ಭಾರತದ ಹಣದುಬ್ಬರ ದರವು 20 ವರ್ಷಗಳ ಕನಿಷ್ಠ ಮಟ್ಟಕ್ಕೆ ಅಂದರೆ ಶೇ.0.27ಗೆ ಇಳಿದಿದೆ ಅಂತೆಲ್ಲಾ ಸರಕಾರದ ಹೇಳಿಕೆ ಇಂದು ಹೊರಬಿದ್ದಿದೆ. ವಾಸ್ತವಿಕವಾಗಿ ಹಣದುಬ್ಬರ ದರ ಘೋಷಣೆಯ ಹಿಂದೆ ಯಾವ ಮಸಲತ್ತಿದೆ? ಎಂಬುದು ಶ್ರೀಸಾಮಾನ್ಯನ ಮನಸ್ಸಿನಲ್ಲಿ ಮೂಡಿರುವ ಶಂಕೆ.
ಆರ್ಥಿಕ ಹಣಕಾಸು ಹಿಂಜರಿತದ ಭೂತದೊಂದಿಗೆ ದೇಶದ ಜನಸಾಮಾನ್ಯರು ದಿನ ನಿತ್ಯ ಬದುಕಲು ಬೇಕಾಗುವಷ್ಟು ತಿನ್ನಲು, ಆಹಾರ ಸಾಮಾಗ್ರಿ ಬೆಲೆಗಳು ಕೈಗೆಟುಕದಷ್ಟು ಎತ್ತರಕ್ಕೇರಿರುವುದರಿಂದ ತತ್ತರಿಸುವುದು ಮುಂದುವರಿದೇ ಇದೆ. ಆದರೆ ಚುನಾವಣೆ ಘೋಷಣೆಯಾಗುವ ಮುನ್ನಾದಿನಗಳಿಂದಲೇ ಸರಕಾರವು ಹಣದುಬ್ಬರ ಪ್ರಮಾಣದ ಇಳಿಕೆ ಪ್ರಮಾಣವನ್ನು ಘೋಷಿಸುತ್ತಾ, ಜನ ಸಾಮಾನ್ಯರ ಆಕ್ರೋಶ ತಗ್ಗಿಸಲು ನೋಡಿತು ಮತ್ತು ಇದು ಮುಂದುವರಿಯುತ್ತಲೂ ಇದೆ ಎಂಬುದು ಜನತೆಯ ಅರಿವಿಗೆ ನಿಧಾನವಾಗಿ ಬರತೊಡಗಿದೆ.
ಇದಕ್ಕೆ ಕಾರಣವಿಷ್ಟೆ. ಹಣದುಬ್ಬರ ಪ್ರಮಾಣ ಈ ಪರಿಯಲ್ಲಿ ರಸಾತಳ ತಲುಪಿದ್ದರೂ, ದಿನನಿತ್ಯ ಬೇಕಾಗುವ ತರಕಾರಿ ಮತ್ತಿತರ ಖಾದ್ಯ ಸಾಮಾಗ್ರಿಗಳ ಬೆಲೆ ಮಾತ್ರ ಇಳಿಯುತ್ತಿಲ್ಲ ಏಕೆ ಎಂಬ ಶಂಕೆ ಎಲ್ಲರ ಮನಸ್ಸಿನಲ್ಲಿಯೂ ಕಾಡುತ್ತಿರುವುದು.
ಈ ಬಗ್ಗೆ ಪ್ರತಿಪಕ್ಷಗಳು ಮತ್ತು ದುಡಿಯುವ ವರ್ಗದ ಪರವಾಗಿರುವ ಎಡಪಕ್ಷಗಳ ಮೌನ ಮಾತ್ರ ತೀರಾ ಅಸಹನೀಯ. ಕೇವಲ ಇಲ್ಲ ಸಲ್ಲದ ವಿಷಯಗಳಲ್ಲಿ ಮೂಗು ತೂರಿಸುತ್ತಾ, ಇಲ್ಲದ ವಿವಾದ ಸೃಷ್ಟಿಸುತ್ತಾ ಮತ್ತು ಕೆದಕುತ್ತಾ ಕಾಲ ಕಳೆಯುತ್ತಿರುವ ರಾಜಕೀಯ ಪಕ್ಷಗಳಿಗೆ ಆಹಾರ ಸಾಮಾಗ್ರಿ ಬೆಲೆಯತ್ತ ಗಮನ ಹರಿಸಲು ಪುರುಸೊತ್ತಾದರೂ ಇದೆಯೇ ಎಂಬುದು ಮತದಾರರನ್ನು ಕಾಡುವ ಶಂಕೆ.
ಸರಕಾರದ ಈ ಬೊಗಳೆಯನ್ನು ಭಾರತೀಯ ಮತದಾರರಂತೂ ಸತ್ಯಸ್ಯ ಸತ್ಯ ಎಂದು ನಂಬಿಕೊಂಡು ಸುಮ್ಮನಾಗುತ್ತಿರುವುದು ವಿಶೇಷ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ ಸಿಎನ್‌ಬಿಸಿ ಟಿವಿ18ರ ಹಿರಿಯ ಸಂಶೋಧನಾ ವಿಶ್ಲೇಷಕ ಹರೇಶ್ ಸೋನೇಜಿ. ಮನಿಕಂಟ್ರೋಲ್ ಡಾಟ್ ಕಾಂ ಸೈಟಿನಲ್ಲಿ ಅವರು ಬರೆದಿರುವ ಈ ಲೇಖನವು ಜನರ ಕಣ್ಣು ತೆರೆಸಬಹುದೆಂಬ ಕಾರಣಕ್ಕೆ ಅದರ ಸಾರಾಂಶವನ್ನು ಇಲ್ಲಿ ನೀಡಲಾಗುತ್ತಿದೆ. ಇತ್ತ ಕಡೆ ಚುನಾವಣಾ ಆಯೋಗ ಗಮನ ಹರಿಸಬೇಕೆಂಬುದು ಅವರ ಒತ್ತಾಯ.
ಇದುವರೆಗೆ ಪ್ರತಿ ಶುಕ್ರವಾರ ಹಣದುಬ್ಬರ ಪ್ರಮಾಣ ಘೋಷಣೆಯಾಗುತ್ತಿತ್ತು. ಅದು ಮಾರುಕಟ್ಟೆ ಮೇಲೆ (ಸೆನ್ಸೆಕ್ಸ್) ನೇರ ಪರಿಣಾಮ ಬೀರುತ್ತಿರುವುದನ್ನು ಮನಗಂಡು, ಅಧೋಮುಖಿಯಾಗುತ್ತಿದ್ದ ಸೂಚ್ಯಂಕವನ್ನು ಮೇಲೇರಿಸುವ ನಿಟ್ಟಿನಲ್ಲಿ, ಸರಕಾರವು ಕೆಲವು ಸಮಯದ ಹಿಂದಷ್ಟೇ ಬದಲಾವಣೆಯೊಂದನ್ನು ಮಾಡಿ, ಪ್ರತಿ ಗುರುವಾರ ಹಣದುಬ್ಬರ ಪ್ರಮಾಣ ಘೋಷಣೆಗೆ ನಿರ್ಧರಿಸಿತು. ಅತ್ತ ಕಡೆ, ಶೇರು ಮಾರುಕಟ್ಟೆ ಚೇತರಿಸಿಕೊಂಡಿದೆ ಎಂಬ ಸಮಾಧಾನ ಜನತೆಗೆ.
ಆದರೆ, ಈ ಕುಸಿಯುವ ಹಣದುಬ್ಬರ ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದೂ ಅಷ್ಟೇ ವಾಸ್ತವ. ಗ್ರಾಹಕನ ದೃಷ್ಟಿಯಿಂದ ನೋಡಬಹುದಾದರೆ, ಈ ಹಣದುಬ್ಬರ ಎಂಬುದು ಎರಡಂಕಿಯಲ್ಲೇ ಇದೆ. ಇದು ಶೇ.15ರಿಂದ ಶೇ.18ರಷ್ಟು ಪ್ರಮಾಣದಲ್ಲಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ಅವರು.
ವಾಸ್ತವಿಕವಾಗಿ ಸರಕಾರ ಈ ರೀತಿ ಆಟ ಆಡುತ್ತಿರುವುದು ಸಗಟು ದರ ಸೂಚ್ಯಂಕ (ಹೋಲ್‌ಸೇಲ್ ಪ್ರೈಸ್ ಇಂಡೆಕ್ಸ್)ನಲ್ಲಿ. ಆದರೆ ಜನ ಸಾಮಾನ್ಯರಿಗೆ ನಿಜಕ್ಕೂ ತಟ್ಟುವುದು ಗ್ರಾಹಕ ದರ ಸೂಚ್ಯಂಕ (ಕನ್‌ಸ್ಯೂಮರ್ ಪ್ರೈಸ್ ಇಂಡೆಕ್ಸ್) ಎಂದು ತಿಳಿಸುವ ಹರೇಶ್, ಈ ಬಗ್ಗೆ ವಿವರಣೆ ನೀಡುತ್ತಾರೆ. ಶೇ.16ರಷ್ಟು ತೈಲ ಬೆಲೆಗಳ ಇಳಿಕೆ ಮತ್ತು ಶೇ.22ರಷ್ಟು ಲೋಹದ ಬೆಲೆಗಳ ಇಳಿಕೆಯ ಪರಿಣಾಮವಾಗಿ ಹಣದುಬ್ಬರವು ಕೂಡ ಕುಸಿದಿದೆ. ತೈಲ ಅಥವಾ ಲೋಹ ಬೆಲೆ ಇಳಿಕೆಯು ಜನ ಸಾಮಾನ್ಯನ ಜೇಬಿನ ಮೇಲೆ ಪರಿಣಾಮ ಬೀರುವುದು ಅತ್ಯಲ್ಪ. ಯಾಕೆಂದರೆ ಇವುಗಳ ನೇರ ಅಥವಾ ಪರೋಕ್ಷ ಬಳಕೆಯೂ ಕನಿಷ್ಠ ಪ್ರಮಾಣದಲ್ಲಿರುತ್ತದೆ.
ಶ್ರೀಸಾಮಾನ್ಯನಿಗೆ ಲೆಕ್ಕಕ್ಕಿರುವುದು ಆಹಾರ ಬೆಲೆಗಳು ಮಾತ್ರ. ಆಹಾರ ಸಾಮಾಗ್ರಿ ಹೊರತುಪಡಿಸಿದರೆ ಸಗಟು ದರ ಸೂಚ್ಯಂಕವು ಋಣಾತ್ಮಕವಾಗಿಯೇ ಇದ್ದಂತಾಗುತ್ತದೆ. ಅಂದರೆ ಆಹಾರಕ್ಕೆ ಸಂಬಂಧಿಸಿದಂತೆ, ಹಣದುಬ್ಬರ ದರದ ಏರಿಕೆಯ ವೇಗ ತಗ್ಗಿದ್ದರೂ, ಅದು ಏರುತ್ತಲೇ ಇದೆ. ಆಹಾರ ಸಾಮಾಗ್ರಿ ಕ್ಷೇತ್ರದಲ್ಲಿ ಪೂರೈಕೆಗಿಂತ ಬೇಡಿಕೆ ಪ್ರಮಾಣ ಹೆಚ್ಚಾಗುತ್ತಲೇ ಇದೆ.
ಜಗತ್ತಿನ ಹಲವಾರು ದೇಶಗಳು ಗ್ರಾಹಕ ದರ ಸೂಚ್ಯಂಕವನ್ನೇ ಪ್ರಕಟಿಸುತ್ತವೆಯೇ ಹೊರತು ಭಾರತದಂತೆ ಸಗಟು ದರ ಸೂಚ್ಯಂಕವನ್ನಲ್ಲ. ಹೀಗಾಗಿ ಜಾಗತಿಕವಾಗಿ ಹಣದುಬ್ಬರ ದರ ಇಳಿಕೆಯಾದಾಗ, ಭಾರತದಲ್ಲಿ ಅದು ಏರಿಕೆಯಲ್ಲಿರುತ್ತದೆ. ಆದರೆ ಹಣದುಬ್ಬರ ಕಡಿಮೆಯಾಗುತ್ತಿದೆ ಎಂದು ಸರಕಾರ ಘೋಷಿಸುತ್ತದೆ.
ಸಗಟು ದರ ಸೂಚ್ಯಂಕ ಲೆಕ್ಕಾಚಾರದ ವಿಧಾನವನ್ನು ಬದಲಾಯಿಸುವ ಕುರಿತು ಮತ್ತು ಗ್ರಾಹಕ ದರ ಸೂಚ್ಯಂಕವನ್ನು ಅಳವಡಿಸುವ ಕುರಿತು ಸರಕಾರ ಮಾತು ಆಡುತ್ತಲೇ ಇದೆ. ಆದರೆ ಮಾತುಕತೆಗಿಂತ ಹೆಚ್ಚೇನೂ ಇರುವುದಿಲ್ಲ. ಅದಕ್ಕೆ ಸಾಕಷ್ಟು (ಅಂದರೆ ವ್ಯಾಪಾರಿಗಳನ್ನು ಎದುರುಹಾಕಿಕೊಳ್ಳುವ) ಧೈರ್ಯ ಬೇಕು ಎನ್ನುತ್ತಾರೆ ಹರೇಶ್.
ಯಾಕೆಂದರೆ, ಭಾರತೀಯ ಗ್ರಾಹಕನಿಗೆ ಆಹಾರ ಬೆಲೆಗಳೇ ಮುಖ್ಯವಾಗಿರುವುದರಿಂದ, ಗ್ರಾಹಕ ದರ ಸೂಚ್ಯಂಕ ತಗ್ಗಿಸುವುದು ಎಂದರೆ ಹೆಚ್ಚಿನ ವ್ಯಾಪಾರಿಗಳು ವ್ಯವಹಾರವನ್ನೇ ಮುಚ್ಚಬೇಕಾಗಬಹುದು. ಅಸಲು ವಿಷಯವೆಂದರೆ, ಆಹಾರ ಸಾಮಾಗ್ರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೆ ತಡೆಹಿಡಿಯುವ ದಾಸ್ತಾನುದಾರರು, ಬೇಡಿಕೆಗಿಂತ ಪೂರೈಕೆಯ ಕೊರತೆಯಾಗುವಂತೆ ನೋಡಿಕೊಳ್ಳುತ್ತಾರೆ. ಈ ರೀತಿ ನಕಲಿ ಕೊರತೆ ಸೃಷ್ಟಿಸುತ್ತಿರುವ ದಾಸ್ತಾನುದಾರರ ಮೇಲೆ ಸರಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿರುವುದು ಅನಿವಾರ್ಯ. ಆದರೆ ಈ ದಾಸ್ತಾನುದಾರರಿಗಿರುವ 'ರಾಜಕೀಯ ಪ್ರಭಾವ' ಅವರಿಗೆ ಏನೂ ಆಗದಂತೆ ರಕ್ಷಿಸುತ್ತಿದೆ. ಅವರಲ್ಲಿ ಹೆಚ್ಚಿನವರು ರಾಜಕೀಯ ಪಕ್ಷಗಳ ಏಜೆನ್ಸಿಗಳೇ ಆಗಿರುತ್ತಾರೆ ಎಂಬುದು ದೇಶದ ಜನತೆಯ ದೌರ್ಭಾಗ್ಯ. ಅಂದರೆ ಇಲ್ಲಿ ಜನಹಿತದ ರಾಜಕೀಯ ಇಚ್ಛಾಶಕ್ತಿ ಇಲ್ಲ, ಅದಕ್ಕಾಗಿಯೇ ವಿರೋಧ ಪಕ್ಷಗಳು ಕೂಡ ಮೌನವಾಗಿರುವುದು ಎಂಬುದು ಖಚಿತವಾಗುತ್ತದೆ.
ಹಣದುಬ್ಬರ ಶೂನ್ಯ ಎಂಬುದು ಸ್ಥಾಪಿತ ಹಿತಾಸಕ್ತಿಗಳ ರಕ್ಷಣೆಗಾಗಿ ರೂಪಿಸಲಾಗಿರುವ 'ರಕ್ಷಣಾ ಪರದೆ' ಇದ್ದಂತೆ. ಈ ಆರ್ಥಿಕ ಹಿಂಜರಿತದ ಸಮಯದಲ್ಲಿ ವಾಸ್ತವಿಕ ಹಣದುಬ್ಬರವನ್ನು ಶೂನ್ಯಕ್ಕೆ ತರುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸುವ ಪಕ್ಷಗಳಿಗೆ ತನ್ನ ಮತ ಎಂದು ಹೇಳಿದ್ದಾರೆ ಲೇಖಕ ಹರೇಶ್.
ಸಾರ್ವಜನಿಕರನ್ನು ಮೂರ್ಖರನ್ನಾಗಿಸಲು ಭಾರತ ಸರಕಾರ ಯಾವ ಮಟ್ಟಕ್ಕೂ ಹೋಗಬಹುದೆಂಬುದಕ್ಕೆ ಇದು ಸಾಕ್ಷಿ. ಹಣದುಬ್ಬರದ ಸಂಖ್ಯೆ ಮುಂತಾದ ಅಂಕಿಅಂಶಗಳೆಲ್ಲವೂ ಸರಕಾರದ ಕಾರ್ಖಾನೆಯಲ್ಲಿ ಸಿದ್ಧವಾಗುವ ಸಂಗತಿ. ಏರುತ್ತಿರುವ ಬೆಲೆಗಳಿಂದಾಗಿ ಸರಕಾರಕ್ಕೆ ತೀವ್ರ ಹೊಡೆತ ಬೀಳಲಿದೆ ಎಂಬುದು ಅರಿವಿಗೆ ಬಂದಾಗ ಮತ್ತು ಜನರನ್ನು ಸಮಾಧಾನಿಸಲು ಚುನಾವಣಾ ನೀತಿ ಸಂಹಿತೆಗಳು ಅಡ್ಡ ಬಂದಾಗ, ಈ ಸಂಖ್ಯೆಗಳ ಮೂಲಕ ವೋಟು ಹೆಚ್ಚು ಪಡೆಯುವ ತಂತ್ರವಿದು ಎನ್ನುತ್ತಾರೆ ಹರೇಶ್. ವಾಸ್ತವವಾಗಿ ಇದು ಕೂಡ ಚುನಾವಣಾ ತಂತ್ರವಷ್ಟೆ. |