ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಗಾಯನದ 'ಭೀಮಸೇನ', ಭಾರತದ ರತ್ನ (Bhimsen Joshi No more | hindustani Classical Singer | Kirana Gharana)
Bookmark and Share Feedback Print
 
PTI

[ಇದು ಪಂಡಿತ ಭೀಮಸೇನ ಜೋಶಿ ಅವರಿಗೆ ಭಾರತ ರತ್ನ ಪುರಸ್ಕಾರ

ದೊರೆಸಂದರ್ಭದಲ್ಲಿ ವೆಬ್‌ದುನಿಯಾ ಪ್ರಕಟಿಸಿದ ಲೇಖನ]

53 ವರ್ಷಗಳ ಬಳಿಕ ಕನ್ನಡ ನೆಲಕ್ಕೆ ಮತ್ತೊಂದು ಭಾರತ ರತ್ನ ಪುರಸ್ಕಾರ ದೊರೆತಿದ್ದು, ಇದು ಈಗಷ್ಟೇ ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡು ಹೆಮ್ಮೆಯಲ್ಲಿರುವ ಕನ್ನಡ ನಾಡಿಗೆ ಸುವರ್ಣ ಸಂಭ್ರಮದ ದಿನ. ಕನ್ನಡಿಗ ಸರ್ ಎಂ. ವಿಶ್ವೇಶ್ವರಯ್ಯ ಅವರು ಭಾರತ ರತ್ನವಾಗಿ ಕಂಗೊಳಿಸಿದ ನಂತರ, ಮತ್ತೊಬ್ಬ ಕನ್ನಡಿಗ, 86ರ ಹರೆಯದ ಪಂಡಿತ್ ಭೀಮಸೇನ್ ಜೋಷಿ ಭಾಜನರಾಗಿದ್ದಾರೆ.

ಸ್ವರ ಸಾಮ್ರಾಟ ಭೀಮಸೇನ ಜೋಶಿ ಇನ್ನಿಲ್ಲ...

ಕರ್ನಾಟಕ ಸಂಗೀತದ ಪ್ರಭಾವದ ನಡುವೆ ಹಿಂದೂಸ್ತಾನೀ ಸಂಗೀತದ ಅಲೆ ಎಬ್ಬಿಸಿದ ಖ್ಯಾತರಲ್ಲಿ ಭೀಮಸೇನ್ ಜೋಷಿ ಪ್ರಮುಖರು. ಪುರಂದರ ದಾಸರ ಕೀರ್ತನೆ 'ಭಾಗ್ಯದ ಲಕ್ಷ್ಮೀ ಬಾರಮ್ಮ...' ಜೋಷಿಯವರಲ್ಲದೆ ಇನ್ಯಾರ ಕಂಠದಲ್ಲೂ ಇದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಜನಜನಿತವಾಗಿದೆ. ಈ ಹಾಡನ್ನು ಮನೆಮನೆಗೂ ತಲುಪಿಸಿ ಆ ಹಾಡಿನೊಂದಿಗೇ ಪ್ರತಿ ಮನೆಯಲ್ಲಿ ಮತ್ತು ಮನದಲ್ಲಿ ನೆಲೆಸಿರುವ ಜೋಷಿ ಸದ್ಯಕ್ಕೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ದಾರೆ.

ಅವರು ಕುಂದಗೋಳದ ಸವಾಯಿ ಗಂಧರ್ವ ಎಂದೇ ಪ್ರಸಿದ್ಧಿ ಪಡೆದಿರುವ ರಾಮಭಾವು ಕುಂದಗೋಳಕರ ಅವರಲ್ಲಿ ಶಿಷ್ಯತ್ವ ಸ್ವೀಕರಿಸಿ, ಕಿರಾಣಾ ಘರಾನಾ ಶೈಲಿಯ ಗಾಯನದಲ್ಲಿ ಸಿದ್ಧಿ-ಪ್ರಸಿದ್ಧಿ ಪಡೆದವರು. (ಕುಂದಗೋಳಕರ ಅವರು ಕಿರಾಣಾ ಘರಾನಾ ಶೈಲಿಯ ಪಿತಾಮಹರೆಂದೇ ಖ್ಯಾತಿ ಪಡೆದಿದ್ದ ಅಬ್ದುಲ್ ಕರೀಂ ಖಾನ್ ಅವರ ಶಿಷ್ಯರು.) ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ, ಕರ್ನಾಟಕ ರತ್ನ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮಹಾರಾಷ್ಟ್ರ ಭೂಷಣ ಪ್ರಶಸ್ತಿಗಳು ಅವರ ಕಿರೀಟವನ್ನು ಅಲಂಕರಿಸಿವೆ.

1922ರ ಫೆಬ್ರವರಿ 22ರಂದು ಗದಗದಲ್ಲಿ ಜನಿಸಿದ ಭೀಮಸೇನ ಗುರುರಾಜ ಜೋಷಿ, ಕಿರಾಣಾ ಘರಾನಾದ ಪ್ರಾವೀಣ್ಯತೆ ಸಾಧಿಸಿ ಖಯಾಲ್ ಮಾದರಿಯ ಗಾಯನ ಹಾಗೂ ಭಜನ್ ಶೈಲಿಯಲ್ಲಿ ಹೆಚ್ಚು ಪ್ರಖ್ಯಾತರಾದರು. ಅವರ ತಂದೆ ಒಬ್ಬ ಶಾಲಾ ಶಿಕ್ಷಕ.

1933ರಲ್ಲಿ 13ರ ಹರೆಯದವರಾಗಿದ್ದ ಭೀಮಸೇನರು, ಸಂಗೀತದ ತುಡಿತದಿಂದಾಗಿಯೇ ಮನೆ ತೊರೆದರು. ಆ ದಿನಗಳಲ್ಲಿ ಅಬ್ದುಲ್ ಕರೀಮ್ ಖಾನ್ ಅವರ ಗಾಯನಕ್ಕೆ ಮನಸೋತಿದ್ದ ಅವರು, ಗ್ವಾಲಿಯರ್, ಲಖ್ನೋ ಮತ್ತು ರಾಮಪುರದಲ್ಲಿ ಮೂರು ವರ್ಷಗಳ ಕಾಲ ಗುರುವಿಗಾಗಿ ಅಲೆದಾಡಿದರು. ಗ್ವಾಲಿಯರ್‌ನಲ್ಲಿ ಉಸ್ತಾದ್ ಹಫೀಜ್ ಖಾನ್ ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿದರು. ಕೊನೆಗೂ ತಮ್ಮ ಮಗನನ್ನು ಪತ್ತೆ ಹಚ್ಚುವಲ್ಲಿ ಸಫಲರಾದ ಅವರ ತಂದೆ, ಭೀಮಸೇನರನ್ನು ಮರಳಿ ಮನೆಗೆ ಕರೆತಂದರು.

1936ರಲ್ಲಿ ಧಾರವಾಡ ಜಿಲ್ಲೆಯ 'ಸವಾಯಿ ಗಂಧರ್ವ' ರಾಮಭಾವು ಕುಂದಗೋಳಕರ ಅವರು ಭೀಮಸೇನನಿಗೆ ಗಾಯನ ಕಲಿಸಲು ಒಪ್ಪಿದರು. ನಾಲ್ಕು ವರ್ಷ ಅವರೊಂದಿಗೆ ಪಳಗಿದ ಬಾಲಕ ಭೀಮಸೇನ, 19ರ ಹರೆಯದಲ್ಲಿ ಮೊದಲ ಸಂಗೀತ ಕಛೇರಿ ನೀಡಿದರು. 20ರ ಹರೆಯದಲ್ಲಿರುವಾಗಲೇ ಅವರ ಕನ್ನಡ ಮತ್ತು ಹಿಂದಿ ಭಕ್ತಿ ಗೀತೆಗಳನ್ನೊಳಗೊಂಡ ಆಲ್ಬಂ ಬಿಡುಗಡೆ ಕಂಡಿತ್ತು.

ತಮ್ಮ ಗುರುವಿನ ಸ್ಮರಣೆಗಾಗಿ ಅವರು ಪ್ರತಿವರ್ಷ 'ಸವಾಯಿ ಗಂಧರ್ವ ಸಂಗೀತ ಉತ್ಸವವನ್ನು' ಪುಣೆಯಲ್ಲಿ ನಡೆಸುತ್ತಾ ಬಂದಿದ್ದಾರೆ. ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಈ ಉತ್ಸವವು ಸಂಗೀತ ರಸಿಕರ ಮನತಣಿಸುತ್ತದೆ. ಅವರ ಪುತ್ರ ಶ್ರೀನಿವಾಸ ಜೋಷಿ ಅವರು ಕೂಡ ಗಾಯಕ ಮತ್ತು ಸಂಗೀತ ಸಂಯೋಜಕ.

ಭೀಮಸೇನ ಜೋಷಿ ಅವರು ಹಿಂದೂಸ್ತಾನಿ ಗಾಯನದ ನಂ.1 ಗಾಯಕ ಎಂಬಷ್ಟು ಸಿದ್ಧಹಸ್ತರು. ರಾಗಗಳ ಮೇಲೆ ಅವರಿಗಿರುವ ಹಿಡಿತ ಅನೂಹ್ಯವಾದದ್ದು. ತಮ್ಮದೇ ವಿಶಿಷ್ಟ ಶೈಲಿಗಳ ಮೂಲಕ ಖಯಾಲ್ ಶೈಲಿಯನ್ನು ಮತ್ತಷ್ಟು ಸಮೃದ್ಧಗೊಳಿಸಿದ ಜೋಷಿಯವರ 'ಮಿಲೇ ಸುರ್ ಮೇರಾ ತುಮ್ಹಾರಾ' ಎಂಬ ಹಾಡು ದೇಶದ ಉದ್ದಗಲಕ್ಕೂ ಟಿವಿ ವಾಹಿನಿಯ ಮೂಲಕ ಚಿರಪರಿಚಿತ.

ಭಾರತದ ಪರಮೋನ್ನತ ಪೌರ ಪ್ರಶಸ್ತಿಯಾದ ಭಾರತ ರತ್ನವೇ ಅವರನ್ನು ಅರಸಿಕೊಂಡು ಬಂದಿದೆ.

[ಭಾರತದ ರತ್ನ ಜೋಶಿಯವರ ನಿಧನದಿಂದ ಹಿಂದುಸ್ತಾನಿ ಸಂಗೀತ ಲೋಕ ಬಡವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಅವರ ಸ್ಥಾನವನ್ನು ಯಾರೂ ತುಂಬಲಾರರು ಎಂಬುದು ಕೂಡ ಅಷ್ಟೇ ಸತ್ಯ. ಅವರಿಗೆ ವೆಬ್‌ದುನಿಯಾ ಬಳಗದಿಂದ ಭಾವಪೂರ್ಣ ಶ್ರದ್ಧಾಂಜಲಿ. -ಸಂ.]
ಸಂಬಂಧಿತ ಮಾಹಿತಿ ಹುಡುಕಿ