ಣ ಅವರನ್ನು ಆಹ್ವಾನಿಸದೆ ಆಮಂತ್ರಣ ಪತ್ರದಿಂದ ಅವರ ಹೆಸರನ್ನು ಕೈ ಬಿಡಲಾಗಿದೆ. ಇದರಿಂದ ಕಾಂಗ್ರೆಸ್ ಗುಂಪುಗಾರಿಕೆ ಮತ್ತೊಮ್ಮೆ ಬಯಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಕೂಡ ರಾಹುಲ್ ಗಾಂಧಿಯನ್ನು ಹೆಚ್ಚಾಗಿ ಪ್ರಚಾರಕ್ಕೆ ಬಳಸಿಕೊಳ್ಳತೊಡಗಿದೆ. ಆದರೆ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ರಾಹುಲ್ ರೋಡ್ ಶೋ ಯಾವುದೇ ಫಲ ಕೊಟ್ಟಿಲ್ಲ. ಆದರೂ ಒರಿಸ್ಸಾದಿಂದ ಡಿಸ್ಕವರ್ ಇಂಡಿಯಾ ಪ್ರವಾಸ ಆರಂಭಿಸಿರುವ ರಾಹುಲ್ ಕರ್ನಾಟಕಕ್ಕೂ ಆಗಮಿಸುತ್ತಿದ್ದಾರೆ. ಜನರು ರಾಹುಲ್‌ಗೆ ಹೆಚ್ಚಿನ ಮಹತ್ವ ನೀಡುವುದು ಅನುಮಾನವೇ. ಇಂದಿರಾ, ರಾಜೀವ್‌ಗಾಂಧಿ ರೋಡ್ ಶೋಗಳಿಗೆ ಜನ ಮುಗಿ ಬೀಳುತ್ತಿದ್ದರು, ಹಾಗೂ ನಿಮ್ಮದು ಯಾವುದಕ್ಕೆ ಮತ ಅಂತ ಕೇಳಿದರೆ 'ಕೈ'ಎನ್ನುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಸಿದ್ಧರಾಮಯ್ಯ,ಎಂ.ಪಿ.ಪ್ರಕಾಶ್‌ರಂತಹ ಘಟಾನುಘಟಿಗಳು ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ ಬಲಶಾಲಿಯಾಗಿದೆ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬಂದರೂ, ರಾಜ್ಯ ರಾಜಕಾರಣದಲ್ಲಿನ ಸೂಕ್ಷ್ಮ ಎಳೆಗಳನ್ನು ಅವಲೋಕಿಸುತ್ತ ಹೋದರೆ, ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೇ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಅಸ್ತು ಎಂದ ಮೇಲೆ ಕೆಲವು ಮುಖಂಡರಿಗೆ ದಿಕ್ಕೇ ತೋಚದಂತಾಗಿದೆ. ಈ ಸ್ಥಿತಿ ಕೇವಲ ಕಾಂಗ್ರೆಸ್‌ಗೆ ಮಾತ್ರವಲ್ಲ, ಬಹುತೇಕ ಪಕ್ಷದಲ್ಲಿನ ಮುಖಂಡರು ಹಲವು ವರ್ಷಗಳ ಕಾಲ ಒಂದೇ ಕ್ಷೇತ್ರದಲ್ಲಿ ಪಾಳೇಗಾರರಂತೆ ಸ್ಪರ್ಧಿಸಿ ಗೆಲ್ಲುತ್ತಿದ್ದರು. ಆ ಅವಕಾಶ ಈ ಬಾರಿ ಕೈ ತಪ್ಪಿ ಹೋಗುವ ಮೂಲಕ ಅವರ ಅಸ್ತಿತ್ವಕ್ಕೆ ಕೊಡಲಿಯೇಟು ಬಿದ್ದಂತಾಗಿರುವುದರಿಂದ ಈ ಬಾರಿಯ ಚುನಾವಣೆ ಅಖಾಡ ಮತ್ತಷ್ಟು ರಂಗೇರಲಿದೆ.
ಇನ್ನು ಭಾರತೀಯ ಜನತಾ ಪಕ್ಷ. ಅನುಕಂಪ, ಹಿಂದುತ್ವದ ಅಜೆಂಡಾದ ಮೇಲೆ ಮುನ್ನುಗ್ಗಲು ಪ್ರಯತ್ನಿಸಿದರೂ ಯಾವುದೇ ಫಲ ನೀಡದ ಕಾರಣ ಇದೀಗ ಬಿಜೆಪಿ ತನ್ನ ವರಸೆಯನ್ನು ಬದಲಾಯಿಸಿ, ಗಲಭೆ, ದತ್ತಪೀಠಗಳೆಲ್ಲವನ್ನು ಬದಿಗೊತ್ತಿ - ರೈತಪರ, ಶಾಸ್ತ್ರೀಯ ಸ್ಥಾನಮಾನ, ಭ್ರಷ್ಟಾಚಾರ ಅಜೆಂಡಾವನ್ನು ಮುಂದಿಟ್ಟು ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧವಾಗಿದೆ.
ಜೆಡಿಎಸ್ ಕೆಟ್ಟ ಮೇಲೆ ಬುದ್ಧ ಬಂತು ಎಂಬ ಗಾದೆ ಮಾತಿನಂತೆ ಕಾಂಗ್ರೆಸ್-ಬಿಜೆಪಿಯನ್ನು ಸಮಾನ ಶತ್ರುಗಳೆಂದು ದೂರ ಸರಿದಿದ್ದು, ತಮ್ಮ ಸರಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟು ಮತದಾರರ ಬಳಿ ಹೋಗುವುದಾಗಿ ಹೇಳಿದೆ. ಇನ್ನು ಬಿಎಸ್ಪಿ, ಸಮಾಜವಾದಿ, ಸಿಪಿಐಎಂ ಮುಂತಾದವುಗಳೂ ಕಣಕ್ಕಿಳಿಯಲಿವೆ. ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷವಾಗಲಿ, ಪ್ರಾದೇಶಿಕ ಪಕ್ಷದಲ್ಲಾಗಲಿ ಹೇಳಿಕೊಳ್ಳುವಂತಹ ಒಬ್ಬನೇ ಒಬ್ಬ ಡೈನಾಮಿಕ್ ರಾಜಕಾರಣಿ ಇದ್ದಾರೆಯೇ ಎಂಬುದು ಮತದಾರರ ಮುಂದಿರುವ ಪ್ರಶ್ನೆ. ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಆದರೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಈ ಬಾರಿಯೂ ಯಾವ ಪಕ್ಷಕ್ಕೂ ಬಹುಮತ ದೊರೆಯಲಾರದು ಎಂಬ ಅಂಶ ನಿಚ್ಚಳವಾಗತೊಡಗಿದೆ.
ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಘಟಾನುಘಟಿಗಳಲ್ಲಿ ಕ್ಷೇತ್ರಗಳನ್ನು ಕಳೆದುಕೊಳ್ಳಲಿರುವವರಲ್ಲಿ ಪ್ರಮುಖರ ಪಟ್ಟಿ ಇಲ್ಲಿದೆ: ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(ಗುರುಮಠಕಲ್), ಎಂ.ಪಿ.ಪ್ರಕಾಶ್(ಹೂವಿನ ಹಡಗಲಿ), ಡಿ.ಕೆ.ಶಿವಕುಮಾರ್ (ಸಾತನೂರು), ಟಿ.ಬಿ.ಜಯಚಂದ್ರ (ಕಳ್ಳಂಬೆಳ್ಳ), ಡಾ.ಜಿ.ಪರಮೇಶ್ವರ(ಮಧುಗಿರಿ), ಎನ್.ಎಸ್. ಬೋಸರಾಜು (ಮಾನ್ವಿ), ಗುರುಪಾದಪ್ಪ ನಾಗಮಾರಪಲ್ಲಿ (ಔರಾದ್), ಕೃಷ್ಣಬೈರೇಗೌಡ (ವೇಮಗಲ್)
ಸಿ.ಚನ್ನಿಗಪ್ಪ(ಕೊರಟಗೇರಿ), ಡಿ.ಮಂಜುನಾಥ್(ಹಿರಿಯೂರು), ಅಲಂಗೂರು ಶ್ರೀನಿವಾಸ್(ಮುಳಬಾಗಿಲು), ಕೆ.ಎನ್.ರಾಜಣ್ಣ (ಬೆಳ್ಳಾವಿ), ನಾಗರಾಜಯ್ಯ (ಹುಲಿಯೂರುದುರ್ಗ), ಸಂತೋಷ್ ಲಾಡ್ (ಸಂಡೂರು), ಅಮರೇಗೌಡ ಬಯ್ಯಾಪುರ (ಲಿಂಗಸೂರು), ವೈಜನಾಥ್ ಪಾಟೀಲ್ (ಚಿಂಚೋಳಿ).
ಬಿಜೆಪಿಯ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ (ಮಾಯಾಕೊಂಡ), ಪಕ್ಷೇತರ ಶಾಸಕರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ (ಬ್ರಹ್ಮಾವರ), ಎಚ್. ಆಂಜನೇಯ (ಭರಮಸಾಗರ), ನಾಗಮಣಿ ನಾಗೇಗೌಡ(ಕಿರಗಾವಲ).
ಅಲ್ಲದೆ, ದಾವಣಗೆರೆ, ರಾಯಚೂರು, ಬಳ್ಳಾರಿಯಲ್ಲಿ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳು ಜಾಸ್ತಿಯಾಗಲಿದ್ದು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಕೋಲಾರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಮಡಿಕೇರಿ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಂದೊಂದು ಹಾಗೂ ತುಮಕೂರು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳು ಕಡಿಮೆ ಆಗಲಿವೆ.
|
|
|
|