ಈ ಜೀವನವೇ ಹೀಗೆ, ತಿರುಗುವ ಮುಳ್ಳಿನ ಹಾಗೆ, ಕರುವ ಬೆಣ್ಣೆಯ ಹಾಗೆ. ತಿರುಗಬೇಕು, ಕರಗಬೇಕು, ಮೂಡಿದ್ದು ಮರೆಯಾಗಲೇ ಬೇಕು. ಆಟವನ್ನು ಸೋತು ಮುಗಿಸಲೇ ಬೇಕು. ಬೇಡವೆನ್ನುವುದು, ಒಲ್ಲೆಯೆನ್ನುವುದನ್ನು ಯಾರೂ ಕೇಳಲಾರರು.
ಸಂತಸದ ಹೊನಲು, ದುಃಖದ ಕಡಲು, ಆಸೆಗಳು, ನಿರಾಸೆಗಳು, ಮನದ ತಳಮಳಗಳು, ಮುಜುಗರಗಳು, ನಮ್ಮ ಪ್ರಣಯಗಳು, ತಿಳಿಯದೆ ಕಳೆದು ಹೋದ ವಯೋಮಾನಗಳು, ಉಸಿರು ಬಿಗಿ ಹಿಡಿದು ಗುಡ್ಡೆ ಹಾಕಿದ ಕನಸಿನ ಗೋಪುರಗಳು, ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳು -- ಊಹುಂ, ಯಾವುದೂ ನಾವಂದುಕೊಂಡ ಅಂತ್ಯವನ್ನು ಕಾಣಲಾರವು.
ಹೇಳದೆ ಕೇಳದೆ ಅಪರಿಚಿತ ಆಗಂತುಕನಂತೆ, ಎಷ್ಟೋ ಕಾಲದಿಂದ ಹೊಂಚು ಹಾಕಿ ಕೂತವರಂತೆ ಗಬಕ್ಕನೆ ಆತ್ಮವನ್ನು ಸೆಳೆದುಕೊಂಡು ಶರೀರವನ್ನು ಉಳಿಸಿ ಕೊಳೆಸುವಂತೆ ಮಾಡುವ 'ಸಾವು' ಎಂಬ ಘನಘೋರ, ನಿರ್ಭಿಡೆಯ ಬೇಟೆಗಾರನನ್ನು ಸೋಲಿಸಿ ಚಿರಂಜೀವಿಯಾದವರು ಯಾರಿದ್ದಾರೆ? ನಾವು ಎಷ್ಟೆಂದರೂ ಹುಲು ಮಾನವರು. ಸಾವನ್ನು ಗೆಲ್ಲುವುದು ಸಾಧ್ಯವಾಗುತ್ತಿದ್ದರೆ ದೇವರೇ ಆಗಿ ಬಿಡುತ್ತಿದ್ದೆವು ಅಥವಾ ಮೀರಿಸಿ ಬಿಡುತ್ತಿದ್ದೆವು.
ದೇವರಂತಹ ದೇವರಿಗೂ ಮನುಷ್ಯ ಚಿರಾಯುವಾಗುವುದು ಹೆದರಿಕೆ, ಭೀತಿಯನ್ನು ಹುಟ್ಟಿಸಿರಬೇಕು. ಇಲ್ಲದೇ ಇದ್ದರೆ ಸಾವೇ ಇಲ್ಲದ ದೇವರು ಹುಟ್ಟಿದ ಚರಾಚರಗಳನ್ನೆಲ್ಲ ತನ್ನ ಭಕ್ತರು ಎಂದು ಹೇಳಿಸಿಕೊಂಡು ತನ್ನ ಸಾನಿಧ್ಯಕ್ಕೆ ಕರೆಸಿಕೊಳ್ಳುವ ನೆಪ ಹೇಳಿ ಇಷ್ಟ ಬಂದಾಗ ಪ್ರಾಣ ಕುಡಿದು ಬಿಡುವುದು ಯಾಕೋ?
PTI
ಊಹುಂ! ದೇವರೂ ಸರಿಯಿದ್ದಂತಿಲ್ಲ. ಆತನಲ್ಲೂ ಸಾಕಷ್ಟು ಗೊಂದಲಗಳಿರಬಹುದು. ಹುಲು ಮಾನವರ ಸುಂದರ ಜೀವನ ಕಂಡು ಕರುಬುತ್ತಿರಬೇಕು. ಹೊಟ್ಟೆಕಿಚ್ಚು ಆತನಿಗೂ ಬಾಧಿಸುತ್ತಿರಬೇಕು. ಇಲ್ಲದೇ ಇದ್ದರೆ ಹುಟ್ಟಿನಷ್ಟೇ ನಿಗೂಢವಾದ, ಆದರೆ ಅನಿರೀಕ್ಷಿತವಾದ, ಒಂದು ಬಾಲಿಶವಾದ ಸಾವೆನ್ನುವ ಆಘಾತವನ್ನು ನೀಡಿ ಆತ ಸಂಭ್ರಮಿಸುತ್ತಿರಲಿಲ್ಲ.
ಬಿಡಿ, ದೇವರ ಕಷ್ಟಗಳನ್ನೂ ಅರ್ಥ ಮಾಡಿಕೊಳ್ಳೋಣ. ಆತ ಭೂಮಂಡಲಕ್ಕೇ ದೇವರು. ಶಿವ ಎಂದಾಗಲೂ ಓಗೊಡಬೇಕು, ಕ್ರಿಸ್ತ ಎಂದಾಗಲೂ ಪ್ರತಿಕ್ರಿಯಿಸಬೇಕು, ಅಲ್ಲಾಹು ಎಂದಾಗಲೂ ಕಿವಿಯಾಗಬೇಕು, ಬುದ್ಧನೆಂದಾಗಲೂ ಮೌನ ಮುರಿಯಬೇಕು. ನಮ್ಮಂತೆ ಹತ್ತೋ, ಇಪ್ಪತ್ತೋ ಅಥವಾ ಸಾವಿರ ಮಂದಿಗಷ್ಟೇ ಬೇಕಾದ ಗಣ ಆತನಲ್ಲ. ಎಲ್ಲಾ ಜೀವರಾಶಿಗಳ ಉಸ್ತುವಾರಿ ಆತನದ್ದೇ ತಾನೇ?
ಆದರೂ ಆತ ಕಿತ್ತುಕೊಳ್ಳುವ ರೀತಿ ಯಾಕೋ ಸರಿಯೆಂದು ಕಂಡು ಬರುತ್ತಿಲ್ಲ. ಅದೊಂದು ಜೀವನದ ಮುಸ್ಸಂಜೆ ಹೊತ್ತಿನಲ್ಲೋ, ಬಿಡಿ -- ಅಂತಹದ್ದೊಂದು ಆಸೆಯಿಲ್ಲದೇ ಇದ್ದರೂ, ನಿರೀಕ್ಷೆಗಿಂತ ದೂರವಾದ ಹತಾಶೆಯಾದರೂ ಮುರಿದ ಮನೆಯಲ್ಲಿ ಒಡೆದ ಬಾಗಿಲನ್ನು ಸರಿಸಿ ಎಡಗೈಯಿಂದಾದರೂ ಸ್ವಾಗತಿಸಬಹುದು. ಆದರೆ ಮಾತು ಹೊರಡಿಸುವ ಮುನ್ನ, ನಗು ಅರಳಿಸಲೂ ಕಾಯದೆ, ಹೆಜ್ಜೆಗಳು ಭೂಮಿಗೆ ಭಾರವೆಂಬ ಭಾವ ಕಾಡುವ ಮೊದಲೇ ಕರೆಸಿಕೊಳ್ಳುವ ಪರಿ ಇದೆಯಲ್ಲ, ಅದನ್ನು ಸಹಿಸಲಾಗದು.
ಸರ್ವಶಕ್ತ ಎಂದುಕೊಳ್ಳುವ ದೇವರಿಗೆ ಅಷ್ಟೊಂದು ಹಸಿವೆಯೇ? ಇಲ್ಲದೇ ಇದ್ದರೆ ಜಂಟಿಯಾಗುವ ಕನಸುಗಳಿಗೆ ತಳಿರು-ತೋರಣ ಕಟ್ಟಿ ಸಿಂಗರಿಸಿದ ಪ್ರಣಯ ಪಕ್ಷಿಗಳನ್ನು ಬೇರ್ಪಡಿಸಿ, ಯಾರಿಗೆ ಏನು ಬೇಕಾದರೂ ಆಗಲಿ, ಈ ಪ್ರಾಣ ಹೋಗಲಿ ಎಂಬ ಪಟ್ಟಾದರೂ ಯಾಕಾಗಿ?
ಇಲ್ಲದ ಕಾರಣಗಳನ್ನು ತೋರಿಸಿ ಕರೆಸಿಕೊಂಡದ್ದನ್ನು ಹಿರಿಮೆಯೆಂದು, ಅನಿವಾರ್ಯವೆಂದು, ಪವಿತ್ರವೆಂದು ಮತ್ತು ಅದು ನನಗಾಗಿ ಎಂಬುದನ್ನು ಬಿಂಬಿಸುವ ಯತ್ನಗಳು ಆತನಿಂದಲೇ ಆದ ಸಂಬಂಧಗಳ ಕುಡಿಗಳಿಗೆ ಮನವರಿಕೆಯಾಗದು, ಸರಿಯೆನಿಸದು. ಹಾಗೆ ಆತನದೇ ನಿರ್ಧಾರಗಳು ಸರಿಯೆನ್ನುವುದಿದ್ದರೆ ಮೊನ್ನೆ ಮೊನ್ನೆ ಗೆಳತಿಯ ಆಪ್ತೆಯ ಗಂಡನನ್ನು ಆಪೋಷನ ತೆಗೆದುಕೊಂಡಾಗ ಕಾಲವನ್ನು ದೂರುತ್ತಿರಲಿಲ್ಲ. ಪ್ರಣಯ ಮುಗಿಸಿ ಪರಿಣಯಕ್ಕೆ ವರ್ಷಗಳೆರಡು ಎಂಬುದನ್ನು ಸಂಭ್ರಮಿಸಲೂ ಅವಕಾಶ ನೀಡದೆ, ಹೇಳಬೇಕಾದ ಗುಟ್ಟನ್ನು ಗೋಳಾಗಿ ಪರಿವರ್ತನೆ ಮಾಡಿದ ಆತನನ್ನು ದೇವರೆಂದು ಕರೆಯಬೇಕೆಂಬ ನಿರೀಕ್ಷೆಯೇ ಸರಿಯಲ್ಲ ಎಂದಾಗಲೂ ಯಾರೊಬ್ಬರಿಂದ ಒಂದು ಸಣ್ಣದಾದ, ಅತಿರೇಕವೆನಿಸದ ಆಕ್ಷೇಪಗಳೂ ಬರದೇ ಇದ್ದಾಗ ಅಚ್ಚರಿಯನ್ನು ಹೇಗೆ ಹಣೆಯಲ್ಲಿ ಕಾಣಲು ಸಾಧ್ಯವಿದೆ?
ಸಾವಿನ ಮನೆಯ ಸೂತಕ ದೇವರಿಗಾದರೂ ಹೇಗೆ ತಿಳಿಯಬೇಕು? ಕರುಳ ಕುಡಿಯನ್ನು ಕಳೆದುಕೊಂಡ ತಾಯಿಯ ನೋವನ್ನು, ಮುಗಿದೇ ಹೋಯಿತೆನ್ನುವ ಭಾವವನ್ನು ಬದಲಿಸುವ ಪರ್ಯಾಯತೆ ಬೇಕೆಂದೂ, ಬದುಕು ಏನೆಂದು ತಿಳಿಯುವ ಮೊದಲೇ ಸಂಗಾತಿಯನ್ನು ಕಿತ್ತುಕೊಂಡು ಹೃನ್ಮನವನ್ನು ಹಿಂಡಿ ಹಿಪ್ಪೆ ಮಾಡಿದ ಬಳಿಕವಾದರೂ ಸಾಂತ್ವನ ನೀಡಬೇಕೆಂಬ ಗೊಡವೆಯೇ ದೇವರಿಗಿಲ್ಲ. ಸಾವಿನ ಮನೆಗಳ ಕದಗಳು ಕೂಡ ಸೋತು ಹೋದೆವೆಂಬ ಆಜನ್ಮ ನಿರಾಸಕ್ತಿಯನ್ನು ಅನುಭೂತಿಯೊಂದಿಗೆ ಸರಿಯಲು ನಿರಾಕರಿಸುವ ಪರಿಗಳು ದೇವರಿಗಾದರೂ ಯಾಕೆ ಅರ್ಥವಾಗುತ್ತಿಲ್ಲ?
ಒಮ್ಮೆ ಸಾಕೆನಿಸಿದ್ದು ಮಗದೊಮ್ಮೆ ಬೇಕೆನಿಸುವ ಮೊದಲೇ, ಬೇಕೆನಿಸಿದ್ದು ಸಾಕೆನಿಸಲೂ ಕಾಯದೇ, ಮುಂಜಾನೆಯೇ ಮುಸ್ಸಂಜೆಯೆಂಬ ಭಾವವನ್ನು ಹುಟ್ಟಿಸುವ, ಬದುಕಿನ ಬಗ್ಗೆ ನೀರವತೆಯನ್ನು ನಿರೀಕ್ಷಿಸುವ, ನಾಳೆಯೆನ್ನುವುದು ಎಲ್ಲರಿಗಲ್ಲ ಎಂದು ಸಾರದೆ ಕಿತ್ತುಕೊಳ್ಳುವ ದೇವರ ವಿಧಿಯೆಂಬ ನಡೆ ಇಷ್ಟವಾಗುತ್ತಿಲ್ಲ. ಬೇಕೇ ಬೇಕು ಎಂದು ಹೊರಟ ಹಾದಿಯನ್ನು ಕ್ರಮಿಸಿ ಮುಗಿಸುವ ಮೊದಲೇ ಕಂದಕ ಸೃಷ್ಟಿಸಿ ಪಾತಾಳಕ್ಕೆ ತಳ್ಳುವ ಅಪರಿಪೂರ್ಣತೆಯ ಬದುಕು ಎದುರಿಗಿದೆ ಎಂಬುದನ್ನು ಅರಗಿಸಿಕೊಳ್ಳುವುದು ದೇವರು ಹೇಳದೇ ಇರುವ ಕಲಿಯಬೇಕಾದ ಪಾಠ.
ಇವು ಉತ್ತರವಿಲ್ಲದ ಪ್ರಶ್ನೆಗಳು, ಔಷಧಿಯಿಲ್ಲದ ಖಾಯಿಲೆಗಳು. ಕೆಲವನ್ನು ನೆನೆದು, ಇನ್ನು ಕೆಲವನ್ನು ನೆನೆಯದೆ ಎಲ್ಲವನ್ನು ಮುಗಿಸಲೇಬೇಕು. ಅದೇ ಈ ಜೀವನ ಅಂದರೆ ಹೀಗೆ, ತಿರುಗುವ ಮುಳ್ಳಿನ ಹಾಗೆ.