ಅವಿನಾಶ್ ಬಿ. ಜರ್ಮನಿಯ ವೂಲ್ಫ್ಸ್‌ಬರ್ಗ್‌ನಲ್ಲಿರುವ ಈ ತಾಣಕ್ಕೆ ಕಾಲಿಟ್ಟ ಕೂಡಲೇ ಇದನ್ನು ಕಾರುಗಳ ಡಿಸ್ನಿ ಲ್ಯಾಂಡ್ ಅಂತ ಉದ್ಗರಿಸಿದವರು ಜತೆಯಲ್ಲಿದ್ದ ಪತ್ರಕರ್ತರು. ಈ ಆಟೋಸ್ಟಾಟ್ (Autostadt) ಎಂಬುದು ವೋಕ್ಸ್‌ವ್ಯಾಗನ್ ಕಾರು ಉತ್ಪಾದಕ ಕಂಪನಿ ಬಳಗದ ಥೀಮ್ ಪಾರ್ಕ್ ಎಂದರೂ ಸರಿ. ಇಲ್ಲಿ ಇದುವರೆಗೆ ಯೂರೋಪಿನಲ್ಲಿ ತಯಾರಾದ ಎಲ್ಲ ಕಾರುಗಳ ಮಾಡೆಲ್‌ಗಳಿವೆ ಮತ್ತು ಮಹತ್ವದ ಮೈಲಿಗಲ್ಲು ಆಗಬಲ್ಲ ಕಾರುಗಳೂ ಇವೆ.
WD
ವೋಕ್ಸ್‌ವ್ಯಾಗನ್ ಬಳಗದ ಆವ್‌ಡಿ (Audi), ಲಾಂಬರ್ಗಿನಿ (Lamborghini), ಸೀಟ್ (Seat), ಸ್ಕೋಡಾ (Skoda), ಬೆಂಟ್ಲಿ, ಬುಗಾಟಿ ಹಾಗೂ ವೋಕ್ಸ್‌ವ್ಯಾಗನ್ ವಾಣಿಜ್ಯ ವಾಹನಗಳೆಲ್ಲವೂ ಇಲ್ಲಿವೆ. ಎಲ್ಲವೂ ಒಂದೊಂದು ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ.
ಗಂಟೆಗೆ 400ಕ್ಕೂ ಹೆಚ್ಚು ಕಿ.ಮೀ. ವೇಗದಲ್ಲಿ ಓಡಬಲ್ಲ.... ಅಲ್ಲಲ್ಲ 'ಹಾರಬಲ್ಲ' ಬುಗಾಟಿ ಕಾರಿನ (ಎಡಗಡೆ ಚಿತ್ರ) ವಿನ್ಯಾಸ ನೋಡಿ ನಾವೆಲ್ಲಾ ದಂಗುಬಡಿದು ನಿಂತಿದ್ದೆವು...!
Zeithaus ಎಂದು ಕರೆಯಲಾಗುವ ಈ ಕಾರು ಮ್ಯೂಸಿಯಂ ಸುಮಾರು 50 ಬ್ರ್ಯಾಂಡ್‌ಗಳಲ್ಲಿ ವೋಕ್ಸ್‌ವ್ಯಾಗನ್ ಮತ್ತು ಅದರ ಪ್ರತಿಸ್ಪರ್ಧಿ ಕಂಪನಿಗಳ 200ಕ್ಕೂ ಅಧಿಕ ಕಾರಿನ ಮಾಡೆಲ್‌ಗಳಿವೆ.
ಇದರೊಳಗೆ ಹೊಕ್ಕರೆ, ಒಂದೆಡೆ ಪರಿಸರ ಸಂರಕ್ಷಣೆಯ ಸಾಧ್ಯಾಸಾಧ್ಯತೆಗಳು, ವಾತಾವರಣದ ಏರುಪೇರಿನ ಪರಿಣಾಮಗಳು ಇತ್ಯಾದಿಗಳ ಮಾಹಿತಿ ಲೋಕವೇ ತೆರೆದುಕೊಳ್ಳುತ್ತದೆ. ಮತ್ತೊಂದೆಡೆ, ನಮಗೆ ಬೇಕಾದ ಕಾರಿನ ಮಾದರಿಗಳನ್ನು ನಾವೇ ಕಂಪ್ಯೂಟರಿನಲ್ಲಿ ವಿನ್ಯಾಸಗೊಳಿಸಿ, ಅದನ್ನು ಸಂಬಂಧಿತ ಅಧಿಕಾರಿಗಳಿಗೆ ನೀಡಬಹುದಾದ ಅವಕಾಶವೂ ಇದೆ.
WD
ಹತ್ತು ವರ್ಷಗಳ ಹಿಂದೆ 2000 ಜೂನ್ 1ರಂದು ತೆರೆದುಕೊಂಡ ಈ ಆಟೋಸ್ಟಾಟ್‌ಗೆ ಇದುವರೆಗೆ 2 ಕೋಟಿಗೂ ಅಧಿಕ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 2009 ವರ್ಷವೊಂದರಲ್ಲೇ 22 ಲಕ್ಷ ಮಂದಿ ಇಲ್ಲಿಗೆ ಭೇಟಿ ನೀಡಿದ್ದರೆ, ದಿನವೊಂದರ ಸರಾಸರಿ ಇಲ್ಲಿಗೆ ಭೇಟಿ ನೀಡಿದವರ ಸಂಖ್ಯೆ 6000.
ವರ್ಷದಲ್ಲಿ ಡಿಸೆಂಬರ್ 24 ಮತ್ತು ಡಿಸೆಂಬರ್ 31 ಹೊರತುಪಡಿಸಿ ಎಲ್ಲ ದಿನಗಳಲ್ಲಿಯೂ ಪ್ರವಾಸಿಗರಿಗೆ ತೆರೆದುಕೊಂಡಿರುವ ಈ ಕಾರು ಮ್ಯೂಸಿಯಂಗೆ ಪ್ರವೇಶ ಶುಲ್ಕ 15 ಯೂರೋಗಳು. (1 ಯೂರೋ ಅಂದರೆ ಅಂದಾಜು 60 ರೂ.) ಹ್ಯಾನೋವರ್‌ನಿಂದ ಅರ್ಧ ಗಂಟೆ, ಬರ್ಲಿನ್‌ನಿಂದ ಒಂದು ಗಂಟೆ ಪ್ರಯಾಣದ ದೂರದಲ್ಲಿದೆ ಈ ವೂಲ್ಫ್ಸ್‌ಬರ್ಗ್.
ವಿಶ್ವದ ಅತಿದೊಡ್ಡ ಕಾರು ವಿತರಣಾ ಕೇಂದ್ರ... ಇದು ಕುಂಡನ್‌ಸೆಂಟರ್ - ವಿಶ್ವದ ಅತಿ ದೊಡ್ಡ ಕಾರು ವಿತರಣಾ ಕೇಂದ್ರ. ಗ್ರಾಹಕರು ತಮ್ಮ ಕನಸಿನ ಕೂಸು, ಹೊಚ್ಚ ಹೊಸ ಕಾರಿನ ಮಾಲೀಕತ್ವ ಹೊಂದುವುದು ಇಲ್ಲೇ. ಎರಡು ಗಾಜಿನ ಸ್ಥಾವರಗಳಲ್ಲಿ ತಲಾ 400 ಕಾರುಗಳನ್ನು ಇರಿಸಲು ಸ್ಥಳಾವಕಾಶವಿದೆ. ಫ್ಯಾಕ್ಟರಿಯಲ್ಲಿ ತಯಾರಾದ ಪ್ರತಿಯೊಂದು ಕಾರನ್ನು ಇಲ್ಲಿಗೆ ಸ್ವಯಂಚಾಲಿತ ಯಂತ್ರದ ಮೂಲಕವೇ ತಂದು ಇರಿಸಲಾಗುತ್ತದೆ. ಎರಡೂ ಸ್ಥಾವರಗಳ ಒಳಗೆ ಸುಮಾರು 50 ಮೀಟರ್ ಎತ್ತರಕ್ಕೆ ಹೋಗಬಲ್ಲ ಗಾಜಿನ ಲಿಫ್ಟ್ ಒಂದಿದ್ದು, ಗ್ರಾಹಕರು ಈ ಲಿಫ್ಟ್‌ನಲ್ಲಿ ಕುಳಿತು ಎಲ್ಲ ಕಾರುಗಳನ್ನೂ ವೀಕ್ಷಿಸಬಹುದಾಗಿದೆ, ತಮಗೆ ಬೇಕಾದುದನ್ನು ಆರಿಸಬಹುದಾಗಿದೆ. ವಿಶೇಷವೆಂದರೆ, ಜರ್ಮನಿಯ ಶೇ.30ರಷ್ಟು ಗ್ರಾಹಕರು ಕಾರುಗಳನ್ನು ಪಡೆದುಕೊಳ್ಳುವುದು ಈ ವಿತರಣಾ ಸ್ಥಾವರಗಳ ಮೂಲಕವೇ.
ಈ ಕಾರು ವಿತರಣಾ ಕೇಂದ್ರದಿಂದ 2009ರಲ್ಲಿ ಪ್ರತಿದಿನ ಸರಾಸರಿಯಾಗಿ ವಿತರಣೆಯಾದ ಕಾರುಗಳ ಸಂಖ್ಯೆ 550 ಎಂದರೆ ಮೂಗಿಗೆ ಬೆರಳಿಟ್ಟುಕೊಳ್ಳಲೇಬೇಕು!
ಗುಣಮಟ್ಟ, ಸುರಕ್ಷತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಪರಿಸರ ಜಾಗೃತಿ - ಈ ನಾಲ್ಕು ಧ್ಯೇಯಗಳನ್ನು ಹೊಂದಿರುವ ವೋಕ್ಸ್‌ವ್ಯಾಗನ್, ಇದರಿಂದಾಗಿಯೇ ಅತ್ಯಂತ ದುಬಾರಿ ಕಾರುಗಳನ್ನು ಹೊರತರುತ್ತಿದೆ. ಆದರೆ, ಇದೀಗ ಸುಜುಕಿ ಮೋಟರ್ಸ್ ಜೊತೆಗೆ ಕೈಜೋಡಿಸಿದ್ದು, ಭಾರತದಲ್ಲಿಯೂ 4 ಲಕ್ಷ ರೂಪಾಯಿಗಿಂತ ಕಡಿಮೆ ದರದ ಕಾರುಗಳು ಹೊರಬರುವ ನಿರೀಕ್ಷೆಗಳಿವೆ. ಸಂಬಂಧಿತ ವರದಿಗಳು... ವೂಲ್ಫ್ಸ್‌ಬರ್ಗ್‌ನಲ್ಲಿ ವೋಕ್ಸ್‌ವ್ಯಾಗನ್ ಕಾರುಗಳ ಅದ್ಭುತ ಲೋಕ (ವೀಡಿಯೋ ಸಹಿತ) ಕಾರುಗಳ ಮಾಯಾನಗರಿಯಲ್ಲಿ ....ಎಲ್ನೋಡಿ ಕಾರ್...!