ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಕಾಂಗ್ರೆಸ್ ತನ್ನ ಐತಿಹಾಸಿಕ ಹೊಳಪು ಕಳೆದುಕೊಂಡದ್ದು ಹೇಗೆ?
(Congress | Sonia Gandhi | Manmohan Singh | Rahul Gandhi)
125 ವರ್ಷಗಳನ್ನು ಪೂರೈಸಿರುವ ಕಾಂಗ್ರೆಸ್‌ಗೆ ಹಗರಣಗಳೇನೂ ಹೊಸತಲ್ಲ. ಅದೇ ರೀತಿ ವಿವಾದಗಳು ಕೂಡ. ಮುಗಿದೇ ಹೋಯಿತು ಎನ್ನುವಂತಹ ಹೊತ್ತಿನಲ್ಲಿ ಏನೂ ನಡೆದೇ ಇಲ್ಲ ಎಂಬಂತೆ ಎದ್ದು ಬರುವ ಛಾತಿಯನ್ನು ಹೊಂದಿರುವ ಪಕ್ಷವದು.
ಅದು ಇಂದು ನಿನ್ನೆಯ ಕಥೆಯಲ್ಲ. ಹತ್ತಾರು ಬಾರಿ ಒಡೆದು ಪಕ್ಷ ಹೋಳಾಗಿ ಹೋದಂತಹ ಹೊತ್ತಿನಲ್ಲಿರಬಹುದು, ಬರ್ಬರ ತುರ್ತು ಪರಿಸ್ಥಿತಿಯನ್ನು ಹೇರಿದ ಸಂದರ್ಭವಿರಬಹುದು, ಸಿಖ್ಖರ ನರಮೇಧ ನಡೆದ ಕಾಲವಾಗಿರಬಹುದು, ಬೋಫೋರ್ಸ್ ಹಗರಣವಿರಬಹುದು ಅಥವಾ ಅದರ ಘಟಾನುಘಟಿ ನಾಯಕರು ಗತಿಸಿ ಹೋದ ದಿನಗಳಿರಬಹುದು -- ಕೆಲ ಸಮಯ ಕಳೆಗುಂದಿದಂತೆ ಕಂಡರೂ ಮತ್ತೆ ದಿಗ್ಗನೆದ್ದು ನಿಲ್ಲುವ, ಹೈಕಮಾಂಡ್ ಗೂಟಕ್ಕೆ ಹಿರಿ-ಮರಿಗಳೆಲ್ಲ ಬಾಲ ಮುದುರುವಂತೆ ನೋಡಿಕೊಳ್ಳುವ ತಾಕತ್ತನ್ನು ಹೊಂದಿರುವ ಪಕ್ಷವದು.
PR
ಓಟ್ ಬ್ಯಾಂಕಿಗಾಗಿ ಮುಸ್ಲಿಂ ಪರ ಧೋರಣೆ ಅನುಸರಿಸುತ್ತಿರುವುದನ್ನು ಬಿಟ್ಟರೆ ಕಾಂಗ್ರೆಸ್ ಯಾವತ್ತೂ ಅನಗತ್ಯ ರಾಜಕಾರಣ ಮಾಡಿದ್ದಿಲ್ಲ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಈಗ ಸೋನಿಯಾ ಗಾಂಧಿ, ಮುಂದೆ ರಾಹುಲ್ ಗಾಂಧಿ, ನಂತರ ಅವರ ಮಕ್ಕಳು -- ಇಂತಹ ಋಣಾತ್ಮಕ ರಾಜಕಾರಣವೂ ಪಕ್ಷವನ್ನು ಬಾಧಿಸಿಲ್ಲ, ಕುಟುಂಬ ರಾಜಕಾರಣ ನಡೆಯುತ್ತಿದೆ ಎನ್ನುವುದು ಅದರ ಹಿಂಬಾಲಕರಿಗೆ ಜ್ಞಾನೋದಯವಾಗಬೇಕೆನ್ನುವ ಕಲ್ಪನೆ ಹುಟ್ಟಲು ಅವಕಾಶವನ್ನೇ ಮಾಡಿ ಕೊಟ್ಟಿಲ್ಲ.
ಇವೆಲ್ಲದರ ಹೊರತಾಗಿಯೂ 2010ರ ವರ್ಷ ಕಾಂಗ್ರೆಸ್‌ಗೆ ಕಹಿಯಾಗಿತ್ತು. ಸತತ ಎರಡನೇ ಬಾರಿ ಅಧಿಕಾರವನ್ನು ಅನುಭವಿಸುತ್ತಿದ್ದರೂ, ಅಧಿಕಾರ ಕಳೆದುಕೊಂಡ ಸ್ಥಿತಿ ಆಡಳಿತ ಪಕ್ಷಕ್ಕೆ ಒದಗಿತ್ತು. ಅದರ ನಾಯಕರು ದಿನಕ್ಕೊಂದರಂತೆ ಬಾಲಿಶ ಹೇಳಿಕೆಗಳನ್ನು ನೀಡುತ್ತಾ, ಪಕ್ಷವನ್ನು ಬೀದಿ ಬದಿಯ ಕೊಚ್ಚೆ-ಕೆಸರಿನಲ್ಲಿ ಅದ್ದಿ ತೆಗೆದರು. ಒಂದು ರೀತಿಯಲ್ಲಿ ಪುಂಡರ ಪಕ್ಷ ಎಂಬಂತೆ ಕಂಡು ಬಂದರೂ, ಹೈಕಮಾಂಡ್ ರಿಪೇರಿ ಯತ್ನದಲ್ಲಿ ಭಾರೀ ಯಶಸ್ಸನ್ನೇನೂ ಕಾಣಲಿಲ್ಲ.
ಈ ಹಿಂದೆಂದೂ ಕಾಂಗ್ರೆಸ್‌ಗೆ ಇಂತಹ ಪರಿಸ್ಥಿತಿ ಬಂದದ್ದಿಲ್ಲ. ಬಂದರೂ ಅದಕ್ಕೊಂದು ಪರಿಹಾರ ತನ್ನ ಮಗ್ಗುಲಲ್ಲೇ ಇದೆ ಎಂಬುದನ್ನು ಮರೆಯುವ ಸ್ಥಿತಿ ಅದಕ್ಕೆ ಒದಗಿರಲಿಲ್ಲ. ಆದರೆ ಸೋನಿಯಾ ಗಾಂಧಿ ಅದರಲ್ಲಿ ಬಸವಳಿದಿದ್ದಾರೆ, ಸೋತಿಲ್ಲ. ಆದರೆ ಗೆದ್ದಿರುವ ಭಾವ ಅವರಲ್ಲಿಲ್ಲ. ಒಟ್ಟಾರೆ ಪಕ್ಷವು ತನ್ನ ಹಿಂದಿನ ಛಾತಿಯನ್ನು, ಕಳೆಯನ್ನು ಕಳೆದುಕೊಂಡು ಸೊರಗಿರುವುದಂತೂ ನಿಜ.
ಸೊರಗಬಾರದು ಎಂದು ಕಳಂಕ ಬಂದಾಗಲೆಲ್ಲ ಸಚಿವರುಗಳು-ಮುಖ್ಯಮಂತ್ರಿಗಳನ್ನು ಪಟ್ಟದಿಂದ ಕೆಳಗಿಳಿಸುವ ತೇಪೆ ಕಾರ್ಯ ನಡೆಯಿತಾದರೂ, ಅದು ಬೀರಿದ ಪರಿಣಾಮ ಗಂಭೀರ. ಶಶಿ ತರೂರ್, ಸುರೇಶ್ ಕಲ್ಮಾಡಿ, ಅಶೋಕ್ ಚೌಹಾನ್, ಶೀಲಾ ದೀಕ್ಷಿತ್, ದಿಗ್ವಿಜಯ್ ಸಿಂಗ್, ಎಸ್.ಎಂ. ಕೃಷ್ಣ, ರಾಹುಲ್ ಗಾಂಧಿ, ಪಿ. ಚಿದಂಬರಂ -- ಇವರೆಲ್ಲರೂ ಮುಜುಗರ ತಂದ, ಒಂದಲ್ಲ ಒಂದು ಬಾರಿ ಭಾರೀ ಟೀಕೆಗೊಳಗಾದ ಆಯಕಟ್ಟಿನ ಜಾಗಗಳಲ್ಲಿರುವ ಕಾಂಗ್ರೆಸ್ ನಾಯಕರು.
2010ರಲ್ಲಿ ಕಾಂಗ್ರೆಸ್‌ಗೆ ಅಂತಹ ಮುಜುಗರ ಸೃಷ್ಟಿಗೆ ಕಾರಣವಾದ ಅಂಶಗಳು ಯಾವುವು? ಯಾರೆಲ್ಲ ಇಲ್ಲಿ ಪಾತ್ರಧಾರಿಗಳಾಗಿದ್ದರು? ಸೂತ್ರಧಾರಿಗಳು ಎಡವಿದ್ದು ಎಲ್ಲಿ ಎಂಬುದನ್ನು ಸಂಕ್ಷಿಪ್ತವಾಗಿ ಸ್ಮರಿಸಿಕೊಳ್ಳುವ ಯತ್ನವಿದು.
ಗೊಂಬೆಯಾದ ಮನಮೋಹನ್ ಸಿಂಗ್... ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಯಾವತ್ತಿದ್ದರೂ ಮಿಸ್ಟರ್ ಕ್ಲೀನ್. ಅವರ ಬಗ್ಗೆ ಯಾವತ್ತೂ, ಯಾರೂ ಸಂಶಯ ವ್ಯಕ್ತಪಡಿಸಿದವರಿಲ್ಲ. ಅದೇ ಹೊತ್ತಿಗೆ ಅವರನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಕಾಂಗ್ರೆಸ್ ಬಿಟ್ಟಿಲ್ಲ ಎನ್ನುವುದೂ ಸತ್ಯ.
PTI
ಪ್ರತಿ ಹಂತದಲ್ಲೂ ಅವರಿಗೆ ಎದುರಾಗಿದ್ದು ಅಪಮಾನ. ತನ್ನದೇ ಸಂಪುಟದ ಮಂದಿ, ಪಕ್ಷದ ಮುಖಂಡರು, ಮೈತ್ರಿಪಕ್ಷಗಳ ನಾಯಕರು -- ಹೀಗೆ ಯಾರೊಬ್ಬರು ಬಿಟ್ಟೂ ಬಿಡದೆ ಕಾಡಿದರು. ತನ್ನದಲ್ಲದ ತಪ್ಪಿಗೆ ಅವರು ಹಲವು ಬಾರಿ ಪರಿತಪಿಸಬೇಕಾಯಿತು.
ಅಗತ್ಯ ವಸ್ತುಗಳ ಬೆಲೆಯೇರಿಕೆ ವಿಚಾರ ತಾರಕಕ್ಕೇರಿದ ಸಂದರ್ಭದಲ್ಲಿ ಪ್ರತಿಪಕ್ಷಗಳು ಮಂಡಿಸಿದ ಖಂಡನಾ ನಿರ್ಣಯ, ಐಪಿಎಲ್ ಪ್ರಕರಣದಲ್ಲಿ ಸಿಲುಕಿದ್ದ ಸಚಿವ ಶಶಿ ತರೂರ್ ಅವರನ್ನು ಕೈ ಬಿಟ್ಟದ್ದು, ಎನ್‌ಸಿಪಿ ಮುಖಂಡ ಹಾಗೂ ಕೇಂದ್ರ ಸಚಿವರ ಹೆಸರೂ ಐಪಿಎಲ್ ವಿವಾದದಲ್ಲಿ ಕೇಳಿ ಬಂದದ್ದು, ಕಾಶ್ಮೀರ ಕುರಿತ ವಿವಾದಿತ ಹೇಳಿಕೆ, ಸಿಬಿಐ ದುರ್ಬಳಕೆ ಆರೋಪ, ಕಾಮನ್‌ವೆಲ್ತ್ ಗೇಮ್ಸ್ ಹಗರಣ, 2ಜಿ ಹಗರಣ, ಸಿವಿಸಿ ವಿವಾದ, ರಾಹುಲ್ ಗಾಂಧಿ ಮಕ್ಕಳಾಟ -- ಹೀಗೆ ಪ್ರತಿಯೊಂದು ಹಂತದಲ್ಲೂ ಪ್ರಧಾನಿ ಸಂಕಷ್ಟಕ್ಕೆ ಗುರಿಯಾದರು.
ಪ್ರಧಾನಿಯೆಂದರೆ ಆಡಳಿತ ಪಕ್ಷದ ಮುಖವಾಣಿ. ಅವರು ಆಡುವ ಮಾತು ಮತ್ತು ಮಾಡುವ ಕಾರ್ಯಗಳು ಪಕ್ಷದ ಮೇಲೆ ಮತ್ತು ಮುಂದಿನ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಯುಪಿಎ, ಪ್ರಧಾನಿ ಮತ್ತು ಕಾಂಗ್ರೆಸ್ ವಿಚಾರದಲ್ಲಿ ಇದು ಕೊಂಚ ಭಿನ್ನ. ಕಾಂಗ್ರೆಸ್ ಮೇಲೆ ಸಾಕಷ್ಟು ದೂಷಣೆಗಳಿದ್ದರೂ, ಅದಕ್ಕೆ ಪ್ರಧಾನಿಯನ್ನು ಪ್ರಜ್ಞಾವಂತರು ಹೊಣೆಗಾರರನ್ನಾಗಿ ಮಾಡುವುದಿಲ್ಲ. ಅದಕ್ಕಿರುವ ಕಾರಣ ಪ್ರಧಾನಿ ಕೇವಲ ಡಮ್ಮಿ ಎಂಬಂತೆ ಬಿಂಬಿತವಾಗಿರುವುದು.
ವಿಫಲರಾದ ರಾಹುಲ್ ಗಾಂಧಿ... ಮುಂದಿನ ಪ್ರಧಾನಿಯಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ತನ್ನ ಕುಡಿ ರಾಹುಲ್ ಗಾಂಧಿಯನ್ನು ದೇಶದೆಲ್ಲೆಡೆ ಕಳುಹಿಸಿ, ಪರಿಚಯ ಮಾಡಿಸುವ ಕಾರ್ಯದಲ್ಲಿ ತೊಡಗಿರುವ ಹೊತ್ತಿನಲ್ಲಿ ಅವರು ಪಡೆದುದಕ್ಕಿಂತ ಹೆಚ್ಚು ಕಳೆದುಕೊಂಡಿದ್ದಾರೆ.
PR
ರಾಹುಲ್ ಹೋದಲ್ಲೆಲ್ಲ ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಆಕರ್ಷಿತರಾಗುತ್ತಿದ್ದುದನ್ನೇ 'ಅಲೆ' ಎಂದು ಕಾಂಗ್ರೆಸ್ ಪರಿಗಣಿಸಿತ್ತು. ಇದು ಬಿಹಾರ ಸೇರಿದಂತೆ ಹಲವು ರಾಜ್ಯಗಳ ಚುನಾವಣೆಗಳಲ್ಲಿ ಸುಳ್ಳೆಂದು ಸಾಬೀತಾಯಿತು. ಮೌತ್‌ಟಾಕ್ ಮತಗಳಾಗಿ ಪರಿವರ್ತನೆಯಾಗಲಿಲ್ಲ ಎನ್ನುವುದು ಗೊತ್ತಾಯಿತು.
ಹಿಂದೂ ಉಗ್ರವಾದದ ಪ್ರಚಾರ... ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಹೇಳುತ್ತಾ ಬಂದರೂ ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ಮುಂತಾದ ವಿವಿಧ ಬಣ್ಣಗಳಿಂದ ಗುರುತಿಸಲು ಆರಂಭಿಸಿದ್ದು ಕಾಂಗ್ರೆಸ್. ಇದು ಕೂಡ ಕಾಂಗ್ರೆಸ್‌ಗೆ ಈ ಬಾರಿ ಆಗಿರುವ ಪ್ರಮುಖ ಹಿನ್ನಡೆ.
ದೇಶದಲ್ಲಿ ಕೇಸರಿ ಭಯೋತ್ಪಾದನೆ ಹೆಚ್ಚುತ್ತಿದೆ ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಮೊದಲು ಹೇಳಿಕೆ ನೀಡಿದ್ದರು. ನಂತರ ಸ್ವತಃ ರಾಹುಲ್ ಗಾಂಧಿ, ಆರೆಸ್ಸೆಸ್ ಮತ್ತು ಸಿಮಿಯನ್ನು ಹೋಲಿಕೆ ಮಾಡಿ ವಿವಾದಕ್ಕೆ ತುತ್ತಾದರು.
PTI
ಈ ನಡುವೆ ದಿಗ್ವಿಜಯ್ ಸಿಂಗ್ ಎಂಬ ವಿವಾದದ ಪರ್ಯಾಯ ಪುರುಷ ಮುಸ್ಲಿಮರ ಓಲೈಕೆಗಾಗಿ ಪಣ ತೊಟ್ಟು, ಹಿಂದೂ ಸಂಘಟನೆಗಳ ವಿರುದ್ಧ ಹೇಳಿಕೆ ನೀಡುತ್ತಾ ಹೋದರು, ಈಗಲೂ ನೀಡುತ್ತಿದ್ದಾರೆ.
ಅಮೆರಿಕಾದ ರಾಯಭಾರಿಯ ಜತೆಗಿನ ಮಾತುಕತೆ ಸಂದರ್ಭದಲ್ಲಿ, ಲಷ್ಕರ್, ಅಲ್ ಖಾಯಿದಾ ಮುಂತಾದ ಭಯೋತ್ಪಾದಕರಿಗಿಂತ ಹಿಂದೂ ತೀವ್ರವಾದಿಗಳು ದೇಶಕ್ಕೆ ಅಪಾಯಕಾರಿ ಎಂದು ರಾಹುಲ್ ಗಾಂಧಿ ಯಾರಲ್ಲೋ ದೂರು ನೀಡಿದಂತೆ ಹೇಳಿಕೆ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಯಿತು.
ಹಿಂದೂ ಭಯೋತ್ಪಾದನೆ ವಿಚಾರದಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ನೀಡಿದ ಹೇಳಿಕೆಗಳನ್ನು ಪಕ್ಷ ತಳ್ಳಿ ಹಾಕುವ ಬದಲು, ಬೇರೆಯದೇ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾ ಬಂತು. ರಾಷ್ಟ್ರದ ಹಿತಾಸಕ್ತಿಯನ್ನು ಬದಿಗೊತ್ತಿ, ನಿಜವಾದ ಕೋಮುವಾದಿಯಾಯಿತು. ಇದನ್ನು ಸ್ವತಃ ಅಮೆರಿಕಾ ರಾಯಭಾರಿಯೊಬ್ಬರು ತನ್ನ ದೇಶಕ್ಕೆ ಕಳುಹಿಸಿದ ವರದಿಯಲ್ಲೂ ನಮೂದಿಸಿದ್ದನ್ನು ವಿಕಿಲೀಕ್ಸ್ ಬಹಿರಂಗಪಡಿಸಿದ್ದು ಸ್ಮರಣೀಯ.
ಮಿತ್ರಪಕ್ಷಗಳ ಆವಾಂತರ... ಒಂದು ಕಡೆ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ನಕ್ಸಲರಿಗೆ ಬೆಂಬಲ ಸೂಚಿಸುತ್ತಾ ಬಂದಿರುವುದು, ಮತ್ತೊಂದು ಕಡೆ ಡಿಎಂಕೆಯ 'ಸ್ಪೆಕ್ಟ್ರಂ ರಾಜಾ' ಎಸಗಿದ ಘನಕಾರ್ಯ; ಒಟ್ಟಾರೆ ಬಳಲಿ ಬೆಂಡಾದದ್ದು ಕಾಂಗ್ರೆಸ್.
PTI
ಕೇಂದ್ರ ರೈಲ್ವೆ ಸಚಿವೆಯಾಗಿರುವ ಮಮತಾ, ಪಶ್ಚಿಮ ಬಂಗಾಲದಲ್ಲಿ ಬಹಿರಂಗವಾಗಿಯೇ ಮಾವೋವಾದಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ತೃಣಮೂಲ ಮತ್ತು ಎಡಪಕ್ಷಗಳ ಗುದ್ದಾಟದಲ್ಲಿ ಬಹುತೇಕ ಪಶ್ಚಿಮ ಬಂಗಾಲದಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಸಂಪೂರ್ಣವಾಗಿ ನೆಲ ಕಚ್ಚುತ್ತಿದೆ. ಅತ್ತ ದರಿ, ಇತ್ತ ಪುಲಿ ಎಂಬಂತೆ, ಯಾವುದನ್ನೂ ಮಾಡದ ಸ್ಥಿತಿ ಕಾಂಗ್ರೆಸ್‌ನದ್ದು. ಅಲ್ಲಿನ ಪ್ರಜೆಗಳ ಸ್ಥಿತಿಯೂ ಅಷ್ಟೇ.
ಇತ್ತ ಡಿಎಂಕೆಯ ತಮಿಳುನಾಡು ಮುಖ್ಯಮಂತ್ರಿಯದ್ದು ಸ್ಪಷ್ಟವಾದ ಬ್ಲ್ಯಾಕ್‌ಮೇಲ್ ತಂತ್ರಗಾರಿಕೆ. ಕಾಂಗ್ರೆಸ್ ಜತೆ ಮೈತ್ರಿ ಹೊಂದಿರುವ ಡಿಎಂಕೆ, ತನ್ನ ಸಚಿವರನ್ನು ಬಳಸಿ ಸಾಕಷ್ಟು ಹಗರಣಗಳನ್ನು ನಡೆಸಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳದಂತೆ ಸರಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದೆ. ಇಲ್ಲೂ ಬಡವಾಗಿದ್ದು ಕಾಂಗ್ರೆಸ್.