ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಸ್ವಾತಂತ್ರ್ಯ ಸಂದೇಶ: ಹೊಸ ನಾಡು ಕಟ್ಟುವ ಸಂಕಲ್ಪ (Independence Day | Sadhguru Jaggi Vasudev | Isha Foundation | spiritual leader)
WD
ಭಾರತಕ್ಕೆ ಸ್ವಾತಂತ್ರ್ಯ ಬಂದು 64 ವರ್ಷ ಆಗುತ್ತಿದೆ. ಆದರೆ ಈಗಲೂ ಸಹ ಮೂಲಭೂತವಾಗಿ ಅತ್ಯಂತ ಮಹತ್ವವಾಗಿರುವ ಕೆಲವೊಂದು ಸೌಕರ್ಯಗಳು ಈ ದೇಶದಲ್ಲಿ ಇನ್ನೂ ದೊರೆತಿಲ್ಲ. ಎರಡು ತಲೆಮಾರುಗಳು ಗತಿಸಿದ್ದರೂ ಮೂಲಭೂತ ಅಗತ್ಯಗಳಾದ ಆಹಾರ, ಪೌಷ್ಟಿಕಾಹಾರ, ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳು ಬಹುತೇಕ ಜನರನ್ನು ತಲುಪಿಲ್ಲ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ, ಸಿಹಿ ತಿನಿಸು ತಿನ್ನುವುದು ಹಾಗೂ ಕೆಲವು ಘೋಷಣೆಗೆ ಸೀಮಿತವಾಗಬಾರದು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಹಾಗೂ ಇದಕ್ಕಾಗಿ ದೇಶ ಭಕ್ತರಿಗೆ ಇದ್ದ ಬದ್ಧತೆ ಹಾಗೂ ತ್ಯಾಗ ಮತ್ತು ಬಲಿದಾನ ಇವೆಲ್ಲವೂ ನಮ್ಮ ಹಿಂದಿನ ಪೀಳಿಗೆಯವರು ನಮಗೆ ನೀಡಿದ ಕೊಡುಗೆಯಾಗಿದೆ. ಈ ದೇಶದ ಒಬ್ಬ ಪ್ರಜೆಯಾಗಿ ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ನಮಗಿರಬೇಕು. ಬೇರೆ ಯಾರೂ ನಮ್ಮ ಜೀವನವನ್ನು ರೂಪಿಸುವಂತಾಗಬಾರದು.

ದೇಶವು ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದರೂ ಈಗಲೂ ಕೆಲವು ಮೂಲ ಸೌಕರ್ಯಗಳ ಕೊರತೆಯಿದೆ. ನಮಗೆ ಬೇಕಾದ ರೀತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳುವ. ನಮಗೆ ಬೇಕಾದ ರೀತಿಯಲ್ಲಿ ದೇಶವನ್ನು ಕಟ್ಟುವ ಮತ್ತು ಮುಂದಿನ ಪೀಳಿಗೆಗೆ ಅಗತ್ಯವಿರುವ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಇದಾಗಬೇಕಿದ್ದರೆ, ಪೋಷಣೆ, ಆರೋಗ್ಯ, ಶಿಕ್ಷಣ ಹಾಗೂ ಪರಿಸರ ಮುಂತಾದ ಮೂಲಭೂತ ಅಗತ್ಯಗಳ ಮೇಲೆ ಗಮನ ಹರಿಸುವುದು ಅನಿವಾರ್ಯ.

ಈ ದೇಶದ ದೊಡ್ಡ ಕೊರತೆಯೆಂದರೆ, ಸಾಕಷ್ಟು ಪ್ರಮಾಣದಲ್ಲಿ ಮಹಾನ್ ನಾಯಕರು ನಮ್ಮ ದೇಶದಲ್ಲಿನ್ನೂ ಬೆಳೆದುಬಂದಿಲ್ಲ. ನಾವೇನೋ ರಾಜಕಾರಣಿಗಳು, ಆಡಳಿತಗಾರರನ್ನು ಸೃಷ್ಟಿಸಿದ್ದೇವೆಯೇ ಹೊರತು, ನೈಜ ನಾಯಕರನ್ನಲ್ಲ. ಈ ದೇಶದ ಜನತೆ, ಎಲ್ಲಕ್ಕೂ ಮಿಗಿಲಾಗಿ ಅಗತ್ಯವಿರುವ ಹೊಣೆಗಾರಿಕೆ, ಜಾಣ್ಮೆ ಹಾಗೂ ಉದ್ದೇಶ ಹೊಂದಿರುವ ಯುವ ಜನಾಂಗವು, ತಾವೇ ಮುಂದಾಳುತ್ವ ವಹಿಸಿಕೊಂಡು ನಾವೆಲ್ಲರೂ ಬಯಸುವ ಮಾದರಿಯ ಉತ್ತಮ ರಾಷ್ಟ್ರನಿರ್ಮಾಣಕ್ಕಾಗಿ ಶ್ರಮಿಸಬೇಕಾಗಿದೆ. ಕೆಲವೊಂದು ಕ್ಷೇತ್ರಗಳಲ್ಲಿ ನಾವು ಮಹತ್ವದ ಪ್ರಗತಿ ಸಾಧಿಸಿದ್ದರೂ, ದೇಶದ ಜನ ಸಂಖ್ಯೆಯ ಅರ್ಧದಷ್ಟು ಜನರಿನ್ನೂ ಅಮಾನವೀಯ ಪರಿಸ್ಥಿತಿಯಲ್ಲಿ ಬಾಳುತ್ತಿದ್ದಾರೆ. ದೇಶದ ಸಮಸ್ತ ಜನರನ್ನು ಸುಸ್ಥಿತಿಗೆ ಕೊಂಡೊಯ್ಯದ ಹೊರತು ಯಾವುದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ಅದು ಗುರಿ ತಲುಪುದೂ ಸಾಧ್ಯವಿಲ್ಲ.

ಈ ಸ್ವಾತಂತ್ರ್ಯ ದಿನದಂದು, ನಾವು ಇರಬೇಕಾದ ರೀತಿಯ ರಾಷ್ಟ್ರವೊಂದನ್ನು ಕಟ್ಟಲು ಪ್ರತಿಯೊಬ್ಬ ಪ್ರಜೆಯೂ ಪಣ ತೊಡಬೇಕಾಗಿದೆ. ಈ ಪೀಳಿಗೆಯ ಮಂದಿ ಭವಿಷ್ಯದ ಪೀಳಿಗೆಯ ಸುಸ್ಥಿತಿಯ ಬದುಕಿಗೆ ಅವಕಾಶ ಮಾಡಿಕೊಡುವ ಪರಿಸ್ಥಿತಿಯನ್ನು ರೂಪಿಸಲು ಮತ್ತು ಹೆಮ್ಮೆಯಿಂದಲೇ ಅಂಥದ್ದೊಂದು ದೇಶದಲ್ಲಿ ಬಾಳುವ ಅವಕಾಶವೊಂದನ್ನು ಕಲ್ಪಿಸಲು ಬದ್ಧತೆ ತೋರಿಸಬೇಕಾಗಿದೆ. ಈ ಸ್ವಾತಂತ್ರ್ಯ ದಿನವು ಬದ್ಧತೆಯ ಕ್ಷಣವಾಗಿ, ಸಮರ್ಪಣಾ ಭಾವದ ದ್ಯೋತಕವಾಗಿ ಬೆಳಗಲಿ.

-ಸದ್ಗುರು ಜಗ್ಗಿ ವಾಸುದೇವ

[ಸದ್ಗುರು ಜಗ್ಗಿ ವಾಸುದೇವ ಅವರೊಬ್ಬ ಯೋಗಿ, ಮಾನವತಾವಾದಿ ಮತ್ತು ಆಧ್ಯಾತ್ಮಿಕ ನಾಯಕ. ಲೇಖಕರಾಗಿ, ಕವಿಯಾಗಿ, ಅಂತಾರಾಷ್ಟ್ರೀಯ ಮಟ್ಟದ ಬೋಧಕರಾಗಿ ಪ್ರಸಿದ್ಧರಾಗಿರುವ ಅವರ ಬೋಧನೆಗಳು, ತರ್ಕಗಳು ಜೀವನದ ಏಳಿಗೆಗೆ ಪೂರಕವಾಗುತ್ತದೆ. ವಿಶ್ವಾದ್ಯಂತ ಸಾವಿರಾರು ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ]
ಇದನ್ನು ಸಹ ಶೋಧಿಸು: ಸದ್ಗುರು ಜಗ್ಗಿ ವಾಸುದೇವ, ಆಧ್ಯಾತ್ಮಿಕ ನಾಯಕ, ಇಶಾ ಫೌಂಡೇಶನ್, ಸ್ವಾತಂತ್ರ್ಯ ಸಂದೇಶ