ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಜಾಗತಿಕ ಹಿನ್ನೋಟ: ವಿಕಿಲೀಕ್ಸ್ ಶಾಕ್, ಹೈಟಿ ದುರಂತ... (earthquake | Haiti | WikiLeaks | US | Drugs | sex & leaks)
Bookmark and Share Feedback Print
 
PTI
ಪ್ರಸಕ್ತ ಸಾಲಿನಲ್ಲಿ ವಿಕಿಲೀಕ್ಸ್ ಮಾಹಿತಿ ಸ್ಫೋಟ, ಸೂಕೀ ಬಿಡುಗಡೆ, ಚರ್ಚ್‌ನಲ್ಲಿ ಲೈಂಗಿಕ ಹಗರಣ ಸೇರಿದಂತೆ ಹಲವು ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ತೀವ್ರ ವಿವಾದ ಮತ್ತು ಕುತೂಹಲ ಹುಟ್ಟುಹಾಕಿದ ಘಟನೆಗಳಾಗಿವೆ.

ವಿಕಿಲೀಕ್ಸ್ ಆಘಾತ
ಅಮೆರಿಕದ ಲಕ್ಷಾಂತರ ರಸಹ್ಯ ಮಾಹಿತಿಗಳನ್ನು ವಿಕಿಲೀಕ್ಸ್ ಮೂಲಕ ಬಹಿರಂಗಗೊಳಿಸುವ ಮೂಲಕ ವಿಶ್ವವನ್ನೇ ಬೆಚ್ಚಿಬೀಳಿಸಿದಾತ ಜೂಲಿಯಾನ್ ಅಸಾಂಜ್. ಭಾರತ, ಇರಾಕ್, ಅಫ್ಘಾನಿಸ್ತಾನ, ಬಾಂಗ್ಲಾ, ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳ ರಾಜತಾಂತ್ರಿಕರು ಅಮೆರಿಕದ ಜತೆ ನಡೆಸಿದ ರಹಸ್ಯ ಮಾತುಕತೆ ಹೊರಹಾಕಿದ ಪರಿಣಾಮ ಜಾಗತಿಕವಾಗಿ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅಷ್ಟೇ ಅಲ್ಲ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ, ಅಮೆರಿಕದ ರಾಯಭಾರಿ ಅವರ ಜತೆ ಊಟೋಪಚಾರದ ಸಂದರ್ಭದಲ್ಲಿ, ಭಾರತದಲ್ಲಿ ಲಷ್ಕರ್‌ಗಿಂತ ಹಿಂದೂ ಮತೀಯವಾದವೇ ದೊಡ್ಡ ಅಪಾಯಕಾರಿ ಎಂಬ ಹೇಳಿಕೆ ಬಯಲಾಗಿದ್ದು ದೊಡ್ಡ ವಿವಾದ ಸೃಷ್ಟಿಸಿತ್ತು.

ಬ್ರಿಟನ್‌ನಲ್ಲಿ ಅಂತ್ಯಗೊಂಡ ಲೇಬರ್ ಪಕ್ಷದ ಆಡಳಿತ
ಸುಮಾರು 13 ವರ್ಷಗಳ ಕಾಲ ಬ್ರಿಟನ್ ಅಧಿಕಾರದ ಗದ್ದುಗೆಯಲ್ಲಿದ್ದ ಲೇಬರ್ ಪಕ್ಷದ ವಿರುದ್ಧ ಮತ ಚಲಾಯಿಸುವ ಮೂಲಕ ಮೇ 6ರಂದು ಮೊದಲ ಬಾರಿಗೆ ಅತಂತ್ರ ಸಂಸತ್ ನಿರ್ಮಾಣಗೊಂಡಿತ್ತು. ನಂತರ ಕನ್ಸರ್‌ವೇಟಿವ್ ಪಕ್ಷದ ಮುಖಂಡ ಡೇವಿಡ್ ಕ್ಯಾಮರೂನ್ ಬ್ರಿಟನ್‌ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಲೇಬರ್ ಪಕ್ಷದ ಪ್ರಧಾನಿ ಗೋರ್ಡನ್ ಬ್ರೌನ್ ಅವರ ಸ್ವಯಂಕೃತಾ ಅಪರಾಧದಿಂದಾಗಿ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವಂತಾಗಿತ್ತು.

ಪವಾಡ ಸದೃಶ ಪಾರಾದ 33 ಗಣಿ ಕಾರ್ಮಿಕರು
ಸುಮಾರು 69 ದಿನಗಳ ಕಾಲ ಚಿಲಿಯ ಸ್ಯಾನ್ ಜೋಸ್ ಗಣಿಯೊಳಗೆ ಸಿಲುಕಿ ಬಿದ್ದ 33 ಕಾರ್ಮಿಕರನ್ನು ಸತತ ಕಾರ್ಯಾಚರಣೆ ನಡೆಸುವ ಮೂಲಕ ರಕ್ಷಿಸಿರುವ ಘಟನೆ ಚಿಲಿ ಇತಿಹಾಸದಲ್ಲಿ ದಾಖಲಾಗಿತ್ತು. ಸುಮಾರು 17 ದಿನಗಳ ನಂತರ ಕಾರ್ಯಾಚರಣೆ ಆರಂಭಿಸಿ ಅವರನ್ನು ರಕ್ಷಿಸಲಾಗಿತ್ತು. ಒಟ್ಟಾರೆ 33 ಕಾರ್ಮಿಕರು ಬದುಕುಳಿದಿರುವುದು ಪವಾಡವೇ ಆಗಿತ್ತು. 69 ದಿನಗಳ ಕಾಲ ಕತ್ತಲ ಗಣಿಯೊಳಗಿದ್ದ ಕಾರ್ಮಿಕರು ಜೀವಸಹಿತ ಪಾರಾಗಿ ಹೊರಬಂದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲವಾಗಿತ್ತು.

ಕೊನೆಗೂ ಬಂಧಮುಕ್ತಗೊಂಡ ಸೂಕಿ
ಸುಮಾರು ಎರಡು ದಶಕಗಳ ಕಾಲ ಗೃಹಬಂಧನದಲ್ಲಿದ್ದ ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸ್ಯಾನ್ ಸೂಕಿ ಅವರನ್ನು ಆಡಳಿತಾರೂಢ ಮಿಲಿಟರಿ ಜುಂಟಾ ಸರಕಾರ ನವೆಂಬರ್ 13ರಂದು ಬಂಧಮುಕ್ತಗೊಳಿಸಿತ್ತು. ಸೂಕಿ ಬಿಡುಗಡೆ ದಿನದಂದು ಸಾವಿರಾರು ಮಂದಿ ಬೆಂಬಲಿಗರು ಹಾರ್ದಿಕವಾಗಿ ಸ್ವಾಗತಿಸಿದ್ದರು. ಸೂಕಿ ಬಿಡುಗಡೆಗೊಂಡ ನಂತರ ಜಗತ್ತಿನ ಹಲವು ರಾಷ್ಟ್ರಗಳು ಅಭಿನಂದನೆ ಸಲ್ಲಿಸಿದ್ದವು.

ವ್ಯಾಟಿಕನ್ ಸೆಕ್ಸ್ ಸ್ಕ್ಯಾಂಡಲ್
ರೋಮನ್ ಕ್ಯಾಥೋಲಿಕ್ ಚರ್ಚ್‌ಗಳಲ್ಲಿನ ಪಾದ್ರಿಗಳು ಮಕ್ಕಳನ್ನು ಲೈಂಗಿಕ ಶೋಷಣೆ ಮಾಡಿರುವ ಘಟನೆ ಜಾಗತಿಕವಾಗಿ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಈ ಸೆಕ್ಸ್ ಸ್ಕ್ಯಾಂಡಲ್ ಕುರಿತಂತೆ ಪೋಪ್ ಬೆನಡಿಕ್ಟ್ ಅವರು ಆರಂಭದಲ್ಲಿ ಮೌನವಾಗಿದ್ದರು ಕೂಡ ನಂತರ ಈ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಐಯರ್‌ಲ್ಯಾಂಡ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಮಕ್ಕಳನ್ನು ಲೈಂಗಿಕ ಚಟುವಟಿಕೆ ಬಳಸಿಕೊಂಡ ಈ ಪ್ರಕರಣದ ಬಗ್ಗೆ ತನಿಖೆ ನಡೆದಿತ್ತು.

ಬೆಚ್ಚಿಬೀಳಿಸಿದ್ದ ಹೈಟಿ ಭೂಕಂಪ
2010ರ ಜನವರಿ 12ರಂದು ಹೈಟಿಯಲ್ಲಿ ಸಂಭವಿಸಿದ್ದ ಭೀಕರ ಭೂಕಂಪ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆಯಲ್ಲಿ ಸುಮಾರು 222,000 ಜನರು ದಾರುಣವಾಗಿ ಸಾವನ್ನಪ್ಪಿದ್ದರು. ಸುಮಾರು 300,000 ಜನರು ಗಾಯಗೊಂಡಿದ್ದರು. ಅಷ್ಟೇ ಅಲ್ಲ 1000,000 ಮಂದಿ ಮನೆ-ಮಾರು ಕಳೆದುಕೊಂಡಿದ್ದರು. ಈವರೆಗೂ ಹೈಟಿಯ ನಿರಾಶ್ರಿತರ ಶಿಬಿರದಲ್ಲಿ ಲಕ್ಷಾಂತರ ಜನರು ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ. ಅಲ್ಲಿಯೂ ರೋಗ-ರುಜಿನಗಳು ಕಾಣಿಸಿಕೊಳ್ಳುವ ಮೂಲಕ ನೂರಾರು ಜನರು ಸಾವನ್ನಪ್ಪಿದ್ದಾರೆ. 93,222 ಮಂದಿ ಕಾಲರಾ ರೋಗದಿಂದ ಬಳಲುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ