ಟೈಟ್ ಪ್ಯಾಂಟ್ ಧರಿಸಿದ ಹಿನ್ನೆಲೆಯಲ್ಲಿ ಅಶ್ಲೀಲತೆಯ ಆರೋಪದ ಮೇಲೆ ಜೈಲು ಸೇರಿದ್ದ ಸೂಡಾನ್ ಪತ್ರಕರ್ತೆಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ದೇಶದ ಕಾನೂನಿನ ಬದ್ಧತೆಗೆ ಸವಾಲು ಹಾಕಿದ್ದ ಲುಬ್ನಾ ಹುಸೇನ್ ತಾವು ದಂಡಕಟ್ಟುವ ಬದಲಿಗೆ ಜೈಲಿಗೆ ಹೋಗಲೂ ಸಿದ್ಧರೆಂದು ತಿಳಿಸಿ ಜೈಲು ಸೇರಿದ್ದರು. ಆದರೆ ಪತ್ರಕರ್ತರ ಸಂಘವು ಹುಸೇನ್ ಪರವಾಗಿ ದಂಡ ಕಟ್ಟಿದ್ದರಿಂದ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಲುಬ್ನಾ ಹುಸೇನ್ ಅವರು ವಿರುದ್ಧ ಬಿಗಿ ಪ್ಯಾಂಟ್ ಧರಿಸಿ ಅಶ್ಲೀಲತೆ ಪ್ರದರ್ಶಿಸಿದ್ದಾರೆಂಬ ಆರೋಪಗಳಿಂದ ಅವರನ್ನು ಬಂಧಿಸಿದ್ದಕ್ಕೆ ವಿಶ್ವವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ದಂಡ ಕಟ್ಟುವಂತೆ ಅಥವಾ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಆದೇಶ ನೀಡಿದ ಕೋರ್ಟ್ ಹುಸೇನ್ ಅವರಿಗೆ 40 ಛಡಿಏಟುಗಳ ಶಿಕ್ಷೆಯಿಂದ ಮುಕ್ತಗೊಳಿಸಿತು. ತಮ್ಮನ್ನು ಬಂಧಮುಕ್ತಗೊಳಿಸಿದ್ದರೂ, ಇನ್ನೂ 700 ಮಹಿಳೆಯರು ಜೈಲಿನಲ್ಲಿದ್ದು ಅವರನ್ನು ಬಿಡಿಸುವವರು ಯಾರೆಂದು ಹುಸೇನ್ ಪ್ರಶ್ನಿಸಿದ್ದಾರೆ. ಇದೇ ರೀತಿ ಸೂಡಾನ್ ಇಸ್ಲಾಮಿಕ್ ಶೀಲತೆ ನಿಯಂತ್ರಣ ಅಡಿಯಲ್ಲಿ ಇದೇ ಮಾದರಿಯ ಅಪರಾಧಗಳಿಗೆ ಗುರಿಯಾಗಿ ಸಾವಿರಾರು ಮಹಿಳೆಯರು ತಪ್ಪಿತಸ್ಥರೆನಿಸಿ ಛಡಿಯೇಟಿನ ಪೆಟ್ಟುಗಳನ್ನು ತಿಂದಿದ್ದರು.
ಹುಸೇನ್ ಒಬ್ಬರೇ ಇಂತಹ ಛಡಿಯೇಟಿನ 'ಚಿಕಿತ್ಸೆ'ಗೆ ಸವಾಲು ಒಡ್ಡಿದ ಮಹಿಳೆಯೆಂದು ಅವರ ಬೆಂಬಲಿಗರು ಹೇಳಿದ್ದಾರೆ.ಕಳೆದ ಜುಲೈನಲ್ಲಿ ಇನ್ನೂ 12 ಮಹಿಳೆಯರೊಂದಿಗೆ ತಮ್ಮನ್ನು ಖಾರ್ಟೋಂ ಮೋಜಿನ ಕೂಟದಲ್ಲಿ ಬಂಧಿಸಲಾಯಿತೆಂದು ಅವರು ತಿಳಿಸಿದರು. ಇದೇ ರೀತಿಯ ಟೈಟ್ ಪ್ಯಾಂಟ್ ಧರಿಸಿದ್ದ 10 ಮಂದಿ ಮಹಿಳೆಯರಿಗೆ ಛಡಿಯೇಟಿನ ಶಿಕ್ಷೆಗೆ ಗುರಿಮಾಡಲಾಯಿತೆಂದು ಹುಸೇನ್ ಹೇಳಿದ್ದಾರೆ. ಆದರೆ ಹುಸೇನ್ ಮಾತ್ರ ಅಶ್ಲೀಲವೆಂದು ಹೇಳಲಾದ ಉಡುಪು ಗೌರವಾನ್ವಿತವಾಗಿದ್ದು, ಕಾನೂನನ್ನು ಮುರಿದಿಲ್ಲವೆಂದು ಕೋರ್ಟ್‌ನಲ್ಲಿ ತಿಳಿಸಿದ್ದರು.