ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಎಲ್ಲರ ದೃಷ್ಟಿಯಲ್ಲೂ ನಾವು ಒಳ್ಳೆಯವರಾಗಲು ಸಾಧ್ಯವೇ? (Bad people | Good people | bad manner | Human beings)
Bookmark and Share Feedback Print
 
ಜಗತ್ತಿನ ತುಂಬೆಲ್ಲಾ ಒಳ್ಳೆಯವರೇ ಇರುತ್ತಿದ್ದರೆ ಕೆಟ್ಟವರೆಂಬ ಪದ ಎಲ್ಲಿ ಇರುತ್ತಿತ್ತು? ಅದಕ್ಕೊಂದು ಅರ್ಥವೇ ಇರುತ್ತಿರಲಿಲ್ಲ. ಆದರೆ ನಾವಿರುವ ವಾಸ್ತವ ವಿಶ್ವದಲ್ಲಿ ಇದಕ್ಕೆ ಅರ್ಥವಿದೆ. ಅದನ್ನು ಹಲವು ಹೆಸರುಗಳಿಂದ ನಾವು ಕರೆಯುತ್ತೇವೆ.

ಕೆಟ್ಟವರೆಲ್ಲ ನಿಜಕ್ಕೂ ಕೆಟ್ಟವರೇ? ಒಳ್ಳೆಯವರೆಲ್ಲ ಒಳ್ಳೆಯವರೇ? ಇರಲಿಕ್ಕಿಲ್ಲ. ಕೆಟ್ಟವರಲ್ಲಿ ಕೆಲವರು ಕೆಟ್ಟವರಿರಬಹುದು. ಒಳ್ಳೆಯವರಲ್ಲಿ ಕೆಲವರು ಒಳ್ಳೆಯವರಿರಬಹುದು. ಅದು ನಾವು ನೋಡುವ ಕಣ್ಣಿನಲ್ಲಿ, ಕೇಳಿದ ಕಿವಿಗಳಲ್ಲಿ, ಯಾರೋ ಹೇಳಿದ ಮಾತುಗಳಲ್ಲಿ, ಪ್ರತ್ಯಕ್ಷವಾಗಿ ಕಂಡರೂ ಪರಾಂಭರಿಸಿ ನೋಡದ ನಮ್ಮನ್ನು ಆಧರಿಸಿದೆ.
PR

ನಮ್ಮ ಸಮಾಜದಲ್ಲಿ ಒಳ್ಳೆಯವನು ಎಂದು ಎನಿಸಿಕೊಳ್ಳಲು ತಪಸ್ಸಿನಂತಹ ಪ್ರಯತ್ನವೂ ಕೆಲವೊಮ್ಮೆ ಸಾಕಾಗುವುದಿಲ್ಲ. ಆದರೆ ಕೆಟ್ಟವನೆನಿಸಿಕೊಳ್ಳುವುದು ತುಂಬಾ ಸುಲಭ. ಏನಾದರೂ ಮಾಡಿ ಕೆಟ್ಟವನೆನಿಸಿಕೊಳ್ಳುವವರು, ಏನೂ ಮಾಡದೆ ಸುಮ್ಮನಿದ್ದು ಅಂತಹ ಬಿರುದನ್ನು ಪಡೆದುಕೊಂಡವರಲ್ಲಿ ನಮ್ಮ-ನಿಮ್ಮಲ್ಲಿ ಅನೇಕರಿರುತ್ತಾರೆ.

ಕೆಟ್ಟವರು ಎಂದು ಕರೆಸಿಕೊಳ್ಳಲು ಯಾರೂ ಮುಂದಾಗಲಾರರು. ಪರಿಸ್ಥಿತಿ-ಸಂದರ್ಭಗಳು ವ್ಯಕ್ತಿಯನ್ನು ಕೆಟ್ಟವನನ್ನಾಗಿಸಬಹುದು. ಯಾರು ಕೂಡ ಹುಟ್ಟಿನಿಂದ ಕಳ್ಳನಾಗಿ, ದರೋಡೆಕೋರನಾಗಿ, ಸುಳ್ಳನಾಗಿ, ಅತ್ಯಾಚಾರಿಯಾಗಿ, ಕೊಲೆಗಾರನಾಗಿ ಹುಟ್ಟುತ್ತಾರೆಯೇ?

ಕೌರವರು ಕೆಟ್ಟವರಾಗಲು, ಪಾಂಡವರು ಒಳ್ಳೆಯವರಾಗಲು ಅವರು ಬೆಳೆದ ವಾತಾವರಣ, ಅವರಿಗೆ ಸಿಕ್ಕಿದ ಸಂಸ್ಕೃತಿ, ಅವರಲ್ಲಿದ್ದ ಲೋಲುಪತೆಗಳು ಕಾರಣವಾಗಿರಬಹುದು. ಹಾಗೆಂದು ಕೌರವರು ಪೂರಾ ಕೆಟ್ಟವರು, ಪಾಂಡವರು ಅಪ್ಪಟ ಅಪರಂಜಿಗಳು ಎಂದು ಹೇಳಲಾದೀತೇ?

ಇಲ್ಲ, ಅದೆಲ್ಲವೂ ನಾವು ವ್ಯಕ್ತಿಯನ್ನು ಕಾಣುವ ರೀತಿಯಲ್ಲಿದೆ. ಪ್ರತಿಯೊಬ್ಬರಿಗೂ ಪ್ರತಿಯೊಬ್ಬರೂ ಒಳ್ಳೆಯವರಾಗಿ ಅಥವಾ ಕೆಟ್ಟವರಾಗಿ ಕಾಣಲು ಸಾಧ್ಯವಿಲ್ಲ. ಸ್ವತಃ ನಮ್ಮನ್ನೇ ಈ ವಿಚಾರದಲ್ಲಿ ಪರಿಗಣಿಸಿದರೂ ಹಲವರಿಗೆ ನಾವು ಕೆಟ್ಟವರಾಗಿರಬಹುದು. ನಮ್ಮ ಜತೆಗಿನ ಹಲವರು ನಮ್ಮ ಬಗ್ಗೆ ಕೆಟ್ಟ ಭಾವನೆಯನ್ನೇ ಹೊಂದಿರಬಹುದು -- ಅದು ಹೇಗೆಂದರೆ ನಾವು ಕೆಲವರನ್ನು ಕೆಟ್ಟವರು ಎಂದು ಅಂದುಕೊಂಡಂತೆ.

ಎಲ್ಲರಿಗೂ ಒಳ್ಳೆಯವರು ಎಂದು ಹೇಳಿಸಿಕೊಳ್ಳುವ ಹುಚ್ಚು. ಕಚ್ಚೆಹರುಕನಿಗೂ, ಹಲಾಲಕೋರನಿಗೂ ಯಾರಿಂದಲಾದರೂ ಮಾಲೆ ಹಾಕಿಸಿಕೊಂಡು ಒಳ್ಳೆಯವನು ಎನಿಸಿಕೊಳ್ಳುವ ಆಸೆ. ನಾವೆಲ್ಲರೂ ಇದೇ ಪರಿಧಿಯಲ್ಲಿ ಬರುತ್ತೇವೆ. ನೂರೋ-ಐನೂರೋ ಕದ್ದು ಸಿಕ್ಕಿ ಬಿದ್ದವನನ್ನೋ, ಕೋಳಿ-ಕುರಿ ಎಗರಿಸಿದವನನ್ನೋ ಕರೆಂಟು ಕಂಬಕ್ಕೆ ಕಟ್ಟಿ ಹಾಕಿ ಆಳಿಗೊಬ್ಬರಂತೆ ಮನ ಬಂದಂತೆ ಥಳಿಸಿ ನಮ್ಮ ಪೌರುಷವನ್ನು ಪ್ರದರ್ಶಿಸುತ್ತೇವೆ. ಹುಡುಗಿಯೊಬ್ಬಳನ್ನು ಚುಡಾಯಿಸಿದನೆಂದು ಓಡಿಸಿಕೊಂಡು ಹೊಡೆದು ಹಾಕುತ್ತೇವೆ. ಲಕ್ಷಾಂತರ-ಕೋಟ್ಯಂತರ ನುಂಗಿ ನೀರು ಕುಡಿದವರನ್ನು ನಾಯಕರು ಎನ್ನುತ್ತೇವೆ. ಅತ್ಯಾಚಾರ ಮಾಡಿದರೂ ಅವರ ಮೇಲಿರುವುದು ಕೇವಲ ಆರೋಪ ಎಂದು ಬಿಡುತ್ತೇವೆ. ಇದು ನಮ್ಮ ಸಮಾಜ.

ನಮ್ಮಲ್ಲಿ ಒಳ್ಳೆಯವರು ಎನಿಸಿಕೊಳ್ಳುವುದು ಎಲ್ಲರಿಗೂ ಚಟ. ನಮ್ಮ ಸುತ್ತ ಇರುವುದು ಸೋಗಿನ ಸಮಾಜ. ಗೋವಿನ ಮುಖವಾಡ ತೊಟ್ಟಿರುವ ವ್ಯಾಘ್ರರ ಕುಲ. ಅವರಿಗೆ ತಕ್ಕಂತೆ ತಾಳ ಹಾಕಿದರೆ, ಜೈಕಾರ ಹಾಕಿದರೆ ಸಲೀಸು. ತಪ್ಪಿದರೆ ನಮ್ಮತನವನ್ನು ಉಳಿಸಿಕೊಳ್ಳಲು ಹೊರಟರೆ ನಾವೇ ಇರುವುದಿಲ್ಲ. ನಮ್ಮ ಹಿಂದಿದ್ದ ಊರುದ್ದ ಸಾಲು ಮಾರುದ್ದಕ್ಕೆ ಇಳಿದಿರುತ್ತದೆ. ನಾವು ಯಾರು ನಮ್ಮಲ್ಲೇ ಪ್ರಶ್ನೆ ಹಾಕಬೇಕಾದ ಅನಿವಾರ್ಯತೆ ನಮಗೆ ಎದುರಾಗುತ್ತದೆ.

ತಾವು ಸಮಾಜ ಸುಧಾರಕರು ಎಂದೋ, ಜನೋದ್ಧಾರಕರೆಂದೋ, ದೀನ-ದಲಿತರ ಬಂಧುಗಳೆಂದೋ ಹೇಳಿಕೊಂಡವರ ಒಳ ಬಣ್ಣ ಅವರ ಸುತ್ತ ಕೆಲಕಾಲ ಠಳಾಯಿಸಿದವರ ಅನುಭವಕ್ಕೆ ಬರುತ್ತದೆ. ಟೈ-ಕೋಟು ಹಾಕಿದವರ ಮನಸ್ಸು ಶುಭ್ರವಾಗಿರದೆಯೂ ಇರಬಹುದು ಎಂದು ದೂರವಿದ್ದವರಿಗೆ ಅರಿವಿಗೆ ಬರುವುದಿಲ್ಲ. ಅವರು ವಿನಯಶೀಲರು, ಹೃದಯವಂತರು, ಕರುಣಾಮಯಿಗಳು ಎಂದು ಹಾಡಿ ಹೊಗಳುತ್ತೇವೆ.

ಅದೇ ಕಳ್ಳ-ಸುಳ್ಳ, ಅತ್ಯಾಚಾರಿ, ವಂಚಕ-ಮೋಸಗಾರ ಮುಂತಾದ ಪಟ್ಟಗಳನ್ನು ಅಲಂಕರಿಸಿದವರನ್ನು ಒಂದೇ ಏಟಿಗೆ ಮನುಷ್ಯರಾಗಿ ಮುಂದುವರಿಯಲು ಅನರ್ಹರು, ಮನುಜಕುಲಕ್ಕೆ ಅಪಮಾನ ಎಂದು ಸಾರ್ವಕಾಲಿಕವಾಗಿ ತಿರಸ್ಕರಿಸುತ್ತೇವೆ. ಆದರೆ ನಾವು ಹಾಡಿ ಹೊಗಳಿ ಅಟ್ಟಕ್ಕೇರಿಸುವವರಿಗಿಂತ ಅಥವಾ ಕೆಲವೊಮ್ಮೆ ನಮಗಿಂತ ಹೆಚ್ಚು ಹೃದಯವಂತರಾಗಿ ಅವರು ಬದಲಾದರೂ ನಾವು ಒಪ್ಪಿಕೊಳ್ಳುವುದಿಲ್ಲ. ವಾಸ್ತವತೆಯನ್ನು ಸ್ವೀಕರಿಸುವ ಬದಲು ನಾವು ಗೋಸುಂಬೆಗಳನ್ನು ನಂಬುವುದನ್ನೇ ಮುಂದುವರಿಸುತ್ತೇವೆ.

ನಾಯಕನೆಂದು, ಹಣವಂತನೆಂದು, ವಿದ್ಯಾವಂತನೆಂದು, ಬುದ್ಧಿವಂತನೆಂದು, ರೂಪವಂತನೆಂದು ವ್ಯಕ್ತಿಯೊಬ್ಬನಿಗೆ ವಿನಯಶೀಲ, ಹೃದಯವಂತ, ಜಂಟಲ್‌ಮ್ಯಾನ್ ಎಂದು ಕಣ್ಣು ಮುಚ್ಚಿ ಒಪ್ಪಿಕೊಳ್ಳುವ ಮೊದಲು ಅಕ್ಷರ ಜ್ಞಾನ ಇಲ್ಲದವನನ್ನು, ಹಳ್ಳಿ ಗಮಾರನನ್ನು, ಒಬ್ಬ ಸಾಮಾನ್ಯ ಮನುಷ್ಯನನ್ನು, ಸಮಾಜಮುಖಿಯಾಗಿ ಬದಲಾದ ಸಮಾಜ ಕಂಟಕನನ್ನು ಮಾನವನನ್ನಾಗಿ ಸ್ವೀಕರಿಸೋಣ.

ಒಳ್ಳೆಯವರಾಗುವ ಪ್ರಯತ್ನ ತಪ್ಪಲ್ಲ. ಆದರೆ ಎಲ್ಲರ ದೃಷ್ಟಿಯಲ್ಲೂ ಒಳ್ಳೆಯವರೆನಿಸಿಕೊಳ್ಳಲು ಸಾಧ್ಯವಿದೆ ಎಂದು ಸಾಧಿಸಲು ಹೊರಡುವುದು ಮಾತ್ರ ಮೂರ್ಖತನ. ಒಬ್ಬರಲ್ಲದಿದ್ದರೆ ಇನ್ನೊಬ್ಬರು ನಮ್ಮನ್ನು ದೂಷಿಸುವವರು ಅಥವಾ ಕೆಟ್ಟವನೆಂದು ಬೆಟ್ಟು ಮಾಡಿ ತೋರಿಸುವವರು ಇದ್ದೇ ಇರುತ್ತಾರೆ. ಅದನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳದೆ ನಾವು ನಾವಾಗಿ ಬದುಕುವ ಅಗತ್ಯವಿದೆ. ಜಗತ್ತಿಗೆ ಕೆಟ್ಟವನು ಎಂದೆನಿಸಿಕೊಂಡವನು ನಮ್ಮ ಪಾಲಿಗೆ ಅಥವಾ ನಮ್ಮಿಂದಾಗಿ ಒಳ್ಳೆಯವನಾಗಿ ಬದಲಾಗಲು ಸಾಧ್ಯವಿದೆಯಲ್ಲವೇ?
ಸಂಬಂಧಿತ ಮಾಹಿತಿ ಹುಡುಕಿ