ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಭೂಹಗರಣ: ಎಲ್ಲವೂ ಸಕ್ರಮವಾದ್ರೆ, ಅಕ್ರಮವೆಲ್ಲಿ? (Denotification | Karnataka | CM Yaddyurappa | BJP | BDA | KIADB | Land Scam)
Bookmark and Share Feedback Print
 
PTI
ಹಗರಣಗಳ ಕೆಸರಲ್ಲಿ ಕಮಲವು ಹೂತು ಹೋಗುತ್ತಿದೆ. ಕೋತಿ ಬೆಣ್ಣೆ ತಿಂದು ಮೇಕೆಯ ಮೂತಿಗೆ ಒರೆಸಿದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು "ನಾವೇನೂ ಮಾಡಿಲ್ಲ, ಅವರೇ ಮಾಡಿದ್ದು" ಅಂತ ಹೇಳಿಕೊಳ್ಳುತ್ತಿವೆ. "ಹಿಂದಿನ ಎಲ್ಲ ಮುಖ್ಯಮಂತ್ರಿಗಳೂ ಮಾಡಿದ್ದನ್ನೇ ನಾನು ಅನುಸರಿಸಿದ್ದೇನೆ" ಎಂದಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ. ಕಾಂಗ್ರೆಸ್ ಮುಖಂಡ ಧರಂ ಸಿಂಗ್ ಕೂಡ, "ನನ್ನ ಪುತ್ರನಿಗೆ, ಶೋಭಾ ಕರಂದ್ಲಾಜೆಗೆ ಮುಂತಾದವರಿಗೆಲ್ಲಾ ನಾನೇ ಭೂಮಿ ನೀಡಿದ್ದೆ" ಎಂದು ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಸ್ವಜನಪಕ್ಷಪಾತದಿಂದ ತಮ್ಮವರಿಗೆ ಭೂಮಿ ಕೊಡಿಸಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.

ಪರಿಸ್ಥಿತಿ ಹೀಗಿರುವಾಗ, ನಮ್ಮ ರಾಜ್ಯವನ್ನು ಆಳುವವರು ಯಾರೇ ಇರಲಿ, ಅವರೆಲ್ಲರೂ ಮಾಡಿದ್ದು ಹಗರಣ ಅಲ್ಲ, ಅಕ್ರಮ ಅಲ್ಲ. ಯಾವುದು ಕಾನೂನಿಗೆ, ನಿಯಮಾವಳಿಗೆ ವಿರುದ್ಧವೋ ಅದು ಅಕ್ರಮ.

ಆದರೆ, ಇಲ್ಲಿ ಎಲ್ಲವೂ ಕಾನೂನಿನ ಪರಿಧಿಯಲ್ಲೇ ನಡೆದಿದೆ. ಹೀಗಿರುವಾಗ ಕಾಂಗ್ರೆಸ್, ಜೆಡಿಎಸ್‌ಗಳು ಅಕ್ರಮ ಅಕ್ರಮ ಅಂತ ಕೂಗಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ.

ನೋಟಿಫಿಕೇಶನ್ ಮಾಡಿದ್ದನ್ನು, ಡೀನೋಟಿಫೈ ಮಾಡಿ, ರೈತರ ಜಮೀನನ್ನು ಕೈಗಾರಿಕೆಗಳಿಗೆ ನೀಡಿರುವುದನ್ನು ಅಕ್ರಮ ಅಲ್ಲ ಅಂತ ಹೇಗೆ ಸಮರ್ಥನೆ ಕೊಡಬಹುದು? ಕೆಐಎಡಿಬಿ, ಬಿಡಿಎ, ಡೀನೋಟಿಫಿಕೇಶನ್, ಸ್ವಜನಪಕ್ಷಪಾತ.... ಇವೆಲ್ಲಾ ಏನು? ಈ ಕೆಳಗಿನ ವಿವರಗಳನ್ನು ಓದಿದರೆ ಒಂದಿಷ್ಟು ಮನದಟ್ಟಾಗಬಹುದು.

ಜಿ ಕೆಟಗರಿ ಸೈಟುಗಳು...
ಇವುಗಳು ದೇಶದ ತಂತ್ರಜ್ಞಾನದ ಕೇಂದ್ರಬಿಂದುವಾಗಿರುವ ಬೆಂಗಳೂರಿನಲ್ಲಿ, ಮುಖ್ಯವಾಗಿ ಅತ್ಯಂತ ಬೆಲೆ ಬಾಳುವ ವಸತಿ ಪ್ರದೇಶದಲ್ಲಿರುವ ಸೈಟುಗಳು. ಈ ಸೈಟುಗಳಿರುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ - ಬೆಂಗಳೂರು ಡೆವಲಪ್‌ಮೆಂಟ್ ಅಥಾರಿಟಿ) ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿರುವ ವಸತಿ ತಾಣಗಳು.

ಈ ಸೈಟುಗಳ ವಿತರಣೆಯಲ್ಲಿ ಮುಖ್ಯಮಂತ್ರಿ ಪಟ್ಟದಲ್ಲಿ ಯಾರೇ ಕೂರಲಿ, ಅವರಿಗೆ ವಿಶೇಷ ವಿವೇಚನಾಧಿಕಾರಗಳಿವೆ. ಉನ್ನತ ಸಾಧನೆ ಮಾಡಿದ ಮತ್ತು ಬೆಂಗಳೂರಿನಲ್ಲಿ ಯಾವುದೇ ಆಸ್ತಿ, ಮನೆ ಇಲ್ಲದವರಿಗಾಗಿ ಇದು ವಿತರಿಸಬೇಕಾಗಿರುವುದು ಅವರ ಇಚ್ಛಾಶಕ್ತಿಗೆ ಬಿಟ್ಟ ವಿಚಾರ.

ಆದರೆ, ಇಷ್ಟೂ ವರ್ಷಗಳ ಕಾಲದಿಂದ ಈ ಪ್ಲಾಟುಗಳು ಹೋಗಿದ್ದೆಲ್ಲವೂ ರಾಜಕೀಯವಾಗಿ ಪ್ರಭಾವ ಹೊಂದಿರುವವರಿಗೇ. ಯಾಕೆಂದರೆ ರಂಗೋಲಿ ಕೆಳಗೆ ತೂರುವ ಜಾಣ್ಮೆ ಅವರಿಗೆ ಸಿದ್ಧಿಸಿರುತ್ತದೆ. "ಕಾನೂನು 'ಈ' ರೀತಿಯಾಗಿದೆ, ನಾವದನ್ನು 'ಈ' ರೀತಿ ಮಾಡಿದರೆ, ಕಾನೂನು ಪಾಲಿಸಿದಂತೆಯೇ ಆಗುತ್ತದೆ, 'ಈ' ಥರ ಮಾಡಿ ಜಮೀನು ಪಡೆಯಬಹುದು" ಎಂಬುದು ಅವರ ಚಾಣಾಕ್ಷ ಲೆಕ್ಕಾಚಾರಗಳು. ರಾಜಕಾರಣಿಗಳು, ಅವರ ಬಂಧುಗಳು, ಮಿತ್ರರು, ಪ್ರಭಾವೀ ಅಧಿಕಾರಿಗಳು ಮತ್ತು ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸಭೆಯ ಕಾರಿಡಾರ್‌ನಲ್ಲಿ ಅಧಿಕಾರ ಚಲಾಯಿಸಬಲ್ಲಷ್ಟು ಸಾಮರ್ಥ್ಯ ಹೊಂದಿರುವವರಿಗಇದು ದಕ್ಕಿದೆ, ದಕ್ಕುತ್ತಿದೆ, ದಕ್ಕುತ್ತದೆ. ಯಡಿಯೂರಪ್ಪ ಅನುಸರಿಸಿದ್ದೂ ಅದನ್ನೇ.

ಈ ಪ್ಲಾಟುಗಳ ಬೆಲೆಯೂ ಅಗ್ಗವೇ. ಐಷಾರಾಮಿ ಪ್ರದೇಶದಲ್ಲಿರುವಂತಹಾ 50x80 ಅಡಿ (4000 ಚದರಡಿ)ಯ ಪ್ಲಾಟಿನ ಬೆಲೆ 10 ಲಕ್ಷಕ್ಕೂ ಕಡಿಮೆ. ಆದರೆ ಅದರ ಮಾರುಕಟ್ಟೆ ಬೆಲೆ? ಕನಿಷ್ಠ ಒಂದು ಕೋಟಿ ರೂ. ಮಾತ್ರ!

ಹಾಗಿದ್ದರೆ ಈ ನೋಟಿಫಿಕೇಶನ್ - ಡೀನೋಟಿಫಿಕೇಶನ್ ಅಂದ್ರೆ?...
ಡೀನೋಟಿಫಿಕೇಶನ್ ಎಂಬುದನ್ನು ಸಂಕ್ಷಿಪ್ತವಾಗಿ ಹೇಳಬಹುದಾದರೆ, ವಸತಿ, ಕೈಗಾರಿಕೆ ಅಥವಾ ವಾಣಿಜ್ಯ ಉದ್ದೇಶಗಳಿಗೆ ಅರ್ಹರಿಗೆ (ಅಥವಾ ಆಪ್ತರಿಗೆ!) ಜಮೀನನ್ನು ಹಂಚಲು ನೆರವು ಮಾಡುವ ಪ್ರಕ್ರಿಯೆಯಿದು.

ಕೆಐಎಡಿಬಿ ಅಂದ್ರೆ?...
ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ನಿಗಮ (ಕೆಐಎಡಿಬಿ - ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾಸ್ ಡೆವಲಪ್‌ಮೆಂಟ್ ಬೋರ್ಡ್) ಎಂಬುದು ಸರಕಾರದ ಒಂದು ಏಜೆನ್ಸಿ. ಸೂಕ್ತ ಪರಿಹಾರ ಮೊತ್ತವನ್ನು ನೀಡಿ, ನಾವು ನಿಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂದು ಭೂಮಾಲೀಕರಿಗೆ 'ನೋಟಿಫೈ' ಮಾಡಿ, ವಿಭಿನ್ನ ಯೋಜನೆಗಳಿಗಾಗಿ ಜಮೀನನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳುವುದು ಇದರ ಕೆಲಸಗಳಲ್ಲೊಂದು.

ಆನಂತರ, ಸರಕಾರವು ಈ ಜಮೀನನ್ನು 'ಡೀನೋಟಿಫೈ' ಮಾಡಿ (ಅಂದರೆ ಹಿಂದಿನ ನೋಟಿಫಿಕೇಶನ್ ಅನ್ನು ರದ್ದು ಮಾಡಿ), ಅದರ ಮೇಲಿನ ತನ್ನ ನಿಯಂತ್ರಣವನ್ನು ಬಿಟ್ಟುಕೊಡುತ್ತದೆ. ಆ ಪ್ರದೇಶವನ್ನು 'ಸಾರ್ವಜನಿಕರ ಹಿತಾಸಕ್ತಿಗಾಗಿ ಅಭಿವೃದ್ಧಿಪಡಿಸಲು' ಸ್ವಾಧೀನಪಡಿಸಿಕೊಂಡಿರುವ ಕಾರಣ ಕೆಐಎಡಿಬಿಯು ಅದಕ್ಕೆ ಕನಿಷ್ಠ ಮೊತ್ತದ ಪರಿಹಾರ ನೀಡಿ ತೆಗೆದುಕೊಂಡಿರುತ್ತದೆ. ಹೀಗಾಗಿ, ಡೀನೋಟಿಫೈ ಮಾಡಿದ ಬಳಿಕ ಅದನ್ನು ಮಾರುಕಟ್ಟೆ ಬೆಲೆಗಿಂತ ತೀರಾ ಕಡಿಮೆ ಬೆಲೆಗೆಯೇ ತಮಗೆ ಬೇಕಾದವರಿಗೆಗೆ ಮಾರಾಟ ಮಾಡುವ ಅವಕಾಶವಿದೆ.

'ಸ್ವ'ಜನಶೀಲತೆ...
ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲಿರುವ ಆರೋಪವೆಂದರೆ, ಪುತ್ರ, ಸಂಸದ ಬಿ.ವೈ.ರಾಘವೇಂದ್ರರಿಗೆ ಯಡಿಯೂರಪ್ಪ ಅವರು ಜಿ ಕೆಟಗರಿಯ ಸೈಟನ್ನು ಕೊಡಿಸಿದ್ದಾರೆ ಎಂಬುದು. ರಾಘವೇಂದ್ರರಿಗೆ ಬೆಂಗಳೂರಿನಲ್ಲಿ ಈಗಾಗಲೇ ಎರಡು ವಸತಿ ಆಸ್ತಿ ಇದೆ.

ರಾಘವೇಂದ್ರ ಜೊತೆ ಅವರ ಸಹೋದರ ಬಿ.ವೈ.ವಿಜಯೇಂದ್ರರಿಗೂ ವಾಹನೋದ್ಯಮ ಸ್ಥಾಪನೆಗಾಗಿ ಎರಡೆಕರೆ ಕೈಗಾರಿಕಾ ಜಮೀನನ್ನು ನೀಡಲಾಗಿದೆ. ಇದು ನೀಡಿದ್ದು ಜೆಡಿಎಸ್ ಮುಖಂಡ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ. ಆವಾಗ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು. ಆದರೆ ಪುತ್ರರಿಗೆ ಜಮೀನು ನೀಡುವ ವಿಷಯದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂಬುದು ಮುಖ್ಯಮಂತ್ರಿ ವಾದ. ಇಷ್ಟಲ್ಲದೆ, ಮಗಳು, ಅಳಿಯ, ಸಹೋದರಿ ಮತ್ತಾಕೆಯ ಪುತ್ರ ಹಾಗೂ ಸೊಸೆಗೂ ಜಮೀನು ಕೊಡಿಸಿರುವ ಆರೋಪಗಳು ಕೇಳಿಬರುತ್ತಿದೆ.

ತನ್ನ ಹಿಂದಿನವರು (ಕಾಂಗ್ರೆಸ್, ಜೆಡಿಎಸ್ ಮುಖ್ಯಮಂತ್ರಿಗಳು) ಮಾಡಿದ್ದನ್ನಷ್ಟೇ ತಾನೂ ಅನುಸರಿಸಿದ್ದೇನೆಂದು ಹೇಳಿರುವ ಯಡಿಯೂರಪ್ಪ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರೊಬ್ಬರ ಮೂಲಕ, ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ನಡೆದ ಎಲ್ಲ ಜಮೀನು ಡೀಲಿಂಗ್‌ಗಳ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಯಾರು ಏನೇ ಹೇಳಲಿ, ಈಗ ಅಧಿಕಾರದಲ್ಲಿರುವವರು ಯಡಿಯೂರಪ್ಪ. ಹೀಗಾಗಿ ಜವಾಬ್ದಾರಿ ಜಾಸ್ತಿ, ಮತ್ತು ಬಿಸಿ ಜೋರಾಗಿಯೇ ತಟ್ಟುತ್ತಿದೆ.

ಒಟ್ಟಿನಲ್ಲಿ, ರೈತರ ಜಮೀನು ನೋಟಿಫಿಕೇಶನ್ ಮಾಡಿ, ಡೀನೋಟಿಫೈ ಮಾಡಿ ಸ್ವಜನರಿಗೆ, ಬಂಧುಗಳಿಗೆ ಕೊಟ್ಟಿದ್ದರಲ್ಲಾಗಲೀ, ಅದನ್ನು ಪಡೆದವರು ಬೇರೆಯವರಿಗೆ ಮಾರಾಟ ಮಾಡಿದ್ದರಲ್ಲಾಗಲೀ ಯಾವುದೇ "ಅಕ್ರಮ" ನಡೆದಿಲ್ಲ. ಎಷ್ಟೇ ಕಡಿಮೆ ಹಣಕ್ಕೆ ಮಾರಿದರೂ 'ಮಾರಾಟ' ಆಗಿದ್ದಂತೂ ಸತ್ಯವಲ್ಲವೇ? (ಒಂದು ರೂ. ಕೊಟ್ಟರೂ ಅದನ್ನು ಮಾರಾಟ ಅಂತ ಪರಿಗಣಿಸಬಹುದಲ್ಲ!) ಇದರಿಂದ ಪ್ರತಿಯೊಂದನ್ನೂ ಸೆನ್ಸೇಷನಲೈಸ್ ಮಾಡುವ ದೃಶ್ಯ ಮಾಧ್ಯಮಗಳಿಗಂತೂ ಮೇವು ಸಿಕ್ಕಿದೆ.

ಪರಿಹಾರ?
ರಾಜಕಾರಣಿಗಳಿಗೋ.... ಎಲ್ಲವೂ ಕಾನೂನಿನ ಚೌಕಟ್ಟಿನಲ್ಲೇ ನಡೆದಿದೆ ಎಂದು ವಾದಿಸಲು ಯಾವುದೇ ಅಡ್ಡಿ ಇಲ್ಲ. ಆದುದರಿಂದ ಕಾನೂನನ್ನೇ ತಿದ್ದುಪಡಿ ಮಾಡಬೇಕಿದೆ. ಅದೊಂದೇ ಏಕೈಕ ಮಾರ್ಗ. ಆದರೆ ಲಾಭವಿರುವ ಈ ಕಾನೂನಿಗೆ ತಿದ್ದುಪಡಿ ಮಾಡಲು ಯಾವುದೇ ರಾಜಕಾರಣಿ ಮುಂದಾಗುತ್ತಾರೆಯೇ? ಉತ್ತರ ಗೊತ್ತಿಲ್ಲ!
ಸಂಬಂಧಿತ ಮಾಹಿತಿ ಹುಡುಕಿ