ಶೈಕ್ಷಣಿಕ ಕ್ಷೇತ್ರದಲ್ಲಿ ರಾಷ್ಟ್ರದ ನಕಾಶೆಯಲ್ಲಿ ಸ್ಥಾನ ಪಡೆದ ಊರು ಸುಳ್ಯ. ಇಲ್ಲಿ ಅವರೊಬ್ಬರಿದ್ದಾರೆ. ಸೇತುವೆ ಮಾನವ. ಇವರಿಗೆ ಮಾನವರನ್ನು ಸಂಪರ್ಕಿಸುವ ಸೇತುವೆ ನಿರ್ಮಿಸುವ ಫ್ಯಾಶನ್. ಓದಿದ್ದು ಮೆಕಾನಿಕಲ್ ಇಂಜೀನಿಯರಿಂಗ್. ಸುಳ್ಯದಲ್ಲಿ ವ್ಯಾಪಾರ ವೃತ್ತಿಯನ್ನೂ ಹೊಂದಿರುವ ಇವರ ಪರಿಕಲ್ಪನೆ ಅದೆಷ್ಟೋ ಮಂದಿಗೆ ನೆಮ್ಮದಿ ನೀಡಿದೆ.
ದಕ್ಷಿಣಕನ್ನಡದ ಪುಟ್ಟ ಪಟ್ಟಣ ಸುಳ್ಯದಲ್ಲಿರುವ 'ಸಂಪರ್ಕ ವ್ಯಕ್ತಿ'ಯ ಹೆಸರು ಗಿರೀಶ್ ಭಾರಾದ್ವಾಜ್. ಇವರದ್ದು ಜನತೆಯನ್ನು ಸಂಪರ್ಕಿಸುವ ಸಾಮಾಜಿಕ ಚಳುವಳಿ. ಪಶ್ಚಿಮ ಘಟ್ಟಗಳಲ್ಲಿ ಹರಿಯುವ ನದಿಗಳ ಎರಡು ಬದಿಗಳನ್ನು ಸಂಪರ್ಕಿಸಲು ಅತಿ ಕಡಿಮೆ ವೆಚ್ಚದಲ್ಲಿ ಕಾಡಿನ ನಡುವೆಯೇ ಸರಳ, ಸುಂದರ, ಸುರಕ್ಷ ತೂಗು ಸೇತುವೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಿದ ಖ್ಯಾತಿಗೆ ಭಾಜನರಾದವರು ಭಾರಾದ್ವಾಜ್.
ಸುಳ್ಯ ತಾಲೂಕಿನಿಂದ ಆರಂಭಗೊಂಡ ಇವರ ತೂಗು ಸೇತುವೆ ಅಭಿಯಾನ ಕಳೆದೆರಡು ದಶಕಗಳಲ್ಲಿ ಕರ್ನಾಟಕದಾಚೆಗೂ ವಿಸ್ತರಿಸಿದ್ದು, ನೆರೆಯ ಕೇರಳ ಮತ್ತು ಆಂಧ್ರಗಳಲ್ಲೂ ತೂಗು ಸೇತುವೆಗಳು ತೂಗುತ್ತಿವೆ.
ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ ಗಿರೀಶ್ ಅವರು ತೂಗು ಸೇತುವೆ ನಿರ್ಮಿಸುತ್ತಾರೆ. ಈ ಮೂಲಕ ಗ್ರಾಮಗ್ರಾಮಗಳ ಜನರ ಸಂಪರ್ಕಕ್ಕೆ ಅಕ್ಷರಶಃ ಸೇತುವೆ ಕಟ್ಟುವ ಇವರು ಬಳಸುವುದು ನೈಸರ್ಗಿಕವಾಗಿ ಲಭಿಸುವ ವಸ್ತುಗಳನ್ನೇ. ಬಿದಿರು, ಮರ ಬಳಕೆಯ ಗಟ್ಟಿ ಮುಟ್ಟಾದ ಸೇತುವೆಗಳು ಜನತೆಯ ಸಂಕಷ್ಟವನ್ನು ದೂರವಾಗಿಸಿವೆ. ಮುಖ್ಯವಾಗಿ ಮಳೆಗಾಲದಲ್ಲಿ ಸಂಪರ್ಕ ಕಡಿದುಕೊಂಡು ದ್ವೀಪಗಳಂತೆಯೇ ಆಗಿಬಿಡುವ ಎಷ್ಟೋ ಗ್ರಾಮಗಳಿಗೆ ಇವರ ಪರಿಕಲ್ಪನೆಯ ಸೇತುವೆಗಳು ಮುಕ್ತಿ ನೀಡಿವೆ.
ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರ್ಮಾಣವಾಗುವ ಈ ಸೇತುವೆಯ ನಿರ್ಮಾಣಕ್ಕೆ ಊರಿನವರೇ ಸಂಪನ್ಮೂಲ ಒದಗಿಸುತ್ತಾರೆ. ಮತ್ತು ಸೇತುವೆ ಕಟ್ಟಲು ಸಹಾಯವನ್ನೂ ಒದಗಿಸುತ್ತಾರೆ.
ಸುಳ್ಯಪೇಟೆಯಿಂದ ಸ್ವಲ್ಪವೇ ದೂರದಲ್ಲಿ, ಮಡಿಕೇರಿ ಅಭಿಮುಖವಾಗಿ ತೆರಳುವಾಗ ಸಿಗುವ ಅರಂಬೂರು ಎಂಬಲ್ಲಿರುವ ತೂಗು ಸೇತುವೆ ಪರ ಊರಿನವರಿಗೊಂದು ಪ್ರವಾಸೀ ಆಕರ್ಷಣೆ ಎಂದರೆ ತಪ್ಪಾಗಲಾರದು. ಈ ವಿಚಾರ ತಿಳಿದ ದೂರದೂರಿನವರು ಇಲ್ಲಿ ಒಂದಷ್ಟು ಹೊತ್ತು ತಮ್ಮ ವಾಹನಗಳನ್ನು ನಿಲ್ಲಿಸಿ ಈ ಸೇತುವೆಯತ್ತ ಹೆಜ್ಜೆ ಹಾಕಿ, ಈ ತುದಿಯಿಂದ ಆ ತುದಿಗೆ ಸಾಗಿ, ತೂಗು ಸೇತುವೆಯ ಅನುಭವ ಪಡೆಯುತ್ತಾರೆ.
ತೂಗು ಸೇತುವೆಯ ಮೂಲಕ ವಿಸ್ಮಯದ ಕೊಡುಗೆ ನೀಡಿರುವ ಇವರದ್ದು ಮೌನಕ್ರಾಂತಿ.
|