ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಕರ್ನಾಟಕ 2010: ಸೆಕ್ಸ್ ಕಾಂಡ, ಭೂ-ಕಾಂಡ, ಗಣಿ ಕಾಂಡ (2010 Roundup Karnataka | Karnataka Events of 2010 | Review)
Bookmark and Share Feedback Print
 
ದೇಶವನ್ನೇ ಬೆಚ್ಚಿ ಬೀಳಿಸಿದ ವಿಮಾನ ದುರಂತ, ರಾಜಕೀಯ ಅಸ್ಥಿರತೆ, ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು, ಭೂಹಗರಣಗಳ ಭರಾಟೆ, ಗಣಿಗಾರಿಕೆ, ಸೆಕ್ಸ್ ಹಗರಣ... ಇವೆಲ್ಲವೂ ಕಳೆದು ಹೋದ 2010ರಲ್ಲಿ ಕರ್ನಾಟಕದ ಜನತೆ ಕಣ್ಣಾರೆ ಕಾಣಬೇಕಾದ ಕಹಿ ಸತ್ಯಗಳು. ಕೊಟ್ಟ ಕೊನೆಯಲ್ಲಿ, ಮುಂಬರುವ 2011ರಲ್ಲಿ ರಾಜಕೀಯ ಪಕ್ಷಗಳ ಹಣೆಬರಹ ಬರೆಯುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳ ಮುನ್ನುಡಿಯೊಂದಿಗೆ ವರ್ಷ ಕೊನೆಗೊಂಡಿದೆ. ಜನವರಿ 4ರಂದೇ ಜನತಾ ನ್ಯಾಯಾಲಯದಿಂದ ಈ ಚುನಾವಣೆಗಳ ತೀರ್ಪು ಹೊರಬೀಳಲಿರುವುದರಿಂದ, ರಾಜಕೀಯ ಪಕ್ಷಗಳಿಗೆ ಹೊಸ ವರ್ಷದ ಉಡುಗೊರೆಯೋ, ಹೊಡೆತವೋ ಕಾದಿದೆ.

2010 ಆರಂಭದಿಂದಲೇ ಕರ್ನಾಟಕದ ಮಟ್ಟಿಗೆ ಒಳ್ಳೆಯದಾಗಿರಲಿಲ್ಲ. ಅಂತ್ಯದಲ್ಲಿ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಕರ್ನಾಟಕಕ್ಕೆ ಕೊಂಚ ನೆಮ್ಮದಿ ತಂದುಕೊಟ್ಟಿರುವುದರ ಹೊರತಾಗಿ, ಕೊನೆಯೂ ಒಳ್ಳೆಯದಿರಲಿಲ್ಲ. ನಡುವೆಯೂ ಒಳ್ಳೆಯದಿರಲಿಲ್ಲವೆಂಬ ಪರಿಸ್ಥಿತಿ.

ಪಕ್ಷದ ಆಂತರಿಕ ಬಂಡಾಯದಿಂದಾಗಿ ರೆಸಾರ್ಟ್ ರಾಜಕಾರಣಗಳ ಉತ್ತೇಜನದಿಂದ ಇನ್ನೇನು ಕುರ್ಚಿಯೇ ಕೈತಪ್ಪಿತು ಎಂಬ ಸ್ಥಿತಿಗೆ ತಲುಪಿದ ಮುಖ್ಯಮಂತ್ರಿ ಯಡಿಯೂರಪ್ಪ, ಗೆಳೆಯನ ಪತ್ನಿಯ ಮೇಲೆಯೇ ಅತ್ಯಾಚಾರ ನಡೆಸಿದ ಆರೋಪದಲ್ಲಿ ಕುರ್ಚಿ ತೊರೆಯಬೇಕಾಗಿ ಬಂದ ಹರತಾಳು ಹಾಲಪ್ಪ, ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ಹಗರಣದಲ್ಲಿ ಕೆಟ್ಟ ಹೆಸರು ತಂದುಕೊಂಡು ಕುರ್ಚಿಯಿಂದ ಇಳಿದ ರಾಮಚಂದ್ರೇಗೌಡ, ಭೂಹಗರಣ ಸ್ಫೋಟಕ್ಕೆ ಮುನ್ನುಡಿಯಾದ ಮಗ ಕಟ್ಟಾ ಜಗದೀಶ್ ನಾಯ್ಡು ಮೂಲಕ, ತಮ್ಮ ಮೇಲೂ ಆರೋಪ ಬಂದಾಗ ವಿಧಿಯಿಲ್ಲದೆ ರಾಜೀನಾಮೆ ನೀಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು - ಇವರೆಲ್ಲರೂ ಇಡೀ ವರ್ಷ ರಾಜ್ಯ ರಾಜಕಾರಣವನ್ನು ದೇಶದ ಮಟ್ಟದಲ್ಲಿ ಸುದ್ದಿ ಮಾಡಿಸಿದರು.

2010ರ ಚಳಿಗಾಲ ಆರಂಭವಾಗಿದ್ದೇ ಯಡಿಯೂರಪ್ಪ ಮೇಲೆ ವಿವಾದಗಳ ಹುತ್ತಗಳ ಮೂಲಕ. ಬೆಂಗಳೂರಿನ ಪಾಷ್ ಏರಿಯಾದಲ್ಲಿ ತನಗೆ ಬೆಂಗಳೂರಿನಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ಸುಳ್ಳು ಡಿಕ್ಲರೇಶನ್ ನೀಡಿದ ತನ್ನ ಮಗ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಸೈಟ್ ಕೊಡಿಸಿದ್ದು ಯಡಿಯೂರಪ್ಪ ಮೇಲಿನ ನೇರ ಆರೋಪ. ಅಲ್ಲಿಂದಾರಭ್ಯ ಯಡಿಯೂರಪ್ಪ ಮೇಲೆ ಆರೋಪಗಳ ಸುರಿಮಳೆಯೇ ಸುರಿಯಿತು. ಮತ್ತೊಬ್ಬ ಮಗ ವಿಜಯೇಂದ್ರ, ಮಗಳು, ಅಳಿಯ, ಸಹೋದರಿ, ಆಕೆಯ ಮಗಳು ಮತ್ತು ಅಳಿಯ... ಇವರಿಗೆಲ್ಲರಿಗೂ ಬಿಡಿಎ ಸೈಟು ಕೊಡಿಸಿದ್ದು ಸುದ್ದಿಯಾಯಿತು. ಭೂಹಗರಣ ದೊಡ್ಡ ಸುದ್ದಿಯಾಯಿತು.

ಇಷ್ಟೆಲ್ಲದರ ನಡುವೆಯೇ, ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್, ಹಾಡುತ್ತಾ, ಕುಣಿಯುತ್ತಾ, ಕುಪ್ಪಳಿಸುತ್ತಾ ಬೆಂಗಳೂರಿನಿಂದ ಬಳ್ಳಾರಿವರೆಗೆ ಭಾರೀ ಪಾದಯಾತ್ರೆಯನ್ನು ಭರ್ಜರಿ ಪ್ರಚಾರದೊಂದಿಗೆ ನಡೆಸುತ್ತಾ ರಾಜ್ಯದ ಜನತೆಗೆ ಮನರಂಜನೆ ನೀಡಿತು. ಇದಕ್ಕೂ ಮುನ್ನುಡಿ ಹಾಡಿದ್ದು, ಅಕ್ರಮ ಗಣಿಗಾರಿಕೆ ಕುರಿತು ಆರೋಪ ಪ್ರತ್ಯಾರೋಪಗಳ ನಡುವೆ, ಬಳ್ಳಾರಿ ಸಚಿವರು ಮತ್ತು ಪ್ರತಿಪಕ್ಷದ ಸಿದ್ಧರಾಮಯ್ಯ ಸಹಿತ ಹಲವು ನಾಯಕರು ತೊಡೆ ತಟ್ಟಿ, ತೋಳೇರಿಸಿ, ತಾಕತ್ತಿದ್ದರೆ ಬನ್ನಿ ಎಂದೆಲ್ಲಾ ಸವಾಲೊಡ್ಡಿಕೊಂಡದ್ದು.

ರಾಜ್ಯದಲ್ಲಿ ರಾಜಕೀಯದಲ್ಲಿ ಮಾತ್ರವೇ ಅಲ್ಲದೆ ಬೇರೆ ಬಿರುಗಾಳಿಯೂ ಎದ್ದಿತ್ತು 2010ರಲ್ಲಿ. ಇಂಟರ್ನೆಟ್‌ನಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿರುವ ಎರಡನೇ ಧಾರ್ಮಿಕ ನೇತಾರ ಎಂಬ ಹೆಗ್ಗಳಿಕೆಯ ಬಿಡದಿ ನಿತ್ಯಾನಂದ ಧ್ಯಾನಪೀಠದ ಸ್ವಾಮಿ ನಿತ್ಯಾನಂದ 'ಸೆಕ್ಸ್ ಕಾಂಡ'ದ ವೀಡಿಯೋ ಪ್ರಸಾರವಾಗಿ ವಿಶ್ವದ ಅಭಿಮಾನಿಗಳೆಲ್ಲರೂ ಶಾಕ್‌ಗೆ ಈಡಾದರು. ಈಗ ಅವರು ಜಾಮೀನು ಪಡೆದು ಹೊರಬಂದರೂ, ಅತ್ಯಾಚಾರ. ಅಸಹಜ ಲೈಂಗಿಕತೆಯ ಆರೋಪಗಳು ಇನ್ನೂ ತನಿಖೆಯಾಗುತ್ತಿವೆ. ವರ್ಷಾಂತ್ಯದಲ್ಲಿ ಹತ್ತು ತಿಂಗಳ ಬಳಿಕ ಬಹಿರಂಗವಾಗಿ ಕಾಣಿಸಿಕೊಂಡ ನಟಿ ರಂಜಿತಾ, ವೀಡಿಯೊದಲ್ಲಿ ಇದ್ದುದು ತಾನಲ್ಲವೇ ಅಲ್ಲ, ಇದು ಕ್ರೈಸ್ತ ಮಿಶನರಿಗಳಿಂದ ಪ್ರೇರಿತನಾದ ಲೆನಿನ್ ಕರುಪ್ಪನ್ ಎಂಬಾತನ ಪಿತೂರಿ ಎಂದು ಬಹಿರಂಗಪಡಿಸಿ, ಅದುವರೆಗೂ ಇದ್ದ ಶಂಕೆಗೆ ಪುಷ್ಟಿ ನೀಡಿದರು.

ಅತ್ಯಂತ ವಿವಾದಕ್ಕೆ ಕಾರಣವಾದ ರಾಜೀನಾಮೆ ಕೂಡ ಇದೇ ವರ್ಷ ನಡೆಯಿತು. ಅದುವೇ ಅಕ್ರಮ ಗಣಿಗಾರಿಕೆ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಕೈಗೊಳ್ಳದ ಕ್ರಮದಿಂದಾಗಿ ರೋಸಿಹೋದ ಲೋಕಾಯುಕ್ತ ಸಂತೋಷ ಹೆಗ್ಡೆ ರಾಜೀನಾಮೆ. ಕೇಂದ್ರೀಯ ಬಿಜೆಪಿ ನಾಯಕರ ಮಧ್ಯಪ್ರವೇಶದಿಂದ ಅವರು ರಾಜೀನಾಮೆ ಹಿಂತೆಗೆದುಕೊಂಡರು, ಲೋಕಾಯುಕ್ತಕ್ಕೆ ಪರಮಾಧಿಕಾರ ದೊರೆಯುತ್ತದೆ ಎಂಬ ಭರವಸೆಯಿಂದ. ಆಡ್ವಾಣಿ ಸಂಧಾನ ಯಶಸ್ವಿಯಾದರೂ, ಲೋಕಾಯುಕ್ತರು ವಿರೋಧ ಪಕ್ಷದ ನಾಯಕನಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಮತ್ತೆ ಮತ್ತೆ ಕೇಳಿಬರತೊಡಗಿದವು.

ಅಕ್ಟೋಬರ್ ತಿಂಗಳಲ್ಲಿ, ಬಿಜೆಪಿಯ 11 ಮಂದಿ ಹಾಗೂ ಆರು ಪಕ್ಷೇತರ ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡು, ಯಡಿಯೂರಪ್ಪ ಅವರನ್ನು ಬೀಳಿಸಲು ನೋಡಿದರು. ಆದರೆ ಎರಡೆರಡು ಬಾರಿ ವಿಶ್ವಾಸಮತ ಸಾಬೀತುಪಡಿಸಿದ ಯಡಿಯೂರಪ್ಪ, ಬೀಳುತ್ತಿದ್ದ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಸವಾಲೊಡ್ಡಿದವರೆಲ್ಲರೂ ಶಾಸಕತ್ವವನ್ನೇ ಕಳೆದುಕೊಂಡು, ಇದೀಗ ಕೋರ್ಟ್ ಮೆಟ್ಟಿಲಲ್ಲಿ ಹೋರಾಡುತ್ತಿದ್ದಾರೆ. ರೇಣುಕಾಚಾರ್ಯ ಅವರ ಅವಳಿ ವ್ಯಕ್ತಿತ್ವವೂ ಬಟಾಬಯಲಾಯಿತು. ರಾಜ್ಯಪಾಲರು-ಬಿಜೆಪಿ ತಿಕ್ಕಾಟವೂ ಅಸಹ್ಯವಾಗಿ ತಿರುವುಗಳನ್ನು ಕಂಡು, ಸಾಂವಿಧಾನಿಕ ಮುಖ್ಯಸ್ಥನ ಹುದ್ದೆಗೂ ಕಳಂಕ ಬಂದಿತು. ಪ್ರತಿಪಕ್ಷ ಮುಖಂಡರೆಲ್ಲಾ ಚಹಾ-ಕಾಫಿ ಸೇವಿಸಲು ರಾಜಭವನಕ್ಕೆ ಹೋಗಿಬರುತ್ತಿದ್ದಾರೆ ಎಂಬ ಆರೋಪ ಎದುರಿಸಿದರೆ, ರಾಜ್ಯಪಾಲರೇ ಪ್ರತಿಪಕ್ಷದ ನಾಯಕ ಎಂದೂ ಬಿಜೆಪಿಯವರಿಂದ ಹೀಗಳೆಸಿಕೊಂಡರು. ಇದು ದುರಂತಗಳಲ್ಲಿ ಒಂದು.

ಅದಕ್ಕೆ ಮೊದಲು, ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದು, ದೇಶ ಕಂಡ ಅತ್ಯಂತ ದಾರುಣ ವಿಮಾನ ಅಪಘಾತ. ದುಬೈಯಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಮಂಗಳೂರಿನಲ್ಲಿ ಪೈಲಟ್ ಅವಾಂತರದಿಂದಾಗಿ ಇಳಿದ ತಕ್ಷಣ ಸ್ಫೋಟಗೊಂಡು, 160ರು ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿಗಳಲ್ಲಿ 158 ಮಂದಿ ದಾರುಣ ಸಾವನ್ನಪ್ಪಿದ ಪ್ರಕರಣ ನಡೆದದ್ದು ಮೇ 22ರಂದು ಮುಂಜಾವ.

ಅಷ್ಟೆಲ್ಲಾ ರಾಜಕೀಯ ಆವಾಂತರಗಳು ಘಟಿಸುತ್ತಿದ್ದರೂ, ಎರಡು ವಿದೇಶೀ ಪ್ರಮುಖರ ಭೇಟಿಯು ದೇಶದ ಐಟಿ ಹೆದ್ದಾರಿಯಾಗಿರುವ ಬೆಂಗಳೂರಿನ ಇಮೇಜ್ ಹೆಚ್ಚಿಸಿತು. ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ ಮತ್ತು ಫ್ರೆಂಚ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಬೆಂಗಳೂರಿಗೆ ಭೇಟಿ ನೀಡಿ, ಔದ್ಯಮಿಕವಾಗಿ ಉತ್ತೇಜನ ನೀಡಿದರು. ಆದರೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ತಮ್ಮ ಮೊದಲ ಭಾರತ ಪ್ರವಾಸದ ವೇಳೆ ಬೆಂಗಳೂರಿಗೆ ಬರಲಿಲ್ಲ. ಔಟ್‌ಸೋರ್ಸಿಂಗ್ ಬಗ್ಗೆ ಒಬಾಮ ಅವರಿಗೆ ಬೆಂಗಳೂರಿನ ಬಗೆಗೆ ಹೇಗೂ ಅಸಮಾಧಾನ ಇದ್ದೇ ಇತ್ತು.

ಇಷ್ಟು ಸ್ಥೂಲ ಹಿನ್ನೋಟದೊಂದಿಗೆ, ಸದ್ಯದ ಭವಿಷ್ಯ ಹೇಗಿದೆ? ಜನವರಿ 4ರಂದು ಬರಲಿರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳ ತೀರ್ಪು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ಮತ್ತೆ ಪಕ್ಷದೊಳಗೆ ಬಂಡಾಯಕ್ಕೆ ಕಾರಣವಾಗುತ್ತದೋ, ಅಥವಾ ಬಂಡಾಯ ಮಾಡುವವರೆಲ್ಲರ ಬಾಯಿ ಮುಚ್ಚಿಸುತ್ತದೆಯೋ ಎಂದು ಕಾಕದು ನೋಡಬೇಕಾಗಿದೆ. ಫಲಿತಾಂಶವು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳ ರಾಜಕೀಯ ಭವಿಷ್ಯಕ್ಕೂ ಮುನ್ನುಡಿಯಾಗಲಿರುವುದಂತೂ ಸತ್ಯ. ಆ ಮೇಲೆ ರಾಜ್ಯಪಾಲರು ಮತ್ತು ಕರ್ನಾಟಕದ ಬಿಜೆಪಿ ಸರಕಾರದ ನಡುವಣ ತಿಕ್ಕಾಟ ಮತ್ತೆ ಜೋರಾಗಲಿದೆ. ಅಕ್ರಮ ಗಣಿಗಾರಿಕೆ, ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಗಣಿ ರೆಡ್ಡಿಗಳು ಯಡಿಯೂರಪ್ಪ ಅವರಿಗೆ ಬಿಸಿ ಮುಟ್ಟಿಸಬಹುದು ಮತ್ತು ರಾಜ್ಯಪಾಲರ ಕೆಂಗಣ್ಣಿನಡಿಯಲ್ಲೇ ಇರಬೇಕಾಗಬಹುದು. ವಿಧಾನಸಭೆಯ ಅಧಿವೇಶನ ಆರಂಭವಾಗುವ ದಿನ, ಸರಕಾರದ ಬರೆದುಕೊಟ್ಟ ಭಾಷಣ ಓದುವುದಿಲ್ಲ, ಅಗತ್ಯ ಬಿದ್ದರೆ ತಿದ್ದುಪಡಿ ಕೋರುವುದಾಗಿ ಈಗಾಗಲೇ ರಾಜ್ಯಪಾಲರು ಹೇಳಿದ್ದು, ಇದನ್ನು ಬಿಜೆಪಿ ವಿರೋಧಿಸುತ್ತಿದೆ. ಅಂತೂ ಮತ್ತೊಂದು ಸಾಂವಿಧಾನಿಕ ಸಂಘರ್ಷಕ್ಕೆ ವೇದಿಕೆ ಸಿದ್ಧಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ