ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಕಾಂಗ್ರೆಸ್ ತನ್ನ ಐತಿಹಾಸಿಕ ಹೊಳಪು ಕಳೆದುಕೊಂಡದ್ದು ಹೇಗೆ?
(Congress | Sonia Gandhi | Manmohan Singh | Rahul Gandhi)
ಜಗನ್ ಪುಂಡಾಟ, ಆಂಧ್ರ ಅತಂತ್ರ... ವೈಎಸ್ ರಾಜಶೇಖರ ರೆಡ್ಡಿ ನಿರ್ಗಮನದ ನಂತರ ಕಾಂಗ್ರೆಸ್ ಆಂಧ್ರಪ್ರದೇಶದಲ್ಲಿ ಮುಳುಗುತ್ತಿರುವ ದೋಣಿ. ತೆಲಂಗಾಣ ವಿವಾದ ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಬಂಡಾಯ ಪಕ್ಷಕ್ಕೆ ಒದಗಿದ ಮಹತ್ವದ ಹಿನ್ನಡೆ.
PTI
ಹೆಚ್ಚು ಕಡಿಮೆ ಒಂದು ವರ್ಷದ ಅವಧಿಯಲ್ಲಿ ಆಂಧ್ರಪ್ರದೇಶ ಕಾಂಗ್ರೆಸ್ ಮೂರು ಮುಖ್ಯಮಂತ್ರಿಗಳನ್ನು ಕಂಡಿತು. ರಾಜಶೇಖರ ರೆಡ್ಡಿ ಅಕಾಲಿಕ ನಿಧನದ ನಂತರ ರೋಸಯ್ಯ, ಅವರ ರಾಜೀನಾಮೆ ನಂತರ ಈಗ ಕಿರಣ್ ಕುಮಾರ್ ರೆಡ್ಡಿ.
ತೆಲಂಗಾಣ ರಾಷ್ಟ್ರ ಸಮಿತಿಯ ಅಧ್ಯಕ್ಷ ಚಂದ್ರಶೇಖರ ರಾವ್ ಉಪವಾಸಕ್ಕೆ ಮಣಿದು, ಅಸ್ತು ಎಂದ ಬೆನ್ನಿಗೆ ಕೇಂದ್ರ ಸರಕಾರವು ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದುದು ಭಾರೀ ಹಿಂಸಾಚಾರಕ್ಕೆ ಕಾರಣವಾಯಿತು. ಅದು ಕಾಂಗ್ರೆಸ್‌ನಲ್ಲೇ ಭಾರೀ ಬಿರುಕನ್ನೂ ಸೃಷ್ಟಿಸಿತು. ಹಲವು ಮಂದಿ ರಾಜೀನಾಮೆ ನೀಡಿದರು. ಹಿಂಸಾಚಾರವನ್ನು ನಿಯಂತ್ರಿಸಲಾಯಿತಾದರೂ, ವಿಚಾರವಿನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಈಗ ಶ್ರೀಕೃಷ್ಣ ಸಮಿತಿಯು ವರದಿ ಸಲ್ಲಿಸುವ ಸಂದರ್ಭವಾಗಿರುವುದರಿಂದ ಮತ್ತೆ ಭುಗಿಲೇಳುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ.
ಈ ನಡುವೆ ಅವಸರದ ಅಡ್ಡದಾರಿಯಲ್ಲಿ ಮುಖ್ಯಮಂತ್ರಿಯಾಗಲು ಹೊರಟ ರಾಜಕೀಯ ರಂಗದ ಪೋರ ಜಗನ್ ಕಾಂಗ್ರೆಸ್ ಹೈಕಮಾಂಡಿಗೆ ಹಲವು ಬಾರಿ ಮುಜುಗರ ಸೃಷ್ಟಿಸಿದರು. ಕೊನೆಗೂ ಅದಕ್ಕೆ ಮುಕ್ತಿ ಒದಗಿದ್ದು ಅವರು ಪಕ್ಷದಿಂದ ಹೊರ ಹೋಗುವ ಮೂಲಕ. ಪೀಡೆ ತೊಲಗಿತು ಎಂದುಕೊಂಡರೂ, ಪಕ್ಷಕ್ಕಾದ ದೊಡ್ಡ ನಷ್ಟ ಎಂಬುದನ್ನು ನಿರ್ಲಕ್ಷಿಸಲಾಗದು.
ಕರ್ನಾಟಕ, ಮಹಾರಾಷ್ಟ್ರಗಳೂ... ಕೇಂದ್ರದಲ್ಲಿ ಕರ್ನಾಟಕದ ನಾಲ್ಕೈದು ಮಂತ್ರಿಗಳಿರುವ ಹೊರತಾಗಿಯೂ ರಾಜ್ಯದಲ್ಲಿ ಕಾಂಗ್ರೆಸ್ ಚಿಗಿತುಕೊಳ್ಳಲೇ ಇಲ್ಲ. ಉಪ ಚುನಾವಣೆಗಳು, ಪಂಚಾಯತ್ ಚುನಾವಣೆಗಳಲ್ಲಿ ಅದರ ಸಾಧನೆ ಬಹುತೇಕ ಶೂನ್ಯವೆಂಬಷ್ಟು ಕಳಪೆ.
ಕಾಂಗ್ರೆಸ್ ನಾಯಕರ ಕಚ್ಚಾಟ, ಬಣ ರಾಜಕೀಯಗಳು, ಕಾರ್ಯಕರ್ತರ ಕಡೆಗಣನೆ ಪಕ್ಷಕ್ಕೆ ಮುಳುವಾಯಿತು. ಬಳ್ಳಾರಿ ಗಣಿ ರೆಡ್ಡಿಗಳ ವಿರುದ್ಧ ಪರೋಕ್ಷವಾಗಿ ನಡೆಸಿದ ನಾಡನಡಿಗೆ ಯಾತ್ರೆಯನ್ನು ಮತದಾರ ಮಹಾನುಭಾವ ಕ್ಯಾರೇ ಅನ್ನದಿರುವುದು ಕೂಡ ಅದಕ್ಕಾದ ಮುಖಭಂಗ. ಪ್ರಸಕ್ತ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಕೊಂಚ ಜೀವಕಳೆ ಬಂದಂತೆ ಕಂಡು ಬರುತ್ತಿದೆ. ಅದು ಎಷ್ಟು ನಿಜ ಎನ್ನುವುದು ಜಿಲ್ಲಾ ಪಂಚಾಯತ್ ಚುನಾವಣೆ ಫಲಿತಾಂಶದಲ್ಲಿ ತಿಳಿಯಲಿದೆ.
ಅತ್ತ ಮಹಾರಾಷ್ಟ್ರ ಸರಕಾರ ಆದರ್ಶ ವಸತಿ ಹಗರಣದಲ್ಲಿ ಸಿಲುಕಿ ಒದ್ದಾಡಿತು. ಪರಿಣಾಮ ಮುಖ್ಯಮಂತ್ರಿ ಅಶೋಕ್ ಚೌಹಾನ್ ರಾಜೀನಾಮೆ ಕೊಟ್ಟು ಹೊರ ನಡೆದರು. ಕೆಲವು ಸಚಿವರು ಕೂಡ ಅದೇ ಹಾದಿ ತುಳಿಯಬೇಕಾಯಿತು.
ಸೋನಿಯಾ ನಾಯಕಿಯಾಗಿ ಸೊನ್ನೆ... ದಶಕಗಳ ಹಿಂದೆ ಮಕಾಡೆ ಮಲಗಿದ ಸ್ಥಿತಿಯಲ್ಲಿದ್ದ ಕಾಂಗ್ರೆಸ್‌ಗೆ ಅಮೃತವನ್ನು ಉಣ್ಣಿಸಿದ್ದು ಸೋನಿಯಾ ಗಾಂಧಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅವರು 2010ರಲ್ಲಿ ವಿಫಲ ನಾಯಕಿ. ಇದು ರೆಡ್ ಸಾರಿ ಎಂಬ ಪುಸ್ತಕ ಮತ್ತು ವಿಕಿಲೀಕ್ಸ್ ರಹಸ್ಯ ದಾಖಲೆಗಳಲ್ಲೂ ಬಹಿರಂಗವಾದವು.
PTI
ಪಕ್ಷದ ಕೆಲವು ನಾಯಕರು ನಡೆದುಕೊಳ್ಳುತ್ತಿರುವ ರೀತಿಯನ್ನು ನಿಯಂತ್ರಿಸಲು ಸೋನಿಯಾ ವಿಫಲರಾದರು. ಯಾರೋ ಬರೆದುಕೊಟ್ಟ ಭಾಷಣಗಳನ್ನು ಓದುತ್ತಿರುವಂತೆ ಕಂಡು ಬಂದರೂ, ಪ್ರಧಾನಿಯನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಬಿಡಲಿಲ್ಲ ಎಂಬ ಆರೋಪಗಳನ್ನು ಎದುರಿಸಿದರು.
ರಾಜ್ಯಗಳ ಚುನಾವಣೆಗಳಲ್ಲಿ ಎದುರಾಳಿಗಳ ಮೇಲೆ ಮಾಡಿದ ಆರೋಪಗಳನ್ನು ಮತದಾರ ಗಂಭೀರವಾಗಿ ಪರಿಗಣಿಸದೇ ಇದ್ದದ್ದು ಕೂಡ ಸೋನಿಯಾ ಮಟ್ಟಿಗೆ ಪ್ರಮುಖ ಸೋಲು. ಇದು ಎದ್ದು ಕಂಡದ್ದು ಬಿಹಾರದ ವಿಧಾನಸಭೆ ಚುನಾವಣೆಗಳು ಹಾಗೂ ಗುಜರಾತ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ. ಒಂದು ಕಾಲದಲ್ಲಿ ಈ ಎರಡು ರಾಜ್ಯಗಳನ್ನು ಭದ್ರ ಮುಷ್ಟಿಯಲ್ಲಿ ಹಿಡಿದು ಆಳ್ವಿಕೆ ನಡೆಸುತ್ತಿದ್ದ ಕಾಂಗ್ರೆಸ್, ಈ ಎರಡೂ ರಾಜ್ಯಗಳಲ್ಲಿ ಇದೀಗ ಏಳಲಾಗದೆ ಹಪಹಪಿಸುತ್ತಿರುವುದು ಸುಳ್ಳಲ್ಲ.
ಸಿಬಿಐ ದುರ್ಬಳಕೆ ಕಳಂಕ... ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂಬ ಆರೋಪ ಹಲವು ಬಾರಿ ಕೇಂದ್ರ ಸರಕಾರದ ಮೇಲೆ ಬಂತು. ನೇರವಾಗಿ ಇದು ಕಾಂಗ್ರೆಸ್ ಮೇಲೆ ದುಷ್ಪರಿಣಾಮ ಬೀರಿತು.
PTI
ಸಿಬಿಐಯನ್ನು ಕಾಂಗ್ರೆಸ್ ಹಲವು ಪ್ರಕರಣಗಳಲ್ಲಿ ತನಗೆ ಬೇಕಾದಂತೆ ಬಳಸಿಕೊಂಡದ್ದು ಕೂಡ ಕಣ್ಣಿಗೆ ಕಟ್ಟುವಂತಿದ್ದು ಇದಕ್ಕಿದ್ದ ಪ್ರಮುಖ ಕಾರಣ. ಮಾಯಾವತಿ-ಲಾಲೂ ಪ್ರಸಾದ್-ಮುಲಾಯಂ ಸಿಂಗ್ ಯಾದವ್ ಸರಕಾರವನ್ನು ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ಅವರ ಮೇಲಿನ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ನಿಧಾನಗತಿಯ ತನಿಖೆ ಅಥವಾ ಮುಚ್ಚಿ ಹಾಕುವ ಯತ್ನವಂತೂ ತೀವ್ರ ಟೀಕೆಗೆ ಗುರಿಯಾಯಿತು.
ಪ್ರಮುಖ ಹೊಡೆತ ತಿಂದದ್ದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿಚಾರದಲ್ಲಿ. ಅವರ ವಿರುದ್ಧ ಸಿಬಿಐಯನ್ನು ಛೂ ಬಿಟ್ಟು, ಸುಪ್ರೀಂ ಕೋರ್ಟಿನತ್ತ ಕಾಂಗ್ರೆಸ್-ಕೇಂದ್ರ ಬೆಟ್ಟು ಮಾಡಿತು. ಮೋದಿಯನ್ನು ಟೀಕಿಸುವವರನ್ನೆಲ್ಲ ಹುಡುಕಿ ಪದ್ಮ ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸಿತು. ಇದರ ಫಲವಾಗಿ ಗುಜರಾತಿನಲ್ಲಿ ನಡೆದ ಅಷ್ಟೂ ಚುನಾವಣೆಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಯಿತು.
ನಿಯಂತ್ರಣಕ್ಕೆ ಬಾರದ ಬೆಲೆ ಏರಿಕೆ... ಮೈತ್ರಿಕೂಟದ ಸರಕಾರದ ನೇತೃತ್ವ ವಹಿಸಿದ ಕಾಂಗ್ರೆಸ್ ಸಂಪೂರ್ಣವಾಗಿ ವಿಫಲವಾದದ್ದು ಜನಸಾಮಾನ್ಯರನ್ನು ನೇರವಾಗಿ ತಟ್ಟುವ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣದಲ್ಲಿ. ಪೆಟ್ರೋಲ್ ಬೆಲೆ ನಿರ್ಣಯವನ್ನು ಆಯಾ ತೈಲ ವಿತರಣಾ ಕಂಪನಿಗಳಿಗೆ ವಹಿಸಿಕೊಟ್ಟ ನಂತರ ಆ ಕಂಪನಿಗಳು ಆಗಾಗ್ಗೆ ತೈಲ ಬೆಲೆ ಏರಿಸತೊಡಗಿದವು. ಅದಕ್ಕೂ ಹೆಚ್ಚಾಗಿ, ಅಕ್ಕಿ, ಗೋಧಿ, ಬೇಳೆ ಕಾಳುಗಳು ಮತ್ತು ತರಕಾರಿಗಳ ಬೆಲೆ ಗಗನಕ್ಕೇರುತ್ತಲೇ ಹೋಯಿತು. ಪ್ರತಿಪಕ್ಷಗಳು ಒಂದಷ್ಟು ಕೂಗಾಟ ನಡೆಸಿದರೂ, ಅವುಗಳ ಧ್ವನಿ ತಗ್ಗಿಸಲು ಕಾಂಗ್ರೆಸ್ ಪಕ್ಷವು ಬೇರೊಂದು ವಿವಾದಗಳನ್ನು ಎಳೆದು ತಂದಿತೇ ಹೊರತು, ಏರುತ್ತಿರುವ ಬೆಲೆಗಳ ನಿಯಂತ್ರಣಕ್ಕೆ ಮನಸ್ಸು ಮಾಡಿಲ್ಲ.
ಇದೀಗ ವರ್ಷಾಂತ್ಯದಲ್ಲಿ ಈರುಳ್ಳಿಯು ಸ್ವತಃ ಕಾಂಗ್ರೆಸ್‌ನ ಕಣ್ಣಲ್ಲಿ ನೀರು ತರಿಸಿದ್ದರಿಂದಾಗಿ, ಬೆಲೆ ಏರಿಕೆ ಬಗ್ಗೆ ಒಂದಿಷ್ಟು ಎಚ್ಚೆತ್ತಂತೆ ಕಾಣುತ್ತದೆ. ಆದರೆ ಜನ ಸಾಮಾನ್ಯರ ವೇದನೆಗೆ ಸರಕಾರ ಎಚ್ಚೆತ್ತುಕೊಂಡಾಗ, ತಡವಾಗಿದ್ದು ಸುಳ್ಳಲ್ಲ!