ಅವಿನಾಶ್ ಬಿ. ಪೊಲೀಸರಿಗೆ ಮನಬಂದಂತೆ ಕಲ್ಲೆಸೆಯಲಾಯಿತು; ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಯಿತು; ಕಾರು-ಬೈಕುಗಳನ್ನು ಸುಟ್ಟು, ಬಡಿದು ಪುಡಿ ಮಾಡಲಾಯಿತು; ಪೊಲೀಸರು ರಕ್ತ ಸುರಿಸುತ್ತಾ ಓಡಿದರು; ಪತ್ರಕರ್ತರ ಮೇಲೂ ಕಲ್ಲೆಸೆದು ಹಲ್ಲೆ ನಡೆಸಲಾಯಿತು... ಒಟ್ಟಿನಲ್ಲಿ ನ್ಯಾಯಾಂಗ, ಕಾರ್ಯಾಂಗ, ಮಾಧ್ಯಮರಂಗಗಳು ನಲುಗಿದವು.ಇದು ಶುದ್ಧ ಪುಂಡಾಟಿಕೆಯಾದರೂ ಗೂಂಡಾಗಳ ನಡುವಣ ಸಂಘರ್ಷದ ಚಿತ್ರಣವಲ್ಲ; ಹಾಗಂತ ತಾಲಿಬಾನೀಕರಣಗೊಳ್ಳುತ್ತಿರುವ ಪಾಕಿಸ್ತಾನದ ದೃಶ್ಯವೂ ಅಲ್ಲ. ನೀವು ನಂಬಲೇ ಬೇಕು. ನಮಗೆಲ್ಲಾ ನ್ಯಾಯ ಒದಗಿಸಲು ವಕಾಲತ್ತು ನಡೆಸುತ್ತಾ 'ಹೆಣಗಾಡುವ' ಕಾನೂನು ಪ್ರತಿಪಾದಕರಾದ ತಮಿಳುನಾಡು ವಕೀಲರು-ಪೊಲೀಸರು ಮಾಡಿದ್ದು! ಅದು ಕೂಡ ಯಾವುದೋ ನ್ಯಾಯಾಲಯವಲ್ಲ, ದೇಶದ ಘನತೆವೆತ್ತ ಹೈಕೋರ್ಟುಗಳಲ್ಲೊಂದಾದ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ!ಟಿವಿ ಚಾನೆಲ್‌ಗಳಲ್ಲಿ ಗುರುವಾರ ಅಪರಾಹ್ನ ಈ ಬೀದಿಜಗಳದಂತೆ ಪೊಲೀಸರು-ವಕೀಲರು ಕಚ್ಚಾಡುವ ದೃಶ್ಯಾವಳಿಗಳನ್ನು ನೋಡುತ್ತಿದ್ದರೆ, ಥೇಟ್ ಗೂಂಡಾ ಸಂಸ್ಕೃತಿಯ ಭವ್ಯ ದರುಶನ! ನ್ಯಾಯ ಒದಗಿಸುವಲ್ಲಿ ಪ್ರಧಾನ ಪಾತ್ರ ವಹಿಸಬೇಕಿದ್ದವರ ಕೈಯಲ್ಲಿ ಕಲ್ಲು, ದೊಣ್ಣೆ! ವಾಹನ ಪುಡಿಗಟ್ಟುವುದು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದು.... ಅಬ್ಬಬ್ಬಾ... ನ್ಯಾಯ ದೇವತೆಯು ಇದನ್ನೆಲ್ಲಾ ನೋಡದಂತೆ ಕಣ್ಣಿಗೆ ಕಪ್ಪು ಪಟ್ಟಿ ಹಾಕಿಟ್ಟದ್ದು ಇಲ್ಲಿ ಸಾರ್ಥಕವಾಯಿತು! ಮದ್ರಾಸ್ ಹೈಕೋರ್ಟ್‌ನಲ್ಲಿ ಗುರುವಾರ ನಡೆದದ್ದು ಇಡೀ ದೇಶವೇ ತಲೆ ತಗ್ಗಿಸಬೇಕಾದ ಘಟನೆ. ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಇಂಥದ್ದು ಇದುವರೆಗೆ ನಡೆದಿರಲಾರದು. ದೇಶದ ಆಧಾರ ಸ್ಥಂಭಗಳಲ್ಲೊಂದಾದ ನ್ಯಾಯಾಂಗ ವ್ಯವಸ್ಥೆಯ ನ್ಯಾಯ ಪ್ರತಿಪಾದಕರು, ಕಾನೂನು ಪಾಲಕರು ಕಾನೂನನ್ನೇ ಕೈಗೆತ್ತಿಕೊಂಡು ಮನಬಂದಂತೆ, ಕಲ್ಲು ತೂರಿದರು. ವ್ಯವಸ್ಥೆಯ ಮತ್ತೊಂದು ಆಧಾರ ಸ್ತಂಭ ಮಾಧ್ಯಮಗಳವರನ್ನೂ ಬಿಡಲಿಲ್ಲ. ಪತ್ರಕರ್ತರನೇಕರು ಕಲ್ಲೇಟು ತಿಂದು ರಕ್ತ ಸುರಿಸುತ್ತಾ ಓಡುತ್ತಿದ್ದರು. ನ್ಯಾಯಾಧೀಶರೂ ಗಾಯಗೊಂಡರು.ಇತ್ತೀಚೆಗಷ್ಟೇ ಇದೇ ಚೆನ್ನೈಯಲ್ಲಿ ಕಾನೂನು ಬೋಧಿಸುವ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮಚ್ಚು-ದೊಣ್ಣೆ ಹಿಡಿದು ಪೌರುಷ ಪ್ರದರ್ಶಿಸಿದ್ದನ್ನು ಕಂಡಿದ್ದೇವೆ, ಕೇಳಿದ್ದೇವೆ. ಹೀಗಾಗಿ ಇಂತಹ 'ಮೂಲಭೂತ' ಶಿಕ್ಷಣ ಪಡೆದು ಬಂದ ನ್ಯಾಯ ಪ್ರತಿಪಾದಕರಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ ಎಂಬ ಪ್ರಶ್ನೆ ಬಡ ಜನತೆಯದು.ನ್ಯಾಯದೇವತೆಯೇ, ಇವರನ್ನು ಕ್ಷಮಿಸು |
| ಥೇಟ್ ಗೂಂಡಾ ಸಂಸ್ಕೃತಿಯ ಭವ್ಯ ದರುಶನ! ನ್ಯಾಯ ಒದಗಿಸುವಲ್ಲಿ ಪ್ರಧಾನ ಪಾತ್ರ ವಹಿಸಬೇಕಿದ್ದವರ ಕೈಯಲ್ಲಿ ಕಲ್ಲು, ದೊಣ್ಣೆ! ವಾಹನ ಪುಡಿಗಟ್ಟುವುದು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದು.. ಅಬ್ಬಬ್ಬಾ... ನ್ಯಾಯ ದೇವತೆಯು ಇದನ್ನೆಲ್ಲಾ ನೋಡದಂತೆ ಕಣ್ಣಿಗೆ ಕಪ್ಪು ಪಟ್ಟಿ ಹಾಕಿಟ್ಟದ್ದು ಇಲ್ಲಿ ಸಾರ್ಥಕವಾಯಿತು! |
| |
ತಮಿಳುನಾಡಿನ ಚಿದಂಬರಂ ಮಂದಿರವೊಂದನ್ನು ತಮಿಳುನಾಡು ಸರಕಾರ ವಶಕ್ಕೆ ತೆಗೆದುಕೊಳ್ಳುವ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವಾದ ಮಂಡಿಸಲು ಮಂಗಳವಾರ ಹೈಕೋರ್ಟಿಗೆ ಬಂದಿದ್ದ ಜನತಾ ಪಾರ್ಟಿ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ಅವರ ಮೇಲೆ ಈ ವಕೀಲರೆಲ್ಲ, ನ್ಯಾಯ ಪೀಠದ ಆವರಣದೊಳಗೆ ನುಗ್ಗಿ ಸೇರಿ, ಕೊಳೆತ ಮೊಟ್ಟೆ ತೂರಿ ಹಲ್ಲೆ ಮಾಡಿದಾಗಲೇ ಈ ವಕೀಲರ ಘನತೆ ಎಷ್ಟರ ಮಟ್ಟಿಗಿದೆ ಎಂಬುದು ಅರಿವಿಗೆ ಬಂದಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 17 ಮಂದಿ ಆರೋಪಿ ವಕೀಲರನ್ನು ಬಂಧಿಸುವುದನ್ನು ಈ ವಕೀಲರು ವಿರೋಧಿಸಿ ಪ್ರತಿಭಟನೆ ಮಾಡಿದಾಗ, ಪೊಲೀಸರು ಗತ್ಯಂತರವಿಲ್ಲದೆ ಲಾಠಿ ಚಾರ್ಜ್ ಮಾಡಬೇಕಾಯಿತು. ಶ್ರೀಲಂಕಾದಲ್ಲಿ ನರಮೇಧ ನಡೆಸುತ್ತಿದ್ದ ಉಗ್ರಗಾಮಿ ಸಂಘಟನೆ ಎಲ್ಟಿಟಿಇಯನ್ನು ವಿರೋಧಿಸುತ್ತಿರುವ ಸುಬ್ರಹ್ಮಣ್ಯಂ ಸ್ವಾಮಿಯನ್ನೇ ಬಂಧಿಸಬೇಕು ಎಂಬುದು ಈ ವಕೀಲರ ಒತ್ತಾಸೆಯೂ ಆಗಿತ್ತು.ಈ ಪೂರ್ಣ ಘಟನೆಯ ಮೂಲ ಬೇರು ಇರುವುದು ಶ್ರೀಲಂಕಾದಲ್ಲಿ. ಎಲ್ಟಿಟಿಇಯನ್ನು ನಿರ್ನಾಮ ಮಾಡಲು ಅಲ್ಲಿನ ಸರಕಾರ ಪಣತೊಟ್ಟಿದ್ದು, ಎಲ್ಟಿಟಿಇ ನೆಲೆಗಳನ್ನೆಲ್ಲಾ ಒಂದೊಂದಾಗಿ ಆಹುತಿ ಮಾಡಿಕೊಳ್ಳುತ್ತಿದೆ. ತಮಿಳರ ಮೇಲೆ ದೌರ್ಜನ್ಯವಾಗುತ್ತಿದೆ, ತಮಿಳು ನಾಗರಿಕರು ಸಾಯುತ್ತಿದ್ದಾರೆ, ಅವರನ್ನು ರಕ್ಷಿಸಬೇಕು ಎಂಬುದು ಮೇಲ್ನೋಟಕ್ಕೆ ತಮಿಳುನಾಡಿನ ರಾಜಕೀಯ ಪಕ್ಷಗಳ ವಾದವಾಗಿದ್ದರೂ, ಅದರ ಒಳಾಂಶ ಬೇರೆಯೇ ಇದೆ ಎಂಬುದಕ್ಕೆ ಈ ಘಟನೆಯೂ ಸಾಕ್ಷಿಯಾಯಿತು.ಈ ಥರಾ Law-lessness ತೋರ್ಪಡಿಸಿದ್ದು ತಮಿಳುನಾಡಿನ ಲಾಯರ್ಸ್ ಮಾತ್ರವೇ? ಅಲ್ಲ, ಅದೇ ಅತ್ತ ನವದೆಹಲಿಯಲ್ಲಿ ದೇಶದ ಆಧಾರ ಸ್ತಂಭಗಳಲ್ಲಿ ಮತ್ತೊಂದು ಕಂಬವೂ ನಲುಗಿತು. ಅದೇ ಶಾಸಕಾಂಗ! ಸಂಸತ್ತಿನಲ್ಲಿ ತಮಿಳು ಸಂಸದರು ಇದೇ ಎಲ್ಟಿಟಿಇ ನಿರ್ನಾಮ ಪ್ರಕ್ರಿಯೆಯನ್ನು ಮುಂದಿಟ್ಟುಕೊಂಡು ಕೋಲಾಹಲ ಮಾಡಿದರು. ಯುದ್ಧ ನಿಲ್ಲಿಸುವಂತೆ ಶ್ರೀಲಂಕಾ ಸರಕಾರದ ಮೇಲೆ ಒತ್ತಡ ಹೇರಬೇಕೆಂಬುದು ಮರುಮಾಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ), ಪಾಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಸದಸ್ಯರ 'ಹಕ್ಕೊತ್ತಾಯ'! ಪ್ರಣಬ್ ಮುಖರ್ಜಿ ಮಂಗಳವಾರ ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆ ಅವರನ್ನು ಕೆರಳಿಸಿತ್ತು. ಎಲ್ಟಿಟಿಇ ಶ್ರೀಲಂಕಾದಲ್ಲಿ ತಮಿಳು ಜನರ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದೆ ಎನ್ನುತ್ತಾ, ಎಲ್ಟಿಟಿಇಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸುತ್ತಾ, ಯುದ್ಧ ನಿಲ್ಲಿಸಲು ಶ್ರೀಲಂಕಾದ ಮೇಲೆ ಭಾರತ ಒತ್ತಡ ಹೇರುವುದಿಲ್ಲ ಎಂದಿದ್ದರು ವಿದೇಶಾಂಗ ಸಚಿವ ಪ್ರಣಬ್. ಈ ಸಂಸದರು ಗುರುವಾರ ಕಪ್ಪು ಅಂಗಿ ತೊಟ್ಟುಕೊಂಡು ಬಂದು ಮಾಡಿದ ಗಲಾಟೆಯಿಂದ ರೋಸಿ ಹೋದ ಸ್ಪೀಕರ್ ಸೋಮನಾಥ ಚಟರ್ಜಿ ಕೆಂಡಾಮಂಡಲರಾಗಿ, 'ಕಲಾಪ ನಡೆಸುವುದಕ್ಕಾಗಿ ಇರುವ ಸಾರ್ವಜನಿಕರ ಹಣವನ್ನು ಈ ರೀತಿ ಪೋಲು ಮಾಡುತ್ತೀರೇಕೆ? ನಿಮಗೆ ಬಿಡಿಗಾಸು ಭತ್ಯೆಯೂ ಇಲ್ಲ, ಓಟು ಬರಲಿ, ನಿಮಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ' ಎನ್ನುತ್ತಾ ಸದನವನ್ನು ಇದ್ದಕ್ಕಿದ್ದಂತೆ ಮುಂದೂಡಿಬಿಟ್ಟರು.ಇನ್ನೊಂದೆಡೆ, ದೇಶದ ವರಿಷ್ಠ ನ್ಯಾಯದಾನ ಕೇಂದ್ರ ಸುಪ್ರೀಂ ಕೋರ್ಟು ಕೂಡ ತಮಿಳುನಾಡಿನ ವಕೀಲರ 'ಅನ್ಯಾಯ'ವನ್ನು ಗುರುತಿಸಿದೆ. ಈ ವರ್ಷದಲ್ಲಿ ಇದುವರೆಗೆ ಅದು-ಇದು ಎಂಬ ಮುಷ್ಕರಗಳಿಂದಾಗಿ ಕೇವಲ 9 ದಿನ ಮಾತ್ರ ನ್ಯಾಯಾಂಗ ಕಲಾಪಗಳಿಗೆ ಅವಕಾಶ ಮಾಡಿಕೊಟ್ಟಿದ್ದ ತಮಿಳುನಾಡು ವಕೀಲರ 'ವೃತ್ತಿ ಬದ್ಧತೆ' ಪ್ರಶ್ನಿಸಿ ಬೆಂಗಳೂರಿನ ಐಐಎಂ ಪ್ರೊಫೆಸರ್ ಮುರಳೀಧರನ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು, ಇದ್ದಬದ್ದ ವಿಷಯಗಳಿಗೆಲ್ಲಾ ಮುಷ್ಕರ ನಡೆಸುತ್ತಿರುವ ತಮಿಳುನಾಡು ವಕೀಲರಿಗೆ ನೋಟಿಸ್ ಜಾರಿ ಮಾಡಿದೆ.ಮುತ್ತಿನಂತಹ ನ್ಯಾಯದ ಮಾತುಗಳು ಬರಬೇಕಿದ್ದ ಈ ವಕೀಲರ ಬಾಯಲ್ಲಿ, ಸುಬ್ರಹ್ಮಣ್ಯಂ ಸ್ವಾಮಿ ಬಂದಾಗ 'ಬ್ರಾಹ್ಮಣ ನಾಯಿ, ಧಿಕ್ಕಾರ'; 'ರಾಜೀವ್ ಗಾಂಧಿ ಹಂತಕ ತೊಲಗಾಚೆ' ಎಂಬಿತ್ಯಾದಿ ಸ್ಲೋಗನ್‌ಗಳು! ಇತ್ತೀಚೆಗೆ ಶ್ರೀಲಂಕಾದಲ್ಲಿ ಯುದ್ಧದ ಬಿಸಿ ಜೋರಾಗಿ, ಎಲ್ಟಿಟಿಇಯು ಕೈಸೋಲುವ ಹಂತ ತಲುಪಿದ್ದಾಗ ಚೆನ್ನೈಯಲ್ಲಿ ತಮಿಳುನಾಡು ಯುವಕನೊಬ್ಬ ಆತ್ಮಾಹುತಿ ಮಾಡಿಕೊಂಡ ಸಂದರ್ಭ, ಇದೇ ವಕೀಲರು ಬಸ್ಸೊಂದನ್ನು 'ಅಪಹರಿಸಿ' ಶಾಸ್ತ್ರಿಭವನಕ್ಕೆ ಕೊಂಡೊಯ್ದು, ಶ್ರೀಲಂಕಾದಲ್ಲಿ ತಮಿಳರ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು.ಈ ರೀತಿ ಗೂಂಡಾ ಸಂಸ್ಕೃತಿಯುಳ್ಳ ಕಾನೂನು ಪರಿಪಾಲಕರಿಂದ ನಾವು ಏನನ್ನು ನಿರೀಕ್ಷಿಸಬಹುದು? ಪತ್ರಕರ್ತರು, ಪೊಲೀಸರ ಮೇಲೆ ನಡೆದ ಹಲ್ಲೆಯಂತೂ ಖಂಡನೀಯ. ನಾಚಿಕೆಗೇಡು. |