ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಸ್ವಕುಚಮರ್ದನ; ಐಯಾಮ್ ಗಾಡ್, ಗಾಡ್ ಈಸ್ ಗ್ರೇಟ್! (Iam God, God is great | myself | selfishness | Bhuvan Puduvettu)
Bookmark and Share Feedback Print
 
- ಭುವನ್ ಪುದುವೆಟ್ಟು

ತಮ್ಮ ಹುಳುಕುಗಳನ್ನು ಮುಚ್ಚಿಡುತ್ತಾ ಮತ್ತೊಬ್ಬರ ಮಾತು-ಕೃತಿಗಳು ಸರಿಯಿಲ್ಲ ಎಂದು ದೂರುವವರ ಸಂಖ್ಯೆಯೇ ಹೆಚ್ಚಿರುವ ಕಾಲವಿದು. ಅದರಲ್ಲಿ ನಾನೂ ಸೇರಿದಂತೆ ನಾವೆಲ್ಲರೂ ಮುಂದು. ಯಾರೊಬ್ಬರೂ ಪರಿಪೂರ್ಣರಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ಇಂತಹ ಸಂದರ್ಭಗಳಲ್ಲಿ ಬೇಕೆಂದೇ ಮರೆಯುತ್ತೇವೆ, ಅಲ್ಲವೇ?

ನಮ್ಮ ದುರ್ನಡತೆ, ದುರ್ಭಾಷೆ, ದುರಂಹಕಾರಗಳನ್ನು ಸಮರ್ಥಿಸಿಕೊಳ್ಳಲು ಹಲವು ಕಾರಣಗಳು ಮನಸ್ಸಿನ ಯಾವುದೋ ಮೂಲೆಯಿಂದ ಧಿಗ್ಗನೆ ಎದ್ದು ಬಿಡುತ್ತವೆ. ತಪ್ಪೇ ಮಾಡದ ಹುಡುಗಿಗೆ ಕೈಕೊಡುವಾಗ, ನೈತಿಕವಲ್ಲದ ಸಂಬಂಧ ಬೇಕೆನಿಸುವ ದೈಹಿಕ ತೃಷೆಗೆ ಸ್ಪಂದಿಸುವಾಗ, ನಾವಾಡಿದ ಕೆಟ್ಟ ಮಾತು ಕೆಟ್ಟದೆಂಬುದು ಸ್ವತಃ ನಮಗೆ ಗೊತ್ತಿರುವಾಗ, ಸಿರಿವಂತ ಹುಡುಗ ಎದುರಾದಾಗ ಹಲವು ವರ್ಷಗಳ ಅನುರಾಗವನ್ನು ತೊರೆಯುವಾಗ, ತೆಗೆದುಕೊಂಡ ಹಣವನ್ನು ವಾಪಸ್ ಕೊಡದೆ ಮೋಸ ಮಾಡಿದಾಗ -- ಒಂದೇ, ಎರಡೇ. ನಾವು ನಮ್ಮನ್ನು ಹೆಜ್ಜೆ-ಹೆಜ್ಜೆಗೂ ಸಮರ್ಥಿಸಿಕೊಂಡದ್ದು ಸುಳ್ಳೇ ಸುಳ್ಳು ಎಂದು ಗೊತ್ತಿದ್ದರೂ ಮನಸ್ಸಿನಲ್ಲಿರಬೇಕಾಗಿದ್ದ ಅಪರಾಧಿ ಪ್ರಜ್ಞೆಯನ್ನು ಎಷ್ಟು ಬೇಗ ತೊಡೆದು ಹಾಕುತ್ತೇವೆ.

ಅದು ನಮ್ಮದೆಂಬ ಕಾರಣಕ್ಕಾಗಿ ನಾವು ಹಾಗೆ ಮಾಡುತ್ತೇವೆ. ಅಲ್ಲೂ ಸ್ವಾರ್ಥವೇ ನಮ್ಮನ್ನು ಗೆದ್ದು ಬಿಡುತ್ತದೆ. ಆ ತಪ್ಪಿಗೆ ನಿರ್ದಿಷ್ಟ ಕಾರಣವೊಂದು ಇರುತ್ತದೆ. ಪರಿಸ್ಥಿತಿ ಹಾಗಿತ್ತು ಎಂದು ಬಿಡುತ್ತೇವೆ.
IFM

ನಾವೇ ಮಾಡಿರುವ ತಪ್ಪುಗಳನ್ನು ನಮಗೆ ತಿಳಿದ ಮತ್ತೊಬ್ಬರು ಮಾಡಿದಾಗ ಅದು ಮಹಾಪರಾಧವಾಗಿ, ಸೋಜಿಗವಾಗಿ, ಎಲ್ಲೂ ಯಾರೂ ಮಾಡಿರದ ಕೃತ್ಯವಾಗಿ ಬಿಡುತ್ತದೆ. ಆತ/ಆಕೆಯನ್ನು ನಂಬುವುದಾದರೂ ಹೇಗೆ ಎಂಬ ಪ್ರಶ್ನೆಗಳು ಮುತ್ತಿಕೊಂಡು ಬಿಡುತ್ತವೆ. ನಾವು ಗುರುತಿಸುವ, ಮೂದಲಿಸುವ ಆತ/ಆಕೆ ನಾವೇ ಆಗಿದ್ದಲ್ಲಿ ಅದೊಂದು ಸಾಮಾನ್ಯ ವಿಚಾರವಾಗಿ ತೇಲಿ ಹೋಗಬೇಕೆಂದು ಬಯಸುತ್ತೇವೆ.

ಅಬ್ಬಾ! ಸ್ವಾರ್ಥ ಎನ್ನುವುದು ಎಷ್ಟೊಂದು ರಕ್ಷಣಾತ್ಮಕವಾಗಿದೆ ನೋಡಿ.

ಮತ್ತೊಬ್ಬರ ವಿಚಾರ ಬಂದಾಗ ನಾವು ಎಗ್ಗಿಲ್ಲದೆ ಅವರ ಪೂರ್ವಾಪರಗಳೆಲ್ಲ ಹಾಗೆಯೇ ಇತ್ತು ಎಂದು ಕಣ್ಣಾರೆ ನೋಡಿದವರಂತೆ ಹೇಳಿ ಬಿಡುತ್ತೇವೆ. ಆತನಿಗೆ ಮನುಷ್ಯತ್ವವೇ ಇಲ್ಲ, ಹೆಂಡತಿ-ಮಕ್ಕಳೆಂದರೆ ಅಷ್ಟಕಷ್ಟೇ, ಹುಡುಗಿಯರ ಹಿಂದೆಯೇ ಜೋತು ಬಿದ್ದಿರುತ್ತಾನೆ. ಅದೆಷ್ಟೋ ಮಂದಿಯನ್ನು ಈಗಾಗಲೇ ತನ್ನ ಖೆಡ್ಡಾಕ್ಕೆ ಕೆಡವಿದ್ದಾನೆ. ಬೆನ್ನಿಗೆ ಚೂರಿ ಹಾಕುವ ಮನುಷ್ಯ, ಒಂದು ಹೆಜ್ಜೆ ನಂಬಲು ಅರ್ಹನಾದ ವ್ಯಕ್ತಿಯಲ್ಲ. ಅಷ್ಟಕ್ಕೂ ಆತನಿಗೊಂದು ವ್ಯಕ್ತಿತ್ವವೇ ಇಲ್ಲ ಎಂಬ ರೀತಿಯ ಮಾತುಗಳು ನಮ್ಮ ಎಲುಬಿಲ್ಲದ ನಾಲಗೆಯಲ್ಲಿ ಜಾರಿ ಬಿಡುತ್ತವೆ.

ಮೇಲೆ ಹೇಳಿದ ಒಂದೇ ಒಂದು ಪದ ನಮ್ಮ ಬಗ್ಗೆ ಮತ್ತೊಬ್ಬರು ಆಡಿದಲ್ಲಿ ನಾವೆಷ್ಟು ಕುಪಿತರಾಗುತ್ತೇವೆ. ನಾನೇನು ತಪ್ಪು ಮಾಡಿದ್ದೇನೆ ಅಂತ ಹಾಗೆಲ್ಲ ಟೀಕಿಸುತ್ತಿದ್ದೀರಿ. ನಾನು ಹಾಗೆ ಮಾಡಿದ್ದನ್ನು ನೀವು ನೋಡಿದ್ದೀರಾ? ಅಷ್ಟಕ್ಕೂ ನಾನು ಹಾಗೆ ಮಾಡಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ನೀವು ಯಾಕೆ ಯತ್ನಿಸುತ್ತಿಲ್ಲ. ಹೀಗೆ ನಾವೇ ಸರಿ, ನಾವು ಮಾಡಿದ್ದು ತಪ್ಪಾದರೂ ಅದು ತಪ್ಪೇ ಅಲ್ಲ ಎಂಬ ರೀತಿಯಲ್ಲಿ ವಾದಿಸುವ ಹಠಕ್ಕೆ ಬೀಳುತ್ತೇವೆ.

ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ನಮ್ಮತನವನ್ನು ಉಳಿಸಲು ಯತ್ನಿಸುತ್ತೇವೆ. ಯಾರನ್ನೋ ಮೆಚ್ಚಿಸಲು, ನಮ್ಮನ್ನು ದೊಡ್ಡ ಜನ ಎಂದು ಮತ್ತೊಬ್ಬರು ಕರೆಸುವಂತಾಗಲು ಇನ್ನಿಲ್ಲದ ಯತ್ನಗಳನ್ನು ಮಾಡುತ್ತೇವೆ. ಆದರೆ ನಮ್ಮ ಅಷ್ಟು ಪ್ರಯತ್ನದ ನಡುವೆ ಮತ್ತೊಬ್ಬರ ವ್ಯಕ್ತಿತ್ವವನ್ನು ದಮನಿಸುವುದು ಯಾಕೆ ಎಂದು ಯೋಚಿಸುವುದೇ ಇಲ್ಲ.

ಯಾವುದೋ ವಾದದಲ್ಲಿ ನಮ್ಮನ್ನು ಮೀರಿಸಿದಾತ ಕೆಟ್ಟ ವ್ಯಕ್ತಿ, ಸರಿಯಿಲ್ಲ ಎಂದು ಬಿಡುತ್ತೇವೆ. ಬಯಸಿದ ಹುಡುಗಿ ಕೈಗೆ ಸಿಗದೇ ಇದ್ದಾಗ ಆಕೆಯ ನಡತೆಯ ಬಗ್ಗೆಯೇ ಸಂಶಯದ ಮಾತುಗಳನ್ನು ಹುಟ್ಟು ಹಾಕುತ್ತೇವೆ. ನಮ್ಮ ಜತೆಗಿದ್ದವರು ಎತ್ತರದ ಸ್ಥಾನಕ್ಕೆ ಏರಿದರೆಂದರೆ, ಅವರು ಸಾಗಿದ್ದು ಅಡ್ಡದಾರಿಯಲ್ಲಿ ಎಂದು ನಿರ್ಧಾರ ಮಾಡಿ ಬಿಡುತ್ತೇವೆ. ನಮಗಾಗದ ವ್ಯಕ್ತಿಯೊಬ್ಬ ತಪ್ಪೇ ಮಾಡದೆ ಆರೋಪದ ಸುಳಿಗೆ ಬಿದ್ದರೆ ಮನಸ್ಸಿನಲ್ಲೇ ಸಂಭ್ರಮಿಸುತ್ತೇವೆ. ಇಂತಹ ಪರಿಸ್ಥಿತಿ ನಾಳೆ ನಮಗೂ ಬರಬಹುದು ಎಂಬ ವಿಚಾರವನ್ನು ಬೇಕೆಂದೇ ಮರೆಯುತ್ತೇವೆ.

ಈ ಮನಸ್ಸೇ ಹಾಗೆ. ಅದು ಸ್ವಾರ್ಥದ ಗೂಡು. ನಾವು ಮಾಡಿದ್ದೇ ಸರಿ ಎಂಬುದಕ್ಕೆ ಸಮರ್ಥನೆ ನೀಡಲು ತಲೆಯನ್ನು ದುರ್ಬಳಕೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ಸೃಷ್ಟಿಸಿ ಬಿಡುವಂತಹುದು.

ತಪ್ಪು ಮಾಡದವರು ಯಾರಿರುತ್ತಾರೆ? ಈ ಜಗತ್ತಿನಲ್ಲಿ ಪರಿಪೂರ್ಣ ವ್ಯಕ್ತಿತ್ವ ಹೊಂದಿದವರು ಯಾರಿದ್ದಾರೆ? ಪ್ರತಿಯೊಬ್ಬರೂ ಒಂದಲ್ಲಿ ಒಂದು ವಿಚಾರದಲ್ಲಿ ದುರ್ಬಲತೆ ಹೊಂದಿರುತ್ತಾರೆ. ಅದರ ಪ್ರಮಾಣ ಕೆಲವರಲ್ಲಿ ಹೆಚ್ಚಿರಬಹುದು, ಇನ್ನು ಕೆಲವರಲ್ಲಿ ಕಡಿಮೆ ಇರಬಹುದು. ಇಲ್ಲಿರುವುದು ವ್ಯತ್ಯಾಸವೇ ಹೊರತು ಶೂನ್ಯತೆಯಲ್ಲ.

ನಾವು ಇಂದು ಎಸಗುವ-ನಾವು ಮಾಡುವ ಕಾರ್ಯ ನಾಳೆಯ ದಿನ ನಮಗೇ ರೇಜಿಗೆ ಹುಟ್ಟಿಸಬಹುದು. ಛೆ! ಈ ಕೆಲಸವನ್ನು ಮಾಡಿದ್ದು ನಾನೇ ಎಂಬ ಭಾವ ಕಾಡಬಹುದು. ನಮ್ಮ ನಿರ್ಧಾರ ತಪ್ಪಾಗಿತ್ತು ಎಂದೆನಿಸಬಹುದು. ಅದರ ಬದಲು ಹೀಗೆ ಮಾಡಿದ್ದರೆ ಚೆನ್ನಾಗಿತ್ತು ಎಂದು ಅಂದುಕೊಳ್ಳಬಹುದು. ಈ ಬದಲಾವಣೆಯ, ಮಾರ್ಪಾಡಿನ ಯೋಚನೆ ನಿರಂತರ. ಇಲ್ಲಿ ಒಳ್ಳೆಯ ಅಥವಾ ಕೆಟ್ಟ ಕೆಲಸ ಎಂಬ ಬೇಧವಿಲ್ಲ. ಇನ್ನೂ ಸ್ವಲ್ಪ ಯತ್ನಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದೇ ನಮ್ಮ ಮನಸ್ಸು ಹೇಳುತ್ತದೆ.
WD

ಇನ್ನೊಬ್ಬರ ಬಗ್ಗೆ ಮಾತನಾಡದೆ ಸುಮ್ಮನಿರುವುದು ಉತ್ತಮ. ಆದರೆ ಮನುಷ್ಯ ವಾಚಾಳಿ, ಮೌನವಾಗಿರಲಾರ. ಮಾತೇ ಪ್ರಮುಖ ಸಂವಹನ ಮಾಧ್ಯಮವಾಗಿರುವುದರಿಂದ ಬಹುತೇಕ ಹೊತ್ತಲ್ಲಿ ನಾಲಗೆಯ ತುರಿಕೆಯನ್ನು ನಿವಾರಿಸಲು ಯಾರ‌್ಯಾರದೋ ವಿಚಾರಗಳಿಗೆ ಮೂಗು ತೂರಿಸುತ್ತಾನೆ. ತಿಳಿದೋ, ತಿಳಿಯದೆಯೋ ನಾವು ಕೂಡ ಇದರಲ್ಲಿ ಭಾಗಿಗಳಾಗುತ್ತೇವೆ.

ನಾವು ನಮ್ಮ ವ್ಯಕ್ತಿತ್ವವನ್ನು ಬೆಳೆಸಲು ಕ್ಷಣಕ್ಷಣವೂ ಯತ್ನಿಸುತ್ತೇವೆ. ನಾವು ಸಮಾಜದಲ್ಲಿ ಒಳ್ಳೆಯವರೆನಿಸಿಕೊಳ್ಳಬೇಕೆಂದು ಎಲ್ಲಿಲ್ಲದ ಶ್ರಮ ವಹಿಸುತ್ತೇವೆ. ಅದೇ ರೀತಿ ಪ್ರತಿಯೊಬ್ಬರೂ ತಮ್ಮತನಕ್ಕಾಗಿ ಯತ್ನಿಸುತ್ತಾರೆ ಎಂಬುದನ್ನು ಮತ್ತೊಬ್ಬರನ್ನು ಮೂದಲಿಸುವಾಗ ಮರೆತು ಬಿಡುತ್ತೇವೆ. ನಾವು ಬದಲಾಗಬೇಕಾಗಿರುವುದು ಇಲ್ಲೇ. ಯಾರು ಕೂಡ ಈ ಸಮಾಜದಲ್ಲಿ ಕೆಟ್ಟವರಾಗಬೇಕು ಎಂದು ಬಯಸುವುದಿಲ್ಲ. ಅವರಿಗೊದಗಿದ ಪರಿಸ್ಥಿತಿಯಿಂದ ಹಾಗಾಗಿರುತ್ತದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಂಡ ದಿನ ಜೀವನ ಸಾರ್ಥಕವೆನಿಸಬಹುದು.

ಅದೇ ಹೊತ್ತಿಗೆ ನಾವು ಮಾಡಿದ ಬಹುತೇಕ ಕೃತ್ಯಗಳನ್ನು ಸಮರ್ಥಿಸುತ್ತಾ, ಕಾಲಕಾಲಕ್ಕೆ ಸಬೂಬುಗಳನ್ನು ಕೊಡುತ್ತಾ ಸಾಗಿದರೂ, ನಮ್ಮ ನೈಜ ವ್ಯಕ್ತಿತ್ವ ಎಂತಹುದು ಎಂಬುದು ಸಮಾಜದಲ್ಲಿ ದಾಖಲಾಗಿ ಹೋಗಿರುತ್ತದೆ; ಅದನ್ನು ಬದಲಾವಣೆ ಮಾಡುವುದು ಸುಲಭವಲ್ಲ ಎಂಬುದನ್ನು ಯಾರೊಬ್ಬರೂ ಮರೆಯಬಾರದು.

ಒಂದು ಬಾರಿ ಮೋಸಗಾರ, ದಗಾಕೋರ, ಕಳ್ಳ, ಗೋಸುಂಬೆ, ಚಾಡಿಕೋರ, ಅತ್ಯಾಚಾರಿ, ಚಪಲ ಚೆನ್ನಿಗರಾಯ, ಆಷಾಢಭೂತಿ, ಭ್ರಷ್ಟಾಚಾರಿ, ಗೋಮುಖ ವ್ಯಾಘ್ರ, ತಲೆಕೆಟ್ಟವನು, ಖದೀಮ ಇಂತಹ ಪದಗಳು ತಪ್ಪು ಮಾಡಿ ಅಥವಾ ಮಾಡದೇ ವ್ಯಕ್ತಿಯೊಬ್ಬನ ವ್ಯಕ್ತಿತ್ವಕ್ಕೆ ನಾಲಗೆಯ ಚಪಲ ಅಥವಾ ವಾಸ್ತವತೆಯ ಕಾರಣದಿಂದ ಅಂಟಿಕೊಂಡಿದ್ದರೆ, ಅದಕ್ಕೆ ನಾವೆಲ್ಲರೂ ಕಾರಣರು.

ಪರರ ಜೀವನದ ಬಗ್ಗೆ ಕಾಮೆಂಟ್ ಮಾಡುವುದು ತುಂಬಾ ಸುಲಭ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮಾತ್ರ ಕಷ್ಟ. ಆದರೆ ಸಾಗಿ ಬಂದ ದಾರಿಯಲ್ಲಿ ಎಡವಿದ್ದನ್ನು ಕನಿಷ್ಠ ಆತ್ಮಾವಲೋಕನ ಮಾಡಿಕೊಂಡರೆ ಮುಂದಿನ ಹೆಜ್ಜೆಗಳು ಎಚ್ಚರಿಕೆಯಿಂದಿರಬಹುದು.

ಅನ್ಯರ ಬಗ್ಗೆ ಅವರ ಅನುಪಸ್ಥಿತಿಯಲ್ಲಿ ಲಘುವಾಗಿ ಮಾತಿಗಿಳಿಯುವ ಮೊದಲು ನಾವೇನು ಎಂಬುದನ್ನು ಪ್ರಾಮಾಣಿಕವಾಗಿ ನೋಡಿಕೊಳ್ಳುವ ಅಗತ್ಯ ಇದೆಯಲ್ಲವೇ?
ಸಂಬಂಧಿತ ಮಾಹಿತಿ ಹುಡುಕಿ