ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಕರುಣಾ: ನೆಹರು, ಇಂದಿರಾ ಆಪ್ತ, ಆಂಟನಿಯ ಬದ್ಧವೈರಿ (K Karunakaran | Nehru | Indira Gandhi | Kerala Politics | Congress)
Bookmark and Share Feedback Print
 
PTI
ಅವರೊಬ್ಬ ಕುಳ್ಳ ಆಗಿರಬಹುದು, ಆದರೆ ಕೇರಳ ರಾಜಕೀಯ ಕಲೈಡೋಸ್ಕೋಪ್‌ನಲ್ಲಿ ಕನ್ನೋತ್ ಕರುಣಾಕರನ್ ಒಬ್ಬ ದೈತ್ಯನೇ ಸರಿ. ಜವಾಹರಲಾಲ್ ನೆಹರು ಮತ್ತು ಅಷ್ಟೇ ಬಲಿಷ್ಠರಾಗಿದ್ದ ಇಂದಿರಾ ಗಾಂಧಿಗೆ ಆಪ್ತರಾಗಿದ್ದ ಅವರು ನಾಲ್ಕು ಬಾರಿ ಕೇರಳದ ಮುಖ್ಯಮಂತ್ರಿಯಾಗಿದ್ದರು. ಗುರುವಾರ 92ನೇ ವಯಸ್ಸಿನಲ್ಲಿ ಸಾವನ್ನಪ್ಪುವ ಕೊನೆ ಕ್ಷಣದವರೆಗೂ ಮಿತ್ರರನ್ನಾಗಲೀ, ಶತ್ರುಗಳನ್ನಾಗಲೀ 'ಲೀಡರ್' ಎಂದೇ ಸಂಬೋಧಿಸುತ್ತಿದ್ದವರು ಅವರು.

ಜಗತ್ತಿನಲ್ಲೇ ಮೊದಲ ಬಾರಿಗೆ ಮತದಾನ ಎದುರಿಸಿ ಅಧಿಕಾರಕ್ಕೆ ಬಂದು ಕಮ್ಯೂನಿಸ್ಟರು ಇತಿಹಾಸ ಸೃಷ್ಟಿಸಿದ ರಾಜ್ಯವೆಂಬ ಹೆಗ್ಗಳಿಕೆಯಿರುವ ಕೇರಳದಲ್ಲಿ, ನಾಲ್ಕು ದಶಕಗಳ ಸುದೀರ್ಘ ಕಾಲ ಕಾಂಗ್ರೆಸ್‌ನ ಶಕ್ತಿಯಾಗಿ ಮೆರೆದವರು ಕರುಣಾಕರನ್. ಕೇರಳದಲ್ಲಿ ಅವರ ಆಶೀರ್ವಾದವಿಲ್ಲದಿದ್ದರೆ ಪಕ್ಷದಲ್ಲಿ ಯಾರು ಕೂಡ ಮುಂದೆ ಬರುವುದು ಸಾಧ್ಯವಾಗುತ್ತಿರಲಿಲ್ಲ. ಅಷ್ಟು ಪ್ರಬಲರವಾದ ನಾಯಕತ್ವವನ್ನು ಕೊಟ್ಟವರು ಮತ್ತು ಕಮ್ಯೂನಿಸ್ಟರ ಅಲೆಯನ್ನು ಸಮರ್ಥವಾಗಿ ಎದುರಿಸಿದವರು ಕರುಣಾಕರನ್.

1918ರ ಜುಲೈ 5ರಂದು ಕಣ್ಣೂರಿನಲ್ಲಿ ಜನಿಸಿದ ಕರುಣಾಕರನ್, ಶಾಲಾ ದಿನಗಳ ಬಳಿಕ ರಾಜಕೀಯ ಕಾರ್ಯಕರ್ತನಾಗಿ ಕಣಕ್ಕಿಳಿದರು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಎರಡು ವರ್ಷ ಮೊದಲೇ ತಮ್ಮ ಮೊದಲ ಚುನಾವಣಾ ವಿಜಯವನ್ನು ಸವಿದ ಅವರು, 1945ರಲ್ಲಿ ತ್ರಿಶೂರು ನಗರಸಭೆಗೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಆಯ್ಕೆಯಾದರು.

ಅಂದಿನಿಂದ, ಹಿಂತಿರುಗಿ ನೋಡದ ಕರುಣಾಕರನ್, ಪ್ರತಿಯೊಂದು ರಾಜಕೀಯ ಸ್ಥಾನಮಾನವನ್ನೂ ಸವಿದರು. ಶಾಸಕರಾಗಿ (ತ್ರಿಶೂರಿನ ಮಾಲ ಕ್ಷೇತ್ರದಿಂದ ಸತತವಾಗಿ ಏಳು ಬಾರಿ - 1967ರಿಂದ 1991), ಸಚಿವರಾಗಿ, ಮೂರು ಬಾರಿ ಪ್ರತಿಪಕ್ಷ ನಾಯಕನಾಗಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ, ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಮತ್ತು ಎರಡು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದವರು ಅವರು.

ಅವರು ಅಲಂಕರಿಸದೇ ಇರುವ ಹುದ್ದೆ ಎಂದರೆ ರಾಜ್ಯಪಾಲರ ಹುದ್ದೆ. ರಾಜಕೀಯ ಜೀವನದ ಸಂಜೆಯಲ್ಲಿ ಅವರಿಗೆ ಒಂದಕ್ಕಿಂತ ಹೆಚ್ಚು ಬಾರಿ ರಾಜ್ಯಪಾಲ ಹುದ್ದೆಯ ಕೊಡುಗೆ ನೀಡಲಾಗಿತ್ತಾದರೂ, ಅವರದನ್ನು ನಿರಾಕರಿಸಿ ರಾಜಕಾರಣದಲ್ಲೇ ಇರಲು ತೀರ್ಮಾನಿಸಿದರು. ಭಾರತದ ಮೊದಲ ಪ್ರಧಾನಿ ನೆಹರು ಅವರೊಂದಿಗೆ ಆತ್ಮೀಯವಾದ ಸಂಬಂಧ ಹೊಂದಿದ್ದ ಕೆಲವೇ ನಾಯಕರಲ್ಲಿ ಇವರೂ ಒಬ್ಬರು. ಇಂದಿರಾ ಗಾಂಧಿಗೂ ಆಪ್ತರಾಗಿದ್ದರು. ಅಧಿಕಾರವನ್ನು ಯಾವತ್ತೂ ಪ್ರೀತಿಸುತ್ತಿದ್ದ ಕರುಣಾಕರನ್ ತಮ್ಮ ವಿರೋಧಿಗಳನ್ನು ಬಗ್ಗು ಬಡಿಯಲು ಇಂದಿರಾ ಜತೆಗಿನ ಸಂಬಂಧವನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದರು. ಇದರಲ್ಲಿ ಈಗಿನ ರಕ್ಷಣಾ ಸಚಿವ ಎ.ಕೆ.ಆಂಟನಿ ಕೂಡ ಹೊರತಾಗಿರಲಿಲ್ಲ. ತತ್ಪರಿಣಾಮವಾಗಿ ಕರುಣಾಕರನ್ ಪರವಾಗಿಲ್ಲದ ಯಾವುದೇ ನಾಯಕನೂ ಕಾಂಗ್ರೆಸ್‌ನಲ್ಲಿ ಮೇಲೆ ಬರುವಂತಿರಲಿಲ್ಲ ಎಂಬ ಪರಿಸ್ಥಿತಿಯೂ ಇತ್ತು.

ಕರುಣಾಕರನ್ ವಿರೋಧಿಗಳು ಹೇಳುವಂತೆ, ಅವರೆಂದಿಗೂ ಪಕ್ಷವನ್ನು ರಾಜ್ಯದಲ್ಲಿ ಒಗ್ಗಟ್ಟಾಗಿರಲು ಬಿಡಲಿಲ್ಲ. ಅವರು ಮತ್ತು ಆಂಟನಿ ನಡುವೆ ಪಕ್ಷವನ್ನು ಅವರೇ ವಿಭಜಿಸಿಕೊಂಡಿದ್ದರು. ಹಾಗಂತ, ತಮ್ಮನ್ನು ಬೆಂಬಲಿಸಿದ ಮೂರು ಡಜನ್‌ಗೂ ಹೆಚ್ಚು ನಾಯಕರನ್ನು ಅವರು ಬೆಳೆಸಿದರು. ಅವರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಚೆನ್ನಿತ್ತಲ, ಜಿ.ಕಾರ್ತಿಕೇಯನ್, ವಿ.ಎಂ.ಸುಧೀರನ್ ಮತ್ತು ಪಿ.ಪಿ.ತನಕಚ್ಚನ್ ಸೇರಿದ್ದಾರೆ.

ಅವರಿಗೆ ಮೊತ್ತ ಮೊದಲ ಆಘಾತ ಎದುರಾದದ್ದು, ತುರ್ತು ಪರಿಸ್ಥಿತಿ ನಂತರದ ಅವಧಿಯಲ್ಲಿ, ಮಾವೋವಾದಿ ಎಂಬ ಆರೋಪ ಹೊತ್ತಿದ್ದ ಯುವಕನೊಬ್ಬನ ಸಾವಿನ ಸಂಬಂಧ ನ್ಯಾಯಾಂಗದಿಂದ ಛೀಮಾರಿ ಹಾಕಿಸಿಕೊಂಡ ಸಂದರ್ಭದಲ್ಲಿ, ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಒಂದೇ ತಿಂಗಳಲ್ಲಿ ಅವರು ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಈ ರಾಜನ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯ ನಾಪತ್ತೆ ಪ್ರಕರಣವು ಕರುಣಾಕರನ್ ಅವರನ್ನು ಜೀವನಪೂರ್ತಿ ಕಾಡುತ್ತಲೇ ಇತ್ತು.

1995ರಲ್ಲಿ ಇಸ್ರೋ ಬೇಹುಗಾರಿಕೆ ಹಗರಣವೊಂದು ಸ್ಫೋಟಗೊಂಡಾಗ, ಪೊಲೀಸ್ ಅಧಿಕಾರಿ ರಾಮನ್ ಶ್ರೀವಾಸ್ತವ್ ಅವರೊಂದಿಗೆ ಲಿಂಕ್ ಇದೆ ಎಂಬ ಆರೋಪದಲ್ಲಿ ಕರುಣಾಕರನ್ ಮಾರ್ಚ್ ತಿಂಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಗಿಬಂದಿತ್ತು.

ಅಷ್ಟು ಹೊತ್ತಿಗೆ ಅವರಿಗೆ ಸಾಕಷ್ಟು ವಿರೋಧಿಗಳು ಹುಟ್ಟಿಕೊಂಡಿದ್ದರು. ಅದಕ್ಕೆ ಪ್ರಮುಖ ಕಾರಣವಾಗಿದ್ದು, ಉದ್ಯಮದಲ್ಲಿ ವಿಫಲವಾಗಿ ರಾಜಕೀಯಕ್ಕೆ ಬಂದ ಅವರ ಪುತ್ರ ಕೆ.ಮುರಳೀಧರನ್ ಅವರ ಮೇಲಿನ ಅತಿಯಾದ ವ್ಯಾಮೋಹ.

ರಾಜ್ಯ ರಾಜಕೀಯವನ್ನು ತೊರೆದು ಕರುಣಾಕರನ್ ದಿಲ್ಲಿಗೆ ಹೋಗಿ, ಪಿ.ವಿ.ನರಸಿಂಹ ರಾವ್ ಮಂತ್ರಿ ಮಂಡಲದಲ್ಲಿ ಕೈಗಾರಿಕಾ ಸಚಿವರಾದರು. ಅಷ್ಟು ಹೊತ್ತಿಗೆ ಆಂಟನಿ ಅವರು ಪ್ರಬಲ ಎದುರಾಳಿಯಾಗಿ ಬೆಳೆದುಬಿಟ್ಟಿದ್ದರು. ಆದರೆ, ಕರುಣಾಕರನ್ ಕೇರಳದ ಮೇಲಿನ ಹಿಡಿತವನ್ನೂ ಸಡಿಲಿಸಿರಲಿಲ್ಲ. 2001ರಲ್ಲಿ ಆಂಟನಿ ಅವರನ್ನು ಮುಖ್ಯಮಂತ್ರಿ ಮಾಡಬೇಕಾಗಿ ಬಂದಾಗ, ತಮ್ಮ ಪುತ್ರನನ್ನು ಕೇರಳದ ಕಾಂಗ್ರೆಸ್ ಮುಖ್ಯಸ್ಥನಾಗಿ ನೇಮಿಸುವ ಡೀಲ್ ಕುದುರಿಸಿಕೊಂಡರು.

ಆದರೆ, ಕರುಣಾಕರನ್ ಅವರಂತೂ ಆಂಟನಿಯನ್ನು ಅಲುಗಾಡಿಸುವ ಯಾವುದೇ ಅವಕಾಶವನ್ನೂ ಬಿಡಲಿಲ್ಲ. ಲೋಕಸಭಾ ಚುನಾವಣೆಯೊಂದರಲ್ಲಿ ಅವರು ಎಡ ಪಕ್ಷವನ್ನೂ ಬೆಂಬಲಿಸಿದ್ದರು.

ನಂತರ, ಅದೊಂದು ದಿನ ಕಾಂಗ್ರೆಸ್ ಒಳಜಗಳ ಎಷ್ಟು ತಾರಕಕ್ಕೇರಿತೆಂದರೆ, ನಾಟಕೀಯವಾಗಿ ಕಾಂಗ್ರೆಸ್ ತೊರೆದ ಅವರು, 2005ರಲ್ಲಿ ತಮ್ಮದೇ ಪಕ್ಷವನ್ನು ಕಟ್ಟಿದರು ಮತ್ತು ಸುದೀರ್ಘ ಕಾಲದಿಂದ ತಮ್ಮ ರಾಜಕೀಯ ವೈರಿಗಳಾಗಿದ ಎಡಪಂಥೀಯರನ್ನು ಕೂಡಿಕೊಳ್ಳುವ ಉದ್ದೇಶವನ್ನೂ ತೋರ್ಪಡಿಸಿದರು. ಆದರೆ, ಅವರು ಇದರಲ್ಲಿ ಯಶ ಕಾಣಲಿಲ್ಲ. 2006ರ ಅಸೆಂಬ್ಲಿ ಚುನಾವಣೆಗಳಲ್ಲಿ ಅವರ ಪಕ್ಷದಿಂದ ಕಣಕ್ಕಿಳಿದ 17ರಲ್ಲಿ 16 ಮಂದಿಯೂ ಸೋತು ಸುಣ್ಣವಾದರು.

ಇದರಿಂದ ವಿಚಲಿತರಾದ ಕರುಣಾಕರನ್ ಅವರು ತಮ್ಮ ಪಕ್ಷವನ್ನು ಎಡರಂಗದ ಮಿತ್ರಪಕ್ಷವಾಗಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಜೊತೆ ವಿಲೀನಗೊಳಿಸಿದರು. ಆದರೆ, ಅವರ ವೈರತ್ವದ ದ್ವೇಷದ ಅರಿವಿದ್ದ ಎಡರಂಗವು, ಅವರಿಗೆ 'ನೋ' ಹೇಳಿತಲ್ಲದೆ, ಎನ್‌ಸಿಪಿಯನ್ನೂ ಎಡರಂಗದಿಂದ ಹೊರಹಾಕಿತು.

ಅವಮಾನಿತರಾದ ಕರುಣಾಕರನ್ ಮರಳಿ ಕಾಂಗ್ರೆಸ್‌ಗೆ ಬಂದರು. ಆದರೆ, ಮಗ ಮಾತ್ರ ಮರಳಲು ನಿರಾಕರಿಸಿ, ತಂದೆಯೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಂಡರು.

ಬಳಿಕ ಕರುಣಾಕರನ್ ರಾಜಕೀಯದಿಂದ ದೂರವಾಗುತ್ತಾ ಬಂದರು. ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸತೊಡಗಿತು. 90 ವರ್ಷ ತುಂಬಿದಾಗ ಶುಭ ಹಾರೈಕೆಗೂ ಬಾರದ ಮಗನ ವರ್ತನೆ ಅವರಿಗೆ ತುಂಬಾ ನೋವು ತಂದಿತು. ಅಂದಿನಿಂದ ಬಹುತೇಕ ಅವರು ತಮ್ಮ ಮನೆಯೊಳಗೇ ಸೀಮಿತವಾಗತೊಡಗಿದರಾದರೂ, ಕಾಂಗ್ರೆಸ್‌ನ ಪ್ರಮುಖ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾ, ಹಿತೈಷಿಗಳೊಂದಿಗೆ ಸಂಪರ್ಕ ಹೊಂದಿದ್ದರು.

ಅಂತ್ಯದಲ್ಲಿ ದೊಡ್ಡ ವೃಕ್ಷವೊಂದು ಬೇಸರದಿಂದಲೇ ಏಕಾಂಗಿಯಾಗಿ ಜೀವನ ಮುಗಿಸಿತು. ಅವರ ರಾಜಕೀಯ ಚರಿತ್ರೆ ಮಾತ್ರ ಸದಾ ಹಸಿರಾಗಿ ಉಳಿಯಿತು.
ಸಂಬಂಧಿತ ಮಾಹಿತಿ ಹುಡುಕಿ