ಪಾಕಿಸ್ತಾನಕ್ಕಿನ್ನು ಬ್ಲಾಂಕ್ ಚೆಕ್ಕಿಲ್ಲ: ಅಮೆರಿಕ ನಿಲುವು
ಇಸ್ಲಾಮಾಬಾದ್, ಮಂಗಳವಾರ, 8 ಸೆಪ್ಟೆಂಬರ್ 2009( 20:12 IST )
ಪಾಕಿಸ್ತಾನಕ್ಕೆ ಜನರಲ್ ಮುಷರಫ್ ಆಡಳಿತಾವಧಿಯಲ್ಲಿ ನೀಡಿದಂತೆ ಉತ್ತರದಾಯಿತ್ವವಿಲ್ಲದೇ ಬ್ಲಾಂಕ್ ಚೆಕ್‌ಗಳನ್ನು ನೀಡಲು ಅಮೆರಿಕ ಹಿಂದೇಟು ಹಾಕುತ್ತಿದೆಯೆಂದು ಪಾಕಿಸ್ತಾನದ ಪ್ರಮುಖ ಪತ್ರಿಕೆಯೊಂದು ತಿಳಿಸಿದೆ. ಪಾಕಿಸ್ತಾನದ ಪ್ರಧಾನಿ ಯುಸುಫ್ ರಾಜಾ ಗಿಲಾನಿಯು ಒಬಾಮಾ ಆಡಳಿತಕ್ಕೆ ಮಾತ್ರ ಮಾನವೀಯ ನೆರವಿನ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಒತ್ತಡ ಹಾಕುತ್ತಿದ್ದಾರೆ.
ಕೆರಿ ಲೂಗಾರ್ ಮಸೂದೆ ಮೂಲಕ ಪಾಕಿಸ್ತಾನಕ್ಕೆ 1.5 ಶತಕೋಟಿ ಡಾಲರ್ ವಾರ್ಷಿಕ ನೆರವನ್ನು ನೀಡುವುದಾಗಿ ಅಮೆರಿಕ ಭರವಸೆ ನೀಡಿದ್ದರೂ, ನೆರವು ದುರ್ಬಳಕೆಯಾಗದಂತೆ ತಡೆಯಲು ವಿಳಂಬದ ಗತಿ ಅನುಸರಿಸಿದೆಯೆಂದು ಡಾನ್ ಪತ್ರಿಕೆ ಷ್ಪಪಡಿಸಿದೆ. ನೆರವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡುವಂತೆ ಗಿಲಾನಿ ಅಮೆರಿಕಕ್ಕೆ ಒತ್ತಾಯಿಸುತ್ತಿದ್ದು, ಎನ್‌ಜಿಒಗಳ ಮೂಲಕ ನೆರವು ವಿತರಣೆಗೆ ವಿರೋಧಿಸಿದ್ದಾರೆ.
ಏತನ್ಮಧ್ಯೆ, ಶ್ವೇತಭವನ ನೆರವನ್ನು ಬಿಡುಗಡೆ ಮಾಡಲು ಹಿಂಜರಿಯುತ್ತಿರುವುದರ ಹಿಂದಿನ ವಿಶ್ವಾಸಾರ್ಹತೆ ಅಂಶದ ಬಗ್ಗೆ ಪತ್ರಿಕೆ ಗಮನಸೆಳೆದಿದೆ. ಪಾಕಿಸ್ತಾನದ ಆಡಳಿತದಲ್ಲಿ ಭ್ರಷ್ಟಾಚಾರವು ಹಾಸುಹೊಕ್ಕಾಗಿರುವುದು ನಮ್ಮ ದೇಶದ ಪೌರರಿಗೆ ತಿಳಿದಿರುವಂತೆ ವಿಶ್ವಕ್ಕೆ ಗೊತ್ತಿದ್ದು, ವಿದೇಶಿ ದಾನಿಗಳಿಗೆ ಪಾಕ್ ಉತ್ತರದಾಯಿತ್ವ ಮತ್ತು ಕಾರ್ಯಾಚರಣೆಯ ಲೆಕ್ಕಪತ್ರ ಪ್ರಮುಖ ಚಿಂತೆಯಾಗಿ ಕಾಡಿದೆಯೆಂದು ಡಾನ್ ಪತ್ರಿಕೆಯಲ್ಲಿ ವರದಿ ಮಾಡಿದೆ.