ನಾಟಕೀಯ ರೀತಿಯಲ್ಲಿ ನಸುಕಿನಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿದ ನ್ಯಾಟೊ ಸೈನಿಕರು ಅಪಹರಣಕ್ಕೊಳಗಾಗಿದ್ದ ಬ್ರಿಟನ್ ಪತ್ರಕರ್ತನನ್ನು ತಾಲಿಬಾನ್ ಉಗ್ರರ ಮುಷ್ಠಿಯಿಂದ ಬಿಡಿಸಿದ್ದು, ಈ ಘಟನೆಯಲ್ಲಿ ಇನ್ನೂ ನಾಲ್ವರು ಮೃತಪಟ್ಟಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ವರದಿಗಾರ ಸ್ಟೀಫನ್ ಫ್ಯಾರೆಲ್ ಅವರನ್ನು ಯಾವುದೇ ಅಪಾಯವಿಲ್ಲದೇ ಪಾರುಮಾಡಲಾಗಿದ್ದು, ಅವರ ಜತೆ ಉಗ್ರಗಾಮಿಗಳು ಅಪಹರಿಸಿದ್ದ ಆಫ್ಘಾನ್ ಸಂಗಡಿಗ ಸುಲ್ತಾನ್ ಮುನಾಡಿ ಬ್ರಿಟನ್ ಸೈನಿಕ ಮತ್ತು ಇಬ್ಬರು ಆಫ್ಘಾನ್ ನಾಗರಿಕರ ಜತೆ ಹತರಾಗಿದ್ದಾರೆ. ಬ್ರಿಟನ್ ಮತ್ತು ಐರಿಷ್ ಪೌರತ್ವ ಹೊಂದಿದ ಫ್ಯಾರೆಲ್‌ನನ್ನು ತಾಲಿಬಾನ್ ಉಗ್ರರ ನೆಲೆ ಮೇಲೆ ಕಾರ್ಯಾಚರಣೆ ನಡೆಸಿದ ಬಳಿಕ ಸೈನಿಕರು ಪಾರುಮಾಡಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ. ಉತ್ತರ ಕುಂಡುಂಜ್ ಪ್ರಾಂತ್ಯದಲ್ಲಿ ಇವರಿಬ್ಬರನ್ನು ತಾಲಿಬಾನ್ ಉಗ್ರರು ಒತ್ತೆಸೆರೆಹಿಡಿದಿದ್ದರು.
ಎರಡು ಅಪಹೃತ ಇಂಧನ ಟ್ಯಾಂಕರ್‌ಗಳ ಮೇಲೆ ನ್ಯಾಟೊ ವಾಯುದಾಳಿಯಲ್ಲಿ ಅನೇಕ ಮಂದಿ ಸಾವಪ್ಪಿದ ಪ್ರಕರಣದ ಬಗ್ಗೆ ಅವರು ತನಿಖೆ ನಡೆಸುತ್ತಿದ್ದಾಗ ತಾಲಿಬಾನಿಗಳು ಅವರನ್ನು ಅಪಹರಿಸಿದ್ದರು. ಫ್ಯಾರೆಲ್ ಅವರನ್ನು ಅಪಹರಿಸಿದ್ದು ಇದೇ ಮೊದಲಬಾರಿಯಲ್ಲ. 2004ರಲ್ಲಿ ಅವರನ್ನು ಇರಾಕ್‌ನಲ್ಲಿ ಲಂಡನ್ ಟೈಮ್ಸ್ ಸುದ್ದಿಪತ್ರಿಕೆಗೆ ಕೆಲಸ ಮಾಡುತ್ತಿದ್ದಾಗ ಕೂಡ ಅಪಹರಿಸಲಾಗಿತ್ತು.
ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ತಾಲಿಬಾನಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರೆಂದು ಫ್ಯಾರೆಲ್ ಹೇಳಿದ್ದಾರೆ. ಹೆಲಿಕಾಪ್ಟರ್‌ಗಳು ಇಳಿಯುತ್ತಿದ್ದಂತೆ ತಾವು ಮುನಾಡಿ ಜತೆ ಓಡಿದ್ದಾಗಿ ವರದಿಗಾರ ತಿಳಿಸಿದರು. ಮುನಾಡಿ ಪತ್ರಕರ್ತ, ಪತ್ರಕರ್ತ ಎಂದು ಕಿರುಚಿಕೊಂಡಾಗ ಅವನು ಗುಂಡೇಟು ತಗಲಿ ಕುಸಿದುಬಿದ್ದನೆಂದು ಅವರು ತಿಳಿಸಿದ್ದಾರೆ.