ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » "ತುರ್ತು ಪರಿಸ್ಥಿತಿ"ಗೆ 36 ವರ್ಷ: ಅದೇನೂಂತ ಗೊತ್ತೇ?
(State of Emergency | Indira Gandhi | Congress | Fascist)
"ತುರ್ತು ಪರಿಸ್ಥಿತಿ"ಗೆ 36 ವರ್ಷ: ಅದೇನೂಂತ ಗೊತ್ತೇ?
ಬಹುಶಃ ಯುವ ಓದುಗರಲ್ಲಿ ಹಲವರು 36 ವರ್ಷಗಳ ಹಿಂದೆ ಇದೇ ದಿನ (1975ರ ಜೂನ್ 25) ಹುಟ್ಟಿರಲಿಕ್ಕಿಲ್ಲ. ಅದೇನೋ ತುರ್ತು ಪರಿಸ್ಥಿತಿಯಂತೆ, ಇಂದಿರಾ ಗಾಂಧಿ ಮಾಡಿಸಿದ್ದಂತೆ, ಕಾಂಗ್ರೆಸ್ ಸರ್ವಾಧಿಕಾರ ಪ್ರಯೋಗವಂತೆ, ಎಂದೆಲ್ಲಾ ಅಂತೆಕಂತೆಗಳನ್ನು ಕೇಳಿದ್ದಿರಬಹುದು. ಹೀಗಾಗಿ ತುರ್ತು ಪರಿಸ್ಥಿತಿಯ ಕುರಿತು ಇಂದಿನ ಪೀಳಿಗೆಗೆ ಸ್ಥೂಲವಾಗಿ ಮಾಹಿತಿ ನೀಡಬಲ್ಲ ಲೇಖನವಿದು. ಇತಿಹಾಸದಲ್ಲಿ ಕರಾಳವಾದ ಅಧ್ಯಾಯವಾಗಿರುವ ಇದು ಎಂದಿಗೂ ನಮ್ಮ ಪಠ್ಯ ಕ್ರಮದಲ್ಲಿ ಒಳಗೊಂಡಿಲ್ಲ. ಹೀಗಾಗಿ ಜನರಿಗೆ ಅದರ ಅರಿವಿಲ್ಲ. ಆದರೆ ತುರ್ತು ಪರಿಸ್ಥಿತಿ ಎಂಬ ಭಯಾನಕ ಆಡಳಿತಾವಧಿಯು ಸಾಕಷ್ಟು ಗಾಯಗಳನ್ನು ಛಾಪೊತ್ತಿ ಹೋಗಿದೆ.
WD
1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ದೇಶದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ, ದೇಶದ ಪರಿಪೂರ್ಣ ಅಧಿಕಾರವನ್ನು ತನ್ನ ಬಿಗಿ ಹಿಡಿತದಲ್ಲಿರಿಸಿಕೊಂಡಿದ್ದರು. ಅಂದರೆ, ಇಲ್ಲಿ ನ್ಯಾಯಾಂಗಕ್ಕೆ, ಕಾರ್ಯಾಂಗಕ್ಕೆ, ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಬೆಲೆಯೇ ಇಲ್ಲದಂತಹಾ ಪರಿಸ್ಥಿತಿ ಇತ್ತು.
ಇದಕ್ಕೇನು ಕಾರಣ? 1971ರ ಮಹಾ ಚುನಾವಣೆಗಳಲ್ಲಿ ಇಂದಿರಾ ಗಾಂಧಿಯ ಪಕ್ಷವಾಗಿರುವ ಕಾಂಗ್ರೆಸ್ ಭಾರೀ ಪ್ರಮಾಣದಲ್ಲಿ ಚುನಾವಣಾ ಅಕ್ರಮದಲ್ಲಿ ತೊಡಗಿದ್ದರು ಎಂದು ಆರೋಪಿಸಿ ವಿರೋಧ ಪಕ್ಷಗಳು ಸಣ್ಣಪುಟ್ಟ ಪ್ರತಿಭಟನೆ ನಡೆಸುತ್ತಿದ್ದರು. ಗಾಂಧಿವಾದಿ, ಸಾಮಾಜಿಕ ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಅವರು ಬಿಹಾರದಲ್ಲಿ ಸತ್ಯಾಗ್ರಹಗಳನ್ನು ನಡೆಸುತ್ತಾ, ವಿದ್ಯಾರ್ಥಿಗಳನ್ನು, ರೈತರನ್ನು, ಯುವಕರನ್ನು, ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸುತ್ತಾ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾ ಆಂದೋಲನವನ್ನು ಹುಟ್ಟು ಹಾಕಿದ್ದರು. ಅಂಹಿಸಾತ್ಮಕವಾಗಿ ಭಾರತದ ಸಮಾಜವನ್ನು ಬದಲಾಯಿಸಬೇಕೆಂಬುದು ಅವರ ಉದ್ದೇಶವಾಗಿತ್ತು. ತತ್ಪರಿಣಾಮವಾಗಿ ಇಂದಿರಾ ಅವರ ಪಕ್ಷ ಕಾಂಗ್ರೆಸ್ ಗುಜರಾತ್‌ನಲ್ಲಿ ಸೋಲನ್ನಪ್ಪಿತು. "ಜನತಾ ಪಾರ್ಟಿ" ಹೆಸರಿನಲ್ಲಿ ಪ್ರತಿಪಕ್ಷಗಳು ಮೈತ್ರಿಕೂಟ ಮಾಡಿಕೊಂಡು ಕಾಂಗ್ರೆಸ್ಸನ್ನು ಸೋಲಿಸಿದ್ದವು.
ಇಂದಿರಾ ಚುನಾವಣೆಯೇ ರದ್ದು ಇದರ ನಡುವೆ, 1971ರ ಚುನಾವಣೆಗಳಲ್ಲಿ ಇಂದಿರಾ ಗಾಂಧಿ ಎದುರು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದ ಜನತಾ ಪಾರ್ಟಿ ಅಭ್ಯರ್ಥಿ ರಾಜ ನಾರಾಯಣ್ ಎಂಬವರು ಇಂದಿರಾ ಅವರು ಅಧಿಕಾರದ ದುರುಪಯೋಗ ಮಾಡಿಕೊಂಡು, ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಮೊರೆಹೋಗಿದ್ದರು. ನಾಲ್ಕು ವರ್ಷ ವಿಚಾರಣೆಯ ಬಳಿಕ, 1975ರ ಜೂನ್ 12ರಂದು ನ್ಯಾಯಾಲಯವು ಪ್ರಧಾನಿಯನ್ನು ತಪ್ಪಿತಸ್ಥೆ ಎಂದು ಘೋಷಿಸಿ, ಆಕೆಯ ಆಯ್ಕೆಯನ್ನೇ ರದ್ದುಗೊಳಿಸಿತ್ತಲ್ಲದೆ, ಅಕ್ರಮ ಎಸಗಿದ್ದಕ್ಕಾಗಿ ಆರು ವರ್ಷಗಳ ಕಾಲ ಚುನಾವಣೆಗೇ ಸ್ಪರ್ಧಿಸದಂತೆಯೂ ನಿರ್ಬಂಧಿಸಿತು. ಮತದಾರರಿಗೆ ಲಂಚ, ಚುನಾವಣಾ ಅಕ್ರಮ ಮುಂತಾದ ಗಂಭೀರವಾದ ಆಪಾದನೆಗಳನ್ನು ಕೈಬಿಡಲಾಯಿತಾದರೂ, ಕೇಂದ್ರದ ಮತ್ತು ಕಾಂಗ್ರೆಸ್ ಆಳ್ವಿಕೆಯಿದ್ದ ಉತ್ತರ ಪ್ರದೇಶದ ಸರಕಾರಿ ಯಂತ್ರದ ದುರುಪಯೋಗ ಮಾಡಿದ್ದುದು ಸಾಬೀತಾಗಿತ್ತು. ತೀರ್ಪು ಹೊರ ಬಿದ್ದ ಬಳಿಕ, ಜಯಪ್ರಕಾಶ್ ನಾರಾಯಣಅ, ರಾಜ ನಾರಾಯಣ್ ಮತ್ತು ಮೊರಾರ್ಜಿ ದೇಸಾಯಿ ಮುಂತಾದ ನಾಯಕರೆಲ್ಲರೂ ನೇತೃತ್ವ ವಹಿಸಿ ಪ್ರತಿಭಟನೆ ತೀವ್ರಗೊಳಿಸಿದರು. ಆ ಆಂದೋಲನವು ಸಂಸತ್ ಕಟ್ಟಡ, ಪ್ರಧಾನಿ ನಿವಾಸದವರೆಗೂ ತಲುಪಿತು.
ಚಳವಳಿ ತೀವ್ರವಾಗತೊಡಗಿತು. ಎಲ್ಲೆಡೆ ಪ್ರತಿಭಟನಾಕಾರರು ಗದ್ದಲವೆಬ್ಬಿಸತೊಡಗಿದರು. ಅಷ್ಟು ಹೊತ್ತಿಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದ ಸಿದ್ಧಾರ್ಥ ಶಂಕರ ರಾಯ್ ಅವರು "ಆಂತರಿಕ ತುರ್ತು ಪರಿಸ್ಥಿತಿ" ಹೇರುವಂತೆ ಇಂದಿರಾ ಗಾಂಧಿಗೆ ಸಲಹೆ ನೀಡಿದರು. "ಆಂತರಿಕ ಕ್ಷೋಭೆಯಿಂದಾಗಿ ದೇಶದ ಭದ್ರತೆಗೆ ಅಪಾಯವಿದೆ, ಹೀಗಾಗಿ ತುರ್ತು ಪರಿಸ್ಥಿತಿ ಘೋಷಿಸಬೇಕು" ಎಂದು ರಾಷ್ಟ್ರಪತಿಗೆ ಸಲಹೆ ನೀಡುವ ಒಕ್ಕಣೆಯನ್ನು ಬರೆದುಕೊಟ್ಟರು. ಸಂವಿಧಾನದ ಮಿತಿಯೊಳಗಿದ್ದುಕೊಂಡೇ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹೇಗೆ ಹತ್ತಿಕ್ಕಬಹುದೆಂದು ಅವರು ತೋರಿಸಿಕೊಟ್ಟರು. ಹತಾಶರಾಗಿದ್ದ ಪ್ರಧಾನಿ ಇಂದಿರಾ ಸಲಹೆಯಂತೆ, ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಅವರು ತುರ್ತು ಪರಿಸ್ಥಿತಿ ಘೋಷಿಸಿಬಿಟ್ಟರು. 1977ರಲ್ಲಿ ಇಂದಿರಾ ಗಾಂಧಿ ಕೊನೆಗೂ ಪುನಃ ಚುನಾವಣೆಗಳನ್ನು ಘೋಷಿಸುವವರೆಗೂ, ಸಂವಿಧಾನದ ನಿಯಮದ ಪ್ರಕಾರ, ಪ್ರತಿ ಆರು ತಿಂಗಳಿಗೊಮ್ಮೆ ಪ್ರಧಾನಿ ಪ್ರಸ್ತಾಪದನ್ವಯ ರಾಷ್ಟ್ರಪತಿ ಅವರು ತುರ್ತು ಪರಿಸ್ಥಿತಿ ಮುಂದುವರಿಸಲು ಅನುಮತಿ ಕೊಡುತ್ತಲೇ ಹೋದರು.
ಎಲ್ಲರೂ ಜೈಲಿಗೆ ಸಂವಿಧಾನದ 352ನೇ ವಿಧಿಯಡಿಯಲ್ಲಿ ಇಂದಿರಾ ಗಾಂಧಿ ಸರ್ವಾಧಿಕಾರಿಯಂತೆ ವರ್ತಿಸಿದರು. ಆಗಷ್ಟೇ ಪಾಕಿಸ್ತಾನದೊಂದಿಗೆ ಯುದ್ಧ ಮುಗಿದಿದ್ದರಿಂದಾಗಿ ದೇಶದ ಹಣಕಾಸು ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ನಂತರ ಮುಷ್ಕರ, ಪ್ರತಿಭಟನಾ ಪ್ರದರ್ಶನಗಳೂ ಸಾಕಷ್ಟು ನಷ್ಟ ಉಂಟು ಮಾಡಿದೆ ಎಂದು ಆರೋಪಿಸಿ ಇಂದಿರಾ ನೇತೃತ್ವದ ಸರಕಾರವು ಎಲ್ಲ ಪ್ರತಿಭಟನೆಗಳನ್ನೂ ಹತ್ತಿಕ್ಕಲು ನಿರ್ಧರಿಸಿತು. ಪ್ರತಿಪಕ್ಷದ ನೂರಾರು ಹಿರಿಯ ನಾಯಕರು, ಪತ್ರಕರ್ತರೆಲ್ಲರೂ ಜೈಲು ಸೇರಿದರು. ಆಕ್ರೋಶಿತಗೊಂಡ ಕಾಂಗ್ರೆಸಿಗರನೇಕರು ಇಂದಿರಾ ಸಹವಾಸ ತೊರೆದರು. ತುರ್ತು ಪರಿಸ್ಥಿತಿ ವಿರುದ್ಧ ದೇಶಾದ್ಯಂತ ಧ್ವನಿ ಎತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಲಾಯಿತು. ಈಗಿರುವ ಕಾನೂನುಗಳು ತೀರಾ ವಿಳಂಬ ನೀತಿಗೆ ಕಾರಣವಾಗುತ್ತಿವೆ ಎಂದುಕೊಂಡ ಇಂದಿರಾ ಗಾಂಧಿ, ಪ್ರಧಾನಿ ಮೂಲಕ ಅಧ್ಯಾದೇಶಗಳನ್ನು ಹೊರಡಿಸುತ್ತಾ, ಸಂಸತ್ತನ್ನೂ ಬೈಪಾಸ್ ಮಾಡಿ, ತ್ವರಿತವಾಗಿ ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ಜಾರಿಗೊಳಿಸತೊಡಗಿದರು. ಇದೇ ಸಂದರ್ಭ, ದೇಶದ ಆರ್ಥಿಕತೆಯನ್ನು ಮೇಲೆತ್ತಲು 20 ಅಂಶಗಳ ಕಾರ್ಯಕ್ರಮಗಳನ್ನೂ ರಚಿಸಿದರು. ಕಾಂಗ್ರೆಸ್ ವಿರೋಧಿ ಪಕ್ಷಗಳ ಆಳ್ವಿಕೆಯಿದ್ದ ಗುಜರಾತ್, ತಮಿಳುನಾಡು ಸರಕಾರಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು.
ಇಂದಿರಾ ಅವರ ಎಲ್ಲ ವಿರೋಧಿಗಳೂ, ಪ್ರತಿಪಕ್ಷ ಮುಖಂಡರು, ಟೀಕಾಕಾರರು ಜೈಲು ಸೇರಿದ್ದರಿಂದಾಗಿ ಆಕೆಗೆ ಇದಿರಾಡುವವರೇ ಇರಲಿಲ್ಲ. ದೇಶಕ್ಕೆ ದೇಶವೇ ಆಘಾತಕ್ಕೀಡಾಯಿತು.
ಸಿಖ್ಖರ ಒಗ್ಗಟ್ಟು ಇದೇ ಹೊತ್ತಿಗೆ ಸಿಖ್ ಸಮುದಾಯವು ಒಗ್ಗಟ್ಟಿನಿಂದ ಬಂಡಾಯದ ಕಹಳೆ ಹೂಡಿತು. ಅಮೃತಸರದಲ್ಲಿ ಅಕಾಲಿ ದಳ ನೇತೃತ್ವದಲ್ಲಿ ಸಭೆ ಸೇರಿದ ಸಿಖ್ ಸಮುದಾಯವು, ಕಾಂಗ್ರೆಸ್‌ನ ಫ್ಯಾಸಿಸ್ಟ್ ಧೋರಣೆಯನ್ನು ಖಂಡಿಸಿ, ಚಳವಳಿ ಆರಂಭಿಸಿತು. ಸಿಖ್ಖರು ಈ ಪರಿ ಬೆಳೆದದ್ದನ್ನು ನೋಡಿ ಇಂದಿರಾಗೇ ಅಚ್ಚರಿಯಾಗಿತ್ತು. ಅವರ ಈ "ಪ್ರಜಾಪ್ರಭುತ್ವ ಉಳಿಸಿ" ಹೋರಾಟವು ದೇಶದ ಇತರೆಡೆಗೂ ಹರಡಲಿದೆ ಎಂಬ ಆತಂಕದಲ್ಲಿ, ಆಕೆ ಶಿರೋಮಣಿ ಅಕಾಲಿ ದಳದೊಂದಿಗೆ ಮಾತುಕತೆಗೆ ಮುಂದಾಗಿ, ಪಂಜಾಬ್ ವಿಧಾನಸಭೆಗೆ ಜಂಟಿ ನಿಯಂತ್ರಣ ಕೊಡಿಸುವ ಆಮಿಷ ಒಡ್ಡಿದರು. ಆದರೆ ಪ್ರತಿಭಟನೆಯ ನಾಯಕ ಸಂತ ಹರಚರಣ್ ಸಿಂಗ್ ಲೋಗೋವಾಲ ಅವರು, ತುರ್ತು ಪರಿಸ್ಥಿತಿ ವಾಪಸ್ ಪಡೆಯುವವರೆಗೆ ಮಾತುಕತೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಆದರೆ ಎಲ್ಲ ಪ್ರತಿಭಟನೆಕಾರರೂ ಜೈಲಿಗೆ ಅಟ್ಟಲ್ಪಟ್ಟ ಬಳಿಕ ಪ್ರತಿಭಟನೆಯ ಕಾವು ತಗ್ಗಿತು.
ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿಯ ಪ್ರಕಾರ, ಇಂದಿರಾ ಗಾಂಧಿಯ ಈ ತುರ್ತು ಪರಿಸ್ಥಿತಿಯ ಆಳ್ವಿಕೆಯಿದ್ದ 20 ತಿಂಗಳ ಅವಧಿಯಲ್ಲಿ ಒಟ್ಟು 1.40 ಲಕ್ಷ ಮಂದಿಯನ್ನು ಯಾವುದೇ ವಿಚಾರಣೆಯಿಲ್ಲದೆ ಜೈಲಿಗೆ ತಳ್ಳಲಾಗಿತ್ತು. ವಿಶೇಷವೆಂದರೆ, ಅವರಲ್ಲಿ 40 ಸಾವಿರ ಮಂದಿ ಕೂಡ ಭಾರತದ ಜನಸಂಖ್ಯೆಯ ಶೇ.2ರಷ್ಟಿದ್ದ ಸಿಖ್ಖರು!
ಆರೆಸ್ಸೆಸ್ ಪಾತ್ರ ಈ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರಲ್ಲಿ ಆರೆಸ್ಸೆಸ್ ಸಕ್ರಿಯ ಪಾತ್ರ ವಹಿಸಿತ್ತು. ದೇಶದ ಮೂಲೆ ಮೂಲೆಯಲ್ಲಿ ನೆಲೆಯೂರಿದ್ದ ಸಂಘಟನೆಯನ್ನು ನಿಷೇಧಿಸಲಾಯಿತಾದರೂ, ಅದರ ಮುಖಂಡರು ರಹಸ್ಯವಾಗಿಯೇ ಪ್ರಜಾಪ್ರಭುತ್ವದ ರಕ್ಷಣೆಗೆ ಜನರನ್ನು ಒಗ್ಗೂಡಿಸಿ, ಪ್ರೇರಣೆ ನೀಡುತ್ತಿದ್ದರು. ಲಂಡನ್‌ನ "ದಿ ಇಕನಾಮಿಸ್ಟ್" ಪತ್ರಿಕೆಯು ಆರೆಸ್ಸೆಸ್ಸನ್ನು "ದೇಶದ ಏಕೈಕ ಎಡಪಂಥೇತರ ಕ್ರಾಂತಿಕಾರಿ ಶಕ್ತಿ" ಎಂದು ಬಣ್ಣಿಸಿತು.
ಕೊನೆಗೂ ಇಂದಿರಾ ಗಾಂಧಿ ಅವರು 1977ರ ಜನವರಿ 23ರಂದು, ಮಾರ್ಚ್ ತಿಂಗಳಲ್ಲಿ ಮಹಾ ಚುನಾವಣೆ ನಡೆಸಲು ತೀರ್ಮಾನಿಸಿದರು. ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. 1977ರ ಮಾರ್ಚ್ 23ರಂದು ತುರ್ತು ಪರಿಸ್ಥಿತಿಯು ಅಧಿಕೃತವಾಗಿ ಕೊನೆಗೊಂಡಿತು. ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರ - ಯಾವುದು ಬೇಕೋ ಅದನ್ನು ಆರಿಸಿಕೊಳ್ಳಿ ಎಂದು ಪ್ರತಿಪಕ್ಷಗಳು ಚುನಾವಣಾ ಕಣಕ್ಕೆ ಧುಮುಕಿದ ಪರಿಣಾಮ, ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಂದಿರಾ ಗಾಂಧಿ ಸಹಿತ ಘಟಾನುಘಟಿಗಳು ನೆಲ ಕಚ್ಚಿದರು. ಕೇವಲ 153 ಸ್ಥಾನಗಳು ಮಾತ್ರವೇ ದೊರಕಿತು. ಅವುಗಳಲ್ಲಿ, 92 ಕ್ಷೇತ್ರಗಳು ಕೂಡ ದಕ್ಷಿಣ ಭಾರತದ 4 ರಾಜ್ಯಗಳಿಂದ ದೊರಕಿದ್ದು ಎಂದರೆ, ಉತ್ತರ ಭಾರತವು ಸಂಪೂರ್ಣವಾಗಿ ಕಾಂಗ್ರೆಸ್ ಹಿಡಿತವನ್ನು ಕಳೆದುಕೊಂಡಿತ್ತು ಎಂಬುದರ ಸೂಚನೆಯಾಗಿತ್ತದು. 542ರಲ್ಲಿ ಜನತಾ ಪಾರ್ಟಿಯು 295 ಸ್ಥಾನಗಳ ಸರಳ ಬಹುಮತ ಪಡೆದು ಅಧಿಕಾರಕ್ಕೇರಿತು. ಮೊರಾರ್ಜಿ ದೇಸಾಯಿ ಅವರು ಸ್ವತಂತ್ರ ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾದರು.
ಇಂದಿರಾಗೂ ಸೋಲು
PR
ವಿಶೇಷವೆಂದರೆ, ಇಂದಿರಾ ಗಾಂಧಿ ಅದೇ ರಾಜ ನಾರಾಯಣ್ ಎದುರು ರಾಯ್ ಬರೇಲಿಯಲ್ಲಿ ಸೋಲನ್ನಪ್ಪಿದರು. ಬಳಿಕ ರಾಜ್ ನಾರಾಯಣ್ ಅವರು ಮೊರಾರ್ಜಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಆಯ್ಕೆಯಾದರು. ಇಂದಿರಾ ಗಾಂಧಿಯನ್ನು ಸೋಲಿಸಿದ್ದ ಏಕೈಕ ವ್ಯಕ್ತಿ ರಾಜ್ ನಾರಾಯಣ್ ನೆನಪಿನಲ್ಲಿ ಭಾರತ ಸರಕಾರವು ಅಂಚಿಚೀಟಿಯನ್ನು ಬಿಡುಗಡೆಗೊಳಿಸಿತ್ತು (ಚಿತ್ರ ನೋಡಿ.)
ಇಂದಿರಾ ಗಾಂಧಿ, ಪುತ್ರ ಸಂಜಯ್ ಗಾಂಧಿ ಸಹಿತ ಹಲವಾರು ಮಂದಿಯ ವಿರುದ್ಧ ಹೊಸ ಸರಕಾರವು ಈ ರೀತಿಯ ದೌರ್ಜನ್ಯ ಎಸಗಿದ್ದಕ್ಕಾಗಿ ಕೇಸು ದಾಖಲಿಸಿ ಜೈಲಿಗಟ್ಟಿತು. ಆದರೆ ಈ ಅಪರಾಧ ಕೃತ್ಯಗಳಿಗೆ, ದೌರ್ಜನ್ಯಗಳಿಗೆ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸುವಲ್ಲಿ ವಿಫಲವಾದ ಕಾರಣ, ದೊಡ್ಡ ದೊಡ್ಡ ಕುಳಗಳೆಲ್ಲ ಜೈಲಿನಿಂದ ಹೊರಬಂದರೆ, ತಳ ಮಟ್ಟದ ಕೆಲವು ಅಧಿಕಾರಿಗಳು ಮಾತ್ರ ಶಿಕ್ಷೆ ಅನುಭವಿಸಿದರು. ಭಾರತದ ತುರ್ತು ಪರಿಸ್ಥಿತಿಯ ಬರ್ಬರ ಮತ್ತು ದುರ್ಭರ ದಿನಗಳು ಕೊನೆಗೊಂಡವು. ಅದಾಗಲೇ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿ, ಸ್ವಾತಂತ್ರ್ಯ ದೊರೆತ ನಿಟ್ಟುಸಿರಿನಲ್ಲಿದ್ದ ಪ್ರಜೆಗಳು ಕೂಡ, ಆ ದಿನಗಳನ್ನು ನಿಧಾನವಾಗಿ ಮರೆಯತೊಡಗಿದರು. ಕಾಂಗ್ರೆಸ್ ಹಾಗೂ ಸಿಖ್ಖರು, ಆರೆಸ್ಸೆಸ್ ನಡುವಿನ ದ್ವೇಷದ ಬೇರುಗಳು ಕೂಡ ಆಳವಾಗತೊಡಗಿದ್ದವು. ಆದರೆ, ಆ ನೋವು ಮಾತ್ರ ಅಚ್ಚಳಿಯದೇ ಮನದಾಳದಲ್ಲಿ ಹಾಗೆಯೇ ಉಳಿಯಿತು.