ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಯಡಿಯೂರಪ್ಪ ಸಿಎಂ ಪಟ್ಟ ಉಳಿಯಲು ಕಾರಣವೇನು? (Yaddyurappa | Chief Minister | Karnataka Crisis | Nitin Gadkari)
Bookmark and Share Feedback Print
 
PTI
ಪ್ರತಿಪಕ್ಷಗಳು ಹಲವಾರು ಭೂಹಗರಣಗಳ ಆರೋಪಗಳ ಸುರಿಮಳೆ ಸುರಿಸುತ್ತಿರುವಂತೆಯೇ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಂದು ಬಾರಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲವಾಗಿದ್ದು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಗೆ ವಿಜಯ ದೊರಕಿಸಿಕೊಡುವ ಹೊಣೆ ಹೊತ್ತುಕೊಂಡಿದ್ದಾರೆ.

ಹಾಗಿದ್ದರೆ, ಪ್ರತಿಪಕ್ಷಗಳು ನೀಡಿದ ದಾಖಲೆಗಳನ್ನೆಲ್ಲಾ ಮಾಧ್ಯಮಗಳು ಪ್ರಕಟಿಸಿ, ಪ್ರಸಾರ ಮಾಡಿ, ಹಗರಣಗಳ ಸರಮಾಲೆಯನ್ನೇ ಯಡಿಯೂರಪ್ಪ ಅವರ ತಲೆಯ ಮೇಲೆ ಕಟ್ಟಿ, "ಯಡಿಯೂರಪ್ಪ ಇರ್ತಾರಾ, ಹೋಗ್ತಾರಾ" ಎಂದು ಕೇಳತೊಡಗಿದ್ದರೂ, ಮುಖ್ಯಮಂತ್ರಿ ಈ ಹಿಂದೆ ಹಲವಾರು ಬಿಕ್ಕಟ್ಟುಗಳನ್ನು ಗಟ್ಟಿಯಾಗಿ ಎದುರಿಸಿ ಪಾರಾದಂತೆಯೇ, ಈ ಬಾರಿಯೂ ಪಾರಾಗಿದ್ದಾರೆ.

ಈ ಕೆಳಗಿನ ಅಂಶಗಳಲ್ಲಿ, ಯಡಿಯೂರಪ್ಪ ಕುರ್ಚಿ ಉಳಿಸಲು ನೆರವಾಗಿದ್ದಿರಬಹುದಾದ ಅಂಶ ಯಾವುದು ಅಂತ ನೀವೇ ಹೇಳಿ:

* ಯಡಿಯೂರಪ್ಪ ತಪ್ಪು ಮಾಡಿಲ್ಲ ಎಂದು ಬಲವಾಗಿ ನಂಬಿರುವ ಆರೆಸ್ಸೆಸ್ ಮುಖಂಡರು ನಿತಿನ್ ಗಡ್ಕರಿ ಮೇಲೆ ಒತ್ತಡ ಹೇರಿದ್ದಿರಬಹುದು.

* ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳು ಮುಂದಿವೆ. ಯಡಿಯೂರಪ್ಪ ಕಿತ್ತು ಹಾಕಿದರೆ ಪಕ್ಷಕ್ಕೇನಾದರೂ ತೊಂದರೆಯಾದರೆ ಕಷ್ಟ ಎಂಬ ಬಿಜೆಪಿ ಹೈಕಮಾಂಡ್ ಆತಂಕ.

* ತಳಮಟ್ಟದಿಂದಲೂ ಬಿಜೆಪಿಯನ್ನು ಕಟ್ಟಿ ಬೆಳೆಸಿ, ಸ್ಥಳೀಯ ಸಂಸ್ಥೆಯಿಂದ ಒಂದೊಂದಾಗಿ ಅಧಿಕಾರದ ಮೆಟ್ಟಿಲೇರುತ್ತಾ ಈ ಹುದ್ದೆಗೇರಿರುವ ಮುಖ್ಯಮಂತ್ರಿಯನ್ನು ಕೇವಲ ಆರೋಪಗಳು ಬಂದಾಕ್ಷಣ ಬದಲಾಯಿಸುವುದು ತರವಲ್ಲ ಎಂಬ ಬಿಜೆಪಿ ಹೈಕಮಾಂಡ್ ಅನಿಸಿಕೆ.

* ಕಾಂಗ್ರೆಸ್ ಹಗರಣ ಸಾವಿರ ಸಾವಿರ ಕೋಟಿಯೆಂಬ ಲೆಕ್ಕಕ್ಕೆ ನಿಲುಕದ ಹಂತದಲ್ಲಿತ್ತು. ದೇಶ ಕಾಯುತ್ತಾ ಗತಿಸಿದ ಯೋಧರ ಕುಟುಂಬಕ್ಕೆ ಅನ್ಯಾಯ ಮಾಡಿತ್ತು. ಇಂತಹಾ ಘೋರ ಆರೋಪಗಳೆದುರು ಯಡಿಯೂರಪ್ಪ ಅವರೇ ಹಗರಣ ನಡೆಸಿದ್ದಾರೆ, ಇದರಿಂದ ಸಾಕಷ್ಟು ಹಣ ಮಾಡಿದ್ದಾರೆ ಎಂಬ ನೇರವಾಗಿ ಆರೋಪಿಸುವ ಪ್ರಕರಣಗಳು ಎಲ್ಲೂ ಇಲ್ಲದಿರುವುದು. ಹೀಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿರುವ, ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿರುವ ಬಿಜೆಪಿಯ ಕೂಗಿಗೆ ಯಾವುದೇ ಧಕ್ಕೆಯಾಗದು ಎಂಬ ಲೆಕ್ಕಾಚಾರ.

* ಹಿಂದೆ ಆಂಧ್ರ ಪ್ರದೇಶದಲ್ಲಿ ಭೂಹಗರಣ ಕೇಳಿ ಬಂದಾಗ ಅಂದಿನ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಕೂಡ ಭೂಮಿಯನ್ನು ಮರಳಿಸಿದ್ದ ಸಂದರ್ಭದಲ್ಲಿ, ಅವರನ್ನು ಕಾಂಗ್ರೆಸ್ ಪಕ್ಷವೇ ಇಂದ್ರ-ಚಂದ್ರ ಎಂದು ಹೊಗಳಿತ್ತು. ಇದೀಗ ಯಡಿಯೂರಪ್ಪ ಕೂಡ ತಮ್ಮ ಬಂಧುಗಳ ಜಮೀನನ್ನು ಮರಳಿಸಿದ್ದಾರೆ, ನ್ಯಾಯಾಂಗ ತನಿಖೆಗೂ ಆದೇಶಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ತಪ್ಪು ಮಾಡಿಲ್ಲ ಎಂಬ ಭಾವನೆ.

* ತನ್ನನ್ನು ಮುಖ್ಯಮಂತ್ರಿ ಎಂದು ಬಿಂಬಿಸಿಯೇ 2008ರ ಚುನಾವಣೆ ಗೆದ್ದಿರುವುದರಿಂದ, ಐದು ವರ್ಷ ಅಧಿಕಾರಾವಧಿ ತನಗೇ ಮೀಸಲು, ಇಲ್ಲವಾದಲ್ಲಿ ಜನತೆಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂಬ ಯಡಿಯೂರಪ್ಪ ವಾದಕ್ಕೆ ಹೈಕಮಾಂಡ್ ಮನ್ನಣೆ.

* ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟರೆ, ಬಿಜೆಪಿಯಲ್ಲಿ ಜನಾಕರ್ಷಣೆಯ ಮಾಸ್ ಲೀಡರ್ ಬೇರಾರೂ ಇಲ್ಲ ಎಂಬ ಮನೋಭಾವನೆ. ಇದು ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ಉಪಚುನಾವಣೆಗಳಿಗೆ ನೆರವಾಗುತ್ತದೆ ಎಂಬ ವಿಶ್ವಾಸ.

* ಬಳ್ಳಾರಿಯ ಗಣಿ ಧಣಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ, ಅವರಿಗೂ ಕೇಂದ್ರೀಯ ನಾಯಕಿ ಸುಷ್ಮಾ ಸ್ವರಾಜ್‌ಗೂ ಇರುವ ವಹಿವಾಟುಗಳು ಮತ್ತು ತಮ್ಮ ರಾಜಕೀಯ ವಿರೋಧಿಯೆಂದೇ ಪರಿಗಣಿಸಲ್ಪಟ್ಟಿರುವ ಅನಂತ್ ಕುಮಾರ್ ಅವರ ಹಗರಣಗಳನ್ನೂ ಬಟಾಬಯಲು ಮಾಡುವುದಾಗಿ ಸಿಎಂ ಏನಾದರೂ ಬೆದರಿಸಿದ್ದಿರಬಹುದೇ?

* ವೀರಶೈವ-ಲಿಂಗಾಯತ ಮಠಾಧೀಶರು ಬಹಿರಂಗವಾಗಿ ಯಡಿಯೂರಪ್ಪ ಬೆಂಬಲಕ್ಕೆ ನಿಂತಿರುವುದು, ಬಿಜೆಪಿ ಹೈಕಮಾಂಡ್‌ನಲ್ಲಿ ಸಂಚಲನ ಮೂಡಿಸಿದೆ. ಯಾಕೆಂದರೆ, ಪಕ್ಷಕ್ಕೆ ಅವರೇ ಓಟ್ ಬ್ಯಾಂಕ್ ಎಂಬ ಸಿದ್ಧಾಂತ.

* ಯಡಿಯೂರಪ್ಪರನ್ನು ಕಿತ್ತು ಹಾಕಿದರೆ, ಈಗಾಗಲೇ ಅಲ್ಪಮತದಲ್ಲಿ ಇರುವಂತಿರುವ ಬಿಜೆಪಿ ಸರಕಾರದಿಂದ, ಸಿಎಂ ಬೆಂಬಲಿಗರೇನಾದರೂ ಹೊರಬಂದರೆ, ಮತ್ತು ಯಡಿಯೂರಪ್ಪ ಅವರೇ ಬಂಡಾಯವೆದ್ದು ಪಕ್ಷ ಕಟ್ಟಿದರೆ, ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಉರುಳುವುದು ಖಚಿತ ಎಂಬ ಆತಂಕ.

* ಮತ್ತೊಂದೆಡೆ, ಯಡಿಯೂರಪ್ಪರನ್ನು ಉಳಿಸಿಕೊಳ್ಳುವುದಕ್ಕಿಂತಲೂ, ಕಿತ್ತು ಹಾಕಿದರೆ ಪಕ್ಷಕ್ಕೆ ಹೆಚ್ಚಿನ ಹಾನಿಯಾಗುತ್ತದೆ. ಉಳಿಸಿಕೊಂಡರೆ, ಬಿಜೆಪಿಯ ಕುಗ್ಗಿದ ಇಮೇಜನ್ನು ಹೆಚ್ಚಿಸುವುದಾಗಿ ಸಿಎಂ ಏನಾದರೂ ಭರವಸೆ ನೀಡಿದ್ದಿರಬಹುದು.

* ಕೇಂದ್ರೀಯ ಬಿಜೆಪಿಯಲ್ಲಿಯೇ ಒಳಗೊಳಗೇ ಇರುವ ಭಿನ್ನಮತವು ಯಡಿಯೂರಪ್ಪ ಅವರಿಗೆ ವರದಾನವಾಗಿದ್ದಿರಬಹುದು. ಅಲ್ಲಿಯೂ ಸುಷ್ಮಾ-ಅನಂತ್ ಬಣ, ಜೇಟ್ಲಿ-ವೆಂಕಯ್ಯ ಬಣಗಳಿರುವುದು ಖಚಿತ ನಿರ್ಧಾರ ಕೈಗೊಳ್ಳಲು ನಿತಿನ್ ಕೈಕಟ್ಟಿ ಹಾಕಿರುವ ಅಂಶ.

ಇವುಗಳಲ್ಲಿ, ಸಿಎಂ ಕುರ್ಚಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಗತಿ ಯಾವುದಾಗಿರಬಹುದು ಎಂಬ ಆಯ್ಕೆ ಓದುಗರಿಗೆ ಬಿಟ್ಟ ತೀರ್ಮಾನ ಮತ್ತು ಬಿಜೆಪಿಯು ಸಂಸತ್ತಿನಲ್ಲಿ ಎ.ರಾಜಾ ಹಗರಣದ ಕುರಿತು ಕಾಂಗ್ರೆಸ್ಸನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಹೇಗೆ ಒಪ್ಪಿಸುತ್ತದೆ ಎಂಬುದು ಸವಾಲಿನ ವಿಷಯ.

ಕೊಟ್ಟ ಕೊನೆಗೆ ಬಿಜೆಪಿ ಹೈಕಮಾಂಡ್, ಯಾವುದೇ ಗುಟ್ಟನ್ನೂ ಕೊನೆಯ ಕ್ಷಣದವರೆಗೂ ಬಿಟ್ಟುಕೊಡದೆ ಮಾಧ್ಯಮಗಳಲ್ಲಿ ಊಹಾಪೋಹದ ವರದಿಗಳಿಗೆ ಮಾತ್ರವೇ ಅವಕಾಶ ಮಾಡಿಕೊಟ್ಟು, ಮಾಧ್ಯಮಗಳ ಋಣಾತ್ಮಕ ವರದಿಗಳನ್ನು ತಡೆಯುವ ನಿಟ್ಟಿನಲ್ಲಿ ಮತ್ತೊಂದು ತಂತ್ರ ಹೆಣೆಯಿತೇ ಎಂಬುದು ಬಗೆಹರಿಯದ ಪ್ರಶ್ನೆ.
ಸಂಬಂಧಿತ ಮಾಹಿತಿ ಹುಡುಕಿ