ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಸರಿಯೋ, ತಪ್ಪೋ: ಸಂದೇಹ ಹಲವು, ಪರಿಹಾರ ಕೆಲವು...
(Karnataka Crisis | Governor | BJP Government | MLA | Congress | JDS)
ಅವಿನಾಶ್ ಬಿ. ವಿಶ್ವಾಸಮತ ಸಾಬೀತು ಮಾಡಿದ ಸಂದರ್ಭ ಸೋಮವಾರ ವಿಧಾನಸೌಧವು ಹತ್ತು ಹಲವು ವಿಪರೀತಗಳಿಗೆ ಸಾಕ್ಷಿಯಾಯಿತು. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಬಗ್ಗೆ ಓದುಗರಲ್ಲಿ ಸಂದೇಹಗಳಿರಬಹುದು. ಅವುಗಳಲ್ಲಿ ಒಂದಿಷ್ಟು ಸಂದೇಹಗಳಿಗೆ ಪರಿಹಾರ ನೀಡುವ ಯತ್ನ ಇಲ್ಲಿದೆ.
ಕೇಂದ್ರದ, ರಾಜ್ಯಪಾಲರ ಮುಂದಿರುವ ಸಾಧ್ಯಾಸಾಧ್ಯತೆಗಳು ಏನು? ಕಾನೂನಿಗೆ ಸಂಬಂಧಿಸಿದಂತೆ ರಂಗೋಲಿ ಕೆಳಗೆ ತೂರುವ ಅವಕಾಶಗಳನ್ನು ಮತ್ತಷ್ಟು ಸಾಧ್ಯತೆಯೊಂದಿಗೆ ಬಳಸಿಕೊಳ್ಳದೇ ಹೋದರೆ, ಅಂದಾಜು ಈ ಕೆಳಗಿನ ಐದು ಆಯ್ಕೆಗಳಿರುತ್ತವೆ. 1. ವಿಶ್ವಾಸಮತ ಗೆದ್ದಿದ್ದು ಎಂಬುದು ಖಚಿತವಾದರೆ, ಬೇರೇನೂ ಅಡೆತಡೆಗಳಿಲ್ಲದಿದ್ದರೆ ಕನಿಷ್ಠ ಆರು ತಿಂಗಳು ತೊಂದರೆಯಿಲ್ಲದೆ ಸರಕಾರ ಮುಂದುವರಿಕೆ 2. ರಾಜ್ಯಪಾಲರ ವರದಿಗೆ ಮನ್ನಣೆ ನೀಡಿ ಅಸೆಂಬ್ಲಿ ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ, ಹೊಸ ಚುನಾವಣೆಗೆ ಸಿದ್ಧತೆ. ಬಿಜೆಪಿಯು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯೂ ಇದೆ. 3. ಅಸೆಂಬ್ಲಿಯನ್ನು ಅಮಾನತಿನಲ್ಲಿರಿಸಿ (ಸಸ್ಪೆಂಡೆಡ್ ಅನಿಮೇಶನ್) ನಂತರ ರಾಷ್ಟ್ರಪತಿ ಆಳ್ವಿಕೆ ಹೇರಿ, ಬದಲಿ ಸರಕಾರ ಸಾಧ್ಯಾಸಾಧ್ಯತೆ ಬಗ್ಗೆ ಚಿಂತನೆ. 4. ಕೇಂದ್ರಕ್ಕೆ ಕಾದು ನೋಡುವ ಕೆಲಸ, ಸದ್ಯ ಹೀಗೇ ಇರಲಿ, ಇನ್ನಷ್ಟು ದಿನದ ಬಳಿಕ ನೋಡೋಣ ಅನ್ನುವ ನಿರ್ಧಾರ. 5. ಹೈಕೋರ್ಟಿನಲ್ಲಿರುವ ಕೇಸು ತೀರ್ಮಾನವಾಗಿ ಅನರ್ಹತೆಯೇನಾದರೂ ರದ್ದಾದರೆ, ರಾಜ್ಯಪಾಲರು ಮತ್ತೊಮ್ಮೆ ಬಹುಮತ ಸಾಬೀತುಪಡಿಸಲು ಕೇಳಲೂಬಹುದು.
ವಿಶ್ವಾಸಮತ ಯಾಚನೆ ವೇಳೆ ವಿಧಾನ ಪರಿಷತ್ ಸದಸ್ಯರು ಸದನದೊಳಗೆ ಇರಬಹುದೇ? ಇರುವಂತಿಲ್ಲ, ಆದರೆ ಸೋಮವಾರ ಕಲಾಪದಲ್ಲಿ ಭಾಗವಹಿಸಿದವರು ಬರೇ ಸದಸ್ಯರಲ್ಲ, ಅವರು ಸರಕಾರದ ಭಾಗವಾಗಿರುವ ಸಚಿವರು (ಸೋಮಣ್ಣ, ಜನಾರ್ದನ ರೆಡ್ಡಿ, ವಿ.ಎಸ್.ಆಚಾರ್ಯ ಮತ್ತು ವಿಜಯಶಂಕರ್). ತಮ್ಮ ಸರಕಾರದ ಏಳುಬೀಳಿನ ಕ್ಷಣದಲ್ಲಿ ಅವರು ಮೂಕ ಪ್ರೇಕ್ಷಕರು ಮಾತ್ರ ಆಗಿರಬೇಕು, ಮತದಾನ ಮಾಡುವಂತಿಲ್ಲ ಎಂಬ ಅವಕಾಶವೂ ಇದೆ.
ಬಿಜೆಪಿ ನಮ್ಮ ಬಳಿ 106 ಮಂದಿ ಇದ್ದಾರೆ ಎನ್ನುತ್ತಿದೆ. ಪ್ರತಿಪಕ್ಷಗಳು 120 ಮಂದಿ ಶಾಸಕರು ರಾಜ್ಯಪಾಲರೆದುರು ಹೋಗಿದ್ದೇವೆ ಎನ್ನುತ್ತಿದ್ದಾರೆ, ಇದು ಹೇಗೆ? ಖಂಡಿತಾ ಸಾಧ್ಯವಿಲ್ಲ. ಯಾಕೆಂದರೆ ಬಿಜೆಪಿ ತನ್ನ ಬಳಿ 106 ಶಾಸಕರಿದ್ದಾರೆ, ಆ ಮತಗಳು ತಮಗೆ ಬಿದ್ದಿದೆ ಎಂದು ಹೇಳಿಕೊಂಡಿದೆ. ಒಟ್ಟು ಇರುವುದೇ 224 ಮಂದಿ. ಕಾಂಗ್ರೆಸ್ 73, ಜೆಡಿಎಸ್ 27 (ಮತ್ತೊಬ್ಬ ಶಾಸಕ ಅಶ್ವತ್ಥ್ ಬಿಜೆಪಿ ಪರ), ಸ್ವತಂತ್ರರು 6 ಹಾಗೂ 11 ಮಂದಿ ಬಿಜೆಪಿ ಬಂಡಾಯ ಶಾಸಕರು. ಆರಂಭದಲ್ಲಿ, ಒಟ್ಟು 14 ಬಿಜೆಪಿ ಶಾಸಕರು ಬೆಂಬಲ ವಾಪಸ್ ಪತ್ರವನ್ನು ರಾಜ್ಯಪಾಲರಿಗೆ ಕೊಟ್ಟಿದ್ದರು. ಅದರಲ್ಲಿ ರಾಜೂಗೌಡ ಮತ್ತು ದೊಡ್ಡನಗೌಡ ಪಾಟೀಲ ಬಿಜೆಪಿಯತ್ತ ಮರಳಿದ್ದಾರೆ. ಎಸ್.ಕೆ.ಬೆಳ್ಳುಬ್ಬಿ ಒಮ್ಮೆ ಬಿಜೆಪಿ ಕಡೆಗೆ ಪುನಃ ವಾಲಿ, ಮತ್ತೆ ವಾಪಸ್ ಹೋಗಿದ್ದಾರೆ. ಆ ಬಳಿಕ, ಬಿಜೆಪಿಯಿಂದ ಮಾನಪ್ಪ ವಜ್ಜಲ್, ಭಿನ್ನರ ಬಣ ಸೇರಿಕೊಂಡಿದ್ದಾರೆ. ಅಂದರೆ 14ರಲ್ಲಿ ಎರಡು ಎರಡು ಮೈನಸ್ ಆಗಿದೆ. ಹೀಗಾಗಿ 12 ಪ್ಲಸ್ ಮಾನಪ್ಪ ವಜ್ಜಲ್ ಸೇರಿದ್ರೆ 13. ಹೀಗಾದರೆ ಅವರ ಒಟ್ಟು ಬಲ 119. ಆದರೂ, ಬಿಜೆಪಿ 106 ಹೇಳಿಕೊಂಡಿರುವಾಗ, ಅಲ್ಲಿ ಉಳಿದಿರುವುದು 118 ಮಾತ್ರ! ಒಬ್ಬ ಎಲ್ಲಿಂದ ಸೇರ್ಪಡೆ ಎಂಬುದು ಯಕ್ಷಪ್ರಶ್ನೆ. ಬಹುಶಃ 14 ಮಂದಿಯ ಬೆಂಬಲ ವಾಪಸಾತಿ ಪತ್ರವನ್ನೇ ಮಾನದಂಡವಾಗಿ ಇಟ್ಟುಕೊಂಡಿರಬಹುದು.
ರಾಜ್ಯಪಾಲರು ತಲೆಎಣಿಕೆ ಮೂಲಕ ಸರಕಾರದ ಮತ ನಿರ್ಧರಿಸಬಹುದೇ? ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಇಲ್ಲ. ಸರಕಾರದ ಬಲಾಬಲ ನಿರ್ಧಾರವಾಗುವುದು ಸದನದಲ್ಲೇ ಹೊರತು, ರಾಜಭವನದಲ್ಲಿ ಅಲ್ಲ.
ರಾಜ್ಯಪಾಲರು ಇಷ್ಟು ಅವಸರವಾಗಿ ಕೇಂದ್ರಕ್ಕೆ 'ರಾಷ್ಟ್ರಪತಿ ಆಳ್ವಿಕೆ' ಶಿಫಾರಸು ಕಳುಹಿಸಬಹುದೇ? ಒಂದು ವಾದದ ಪ್ರಕಾರ, ಸದನದಲ್ಲಿ ಏನು ನಡೆಯಿತು ಎಂಬ ಕುರಿತು ಸಭಾಧ್ಯಕ್ಷರು ರಾಜ್ಯಪಾಲರಿಗೆ ವರದಿ ಸಲ್ಲಿಸಿದ ಬಳಿಕವಷ್ಟೇ, ಅದನ್ನು ಪರಿಶೀಲಿಸಿ ಅವರು ಕೇಂದ್ರಕ್ಕೆ ಶಿಫಾರಸು ಕಳುಹಿಸಬಹುದು. ಆದರೆ, ಕಲಾಪದ ವೇಳೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ತರಾತುರಿ ನಿರ್ಧಾರ ಕೈಗೊಳ್ಳಬೇಕಾಗಿರುವುದರಿಂದ ರಾಜ್ಯಪಾಲರು ಮಾಡಿದ್ದು ಸರಿ ಎಂಬುದು ಮತ್ತೊಂದು ವಾದ.
ಪಕ್ಷಾಂತರ ನಿಷೇಧ ಕಾಯಿದೆಯ ಪ್ರಕಾರ, ವಿಶ್ವಾಸಮತದ ಸ್ವಲ್ಪವೇ ಮೊದಲು ಸಭಾಧ್ಯಕ್ಷರು ಶಾಸಕರನ್ನು ಅನರ್ಹಗೊಳಿಸಬಹುದೇ? ಹಳೆಯ ಇತಿಹಾಸ ಕೆದಕಿದರೆ, ಈ ರೀತಿ ಅನರ್ಹಗೊಳಿಸಿದ ಪ್ರಕರಣಗಳು ಸಾಕಷ್ಟು ಬರುತ್ತವೆ. ಹೀಗಾಗಿ ಬಿಜೆಪಿ ಶಾಸಕರ ಅನರ್ಹತೆಯು ಸಿಂಧು ಎಂದೇ ಹೇಳಲಾಗುತ್ತದೆ.
ಸರಿ, ಬಿಜೆಪಿಯು ತನ್ನ ಪಕ್ಷೀಯರಿಗೆ ನೋಟಿಸ್ ನೀಡಿ ಅನರ್ಹಗೊಳಿಸಿರಬಹುದು. ಆದರೆ, ಇಲ್ಲಿ ಪಕ್ಷೇತರರನ್ನು ಅನರ್ಹಗೊಳಿಸಿದ್ದು ಸರಿಯೇ? ಇದು ಸರಿಯಲ್ಲ, ಆದರೆ ಇದು ಸಾಧ್ಯ ಎನ್ನುತ್ತಿದೆ ಬಿಜೆಪಿ. ಸ್ಪಷ್ಟ ಚಿತ್ರಣ ದೊರೆಯುವುದಿಲ್ಲ. ಬಿಜೆಪಿ ನೀಡುವ ಸಮರ್ಥನೆ ಪ್ರಕಾರ, ಪಕ್ಷೇತರರು ಕೂಡ ಬಿಜೆಪಿ ಸರಕಾರದ ಭಾಗವಾಗಿದ್ದು, ಅವರು ಈಗಾಗಲೇ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ, ಬಿಜೆಪಿ ಸರಕಾರದ ಉಳಿವಿಗೆ ಪ್ರಯತ್ನಿಸಿರುವಾಗ, ಅವರೂ ನಮ್ಮವರೇ. ಹೀಗಾಗಿ ಅವರ ಶಾಸಕತ್ವವನ್ನೂ ಅನರ್ಹಗೊಳಿಸಬಹುದಾಗಿದೆ.
ಯಾವುದೇ ಸ್ವತಂತ್ರ ಅಭ್ಯರ್ಥಿಯು ಯಾವುದೇ ಪಕ್ಷಕ್ಕೆ ಅಫಿಲಿಯೇಶನ್ ತೋರಿಸಿದರೆ, ಅವರ ಉದ್ದೇಶ ಪ್ರಕಟಿಸಿದರೆ, ಅವರು ಅನರ್ಹತೆಗೆ ಅರ್ಹರಾಗುತ್ತಾರೆ ಎಂಬುದು ರೂಲ್ ಬುಕ್‌ನಲ್ಲಿರೋ ನಿಯಮ. ಹಾಗೆಯೇ, ಈಗಿನ ಇಂಡಿಪೆಂಡೆಂಟ್ ಸದಸ್ಯರು ಎಲ್ಲ ರೀತಿಯಲ್ಲೂ ಬಿಜೆಪಿಗೆ ಅಫಿಲಿಯೇಟ್ ಆಗಿದ್ದಾರೆ. ಸ್ಪೀಕರ್‌ಗೆ ಪತ್ರಗಳನ್ನು ಕೊಟ್ಟಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗಿ ರುಜು ಹಾಕಿದ್ದಾರೆ ಎಂಬುದು ಬಿಜೆಪಿ ಸಮರ್ಥನೆ.
ರಾಜ್ಯಪಾಲರು ಅಥವಾ ಕೇಂದ್ರವು ರಾಷ್ಟ್ರಪತಿ ಆಡಳಿತ ಹೇರಬಹುದೇ? ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬಹುದು ಮಾತ್ರ. ಕೇಂದ್ರ ಸಂಪುಟವು ಈ ಕುರಿತು ಸಭೆ ಸೇರಿ, ತನ್ನ ಅಭಿಪ್ರಾಯವನ್ನು ರಾಷ್ಟ್ರಪತಿಗೆ ಸಲ್ಲಿಸುತ್ತದೆ. ರಾಷ್ಟ್ರಪತಿಯವರು ಈ ಶಿಫಾರಸಿಗೆ ಅಂಗೀಕಾರ ಹಾಕಿದರೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುತ್ತದೆ.
ಈ ಪ್ರಕರಣದಲ್ಲಿ ತಾಂತ್ರಿಕವಾಗಿ ಬಿಜೆಪಿ ಸರಕಾರ ವಿಶ್ವಾಸಮತವನ್ನು ಧ್ವನಿಮತದಿಂದ ಗೆದ್ದಿದೆ. ಸರಕಾರವನ್ನು ಕೇಂದ್ರವು ವಜಾಗೊಳಿಸಬಹುದೇ? ಇದು ಈ ಪ್ರಕರಣದ ವಿಶೇಷತೆ. ವಿಶ್ವಾಸಮತ ಗೆದ್ದ ಸರಕಾರದ ವಜಾ ಕಷ್ಟ ಸಾಧ್ಯ. ಸ್ಪೀಕರ್ ನಿರ್ಣಯವು ಪ್ರಶ್ನಾತೀತವಾಗಿರುವುದರಿಂದ ಬೊಮ್ಮಾಯಿ ಪ್ರಕರಣದ ತೀರ್ಪಿನ ಬೆಂಬಲ ಬಿಜೆಪಿ ಕಡೆಗಿದೆ. ವಜಾಗೊಂಡರೆ ಬಿಜೆಪಿಯು ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು.
ಧ್ವನಿ ಮತ ಎಂಬುದು ಅಧಿಕೃತವಾಗಿ ಪರಿಗಣಿಸಲ್ಪಡುತ್ತದೆಯೇ? ಹೌದು. ಇದಕ್ಕೆ ಅಧಿಕೃತ ಮಾನ್ಯತೆ ಇದೆ.
ಅನರ್ಹಗೊಳಿಸಲು, 7 ದಿನದ ಅವಕಾಶ ನೀಡಿ ನೋಟಿಸ್ ನೀಡಬೇಕಿತ್ತು ಎಂದಿದೆಯಲ್ಲಾ? 7 ದಿನ ಮುನ್ನ ನೋಟಿಸ್ ನೀಡಬೇಕು ಎಂಬುದು ನಿಜ. ಆ ಬಳಿಕವಷ್ಟೇ ಅನರ್ಹಗೊಳಿಸಬಹುದು ಎನ್ನಲಾಗುತ್ತದೆ, ಆದರೆ, ನೋಟಿಸ್‌ಗೆ ಉತ್ತರಿಸಲು '7 ದಿನಗಳ ಒಳಗೆ' ಎಂಬುದು ನಿಯಮದಲ್ಲಿರುವ ಅಂಶ. ಏಳು ದಿನಗಳ ಒಳಗೆ ಎಂದರೆ, ಒಂದು ದಿನವೂ ಆಗಬಹುದು, ಎರಡು ದಿನವೂ ಆಗಬಹುದು. ಹೀಗಾಗಿ ಭಾನುವಾರದೊಳಗೆ ಉತ್ತರಿಸುವಂತೆ ಭಿನ್ನರಿಗೆ ಬಿಜೆಪಿ ಕೇಳಿಕೊಂಡಿತ್ತು. ಪರಿಣಾಮವಾಗಿ ರಾಜು ಗೌಡ, ರೇಣುಕಾಚಾರ್ಯ, ದೊಡ್ಡನಗೌಡ ಪಾಟೀಲ ಇತ್ತ ಮರಳಿದ್ದಾರೆ. ಬಿಜೆಪಿ ಸೇಫ್ ಸೈಡ್‌ನಲ್ಲಿದೆ.
ವಿಧಾನಸೌಧಕ್ಕೆ ಖಾಕಿ ದಿರಿಸಿನಲ್ಲಿ ಪೊಲೀಸರು ಬಂದದ್ದು ಸಮ್ಮತವೇ? ವಿಧಾನಸೌಧದೊಳಗೆ ಮಾರ್ಷಲ್‌ಗಳಿರುವಾಗ ಪೊಲೀಸರು ಸದನದೊಳಗೆ ಪ್ರವೇಶಿಸಿದ ಉದಾಹರಣೆಗಳಿಲ್ಲ. ಆದರೆ ಸಭಾಧ್ಯಕ್ಷರ ಆದೇಶದ ಪ್ರಕಾರ, ರಕ್ಷಣೆಗೋಸ್ಕರ ತಾವು ಅಲ್ಲಿಗೆ ಬಂದು, ಬಂದೋಬಸ್ತ್ ವ್ಯವಸ್ಥೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಪೊಲೀಸ್ ಆಯುಕ್ತ ಶಂಕರ್ ಬಿದರಿ. ಸಭಾಧ್ಯಕ್ಷರು ಶಾಸಕಾಂಗದ ಮುಖ್ಯಸ್ಥರಾಗಿರುವುದರಿಂದ ಅವರ ಆದೇಶಕ್ಕೆ ಬೆಲೆಯಿದೆ.
ಕೇಂದ್ರವು ಸದ್ಯಕ್ಕೆ ಏನು ಮಾಡಬಹುದು? ಕೇಂದ್ರ ಸರಕಾರದ ಸಂಪುಟವು ಮಂಗಳವಾರ ಸಭೆ ಸೇರಿ, ರಾಜ್ಯಪಾಲರ ಶಿಫಾರಸಿನ ಬಗ್ಗೆ ತೀರ್ಮಾನಿಸುತ್ತದೆ. ಶಿಫಾರಸನ್ನು ಅಂಗೀಕರಿಸಲೇಬೇಕಿಲ್ಲ. ಇದರಿಂದಾಗುವ ರಾಜಕೀಯ ಪರಿಣಾಮಗಳ ಕುರಿತು ಸಭೆಯಲ್ಲಿ ಚರ್ಚೆಯಾಗಬಹುದು. ಮತ್ತೊಂದು ಸರಕಾರವನ್ನು ವಜಾಗೊಳಿಸಿದ ಕಾಂಗ್ರೆಸ್ ಎಂಬ ಅಪಕೀರ್ತಿ ಅಂಟಿಕೊಳ್ಳಬಹುದೆಂಬ ಭೀತಿಯೂ ಅದಕ್ಕಿದೆ. ಬಿಹಾರ (ರಾಜ್ಯಪಾಲರಾಗಿದ್ದವರು ಬೂಟಾ ಸಿಂಗ್) ಮತ್ತು ಗೋವಾ (ರಾಜ್ಯಪಾಲರಾಗಿದ್ದವರು ಸಯ್ಯದ್ ಸಿಬ್ತೆ ರಜಿ) ಪ್ರಕರಣಗಳಲ್ಲಿ ಸುಪ್ರೀಂಕೋರ್ಟಿನಿಂದ ತಪರಾಕಿ ಹಾಕಿಸಿಕೊಂಡಿದ್ದು ಕೂಡ ನೆನಪಾಗಬಹುದು. ಮುಂದಿನ ಹೆಜ್ಜೆ ಎಚ್ಚರಿಕೆಯಿಂದ ಇಡಬಹುದು.
ಮತ್ತೆ, ಮಾರ್ಷಲ್‌ಗಳಿಗೆ ಹಲ್ಲೆ ಮಾಡಿದ್ದು, ಗಾಜು ಪುಡಿ ಮಾಡಿದ್ದು, ಮಾಧ್ಯಮಗಳಿಗೇ ನಿರ್ಬಂಧ ಹೇರಿದ್ದು? ತಪ್ಪು ತಪ್ಪು ತಪ್ಪು... ಪಕ್ಷೇತರರು ಮತ್ತು ಜೆಡಿಎಸ್ ಚಿಕ್ಕಬಳ್ಳಾಪುರ ಶಾಸಕ ಕೆ.ಬಿ.ಬಚ್ಚೇಗೌಡ ಅವರು ಮಾರ್ಷಲ್‌ಗೇ ಹೊಡೆದು ಹಲ್ಲೆ ಮಾಡಿರುವ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಕೇಸು ದಾಖಲಾಗಿದೆ. 16 ಮಂದಿ ಮಾರ್ಷಲ್‌ಗಳು ಗಾಯಗೊಂಡಿದ್ದಾರೆ. ಗಾಜುಗಳನ್ನು ಪುಡಿ ಮಾಡಿದ್ದೆಲ್ಲಾ ದೃಶ್ಯಮಾಧ್ಯಮಗಳಲ್ಲಿ ಜನ ನೋಡಿದ್ದಾರೆ. ಅವಾಚ್ಯವಾಗಿ ಬೈದಾಡಿಕೊಂಡಿದ್ದು, ಹೊಡೆದಾಡುವಷ್ಟರ ಮಟ್ಟಿಗೆ ಮುಂದಾಗಿದ್ದನ್ನು ಜನ ಗಮನಿಸಿದ್ದಾರೆ. ತಾವು ಆರಿಸಿ ಕಳುಹಿಸಿದವರು ಎಂಥವರೆಂದು ಜನರಿಗೆ ಅರ್ಥವಾಗಿದೆ ಎಂದುಕೊಳ್ಳುತ್ತೇವೆ. ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು ಮಾತ್ರ ಅಕ್ಷಮ್ಯ... ಇದಕ್ಕೆ ಯಾವುದೇ ಸಮರ್ಥನೆ ಸಾಧ್ಯವಿಲ್ಲ. ಜನರಿಗೆ ಒಳಗೇನು ನಡೀತು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಖಂಡಿತಾ ಇದೆ.
ಶಾಸಕಾಂಗದ ಮುಖ್ಯಸ್ಥರಾದ ಸಭಾಧ್ಯಕ್ಷರ ನಿರ್ಣಯವನ್ನು ಕೋರ್ಟಿನಲ್ಲಿ ಪ್ರಶ್ನಿಸಬಹುದೇ? ಎರಡು ಸಂದರ್ಭಗಳಲ್ಲಿ ಅವಕಾಶವಿದೆ. ಉತ್ತರಿಸಲು ಸಂತ್ರಸ್ತರಿಗೆ ಉತ್ತರಕ್ಕೆ ಅವಕಾಶ ಕೊಡದೆ ತೀರ್ಮಾನ ಕೈಗೊಂಡರೆ ಮತ್ತು ಎರಡನೆಯದು ದುರುದ್ದೇಶವೊಂದರ ಈಡೇರಿಕೆಗಾಗಿ ಕ್ರಮ ಕೈಗೊಂಡರೆ ಮಾತ್ರ ಸ್ಪೀಕರ್ ನಿರ್ಣಯವನ್ನು ಪ್ರಶ್ನಿಸಬಹುದು.
ಕೊನೆಯಲ್ಲಿ... ಮಾರ್ಷಲ್‌ಗಳಿಗೇ ಥಳಿಸಿದ ನಾಯಕರೆನ್ನಿಸಿಕೊಳ್ಳುವ ಮೂರ್ಖರು, ಜವಾಬ್ದಾರಿಯುತ ಮಂತ್ರಿ ಸ್ಥಾನ ಅಲಂಕರಿಸಿ, ಸದನದಲ್ಲಿ ಅಂಗಿ ಹರಿದುಕೊಂಡು ಕೂಗಾಡಿದವರು, ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಕೆಟ್ಟ ರಾಜಕೀಯಕ್ಕೆ ವೇದಿಕೆಯಾದ ರಾಜಕಾರಣಿಗಳು.... ಇವರಿಗೆ ಛೀ... ಥೂ... ಎನ್ನುವುದು ಮತದಾರರ ಕೈಯಲ್ಲಿದೆ.