ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಏರುತಿಹವು ಹಾರುತಿಹವು ನೋಡು ನಮ್ಮ ಬೆಲೆಗಳು! (Price Rise | Onion | Food Grains | Aam Admi | UPA | Congress)
Bookmark and Share Feedback Print
 
ಅವಿನಾಶ್ ಬಿ.
PTI
ಸಕ್ಕರೆ, ಅಕ್ಕಿ, ಬೇಳೆ ಮುಂತಾಗಿ, ಜನ ಸಾಮಾನ್ಯ ಬದುಕಲು ಅಗತ್ಯವಿರುವ ವಸ್ತುಗಳ ಬೆಲೆ ಈಗಾಗಲೇ ಏರಿದ ಬೆಲೆಗಳು ಒಂದಿಷ್ಟು ಡೋಲಾಯಮಾನವಾಗುತ್ತಾ, ಇಳಿಯುತ್ತಾ, ಏರುತ್ತಾ ಇದ್ದರೂ, ಏರುತ್ತಿದ್ದರೂ ಬೆಲೆ ನಿಯಂತ್ರಣಕ್ಕೆ ಯುಪಿಎ ಸರಕಾರ ವಿಫಲವಾಗಿದ್ದು, ಈರುಳ್ಳಿಯಂತೂ ಕತ್ತರಿಸುವ ಮೊದಲೇ ಕಣ್ಣೀರಿಳಿಸತೊಡಗಿದೆ. ಕಳೆದೆರಡು ವಾರಗಳಲ್ಲಿ ಉಳ್ಳಾಗಡ್ಡಿ ಬೆಲೆ ದುಪ್ಪಟ್ಟು ಆಗಿದ್ದು, ಕೆಲವೆಡೆಯಂತೂ ಕಿಲೋಗೆ 45ರವರೆಗೂ ತಲುಪಿದೆ. ವಾರವೇ ಕಳೆದರೂ ಬೆಲೆ ಇಳಿಯುವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಬೇರೆ ತರಕಾರಿಗಳ ಬೆಲೆಯೂ ಗಗನ ಕುಸುಮವೇ ಆಗಿರುವಾಗ, ಈರುಳ್ಳಿಯು ಜನ ಸಾಮಾನ್ಯರ ಆತ್ಯಂತ ಆತ್ಮೀಯ ತರಕಾರಿಯಾಗಿತ್ತು. ವಿಶ್ವದ ಎರಡನೇ ಅತಿದೊಡ್ಡ ಈರುಳ್ಳಿ ಉತ್ಪಾದಕ ದೇಶವಾದ ಭಾರತದಲ್ಲಿ ಈರುಳ್ಳಿಗೆ ರಾಜಕೀಯ ಕೋಲಾಹಲ ಸೃಷ್ಟಿಸಿದ ಇತಿಹಾಸವೂ ಇದೆ. 1998ರಲ್ಲಿ ನವದೆಹಲಿಯಲ್ಲಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಮುಖ್ಯಮಂತ್ರಿಯಾಗಿದ್ದಾಗ ನಡೆದ ಚುನಾವಣೆಯ ಸಂದರ್ಭ ಕಾಂಗ್ರೆಸಿಗರು ಈರುಳ್ಳಿ ಬೆಲೆ ಏರಿಕೆಯ ಹುಯಿಲೆಬ್ಬಿಸಿಯೇ ಅಧಿಕಾರಕ್ಕೇರಿದ್ದು ಇತಿಹಾಸ. ಸುಷ್ಮಾ ಪಕ್ಷ ಸೋತಿದ್ದೂ ಇದೇ ಈರುಳ್ಳಿ ಬೆಲೆ ಏರಿಕೆಯಿಂದ.

ಈರುಳ್ಳಿಯಿಲ್ಲದೆ ಬಹುತೇಕರ ಊಟ ಸಾಗುವುದಿಲ್ಲ. ಕಿಲೋಗೆ 12ರಿಂದ 20 ರೂಪಾಯಿಯೊಳಗಿದ್ದಾಗ ಎಲ್ಲವೂ ಸರಿ ಇತ್ತು. ಅಂಥದ್ದರಲ್ಲಿ ಬೆಲೆ 40 ರೂಪಾಯಿಗೂ ಹೆಚ್ಚಾಗಿರುವಾಗ ಪರಿಸ್ಥಿತಿ ಹೇಗಿರಬೇಡ!

PTI
ಪ್ರಮುಖವಾಗಿ ಈರುಳ್ಳಿ ಬೆಳೆಯುವ ಪ್ರದೇಶ, ಮಹಾರಾಷ್ಟ್ರದ ನಾಸಿಕ್‌ನಲ್ಲಿ ಅಕಾಲಿಕ ಮಳೆಯಿಂದಾಗಿ ಉತ್ಪಾದನೆ ಕುಂಠಿತವಾಗಿ, ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಇದು ಕೂಡ ಬೆಲೆ ಏರಿಕೆಗೆ ಒಂದು ಕಾರಣವಾದರೆ, ಸುಷ್ಮಾ ಸ್ವರಾಜ್ ಸರಕಾರ ಪತನಕ್ಕೆ ಕಾರಣವಾಗಿದ್ದು, ವ್ಯಾಪಾರಿಗಳು ಭಾರೀ ಪ್ರಮಾಣದಲ್ಲಿ ಗೋದಾಮುಗಳಲ್ಲಿ ಈರುಳ್ಳಿ ದಾಸ್ತಾನಿರಿಸಿದ್ದು, ಇದರಿಂದ ಬೆಲೆ ಆಕಾಶಕ್ಕೇರಿತ್ತು. ತನಿಖೆಯಿಂದ ಇದು ಬೆಳಕಿಗೆ ಬಂದಿತ್ತಾದರೂ, ತಿಳಿಯುವಾಗ ತಡವಾಗಿತ್ತು. ಚುನಾವಣೆಯಲ್ಲಿ ಬಿಜೆಪಿ ಇನ್ನಿಲ್ಲದಂತೆ ನೆಲಕಚ್ಚಿದ್ದು, ಆಮೇಲೆ ದೆಹಲಿಯಲ್ಲಿ ಅದು ಮೇಲೇಳಲೇ ಇಲ್ಲ. ಇದರ ಹಿಂದೆ ಕಾಂಗ್ರೆಸ್ ತಂತ್ರವಿತ್ತು ಎಂಬ ಆರೋಪಗಳೂ ಅಂದು ಕೇಳಿಬಂದಿದ್ದವು.

ನಾಸಿಕ್ ಮತ್ತು ರಾಜಸ್ಥಾನದಿಂದ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಅದೇ ರೀತಿ ಪ್ರಮುಖ ಈರುಳ್ಳಿ ಉತ್ಪಾದಕ ರಾಜ್ಯಗಳಾಗಿರುವ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ಒರಿಸ್ಸಾಗಳಲ್ಲೂ ಒಂದಿಲ್ಲೊಂದು ಕಾರಣಗಳಿಂದಾಗಿ (ಅತಿವೃಷ್ಟಿ ಅಥವಾ ಅನಾವೃಷ್ಟಿ) ಉತ್ಪಾದನೆಯ ಕೊರತೆಯಿದೆ.

ದಕ್ಷಿಣ ಭಾರತದ ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಸೈಕ್ಲೋನ್ ಎಫೆಕ್ಟ್ ಮಳೆ ಮತ್ತು ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಅತಿವೃಷ್ಟಿ. ಇಲ್ಲಿ ಕೊಳೆತು ಹೋಗುವಂತಿದ್ದ ಈರುಳ್ಳಿಯನ್ನು ರೈತರು ಅತ್ಯಂತ ಕಡಿಮೆ ಬೆಲೆಗೆ ಮಾರಬೇಕಾದ ಪರಿಸ್ಥಿತಿ.

ವಿಶೇಷವೆಂದರೆ ಭಾರತವು ಈರುಳ್ಳಿಯ ಪ್ರಮುಖ ರಫ್ತುದಾರ ರಾಷ್ಟ್ರವೂ ಆಗಿದೆ. ಹಾಗಿದ್ದರೆ ರಫ್ತು ಕೂಡ ಈರುಳ್ಳಿ ಬೆಲೆ ಏರಿಕೆಗೆ ಕಾರಣವಾಯಿತೇ? ಗೋದಾಮುಗಳಲ್ಲಿ ರಾಶಿ ರಾಶಿ ಬಿದ್ದಿರುವ ಆಹಾರ ಧಾನ್ಯಗಳನ್ನು ಮಾರುಕಟ್ಟೆಗೆ ಹೊರಗೆಳೆಯುವುದು ನಮ್ಮನ್ನು ಆಳುವವರಿಗೆ ಸಾಧ್ಯವಾಗುತ್ತಿಲ್ಲವೇಕೆ? ಕೇಂದ್ರದಲ್ಲಿ ಹಗರಣಗಳ ಗಲಾಟೆಯಲ್ಲಿ ತೊಳಲಾಡುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ ಉತ್ತರ ಹೇಳಬೇಕು.

ಇನ್ನು ತರಕಾರಿ ವಿಷಯ. ಬೀನ್ಸ್, ಕ್ಯಾರೆಟ್, ಬೆಂಡೆಕಾಯಿ, ಸೌತೆಕಾಯಿ, ತೊಂಡೆಕಾಯಿ ಮುಂತಾದವನ್ನು ಮುಟ್ಟುವುದೂ ಅಸಾಧ್ಯ. ಎಲ್ಲವೂ ಕಿಲೋಗೆ ನಲುವತ್ತರ ಆಸುಪಾಸು. ಕಿಲೋ ಖರೀದಿಸುತ್ತಿದ್ದವರು ಏನಾದರೂ ಬದುಕುಳಿಯಲು ತಿನ್ನಬೇಕಲ್ಲಾ ಎಂಬ ಕಾರಣಕ್ಕೆ ಪ್ರಮಾಣವನ್ನು ಅರ್ಧ, ಕಾಲು ಕಿಲೋಗೆ ಇಳಿಸಿಕೊಂಡಿದ್ದಾರೆ.

ಒಂದಂತೂ ಸತ್ಯ. ನಮ್ಮ ಸರಕಾರದಿಂದ ಪ್ರೀತಿಯಿಂದ "ಆಮ್ ಆದ್ಮೀ" ಎಂದು ಕರೆಸಿಕೊಳ್ಳುವ ಜನಸಾಮಾನ್ಯರು ಪ್ರತಿದಿನ ಬದುಕಲು ಬೇಕಾಗಿರುವ ಅಕ್ಕಿ, ಗೋಧಿ, ಬೇಳೆ, ತರಕಾರಿ, ಸಕ್ಕರೆ ಬೆಲೆಗಳು ಏರಿದ್ದು ಇಳಿಯುವ ಸೂಚನೆಗಳೇ ಕಾಣಿಸುತ್ತಿಲ್ಲವಾದುದರಿಂದ, ಮಧ್ಯಮವರ್ಗದ ಜನರಂತೂ ಕಂಗಾಲಾಗಿಬಿಟ್ಟಿದ್ದಾರೆ. ಇನ್ನೊಂದೆಡೆ, ಎಲ್ಲ ಬೆಲೆ ಏರಿಕೆಗಳ ರಾಣಿ ಎಂದೇ ಕರೆಯಲಾಗುವ ಇಂಧನ (ಪೆಟ್ರೋಲ್, ಡೀಸೆಲ್) ಬೆಲೆಗಳು ಸರಕಾರದ ನಿಯಂತ್ರಣ ಕಳೆದುಕೊಂಡು ಇಂಧನ ಪೂರೈಕೆ ಕಂಪನಿಗಳ ಪಾಲಾದ ಬಳಿಕ, ವಾರಕ್ಕೊಮ್ಮೆ ಚೂರು ಚೂರು ಅಂತ (ನಿಧಾನ ವಿಷದ ಮಾದರಿಯಲ್ಲಿ) ಏರುತ್ತಲೇ ಇದೆ. "ಆರ್ಥಿಕತೆ ಸುಧಾರಣೆಯಾಗತೊಡಗಿದೆ, ಹೆದರಬೇಡಿ" ಎಂದು ಸರಕಾರ ಹೇಳುತ್ತಿರುವಂತೆಯೇ, ಜನ ಸಾಮಾನ್ಯನಿಗೆ ಇದು ಸುಧಾರಣೆಯಾದ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ. ಏರಿದ ಬೆಲೆಗಳು ಇಳಿಯುತ್ತಿಲ್ಲ. ಇದೀಗ ಡೀಸೆಲ್ ಸಬ್ಸಿಡಿಯನ್ನೂ ತೆಗೆದುಹಾಕುವ ಬಗ್ಗೆ ಪರಿಸರ ಸಚಿವ ಜೈರಾಮ್ ರಮೇಶ್ ಪ್ರಸ್ತಾಪಿಸಿದ್ದಾರೆ. ಇದು ಮತ್ತೊಂದು ಸುತ್ತಿನ ಬೆಲೆ ಏರಿಕೆಗೆ ಹೇತುವಾಗುವುದಂತೂ ಸತ್ಯ.

ಬಡಕುಟುಂಬದ ವಿತರಣೆಗಾಗಿ ಮೀಸಲಾಗಿದ್ದ ರೇಶನ್ ಆಹಾರ ಧಾನ್ಯಗಳನ್ನು ವಿದೇಶಕ್ಕೆ ಸಾಗಾಟ ಮಾಡಿರುವ ಆಹಾರ ಹಗರಣವೊಂದು ಉತ್ತರ ಪ್ರದೇಶದ ಮೂಲಕ ಬೆಳಕಿಗೆ ಬರುತ್ತಿದೆ. ಇನ್ನು ಯಾವ ಯಾವ ರಾಜ್ಯಗಳಲ್ಲಿ ಏನೇನಾಗುತ್ತಿದೆಯೋ, ಅದೆಷ್ಟು ಗೋದಾಮುಗಳಲ್ಲಿ ರಾಶಿ ಬಿದ್ದಿದೆಯೋ... ಆದರೆ ಬೆಲೆ ಏರಿಕೆಗೆ ಮುಕ್ತಿ ದೊರಕಿಸಲು ನಮ್ಮ ಸರಕಾರಕ್ಕೆ ಸಮಯವೇ ಇದ್ದಂತಿಲ್ಲ.

ಈಗ ಈರುಳ್ಳಿ ವಿಷಯಕ್ಕೆ ಬಂದರೆ, ಭಾರತದಲ್ಲಿ ಈರುಳ್ಳಿ ಆಮ್ ಆದ್ಮೀಯ ಅತ್ಯಂತ ಪ್ರೀತಿಯ ಮತ್ತು ಅತ್ಯಂತ ರಾಜಕೀಯ ಸಂವೇದಿಯಾಗಿರುವ ತರಕಾರಿ ಎಂಬುದಂತೂ ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಬದುಕಲು ಅಗತ್ಯವಿರುವ ತರಕಾರಿ, ಅಕ್ಕಿ, ಬೇಳೆ, ಕಾಳುಗಳ ಬೆಲೆಯಂತೂ ಸೆನ್ಸೆಕ್ಸ್ ಸೂಚ್ಯಂಕದಂತೆ ಮೇಲೇರಿದೆಯಾದರೂ, ಇಳಿಯಲೊಲ್ಲದು. ಹೀಗಾಗಿ ಇನ್ನಾದರೂ ಜನ ಸಾಮಾನ್ಯರ ಭಾವನೆಗಳಿಗೆ ಸ್ಪಂದಿಸದೇ ಹೋದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕಿದೆ ಮುಂದೈತೆ ಮಾರಿಹಬ್ಬ!
ಸಂಬಂಧಿತ ಮಾಹಿತಿ ಹುಡುಕಿ