ಕೌಲಾಲಂಪುರ, ಮಂಗಳವಾರ, 8 ಸೆಪ್ಟೆಂಬರ್ 2009( 17:38 IST )
ದನದ ತಲೆಯನ್ನು ಪ್ರದರ್ಶಿಸಿ, ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಪ್ರತಿಭಟನೆಕಾರರಿಗೆ ಪ್ರಚೋದನಾಕಾರಿ ವರ್ತನೆ ಮತ್ತು ಅಕ್ರಮವಾಗಿ ಗುಂಪು ಸೇರಿದ ಆರೋಪವನ್ನು ಮಲೇಶಿಯ ಹೊರಿಸಿದೆ. ಶತಮಾನದಷ್ಟು ಪ್ರಾಚೀನವಾದ ದೇವಸ್ಥಾನವನ್ನು ಸ್ಥಳಾಂತರಿಸಿದ ವಿರುದ್ಧ ಸೆಲಾಂಗ್‌ಕರ್ ರಾಜ್ಯದ ಶಾ ಅಲಂ ಉಪನಗರಕ್ಕೆ ಸೇರಿದ ಮುಸ್ಲಿಂ ನಿವಾಸಿಗಳು ದನಗಳ ತಲೆಗಳನ್ನು ಹಿಡಿದು ಪ್ರದರ್ಶಿಸುವ ಮೂಲಕ ಪ್ರತಿಭಟಿಸಿ, ಅಲ್ಪಸಂಖ್ಯಾತ ಹಿಂದೂ ಜನಾಂಗದ ಭಾವನೆಗಳಿಗೆ ನೋವುಂಟು ಮಾಡಿದ್ದರು.
ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿದ ಪ್ರತಿಭಟನೆಕಾರರ ವಿರುದ್ಧ ದೇಶದ್ರೋಹದ ಕಾಯ್ದೆಯ 4(1)ಸೆಕ್ಷನ್ ಅಡಿಯಲ್ಲಿ ಕ್ರಮಕೈಗೊಳ್ಳಲು ಅಟಾರ್ನಿ ಜನರಲ್ ಅಬ್ದುಲ್ ಗನಿ ನಿರ್ಧರಿಸಿದ್ದಾರೆ. ದನದ ತಲೆಯನ್ನು ಪ್ರತಿಭಟನೆ ಸ್ಥಳಕ್ಕೆ ತಂದ ಜನರ ವಿರುದ್ಧ ಕೋರ್ಟ್‌ನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಗೃಹಸಚಿವ ದಾದುಕ್ ಸೆರಿ ಹಿಶಾಮುದ್ದೀನ್ ಹುಸೇನ್ ತಿಳಿಸಿದರು. ಮತ್ತಷ್ಟು ತನಿಖೆ ನಡೆಸುವಂತೆ ಅವರು ಪೊಲೀಸರಿಗೆ ಆದೇಶ ನೀಡಿದ್ದು, ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಸುಮಾರು 150 ವರ್ಷಗಳಷ್ಟು ಪ್ರಾಚೀನವಾದ ದೇವಸ್ಥಾನವನ್ನು ಸೆಕ್ಷನ್ 19ರಿಂದ ಮಲಯ್ ಬಹುಸಂಖ್ಯಾತ ಪ್ರದೇಶಕ್ಕೆ ಸ್ಥಳಾಂತರಿಸುವ ನಿರ್ಧಾರದ ವಿರುದ್ಧ ಶಾ ಅಲಂ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಕಾರರಲ್ಲಿ ಕೆಲವರು ದನದ ತಲೆಯನ್ನು ಹಿಡಿದು ಪ್ರದರ್ಶಿಸಿದಾಗ ವಿವಾದ ಭುಗಿಲೆದ್ದಿತ್ತು.ಇಂತಹ ದುರ್ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ ಹಿಶಾಮುದ್ದೀನ್, ಕೆಲವು ಧರ್ಮಗಳಲ್ಲಿ ದನವನ್ನು ಪವಿತ್ರವೆಂದು ಭಾವಿಸುತ್ತಾರೆಂದು ಅವರು ನುಡಿದರು.