ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಪ್ರೇಮ-ವಿವಾಹ-ಮತಾಂತರ: ಬದುಕು ತ್ರಿಶಂಕುವೇ? (Love | Convert | karnataka | Bangalore | wedding)
Bookmark and Share Feedback Print
 
ನಾಗೇಂದ್ರ ತ್ರಾಸಿ

ND
ನೂರಾರು ಕನಸುಗಳನ್ನು ಹೊತ್ತು ಸಂಪ್ರದಾಯಬದ್ದವಾಗಿಯೇ ಆಗಲಿ ಅಥವಾ ಅಂತರ್ಜಾತಿ ವಿವಾಹವಾಗಿದ್ದರೂ ಕೂಡ ವಿಚ್ಛೇದನವಾಗುವ ಪ್ರಕರಣಗಳಿಗೇನೂ ಕೊರತೆಯಿಲ್ಲ. ಸಂಸಾರ ರಥದಲ್ಲಿ ಬಂದೆರೆಗುವ ಬಿರುಗಾಳಿ ಸಾಕಷ್ಟು ದೊಡ್ಡ ಪ್ರಮಾಣದ ನೋವನ್ನೇ ಕೊಡುತ್ತದೆ. ಆದರೆ ಅನ್ಯಧರ್ಮದ ಯುವತಿಯ ಜತೆಗಿನ ವಿವಾಹ ಪ್ರಕರಣಗಳಲ್ಲಿ ತಲೆದೋರುವ ಸಮಸ್ಯೆ ಜೀವನದಲ್ಲಿ ತ್ರಿಶಂಕು ಸ್ಥಿತಿಯನ್ನೇ ತಂದೊಡ್ಡುತ್ತದೆ. ನಾನಿಲ್ಲಿ ಅನ್ಯಧರ್ಮದ ವಿವಾಹದಲ್ಲಿ ಪ್ರೇಮಿಗಳು 'ಧರ್ಮಸಂಕಟ'ದಲ್ಲಿ ಸಿಕ್ಕು ಪರದಾಡುವ ಬಗ್ಗೆ ಮಾತ್ರ ಹೇಳಹೊರಟಿರುವುದು ಅಷ್ಟೇ.

ಜಾತಿಯ ಕಬಂಧಬಾಹುವಿನ ಕಟ್ಟುಪಾಡಿನ ನಡುವೆಯೂ ಇಂದು ಸಾಕಷ್ಟು ಪ್ರೇಮ ವಿವಾಹಗಳು ನಡೆಯುತ್ತವೆ. ಜಾತಿ-ಧರ್ಮ ನಮಗೆ ಮುಖ್ಯವಲ್ಲ ಎಂದು ಪ್ರೇಮವೇ ನಮ್ಮ ಜಾತಿ ಅಂತ ಹೇಳುತ್ತಾರೆ. ಅಂತರ್ಜಾತಿ ವಿವಾಹದಲ್ಲಿಯೂ ಇಂತಹ ತೊಡಕುಗಳಿವೆ, ಅಲ್ಲಿಯೂ ಅವಮಾನ, ಸಂಕಟ, ನೋವು, ಹತಾಶೆ ಇದೆ. ಆದರೆ ಅನ್ಯಧರ್ಮದ ವಿವಾಹ ಪ್ರಕರಣಗಳಲ್ಲಿ ಒಂದೋ ಗಂಡು ಅಥವಾ ಹೆಣ್ಣು ತಮ್ಮ ಧರ್ಮಕ್ಕೆ ಮತಾಂತರ ಆಗಬೇಕು ಎಂಬ ಹಠಕ್ಕೆ ಬೀಳುವುದು ಸರಿಯೇ? ಪ್ರೇಮಕ್ಕೆ ಜಾತಿ-ಧರ್ಮ ಇಲ್ಲ ಎಂದು ಪ್ರೇಮಿಸಿದ ಹಲವು ಪ್ರಕರಣಗಳಲ್ಲಿ ಧರ್ಮದ ಪ್ರಶ್ನೆ ಎದುರಾದಾಗ ಅಲ್ಲಿ ಪ್ರೀತಿಗಿಂತ ಧರ್ಮವೇ ಮುಖ್ಯವಾಗಿ ಸಂಬಂಧಗಳು ಮುರಿದು ಬಿದ್ದ ಘಟನೆಗಳು ಸಾಕಷ್ಟಿವೆ!

ಪ್ರಕರಣ ಒಂದು: ಪ್ರೇಮಕ್ಕೆ ಯಾವುದೇ ಜಾತಿ, ಧರ್ಮದ ಸಂಕೋಲೆಯ ಹಂಗಿಲ್ಲ. ಪ್ರೇಮದ ಹುಚ್ಚು ಯಾವ ವಿರೋಧವನ್ನೂ ಲೆಕ್ಕಿಸಲಾರದು. ಅಂತಹ ಪ್ರೇಮಪ್ರಾಶಕ್ಕೆ ಸಿಲುಕಿದ ಹಿಂದೂ ಯುವಕ ಮತ್ತು ಮುಸ್ಲಿಮ್ ಯುವತಿ ಮನೆಯವರ ವಿರೋಧದ ನಡುವೆಯೇ ಇಬ್ಬರೂ ಹಸೆಮಣೆ ಏರಿದ್ದರು. ಈ ಪ್ರಕರಣ ಸಾಕಷ್ಟು ವಿವಾದವನ್ನೂ ಹುಟ್ಟುಹಾಕಿತ್ತು. ನಂತರ ಯುವತಿಯ ಮನೆಯವರು ಇಬ್ಬರನ್ನೂ ಮನೆಗೆ ಸೇರಿಸಿಕೊಳ್ಳುವ ಬಗ್ಗೆ ಯುವತಿಯ ತಂದೆ ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ನಿಮ್ಮ ಧರ್ಮ ನಮಗೆ ಒಗ್ಗುವುದಿಲ್ಲ ಹಾಗಾಗಿ ಯುವಕ ಇಸ್ಲಾಮ್ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಷರತ್ತನ್ನು ಒಡ್ಡಿದ್ದರು. ಆದರೆ ಅದಕ್ಕೆ ಒಪ್ಪದಿದ್ದಾಗ ಇಬ್ಬರನ್ನೂ ಅಜನ್ಮ ಶತ್ರುಗಳೆಂಬಂತೆ ಭಾವಿಸಿ ತಮಗೂ-ಮಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ದೂರ ಇಡುತ್ತಾರೆ. ಮತ್ತೊಂದೆಡೆ ಯುವಕನ ಮನೆಯವರು ಆತನನ್ನು ಹೊರಹಾಕಿದ್ದರು!

ಘಟನೆ ಎರಡು: ಕಾಲೇಜು, ಯೂನಿರ್ವಸಿಟಿ, ಕಚೇರಿ, ಪಾರ್ಕ್ ಹೀಗೆ ಪ್ರೇಮಿಗಳಾಗಲು ಇವೆಲ್ಲ ವೇದಿಕೆಯಾಗಿತ್ತು. ಆದರೆ ಇಂದು ಹಾಗಲ್ಲ ಮೊಬೈಲ್, ಇಂಟರ್ನೆಟ್ ಬಳಕೆ ಹೆಚ್ಚಾದ ಮೇಲೆ ಯಾರು, ಯಾರಿಗೆ ಪರಿಚಯವಾಗಿ ಪ್ರೇಮಿಗಳಾಗುತ್ತಾರೆ ಎಂಬುದು ಊಹಿಸುವುದು ಕಷ್ಟವಾಗಿದೆ. ಅದೇ ತೆರನಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಇಂಟರ್ನೆಟ್‌ನಲ್ಲಿ ಚಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯವಾದ ಕ್ರಿಶ್ಚಿಯನ್ ಗೆಳತಿಯೊಬ್ಬಳ ಜತೆ ಹಿಂದೂ ಯುವಕನೊಬ್ಬ ವಿವಾಹಕ್ಕೆ ಸಿದ್ದತೆ ನಡೆಸಿದ್ದ. ನಿಶ್ಚಿತಾರ್ಥ ಪೂರೈಸಿ ಆಮಂತ್ರಣ ಪತ್ರಿಕೆ ಕೂಡ ಹಂಚಿದ್ದರು. ಏತನ್ಮಧ್ಯೆ ಯುವತಿಯ ತಂದೆ ಯುವಕನನ್ನು ಮನೆಗೆ ಕರೆಯಿಸಿಕೊಂಡು, ಮದುವೆ ದಿನದಂದು ಇಗರ್ಜಿಯಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರವಾಗಬೇಕು ಎಂದು ಹೇಳಿದ್ದರು. ಆದರೆ ಯುವಕ ಮತಾಂತರ ಸಾಧ್ಯವಿಲ್ಲ, ನಾವಿಬ್ಬರು ಪ್ರೇಮಿಗಳು ವಿವಾಹಕ್ಕೆ ಜಾತಿ ಧರ್ಮದ ಹಂಗ್ಯಾಕೆ ಎಂದು ಪ್ರಶ್ನಿಸಿದ್ದ. ಆಗ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿ ಸಹ ಮತಾಂತರಕ್ಕೆ ಪಟ್ಟುಹಿಡಿದಾಗ ಮದುವೆ ಮುರಿದುಬಿದ್ದಿತ್ತು!

ಘಟನೆ ಮೂರು: ನೆರೆಕೆರೆಯ ಮುಸ್ಲಿಮ್ ಯುವಕ ಹಾಗೂ ಹಿಂದೂ ಯುವತಿ ಒಬ್ಬರನ್ನೊಬ್ಬರು ಪ್ರೇಮಿಸಿ ಮನೆಯವರ ವಿರೋಧದ ನಡುವೆ ಸತಿಪತಿಗಳಾಗಿದ್ದರು. ಅವರಿಗೂ ಅಡ್ಡಗೋಡೆಯಾಗಿದ್ದು ಧರ್ಮ!. ಯುವಕನ ಮನೆಯವರು ಯುವತಿಗೆ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದರು. ನೀವು ನಮ್ಮ ಧರ್ಮಕ್ಕೆ ಬಂದರೆ ಎಲ್ಲಾ ರೀತಿಯ ಆರ್ಥಿಕ ನೆರವು ನೀಡಿ ಮನೆಗೆ ಸೇರಿಸಿಕೊಳ್ಳುವುದಾಗಿ ಆಮಿಷ ಒಡ್ಡಿದ್ದರು. ಆದರೆ ಯುವತಿ ಅದಕ್ಕೆ ಪ್ರತಿರೋಧ ಒಡ್ಡಿದಾಗ ಇಬ್ಬರನ್ನೂ ಹೊರಹಾಕಿದ್ದರು. ನಂತರ ಗಂಡನಿಂದಲೂ ಕಿರುಕುಳ, ಇಬ್ಬರು ಮಕ್ಕಳನ್ನು ಹೊಂದಿರುವ ಆ ದಂಪತಿಗಳಿಗೆ ದೊಡ್ಡ ಸಮಸ್ಯೆಯಾಗಿರುವುದು ಮತ್ತದೇ ಧರ್ಮ. ಮಕ್ಕಳನ್ನು ಮುಸ್ಲಿಮ್ ಧರ್ಮಕ್ಕೆ ಸೇರಿಸಬೇಕೋ ಅಥವಾ ಹಿಂದೂ ಧರ್ಮಕ್ಕೋ ಎಂಬ ಗೊಂದಲ ಅವರಿಗೆ. ಒಟ್ಟಾರೆ ಅವರೀಗ ಧರ್ಮಸಂಕಟದಲ್ಲಿ ಸಿಲುಕಿದ್ದಾರೆ.

ಮೇಲಿನ ಉದಾಹರಣೆಯ ನಂತರ ಓಹೋ ಇದೇನು ಎಂದು ಹುಬ್ಬೇರಿಸಬೇಡಿ. ನಾನು ಮತಾಂತರದ ಪರ-ವಿರೋಧದ ಬಗ್ಗೆ ಚರ್ಚಿಸುತ್ತಿಲ್ಲ. ಅನ್ಯಧರ್ಮದ ವಿವಾಹದಲ್ಲಿ ಸಂಬಂಧಗಳು ಮುರಿದುಬಿದ್ದದ್ದನ್ನು ಮಾತ್ರ ಉಲ್ಲೇಖಿಸಿ ಪ್ರೇಮಿಗಳನ್ನು ಹೀಗಳೆಯುವ ಉದ್ದೇಶ ಇಲ್ಲ. ಯಾಕೆಂದರೆ ಅನ್ಯಧರ್ಮದ ಯುವತಿ/ಯುವಕರು ಸತಿ-ಪತಿಗಳಾಗಿ ಅನ್ಯೋನ್ಯರಾಗಿದ್ದ ಸಾಕಷ್ಟು ಜೋಡಿಗಳು ನಮ್ಮ ನಡುವೆ ಇದ್ದಾರೆ. ಆದರೆ ಅನ್ಯಧರ್ಮದ ಪ್ರೇಮ ವಿವಾಹದಲ್ಲಿ 'ಬಲವಂತವಾಗಿ ತಮ್ಮ ಧರ್ಮಕ್ಕೆ ಸೇರಬೇಕು, ಹಾಗಿದ್ದರೆ ಮಾತ್ರ ನಿಮ್ಮನ್ನು ಮನೆಗೆ ಸೇರಿಸಿಕೊಳ್ಳುತ್ತೇವೆ ಎಂದು ಮನೆಯವರಾಗಲಿ, ಪ್ರೀತಿಸಿದ ಯುವಕ-ಯುವತಿ ಬ್ಲ್ಯಾಕ್‌ಮೇಲ್ ಮಾಡುವುದು ಸರಿಯೇ?
ಸಂಬಂಧಿತ ಮಾಹಿತಿ ಹುಡುಕಿ