ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಪೋರ್ಚುಗೀಸ್ ಭಾಷಣವೂ, ಎಸ್.ಎಂ.ಕೃಷ್ಣ ವಿದೇಶಾಂಗ ಖಾತೆಯೂ
(SM Krishna | Portugese | United Nations | Pakistan | SM Qureshi | GK Pillai)
ಪೋರ್ಚುಗೀಸ್ ಭಾಷಣವೂ, ಎಸ್.ಎಂ.ಕೃಷ್ಣ ವಿದೇಶಾಂಗ ಖಾತೆಯೂ
PTI
ಅವಿನಾಶ್ ಬಿ. ವಿದೇಶಗಳಲ್ಲಿ ಅತ್ಯುತ್ತಮ ರಾಯಭಾರತ್ವ ಮತ್ತು ಮುತ್ಸದ್ಧಿತನದ ಹೇಳಿಕೆಗಳನ್ನು ನೀಡಿ ಭಾರತದ ಬಗ್ಗೆ ಎಂದಿಗೂ ಕೂಡ ತಪ್ಪು ಅಭಿಪ್ರಾಯ ಮೂಡದಂತೆ ಮಾಡುವುದು ಮತ್ತು ಭಾರತವೇ ಶ್ರೇಷ್ಠ ಎಂಬ ಭಾವನೆ ಬರುವಂತೆ ತಮ್ಮ ಮಾತು-ಕತೆ-ವರ್ತನೆಗಳಿಂದ ಬಿಂಬಿಸಬೇಕಾಗಿರುವುದು ವಿದೇಶಾಂಗ ವ್ಯವಹಾರಗಳ ಸಚಿವರ ಆದ್ಯ ಕರ್ತವ್ಯ, ಹಕ್ಕು ಮತ್ತು ಎಲ್ಲವೂ ಆಗಿರುತ್ತದೆ.
ವಿದೇಶಾಂಗ ಸಚಿವರು ಪರ ದೇಶಗಳಿಗೆ ಹೋದಾಗಲೆಲ್ಲಾ ಅಲ್ಲಿನ ಮಾಧ್ಯಮಗಳಲ್ಲಿ ಅವರ ಮಾತು-ಕತೆಗಳು ಮುಖಪುಟಗಳಲ್ಲೇ ವರದಿಯಾಗುತ್ತಿರುತ್ತವೆ. ಭಾರತದ ಕುರಿತು ಆಯಾ ದೇಶಗಳ ಜನತೆ ಮತ್ತು ಆಡಳಿತದ ಅಧಿಕಾರಿಗಳು ಯಾವ ರೀತಿ ತಿಳಿದುಕೊಳ್ಳುತ್ತಾರೆ ಎಂಬುದನ್ನು ರೂಪಿಸುವ ಮಾತುಗಳಿವು. ಹೀಗಿರುವಾಗ, ವಿದೇಶಾಂಗ ಖಾತೆಯೆಂದರೆ ಪುಗಸಟ್ಟೆ ಪುನುಗಲ್ಲ. ಅಥವಾ ತಮಗೆ ನಿಷ್ಠೆಯಿಂದ ಸೇವಕರಂತಿರುವವರನ್ನು ನೇಮಿಸೋಣ ಎಂದು ಪ್ರಧಾನಿಯಾಗಲೀ, ಅಥವಾ ಸರಕಾರದ ಯಾವುದೇ ಮುಖ್ಯಸ್ಥರಾಗಲಿ ಭಾವಿಸುವಂತಿಲ್ಲ. ಯಾವತ್ತಿಗೂ ಕಾಲು ಕೆರೆದು ಹೊಡೆದಾಟಕ್ಕೇ ಬರುತ್ತಿರುವ ಪಾಕಿಸ್ತಾನದಂತಹಾ ರಾಷ್ಟ್ರಗಳಿಗೆ ಚಾಟಿಯೇಟು ನೀಡುತ್ತಿರಬೇಕು, ಯಾವತ್ತೂ ದೊಡ್ಡಣ್ಣನಾಗಲು ತುದಿಗಾಲಲ್ಲಿ ನಿಂತಿರುವ ಅಮೆರಿಕವನ್ನು ಎದುರುಹಾಕಿಕೊಳ್ಳುವ ಎದೆಗಾರಿಕೆ ಬೇಕು, ಮತ್ತು ಭಾರತವನ್ನು ಒಂದಲ್ಲ ಒಂದು ಗೊಂದಲದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಾ, ದೇಶವನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಲೇ ಇರುವ ಕಮ್ಯೂನಿಸ್ಟ್ ರಾಷ್ಟ್ರ ಚೀನಾವನ್ನು ಸಮರ್ಥವಾಗಿ ಎದುರಿಸುವ ಛಾತಿ ಬೇಕು.
ಇಂಥಹಾ ಪರಿಸ್ಥಿತಿಯಲ್ಲಿ ಕ್ಷಿಪ್ರ ನಿರ್ಧಾರಕ್ಕೆ, ನೇರ ನಡೆ-ನುಡಿಗಳಿಗೆ, ದಿಟ್ಟ, ಎದೆಗಾರಿಕೆಯ ನಾಯಕನೊಬ್ಬ ಇರಲೇಬೇಕು. ಗುಲ್ಜಾರಿಲಾಲ್ ನಂದಾ, ಲಾಲ್ ಬಹಾದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ವಿ.ಪಿ.ಸಿಂಗ್ ಮುಂತಾದ ಮುತ್ಸದ್ಧಿಗಳು ಅಲಂಕರಿಸಿದ್ದ ಅತ್ಯಂತ ಅಮೂಲ್ಯವಾದ ಹುದ್ದೆಯದು. ಇದೀಗ ಈ ಸ್ಥಾನದಲ್ಲಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿಯೂ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲರೂ ಆಗಿರುವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣಯ್ಯ ಅವರಿದ್ದಾರೆ.
2008ರ 26/11 ಮುಂಬೈ ಭಯೋತ್ಪಾದನಾ ದಾಳಿ ನಡೆದು ಎರಡುವರೆ ವರ್ಷಗಳಾಗುತ್ತಿದ್ದರೂ, ಪಾಕಿಸ್ತಾನ ಈಗಲೂ ಸಾಕ್ಷ್ಯಾಧಾರ ಕೊಡಿ ಎಂದು ಕೇಳುತ್ತಲೇ ಇದೆ. ಚೀನಾವಂತೂ ಅರುಣಾಚಲ ನಮ್ಮದು ಎಂದು ಆಗಾಗ್ಗೆ ಕಾಲು ಕೆರೆಯುತ್ತಿದೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳು ನಲುಗುತ್ತಿದ್ದಾರೆ. ಅಮೆರಿಕದಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ಈ ಪರಿಸ್ಥಿತಿಗಳಲ್ಲಿ, ನಮಗೊಬ್ಬ ದಿಟ್ಟ ಮಾತಿನ ವಿದೇಶಾಂಗ ಸಚಿವರು ಬೇಕು ಎಂದು ಹೆಚ್ಚು ಅನ್ನಿಸುವುದು ಪಾಕಿಸ್ತಾನದ ವಿಚಾರಕ್ಕೆ ಸಂಬಂಧಿಸಿದಂತೆ. ಅಲ್ಲಿ, ಈಗಷ್ಟೇ ಪದಚ್ಯುತಗೊಂಡಿರುವ ವಿದೇಶಾಂಗ ಸಚಿವ ಎಸ್.ಎಂ.ಖುರೇಷಿ ಅವರನ್ನೇ ನೋಡಿ. ಹೇಗೆ ಅವರು ಭಾರತದ ಮೇಲೆ ಮುಗಿ ಬೀಳುತ್ತಿದ್ದರು! ಭಾರತದ ಮಟ್ಟಿಗೆ ಅವರ ಮಾತುಗಳು ಅರಗಿಸಿಕೊಳ್ಳಲು ಕಷ್ಟ ಮತ್ತು ಅಸಾಧ್ಯವೇ ಆದರೂ, ಆತನದೇ ದೇಶ ಪಾಕಿಸ್ತಾನದ ಮಟ್ಟಿಗೆ ಆತ ಒಬ್ಬ ಸಮರ್ಥ ವಿದೇಶಾಂಗ ಸಚಿವ ಎಂಬುದು ಪಾಕ್ ಪ್ರಜೆಗಳ ಬಾಯಲ್ಲಿ ಕೇಳುಬರುತ್ತಿರುವ ಮಾತು. ಆತನೊಬ್ಬ ಎಡಬಿಡಂಗಿಯೇ ಆಗಿರಬಹುದು. ಆದರೆ, ದೇಶದ ವಿಷಯ ಬಂದಾಗ ಆತ ಎಂದಿಗೂ ಬಿಟ್ಟುಕೊಡುತ್ತಿರಲಿಲ್ಲ ಎಂಬ ಅಂಶವನ್ನೂ ಗಮನಿಸಬೇಕು. (ಇಲ್ಲಿ ಪಾಕಿಸ್ತಾನವನ್ನಾಗಲೀ, ಖುರೇಷಿಯನ್ನಾಗಲೀ ಹೊಗಳುತ್ತಿಲ್ಲ ಎಂಬುದನ್ನು ಗಮನಿಸಬೇಕು).
ಅಂತಹಾ ಛಾತಿಯುಳ್ಳ ನಾಯಕ ವಿದೇಶಾಂಗ ಸಚಿವ ಪಟ್ಟಕ್ಕೆ ಬೇಕು. ಅಮೆರಿಕದ ಹಿಲರಿ ಕ್ಲಿಂಟನ್ ವಿದೇಶಾಂಗ ವ್ಯವಹಾರಗಳನ್ನು ದಿಟ್ಟತನದಿಂದ ಎದುರಿಸುತ್ತಿರುವ ಛಲಗಾರ್ತಿ ಬಹುಶಃ ಕೃಷ್ಣರಿಗೆ ಆದರ್ಶವಾಗಬಹುದೇನೋ.
ಇಷ್ಟೆಲ್ಲವನ್ನೂ ಯಾಕೆ ಹೇಳಬೇಕಾಯಿತೆಂದರೆ, ವಿದೇಶಾಂಗ ಸಚಿವ ಹುದ್ದೆಗೊಬ್ಬರು ಕನ್ನಡಿಗರಿದ್ದಾರೆ ಎಂಬುದಷ್ಟೇ ನಮಗೆ ಹೆಮ್ಮೆ. ಸಂದು ಹೋದ ವರ್ಷ ಎಸ್.ಎಂ.ಕೃಷ್ಣ ಅವರ ಪದವಿಗೇ ಕುತ್ತು ಬರುವ ಮಟ್ಟಿಗೆ ಅವರು ಪಾಕಿಸ್ತಾನವನ್ನು ನಿಭಾಯಿಸಿದ್ದರು ಎಂದರೂ ತಪ್ಪಾಗಲಾರದು. ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಐಎಸ್ಐ ಕುಮ್ಮಕ್ಕು ಇದೆ ಎಂಬ ಮಾತಂತೂ ಎಲ್ಲರೂ ಒಪ್ಪತಕ್ಕ ವಿಷಯ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿಯೂ ಐಎಸ್ಐ ಪಾತ್ರವಿದೆ ಎಂಬುದು ಜಗಜ್ಜಾಹೀರಾದ ಸಂಗತಿ. 26/11 ದಾಳಿಯಲ್ಲಿಯೂ, ಡೇವಿಡ್ ಕೊಲಮನ್ ಹೆಡ್ಲಿ ಎಂಬ ಪಾಕ್ ಮೂಲದ ಉಗ್ರಗಾಮಿ ಅಮೆರಿಕದಲ್ಲಿ ಬಂಧಿತನಾಗಿ ವಿಚಾರಣೆ ಎದುರಿಸುತ್ತಿದ್ದಾಗ, ತನಿಖಾ ಏಜೆನ್ಸಿಗಳೆದು ಮುಂಬೈ ದಾಳಿಯಲ್ಲಿ ಐಎಸ್ಐ ಪಾತ್ರವಿದೆ ಎಂದೂ ಹೇಳಿದ್ದ. ಇದನ್ನೇ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದರು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ.
ಹೆಡ್ಲಿ ತಪ್ಪೊಪ್ಪಿಗೆಯನ್ನು ಬಹಿರಂಗಪಡಿಸಿರುವ ಪಿಳ್ಳೈ ಕ್ರಮವು ರಾಜತಾಂತ್ರಿಕವಾಗಿ ತಪ್ಪು ಆಗಿರುವುದು ನಿಜವಾದರೂ, ಅವರನ್ನು ಸಮರ್ಥಿಸಿಕೊಳ್ಳದೆ, ದಿವ್ಯ ಮೌನ ವಹಿಸುವ ಮೂಲಕ, "ಭಾರತವು ದ್ವಿಪಕ್ಷೀಯ ಮಾತುಕತೆಗೆ ಹೋಂ ವರ್ಕ್ ಮಾಡಿಕೊಂಡಿಲ್ಲ, ದೆಹಲಿಯಿಂದ ಆಗಾಗ್ಗೆ ಫೋನ್ ಮೂಲಕ ನಿರ್ದೇಶನ ಪಡೆದೇ ಮಾತನಾಡುತ್ತಿದ್ದೀರಿ" ಎಂದು ಖುರೇಷಿ ಬಾಯಿಗೆ ಬಂದಂತೆ ಹೇಳುತ್ತಾ, ಪಿಳ್ಳೈ ವಿರುದ್ಧವೂ ರಾಜತಾಂತ್ರಿಕ ಶಿಷ್ಟಾಚಾರಗಳಿಗೆ ವಿರುದ್ಧವಾಗಿ ಕೂಗಾಡತೊಡಗಲು ಕಾರಣವಾಗಿದ್ದಂತೂ ಅಷ್ಟೇ ನಿಜವಲ್ಲವೇ?
ಜಿ.ಕೆ.ಪಿಳ್ಳೈ ಬೇರಾರೂ ಅಲ್ಲ, ಭಾರತ ಸರಕಾರದ ಅಧಿಕಾರಿ. ಅವರ ಹೇಳಿಕೆಗೆ ಸಮರ್ಥನೆ ದೊರೆಯುವುದಿಲ್ಲ. ಆದರೆ ಹಫೀಜ್ ಸಯೀದ್? ಲಷ್ಕರ್ ಇ ತೋಯ್ಬಾದ ಪರಮಾಪ್ತ ಜಮಾತ್ ಉದ್ ದಾವಾ ಸಂಘಟನೆಯ ಈ ಒಡೆಯನಿಗೆ ಪಿಳ್ಳೈಯನ್ನು ಖುರೇಷಿ ಹೋಲಿಸಿದ್ದಕ್ಕೆ ಅವರಿಂದಲೇ ಸಮರ್ಥನೆ ದೊರೆಯುತ್ತದೆ ಎಂದರೆ, ಆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪರಿಸ್ಥಿತಿ ಹೇಗಿರಬೇಡ! ಪಿಳ್ಳೈಯನ್ನು ನೇರವಾಗಿ ಹೆಡ್ಲಿಗೆ ಹೋಲಿಸಿದ್ದಕ್ಕೆ ಒಂದು ಖಂಡನೆಯ ಹೇಳಿಕೆ ಹೊರಬಂದಿಲ್ಲ. ಹೆಡ್ಲಿ ವಿಚಾರಣೆಯ ಹೇಳಿಕೆಯ ಅಸ್ತ್ರವೋ, 1993ರ ಮುಂಬೈ ಸರಣಿ ಸ್ಫೋಟ ತನಿಖೆಯ ಆಯುಧವೋ ನಮ್ಮ ವಿದೇಶಾಂಗ ಸಚಿವರ ಕೈಯಲ್ಲೇ ಇತ್ತಲ್ಲವೇ ಪಿಳ್ಳೈ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು?
ಅದೆಲ್ಲಾ ಹಳೆಯ ಮಾತು, ಬಿಟ್ಟು ಬಿಡೋಣ. ಜಾಗತಿಕ ಪರಮೋಚ್ಚ ಸಂಸ್ಥೆ ಎಂದು ಗುರುತಿಸಲಾಗಿರುವ ವಿಶ್ವ ಸಂಸ್ಥೆಯಲ್ಲಿ, ಮೊನ್ನೆ ನಮ್ಮ ವಿದೇಶಾಂಗ ಸಚಿವರು, ರಾಶಿಯಲ್ಲಿದ್ದ ಒಂದು ಭಾಷಣದ ಪ್ರತಿಯನ್ನು ಹೆಕ್ಕಿಕೊಂಡು ಓದಿದ್ದು, ಪೋರ್ಚುಗೀಸ್ ದೇಶದ ವಿದೇಶಾಂಗ ಮಂತ್ರಿಯ ಭಾಷಣವನ್ನು! ಬಹುಶಃ ಭಾರತವು ಪೂರ್ವ ತಯಾರಿ ಇಲ್ಲದೆ ಮಾತುಕತೆಗೆ ಬರುತ್ತಿದೆ ಎಂಬ ಖುರೇಷಿ ಮಾತು ಇಲ್ಲಿಗೂ ಅನ್ವಯಿಸುತ್ತದೆಯೇ ಎಂಬ ಅನಿಸಿಕೆ ಬಾರದಿರದು. ಯಾಕೆಂದರೆ, ಕೃಷ್ಣ ಅವರು ತಪ್ಪಾಗಿ ಭಾಷಣದ ಪ್ರತಿಯನ್ನು ಎತ್ತಿಕೊಂಡಿದ್ದರಾದರೂ, ಅದನ್ನು ಓದಲು ಆರಂಭಿಸುವಾಗಲೂ "ಇದು ನಮ್ಮದಲ್ಲ" ಎಂದು ಅವರಿಗೆ ಅನ್ನಿಸಲೇ ಇಲ್ಲ! ಅಷ್ಟಲ್ಲದೆ, ಒಮ್ಮೊಮ್ಮೆ ಹೀಗಾಗುತ್ತದೆ ಎಂಬ ಸಮರ್ಥನೆಯನ್ನೂ ನೀಡಿದ್ದಾರವರು.
ಅದಕ್ಕೇ ಇರಬೇಕು, ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುವ ಸಾಲುಗಳನ್ನು ಗಮನಿಸಿ: "ಬೇರೆ ದೇಶದ ಭಾಷಣ ಓದಿದಂತೆಯೇ ಎಸ್.ಎಂ.ಕೃಷ್ಣ ವಾಪಸ್ ಬರುವಾಗ ತಪ್ಪಾಗಿ ಬೇರೆ ದೇಶದ ವಿಮಾನವನ್ನೇರದಿದ್ದರೆ ಸಾಕು!" ಮತ್ತು "ಎಸ್.ಎಂ.ಕೃಷ್ಣ ಯಾವುದಾದರೂ ವ್ಯಾಲೆಂಟೈನ್ಸ್ ಡೇ ಸಂದೇಶ ಓದಿದ್ದಿದ್ದರೆ?" ಎಂಬ ಶಂಕೆ ಕೆಲವರಿಗೆ. ಇನ್ನು ಕೆಲವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಆ ಭಾಷಣದ ಪ್ರತಿಯಲ್ಲಿ "ಅರುಣಾಚಲ ಪ್ರದೇಶವು ಚೀನಾಗೆ ಸೇರಿದೆ" ಎಂದೋ, "ಕಾಶ್ಮೀರವು ಪಾಕಿಸ್ತಾನದ ಭಾಗ" ಎಂದೋ ಉಲ್ಲೇಖಿಸಿದ್ದಿದ್ದರೂ, ಕೃಷ್ಣ ಅವರು ಅದನ್ನೇ ಓದುತ್ತಿದ್ದರೇ? ಎಂಬ ಪ್ರಶ್ನೆ ಕೇಳಿದ್ದಾರೆ! ಕೃಷ್ಣ ಅವರ ಹೇಳಿಕೆಗಳಂತೂ ಪಾಕಿಸ್ತಾನ ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ಬಿಂಬಿತವಾಗಿವೆ.
ಎಸ್.ಎಂ.ಕೃಷ್ಣ ಅವರಿಗೊಂದು ಮಾತು. ನಿಮ್ಮ ಮೌನ ಮತ್ತು ಮಾತು ಖಂಡಿತಾ ಈ ಹುದ್ದೆಗೆ ಹೊಂದಿಕೆಯಾಗುತ್ತಿಲ್ಲ. ಜವಾಬ್ದಾರಿಯುತವಾದ ವಿದೇಶಾಂಗ ಸಚಿವಾಲಯದ ಹುದ್ದೆಯು ಕತ್ತಿಯ ಅಲುಗಿನ ಮೇಲಿನ ನಡಿಗೆ. ಹೊರದೇಶಗಳೊಂದಿಗಿನ ಸಂಬಂಧಗಳನ್ನು ಗಟ್ಟಿಗೊಳಿಸುವಷ್ಟೇ ಚಾಕಚಕ್ಯತೆ, ಆ ಸಂಬಂಧವನ್ನು ಮುಂದುವರಿಸುವುದು ಮತ್ತು ಭಾರತದ ಹೆಸರು ಕೆಡದಂತೆ ಕಾಪಾಡಿಕೊಳ್ಳುವುದರಲ್ಲಿಯೂ ಬೇಕಾಗುತ್ತದೆ. ಈ ಸಂಕೀರ್ಣ ಜಾಗತಿಕ ಸಂಬಂಧಗಳ ಕಾಲದಲ್ಲಿ, 'ನಿಮ್ಮ ಮಾತುಗಳಲ್ಲಿ ಗಟ್ಟಿತನವೇ ಇಲ್ಲ' ಎಂಬ ಪ್ರತಿಪಕ್ಷಗಳ ಆರೋಪವನ್ನು ಮೆಟ್ಟಿ ನಿಲ್ಲಲೇಬೇಕಾದ ಅನಿವಾರ್ಯತೆಯಿದೆ.