ಗುಜರಾತ್ ಚುನಾವಣೆಯಲ್ಲಿ ಮೋದಿ, ಮಾಧ್ಯಮ ಮತ್ತು ರಾಜಕೀಯ ಈ ಮೂರು ಅಂಶಗಳು ನಿರ್ಣಾಯಕ ಪಾತ್ರ ಎನ್ನುವುದಕ್ಕಿಂತ ತಮ್ಮ ಅಸ್ತಿತ್ವಕ್ಕೆ ಸೆಣಸಿದ್ದವು. ಆ ಸೆಣಸಾಟದಲ್ಲಿ ಮತದಾರ ಯಾರ ಪರ ನಿಂತಿದ್ದಾನೆ ಎನ್ನುವುದನ್ನು ಫಲಿತಾಂಶವೇ ಸ್ಪಷ್ಟಪಡಿಸಿದೆ.
ಮೊದಲನೆಯದಾಗಿ ಮೋದಿ ಎಂಬ ವ್ಯಕ್ತಿ ಏಕಪಕ್ಷೀಯವಾಗಿ ಚುನಾವಣೆಯನ್ನು ಗೆದ್ದರೇ ? ನಿಸ್ಸಂಶಯವಾಗಿ ಇದು ಮೋದಿ ಗೆಲುವು. ಈ ಗೆಲುವಿನಲ್ಲಿ ಪಕ್ಷ ಮತ್ತು ಉಳಿದ 181 ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ನೆಪ ಮಾತ್ರವಾಗಬೇಕಾದ ಅನಿವಾರ್ಯತೆಯನ್ನು ರಾಜಕೀಯ ತಂದಿತು. ಜಾತಿ ರಾಜಕಾರಣದ ಮೇಲೆ ಮೋದಿಯವರನ್ನು ಸದೆಬಡಿಯಬೇಕು ಎಂದು ಕೇಶುಭಾಯ್ ಪಟೇಲ್ ಮಾಡಿದ ಭಿನ್ನಮತದ ತಂತ್ರ ವಿಫಲವಾಗಲು ಕಾರಣ ಏನು ? ಸೌರಾಷ್ಟ್ರದಲ್ಲಿನ ಪ್ರಬಲ ಪಟೇಲ್ ಸಮುದಾಯ ಎಂದಿನಂತೆ ನರೇಂದ್ರ ಮೋದಿಯ ಬೆಂಬಲಕ್ಕೆ ನಿಂತಿದ್ದು ಗಮನಿಸಿದರೆ ಒಂದು ಕೇಶು ಭಾಯ್ ಹಿಡಿತ ಸಡಿಲವಾಗಿರಬೇಕು ಇಲ್ಲ ಮೋದಿಯ ವೈಬ್ರೆಂಟ್ ಗುಜರಾತ್ ಫಲ ಪಟೇಲ್‌ರಿಗೆ ದಕ್ಕಿರಬೇಕು. ಗುಜರಾತಿ ಹೇಳಿಕೇಳಿ ಮಾರವಾಡಿ ರಾಜ್ಯ. ಲಾಭದ ಲೆಕ್ಕ ಹಾಕುವ ಕಲೆಯನ್ನು ಅವರಿಂದಲೇ ಕಲಿಯಬೇಕು. ಜಾತಿ ರಾಜಕಾರಣಕ್ಕೆ ಬಿದ್ದು ಮುಂಬರುವ ದಿನಗಳನ್ನು ಹಾಳು ಮಾಡಿಕೊಳ್ಳಲು ಸಿದ್ದರಾಗದೇ ಮೋದಿ ಪರ ನಿಲ್ಲಲು ಈ ಲಾಭದ ಲೆಕ್ಕಾಚಾರವೆ ಕಾರಣ ವಿನಃ ಮತ್ತೇನೂ ಅಲ್ಲ.
ಮೋದಿ ಮತ್ತು ರಾಜಕಾರಣ ಹೇಗೇ ಇರಲಿ. ಗುಜರಾತ್ ಇಂದು ಬದಲಾಗಿದೆ. 40 ವರ್ಷಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಧಿಸಲಾಗದ್ದನ್ನು ಮೋದಿ ಸಾಧಿಸಿದ್ದಾರೆ. ಕಗ್ಗಾಡಿನಲ್ಲಿ ಇರುವ ಗ್ರಾಮಕ್ಕೆ ಬೆಳಕು ಹರಿದಿದೆ. ಬದಲಾದ ಗುಜರಾತ್‌ಗಿಂತ ಮೋದಿ ಇಂದು ಹೆಚ್ಚು ಪ್ರಸ್ತುತ ಮತ್ತು ಗುಜರಾತ್‌ಗೆ ಅನಿವಾರ್ಯ ಎಂಬಂತಾಗಿದೆ. ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ, ಭಾರತೀಯ ಜನತಾ ಪಕ್ಷದ ಚಿಂತಕರ ಚಾವಡಿಗೆ ಮಾತ್ರ ಒಂದು ಕಾಲದಲ್ಲಿ ಸೀಮಿತವಾಗಿದ್ದರು. ಶಂಕರ ಸಿನ್ಹಾ ವಘೇಲಾ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟು ಮುಂದುವರಿದು ಕೇಶುಭಾಯ್ ಪಟೇಲ್ ವಿರುದ್ದ ಬಂಡಾಯ ಎದ್ದ ಮೋದಿ ರಾಜ್ಯಕಾರಣದಲ್ಲಿ ಸಕ್ರೀಯ ಪಾತ್ರ ವಹಿಸಿದ್ದರು.ಮೋದಿ ಅಲ್ಲಿಂದ ಸಾಗಿದ್ದು ಬಹುದೂರದ ಹಾದಿ ಇಂದು ನಿಸ್ಸಂಶಯವಾಗಿ ಮೋದಿ, ಅಡ್ವಾಣಿ ಮತ್ತು ವೆಂಕಯ್ಯನಾಯ್ಡು ಮುಂತಾದ ಹಿರಿಯ ನಾಯಕರ ನಡುವೆ ನಿಂತಿದ್ದಾರೆ. ಅತ್ತ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ನರೇಂದ್ರ ಮೋದಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಮೋದಿ ಪ್ರಾರಂಭದಲ್ಲಿ ಜಪಿಸಿದ್ದು ವೈಬ್ರೆಂಟ್ ಗುಜರಾತ್ ಮಂತ್ರ. ವಿಚಿತ್ರ ನೋಡಿ ಇದೇ ಮಂತ್ರ ಮೋದಿ ಜಪಿಸುತ್ತ ಕುಳಿತಿದ್ದರೆ, ಮಾಧ್ಯಮಗಳ ಪ್ರಕಾರ ಮೋದಿ ಅಧಿಕಾರದಿಂದ ಕೆಳಗಿಳಿಯಬೇಕಿತ್ತು. ಮೋದಿ ಈ ಬಾರಿಯ ಚುನಾವಣೆಯಲ್ಲಿ ಉಗ್ರ ಹಿಂದುತ್ವ ಪ್ರತಿಪಾದಿಸಿಲ್ಲ. ಪ್ರತಿಪಾದಿಸಿದ್ದು ಭಯೋತ್ಪಾದನೆಯ ವಿರುದ್ಧದ ಹೋರಾಟ ಮಾತ್ರ. ಸೋನಿಯಾ ಗಾಂಧಿ ಯಾವಾಗ ಮೋದಿಯನ್ನು "ಸಾವಿನ ವ್ಯಾಪಾರಿ" ಎಂದು ಕರೆದರೋ ಅಲ್ಲಿಂದ ಮೋದಿಯ ಚುನಾವಣಾ ಭಾಷಣದ ಶೈಲಿ ಪೂರ್ಣವಾಗಿ ಬದಲಾಯಿತು. ಇದು ಕಾಂಗ್ರೆಸ್ ಮಾಡಿದ್ದು ಅತಿದೊಡ್ಡ ತಪ್ಪು ಸೈದ್ದಾಂತಿಕ ನೆಲೆಗಟ್ಟಿನ ಮೇಲೆ ಚುನಾವಣೆಯನ್ನು ಎದುರಿಸಬೇಕಾದ ಪಕ್ಷ ವೈಯಕ್ತಿಕ ಹಿಯಾಳಿಕೆಗೆ ತೊಡಗಿದ್ದು, ಪ್ರಜಾಪ್ರಭುತ್ವದ ದುರಂತ.
|