ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಹಿನ್ನೋಟ: 2010 ಟಾಪ್ ಟೆನ್ ಹಗರಣ-ವಿವಾದಗಳು (Roundup 2010 | India | Radia | Scam | Nityananda | CWG | Modi | Adarsha | Yaddyurappa)
Bookmark and Share Feedback Print
 
2010 ಹಗರಣಗಳದ್ದೇ ಪರ್ವ. ರಾಜ್ಯ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ರಾಜಕಾರಣಿಗಳು ಅಂದುಕೊಂಡವರ ಅಕ್ರಮ, ಅನ್ಯಾಯ, ಹಗರಣಗಳು ಬೆಳಕಿಗೆ ಬಂದ ಪರ್ವ ಕಾಲ. ಭಾರತದ ಮಟ್ಟಿಗಂತೂ ಇಲ್ಲಿನ ರಾಜಕಾರಣಿಗಳನ್ನು "ತಮ್ಮ ಅಕ್ರಮಗಳು ಹೀಗೂ ಬಯಲಿಗೆ ಬಂತೇ" ಎಂದು ಬೆಚ್ಚಿ ಬೀಳಿಸಿದ ವರ್ಷವಿದು. ಆಶ್ರಮದಿಂದ, ರಾಜಕೀಯದಿಂದ, ಬೆಡ್‌ರೂಂಗಳಿಂದ, ಫೇಸ್‌ಬುಕ್, ಟ್ವಿಟ್ಟರ್‌ನಿಂದ, ಇಂಟರ್ನೆಟ್‌ಗಳಿಂದ... ಹೀಗೆ ಎಲ್ಲೆಲ್ಲಿಂದಲೋ ಸೋರಿಬಂದವು ರಾಶಿ ರಾಶಿ ಹಗರಣಗಳು. ರಾಷ್ಟ್ರ ಮಟ್ಟದಲ್ಲಿ ಎ.ರಾಜಾ, ಸ್ವಾಮಿ ನಿತ್ಯಾನಂದ, ನೀರಾ ರಾಡಿಯಾ, ಸುರೇಶ್ ಕಲ್ಮಾಡಿ, ಅಶೋಕ್ ಚವಾಣ್, ಯಡಿಯೂರಪ್ಪ, ಅರುಂಧತಿ ರಾಯ್, ರಾಹುಲ್ ಗಾಂಧಿ ಮುಂತಾದವರ ನಡವಳಿಕೆಗಳು, ಮಾತುಗಳು ಇಲ್ಲದೇ ಹೋಗಿದ್ದರೆ ಮಾಧ್ಯಮಗಳು ಅದೆಷ್ಟು ಬೋರಿಂಗ್ ಆಗಿರುತ್ತಿದ್ದವು ಎಂಬುದನ್ನೊಮ್ಮೆ ನೆನಪಿಸಿಕೊಳ್ಳಿ! ಈ ಟಾಪ್ ಟೆನ್ ವಿವಾದಗಳತ್ತ ಒಂದು ಝಲಕ್ ಇಲ್ಲಿದೆ:

ಸ್ವಾಮಿ ನಿತ್ಯಾನಂ
PR
ನಿತ್ಯಾನಂದ ಸ್ವಾಮೀಜಿಯು ತಮಿಳು ನಟಿಯೊಂದಿಗಿದ್ದ ಬೆಡ್‌ರೂಂ ದೃಶ್ಯಗಳು ಟಿವಿ, ಇಂಟರ್ನೆಟ್‌ನಲ್ಲಿ ಬಿಸಿ ಬಿಸಿ ಸುದ್ದಿ ಮಾಡತೊಡಗಿದಾಗ, ಅಲ್ಲೊಂದು ಲೈಂಗಿಕ ಹಗರಣವೊಂದು ತಲೆ ಹೊರಗೆ ಹಾಕಿತ್ತು. ಪ್ರಕರಣ ಹೊರಬಿದ್ದಾಕ್ಷಣ ಆತನ ಆಶ್ರಮಗಳಲ್ಲಿ ಜನ ದಾಂಧಲೆ ಎಬ್ಬಿಸಿ ಆಕ್ರೋಶ ಹೊರಗೆಡಹಿದರು. ಹಲವಾರು ದಿನ ತಲೆ ಮರೆಸಿಕೊಂಡ ಬಳಿಕ ಏಪ್ರಿಲ್ 21ರಂದು ಹಿಮಾಚಲ ಪ್ರದೇಶದ ಸೋಲನ್ ಎಂಬಲ್ಲಿ ನಿತ್ಯಾನಂದ ಸ್ವಾಮಿಯನ್ನು ಬಂಧಿಸಿ ವಿಚಾರಣೆಗೆ ಕರೆದುತರಲಾಯಿತು. ಈ ನಟಿಯು ತನ್ನ ದೀರ್ಘಕಾಲದ ಭಕ್ತೆಯಾಗಿದ್ದು, ಮಾಧ್ಯಮಗಳು ಆಕೆಯ ಇರುವಿಕೆಯನ್ನು ತಪ್ಪಾಗಿ ಬಿಂಬಿಸಿ ಪ್ರಸಾರ ಮಾಡಿವೆ ಮತ್ತು ಇದೆಲ್ಲಾ ತನಗಾಗದವರ ಸಂಚಿನ ಭಾಗ ಎಂದು ಸ್ಪಷ್ಟನೆ ನೀಡಿದ್ದರು. ಕರ್ನಾಟಕ ಸಿಐಡಿ ಪೊಲೀಸರು ನಿತ್ಯಾನಂದ ಮತ್ತು ಇತರ ನಾಲ್ವರ ವಿರುದ್ಧ ಅತ್ಯಾಚಾರ ಮತ್ತು ಅಸಹಜ ಲೈಂಗಿಕ ಕ್ರಿಯೆ ಆರೋಪದಲ್ಲಿ ಚಾರ್ಜ್ ಶೀಟ್ ಸಲ್ಲಿಸಿ ತನಿಖೆ ಮುಂದುವರಿಸುತ್ತಿದ್ದಾರೆ.

ಶಶಿ ತರೂರ್, ಸುನಂದಾ ಪುಷ್ಕರ
PTI
ಟ್ವಿಟ್ಟರ್‌ನಿಂದ ಹಗರಣವೊಂದು ಬಯಲಿಗೆ ಬಂದು ಕೇಂದ್ರ ಮಂತ್ರಿ ಪದವಿಯನ್ನೇ ಕಳೆದುಕೊಳ್ಳಬೇಕಾಗಿ ಬಂದಿದ್ದು ಕೇಂದ್ರ ಮಂತ್ರಿಯಾಗಿದ್ದ ಶಶಿ ತರೂರ್. ಕೊಚ್ಚಿ ಐಪಿಎಲ್ ಕ್ರಿಕೆಟ್ ತಂಡದ ಶೇರು ಖರೀದಿಯಲ್ಲಿ ತಮ್ಮ ಪತ್ನಿಯಾಗಲಿದ್ದ ಗೆಳತಿ ಸುನಂದಾ ಪುಷ್ಕರ್‌ಗೆ ಕೇಂದ್ರ ಸಚಿವನಾಗಿ ಸಹಾಯ ಮಾಡಿದ್ದು ಅವರ ವಿದೇಶಾಂಗ ಖಾತೆ ರಾಜ್ಯ ಸಚಿವನ ಹುದ್ದೆಗೆ ಕುತ್ತಾಯಿತು. ಕೊಚ್ಚಿ ಐಪಿಎಲ್ ತಂಡದ ಫ್ರಾಂಚೈಸೀ ಮಾಲೀಕರಾದ ರೆಂಡೆಜ್ವಸ್ ಸ್ಪೋರ್ಟ್ಸ್‌ನ ಶೇರುದಾರರ ಪಟ್ಟಿಯನ್ನು ಐಪಿಎಲ್ ಮುಖ್ಯಸ್ಥರಾಗಿದ್ದ ಲಲಿತ್ ಮೋದಿ ಬಿಡುಗಡೆ ಮಾಡಿದಾಗ ಈ ವಿವಾದ ಹೊರಬಿದ್ದಿತ್ತು. ಸುನಂದಾ ಪುಷ್ಕರ್‌ಗೆ ಸ್ವೆಟ್ ಈಕ್ವಿಟಿ ರೂಪದಲ್ಲಿ ಅಂದಾಜು ಒಟ್ಟು ಈಕ್ವಿಟಿಯ ಶೇ.4.5 ಭಾಗವನ್ನು ನೀಡಲಾಗಿದ್ದು, ಇದರ ಅಂದಾಜು ಮೊತ್ತ ಸುಮಾರು 70 ಕೋಟಿ ರೂ. ಆಕೆಯ ವಿವರವನ್ನು ಬಹಿರಂಗ ಮಾಡಬಾರದು ಎಂದು ತರೂರ್ ಅವರು ಮೋದಿಗೆ ಹೇಳಿದ್ದರು ಎಂಬಲ್ಲಿಂದ ವಿವಾದವು ಪ್ರಾರಂಭಗೊಂಡಿತ್ತು. ಆದರೆ, ಇದರಲ್ಲಿ ತನಗೆ ಯಾವುದೇ ಹಣಕಾಸು ಲಾಭ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ತರೂರ್. ಕೊನೆಯಲ್ಲಿ ಸುನಂದಾ, ತಮ್ಮ ಸ್ವೆಟ್ ಈಕ್ವಿಟಿ ಶೇರುಗಳನ್ನು ಕೊಚ್ಚಿ ತಂಡಕ್ಕೆ ಮರಳಿಸಿಬಿಟ್ಟರು. ಆಗಸ್ಟ್ 22ರಂದು ಮೌನವಾಗಿ ವಿವಾಹವಾದ ಶಶಿ ತರೂರ್ - ಸುನಂದಾ ಪುಷ್ಕರ್, ಈಗ ಸುಖ ದಾಂಪತ್ಯ ನಡೆಸುತ್ತಿದ್ದಾರೆ.

ಲಲಿತ್ ಮೋದಿಯ ಕ್ರಿಕೆಟ್ ರಾಡಿ
PTI
ಶಶಿ ತರೂರ್ ಅವರನ್ನು ಮುಳುಗಿಸಿದ ವ್ಯಕ್ತಿ ಬೇರಾರೂ ಅಲ್ಲ, ಐಪಿಎಲ್ ಮುಖ್ಯಸ್ಥರಾಗಿದ್ದ ಲಲಿತ್ ಮೋದಿ. ಆದರೆ ಅವರು ಕೂಡ ತಮ್ಮ ಐಪಿಎಲ್ ಅಧ್ಯಕ್ಷಗಿರಿ/ಆಯುಕ್ತಗಿರಿ ಕಳೆದುಕೊಳ್ಳಬೇಕಾಗಿ ಬಂದದ್ದು ಇದೇ ಕ್ರಿಕೆಟ್ ಹಗರಣದಿಂದ. ಅವರನ್ನು ಹುದ್ದೆಯಿಂದಲೇ ಕಿತ್ತು ಹಾಕಲಾದಾಗ ಮೋದಿ ಬಲವಾಗಿ ಪ್ರತಿಭಟಿಸಿದರು. ಮೋದಿ ಅವರು ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳಲ್ಲಿ ಮೌನವಾಗಿಯೇ ಪಾಲು ಹೊಂದಿದ್ದಾರೆ ಎಂಬುದನ್ನು ಆದಾಯ ತೆರಿಗೆ ಇಲಾಖೆ ವರದಿ ಹೊರಗೆ ಹಾಕಿತು. ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಕೂಡ ಮೋದಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂತು. ಐಪಿಎಲ್ ತಂಡಗಳಲ್ಲಿ ಕುಟುಂಬಿಕರಿಗೆ, ಮಿತ್ರರಿಗೆ ಪಾಲು ದೊರಕಿಸಿಕೊಟ್ಟಿದ್ದಾರೆ ಎಂಬ ಆರೋಪವೂ ಬಂತು. ಈಗ ಮೋದಿ ಎಲ್ಲಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ!

ಟೆಲಿಕಾಂ ರಾಜ
PTI
ಇದರ ಬಗ್ಗೆ ಹೇಳಿ ಪ್ರಯೋಜನವೇ ಇಲ್ಲ. 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಸಿ, ತನಗೆ ಬೇಕಾದವರಿಗೆ ಸ್ಪೆಕ್ಟ್ರಂ ಅನ್ನು ಟೆಲಿಕಾಂ ಕಂಪನಿಗಳಿಗೆ ಹಂಚಿ, ಅದು ಕೂಡ ಅತ್ಯಂತ ಕಡಿಮೆ ಹಣಕ್ಕೆ ಕೊಟ್ಟು, ದೇಶದ ಖಜಾನೆಗೆ 1.76 ಲಕ್ಷ ಕೋಟಿ ನಷ್ಟ ಮಾಡಿದ್ದಾರೆ ಎಂಬುದು ಟೆಲಿಕಾಂ ಸಚಿವರಾಗಿದ್ದ ಎ.ರಾಜಾ ಮೇಲಿನ ಆರೋಪ. ಸಿಎಜಿ ವರದಿ ಕೂಡ ಈ ಅವ್ಯವಹಾರವನ್ನು ಎತ್ತಿ ತೋರಿಸಿತ್ತು. ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದ್ದರು ರಾಜಾ. ಡಿಎಂಕೆ ರಾಜಾರನ್ನು ಗಟ್ಟಿಯಾಗಿ ಬೆಂಬಲಿಸಿದಾಗ, ಕಾಂಗ್ರೆಸ್ ಬೆದರಿತು. ಯುಪಿಎ ಸರಕಾರಕ್ಕೆ ಕಳಂಕವಿದು ಎಂದುಕೊಳ್ಳುವಷ್ಟರಲ್ಲಿಯೇ, ಕೇಂದ್ರ ಸಚಿವ ಹುದ್ದೆಗೆ ರಾಜಾ ರಾಜೀನಾಮೆ ನೀಡಿದರು. ಅಲ್ಲಿಗೆ ಕಾಂಗ್ರೆಸ್ ನಿಟ್ಟುಸಿರುಬಿಟ್ಟಿತಾದರೂ, ಈ ಬಗ್ಗೆ ಜೆಪಿಸಿ (ಜಂಟಿ ಸಂಸದೀಯ ಸಮಿತಿ) ತನಿಖೆಯಾಗಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದ ಪಟ್ಟಿಗೆ ಸಂಸತ್ತಿನ ಇಡೀ ಚಳಿಗಾಲದ ಅಧಿವೇಶನವೇ ನೀರಲ್ಲಿಟ್ಟ ಹೋಮವಾಯಿತು. ಮತ್ತೊಂದಿಷ್ಟು ಕೋಟಿ ರೂಪಾಯಿ ನಷ್ಟವಾಯಿತು! ರಾಜಾ ಹಗರಣ ಕುರಿತು ಈಗ ಸಿಬಿಐ, ಪಿಎಸಿ ತನಿಖೆ ಮುಂದುವರಿದಿದೆ.

ಆದರ್ಶವಾದ ಹಗರ
PTI
ಮಹಾರಾಷ್ಟ್ರ ಮುಖ್ಯಮಂತ್ರಿ ಪದವಿಗೆ ಕುತ್ತಾಗಿದ್ದು ಮುಂಬೈ ಕೊಲೊಬಾದಲ್ಲಿರುವ ಐಷಾರಾಮಿ ಪ್ರದೇಶದಲ್ಲಿನ ಆದರ್ಶ ಹೌಸಿಂಗ್ ಸೊಸೈಟಿಯ ಫ್ಲ್ಯಾಟುಗಳ ವಿತರಣೆಯೆಂಬ ಹಗರಣ. ಕಾರ್ಗಿಲ್ ಯುದ್ಧದಲ್ಲಿ ಮಡಿದವರಿಗೆ ಮೀಸಲಾಗಿದ್ದ ಈ ಫ್ಲ್ಯಾಟುಗಳನ್ನು ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚವಾಣ್ ತಮಗೆ ಬೇಕಾದವರಿಗೆ, ಬಂಧುಗಳಿಗೆ, ಬಳಗದವರಿಗೆ ಕೊಡಿಸಿದರು ಎಂಬುದು ಹೊರಬಿದ್ದಾಗ, ದೇಶಕ್ಕೆ ದೇಶವೇ ಬೆಚ್ಚಿ ಬಿತ್ತು. ದೇಶ ಕಾಯುವ ಸೈನಿಕರನ್ನೂ ಈ ಹಗರಣದ ಕಬಂಧಬಾಹುಗಳು ವಂಚಿಸಿಬಿಟ್ಟವಲ್ಲಾ ಎಂಬುದು ಈ ಆಘಾತಕ್ಕೆ ಕಾರಣ. ಕಾರ್ಗಿಲ್ ಯುದ್ಧಕ್ಕೆ ಸಂಬಂಧವೇ ಇಲ್ಲದ ರಾಜಕಾರಣಿಗಳು, ಅಧಿಕಾರಿಗಳು, ಸೇನೆಯ ಉನ್ನತ ಅಧಿಕಾರಿಗಳೆಲ್ಲಾ ಈ ನಿವೇಶನದಲ್ಲಿ ಫ್ಲ್ಯಾಟುಗಳನ್ನು ಪಡೆದುಕೊಂಡಿದ್ದರು. ಅಶೋಕ್ ಚವಾಣ್ ಕಂದಾಯ ಸಚಿವರಾಗಿದ್ದಾಗ ಬೈ-ಲಾ ತಿದ್ದುಪಡಿ ಮಾಡಿಸಿದ್ದರಿಂದ, ಮತ್ತು ಅವರ ಅತ್ತೆಯ ಬಳಿಯಲ್ಲೇ ಒಂದು ಫ್ಲ್ಯಾಟ್ ಇದ್ದಿದ್ದರಿಂದ, ಈಗ ಅವರ ಮುಖ್ಯಮಂತ್ರಿ ಪಟ್ಟವು ಹೋಯಿತು. ನವೆಂಬರ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದು ಹೋದ ತಕ್ಷಣ ಚವಾಣ್ ರಾಜೀನಾಮೆ ನೀಡಿದರು.

ಸುರೇಶ್ ಕಲ್ಮಾಡಿಯ ವೆಲ್ತ್ ಗೇಮ್ಸ
PTI
ಇದು ಮತ್ತೊಂದು ಜಿ. ಅದುವೇ ಸಿಡಬ್ಲ್ಯುಜಿ - ಕಾಮನ್‌ವೆಲ್ತ್ ಗೇಮ್ಸ್ ಹಗರಣ. ಸ್ಟೇಡಿಯಂನಲ್ಲಿ ನೆರೆ, ಕಳಪೆ ಹಾಸುಗಳು, ಕೊಳಕು ಟಾಯ್ಲೆಟ್‌ಗಳು - ಒಟ್ಟಾರೆ ಕೆಟ್ಟ ಮೂಲ ಸೌಕರ್ಯ. 75 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತವು ಕಾಮನ್ವೆಲ್ತ್ ಗೇಮ್ಸ್ ಆಯೋಜಿಸಿದಾಗ, ಸಮಾರಂಭಗಳಿಗೆ ಯಾವುದೇ ಧಕ್ಕೆಯಾಗದಿದ್ದರೂ, ಅದರ ಹಿಂದಿದ್ದ ಕೊಳಕು ಮಾತ್ರ ಇಡೀ ದೇಶಕ್ಕೇ ಕೆಟ್ಟ ಹೆಸರು ತಂದಿತು. ಕಾಮನ್ವೆಲ್ತ್ ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿಯ ಮೇಲೆ ಭಾರೀ ಪ್ರಮಾಣದ ಭ್ರಷ್ಟಾಚಾರ ಆರೋಪ ಕೇಳಿಬಂತು. ಗೇಮ್ಸ್‌ನಲ್ಲಿ ಹಕ್ಕು ವಿತರಣೆ ಮತ್ತು ಸಾಮಗ್ರಿ ಖರೀದಿಯಲ್ಲಿ 8000 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿತು. ಇದರ ಬಗೆಗೂ ಈಗ ಸಿಬಿಐ ತನಿಖೆಯಾಗುತ್ತಿದೆ. ಕಾಂಗ್ರೆಸ್ ಪಕ್ಷವು ತನ್ನ ಸಂಸದೀಯ ಪಕ್ಷದ ಕಾರ್ಯದರ್ಶಿ ಸ್ಥಾನದಿಂದ ಕಲ್ಮಾಡಿಯನ್ನು ವಜಾಗೊಳಿಸಿ, ಹಗರಣದಿಂದ ದೂರ ಮಾಡಿಕೊಂಡಿತು.

ಯಡಿಯೂರಪ್ಪ ಮೇಲೆ ಭೂಹಗರಣದ ರಾಡಿ
PTI
ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಅಧಿಕಾರಕ್ಕೇರಿದ ಬಿಜೆಪಿ ಸರಕಾರದ ಮೇಲೆ ಕರ್ನಾಟಕದಲ್ಲಿ ಭೂಹಗರಣದ ಆರೋಪಗಳ ಸುರಿಮಳೆಯೇ ಆಯಿತು. ಬಂಧುಗಳಿಗೆ, ಮಿತ್ರರಿಗೆ, ಬಳಗದವರಿಗೆ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳು ಡೀನೋಟಿಫಿಕೇಶನ್ ಮಾಡಿಸುವ ಮೂಲಕ ಜಮೀನು ಕೊಡಿಸಿದರು ಎಂದು ಕಾಂಗ್ರೆಸ್-ಜೆಡಿಎಸ್‌ಗಳು ಜೋರಾಗಿಯೇ ಕೂಗಾಡಿದಾಗ, ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕಾಂಗ್ರೆಸ್-ಜೆಡಿಎಸ್‌ಗಳು ಅಧಿಕಾರದಲ್ಲಿದ್ದಾಗ ಮಾಡಿದ ಹಗರಣವನ್ನೆಲ್ಲಾ ಬಯಲಿಗೆಳೆಯತೊಡಗಿ ಪಟ್ಟಿಯನ್ನೇ ಮಾಡಿದರು. ಒಟ್ಟಿನಲ್ಲಿ ಎಲ್ಲರೂ ತಿಂದವರೇ, ಯಾರೂ ಸಾಚಾಗಳಲ್ಲ ಎಂಬುದು ಜಗಜ್ಜಾಹೀರಾಯಿತು. ಆದರೆ ಇದು ಬಹುಕೋಟಿ ರೂಪಾಯಿ ಹಗರಣ, ಯಡಿಯೂರಪ್ಪ ಅವರದು ಸಿಡಬ್ಲ್ಯುಜಿ ಮತ್ತು ಸ್ಪೆಕ್ಟ್ರಂ ರಾಜಾ ಅವರಿಗಿಂತಲೂ ದೊಡ್ಡ ಹಗರಣ ಎಂದು ಟೀಕಿಸಿದರು ಮಾಜಿ ಪ್ರಧಾನಿ ದೇವೇಗೌಡ. ಪ್ರತಿಪಕ್ಷಗಳು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿದವು. ಆದರೆ ಹಗರಣ ಆಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ, ಸ್ವಜನ ಪಕ್ಷಪಾತ ಮಾಡಿದ್ದಷ್ಟೇ ಎಂಬ ತೀರ್ಮಾನಕ್ಕೆ ಬಂದ ಬಿಜೆಪಿ ಹೈಕಮಾಂಡ್, ಸಿಎಂಗೆ ಜೀವದಾನ ನೀಡಿತು.

ಆರುಂಧತಿ ರಾಯ
PTI
ಪ್ರತೀ ವರ್ಷದಂತೆ ಈ ವರ್ಷವು ಎರಡು ಬಾರಿ ಈ ಲೇಖಕಿ ಆರುಂಧತಿ ರಾಯ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ದೇಶಭಕ್ತರ ಕೆಂಗಣ್ಣಿಗೆ ಗುರಿಯಾದರು. ಒಮ್ಮೆ ನಕ್ಸಲರ ವಿರುದ್ಧ ಸರಕಾರ ಆರಂಭಿಸಿದ ಸಶಸ್ತ್ರ ಹೋರಾಟದ ವಿರುದ್ಧ ಹೇಳಿಕೆ ನೀಡುವ ಮೂಲಕ ಮತ್ತು ಇನ್ನೊಮ್ಮೆ ಕಾಶ್ಮೀರವು ಯಾವತ್ತೂ ಭಾರತದ ಭಾಗವಾಗಿರಲಿಲ್ಲ ಎಂದು ನಾಲಿಗೆ ಹರಿಯಬಿಡುವ ಮೂಲಕ. ನಕ್ಸಲ್ ವಿರುದ್ಧ ಹೋರಾಟವನ್ನು ಬಡವರ, ತುಳಿತಕ್ಕೊಳಗಾದವರ ಮೇಲೆ ಸಾರಿದ ಸಮರ ಎಂದು ಆಕೆ ಬಣ್ಣಿಸಿದರು. ಮತ್ತೊಮ್ಮೆ ದೇಶದ ಸರಕಾರದ ಮೂಗಿನ ಕೆಳಗೆಯೇ (ದೆಹಲಿಯಲ್ಲಿ) ಮಾತನಾಡುತ್ತಾ ರಾಯ್, ಕಾಶ್ಮೀರವು ಹಸಿದಿರುವ ಮತ್ತು ನಗ್ನತೆಯಿರುವ ಭಾರತದಿಂದ ಸ್ವಾತಂತ್ರ್ಯ ಪಡೆಯಬೇಕು ಎಂದು ಹೇಳಿಕೆ ನೀಡಿ, ಇದು 'ದೇಶದ್ರೋಹ'ದ ಹೇಳಿಕೆ, ಪಾಕಿಸ್ತಾನಕ್ಕೆ ಕುಮ್ಮಕ್ಕು ಕೊಡುವ ಹೇಳಿಕೆ ಎಂಬ ಮಾತುಗಳಿಗೆ ಗುರಿಯಾದರು. ಭಾರತದಿಂದ ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆಯಬೇಕು ಎಂದು ಮಾತನಾಡಿದ ಆಕೆ ಮತ್ತು ಸಯ್ಯದ್ ಅಲಿ ಶಾ ಗೀಲಾನಿ ವಿರುದ್ಧ ದೆಹಲಿ ಪೊಲೀಸರು ರಾಜದ್ರೋಹದ ಕೇಸು ದಾಖಲಿಸಿದರು.

(ಮುಂದಿನ ಪುಟದಲ್ಲಿ ಇನ್ನೂ ಮೂವರಿದ್ದಾರೆ.... ಕ್ಲಿಕ್ ಮಾಡಿ...)

 
ಸಂಬಂಧಿತ ಮಾಹಿತಿ ಹುಡುಕಿ